ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗಿಲ್ಲ ಅಂಕುಶ, ಪಾತಾಳಕ್ಕಿಳಿಯಿತು ಫಲಿತಾಂಶ

Last Updated 14 ಮೇ 2017, 5:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ದಿಢೀರ್ ಪಾತಾಳಕ್ಕೆ ಕುಸಿದಿದ್ದು, ಜಿಲ್ಲೆ ಫಲಿತಾಂಶದಲ್ಲಿ 6 ವರ್ಷ, ಸ್ಥಾನದಲ್ಲಿ 8 ವರ್ಷಗಳಷ್ಟು ಹಿಂದೆ ಬಿದ್ದಿದೆ. ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎನ್ನಬಹುದಾದ ಈ ಪರೀಕ್ಷೆಯ ಪ್ರಗತಿ ಬಡವರ್ಗದ ಪೋಷಕ ವಲಯವನ್ನು ಚಿಂತೆಗೀಡು ಮಾಡಿದೆ.

ಜಿಲ್ಲೆಯ ದಶಕದ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಕಣ್ಣಾಡಿಸಿದರೆ 2006–07ನೇ ಸಾಲಿನಲ್ಲಿ ಶೇ79 ರಷ್ಟು ಫಲಿತಾಂಶ ಪಡೆಯುವ ಮೂಲಕ 14 ಸ್ಥಾನ ಪಡೆದಿದ್ದ ಜಿಲ್ಲೆ, 8 ವರ್ಷಗಳ ಬಳಿಕ ಕಳೆದ ವರ್ಷ 13ನೇ ಸ್ಥಾನ ಪಡೆದು ಜನರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಇದೀಗ ಪುನಃ ಅದರಿಂದ 15 ಸ್ಥಾನ ಹಿಂದೆ ಬಿದ್ದದ್ದು ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹಲವು ಜಿಜ್ಞಾಸೆ ಮೂಡಿಸಿದೆ.

ಈ ಬಾರಿಯ ಫಲಿತಾಂಶ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ ಮತ್ತು ಶಿಕ್ಷಕರ ಬದ್ಧತೆ ಕುರಿತಂತೆ ಪೋಷಕರ ವಲಯದಲ್ಲಿ ಅನೇಕ ಪ್ರಶ್ನೆಗಳನ್ನು, ಅಪನಂಬಿಕೆಯನ್ನು ಹುಟ್ಟುಹಾಕಿದೆ. ಜಿಲ್ಲೆಯಲ್ಲಿ ಒಟ್ಟು 122 ಸರ್ಕಾರಿ ಶಾಲೆಗಳಿವೆ ಆ ಪೈಕಿ ಶೇ100 ರಷ್ಟು ಫಲಿತಾಂಶ ಪಡೆದದ್ದು 1 ಶಾಲೆ ಮಾತ್ರ!  23 ಖಾಸಗಿ ಶಾಲೆಗಳು ಜಿಲ್ಲೆಯಲ್ಲಿ ಶೇ100ರಷ್ಟು ಪ್ರಗತಿ ಸಾಧಿಸಿದ್ದು, ಈ ಸಾಧನೆ ಸರ್ಕಾರಿ ಶಾಲೆಗಳಲ್ಲಿ ಏಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಗಳು ಪೋಷಕರಿಂದ ಕೇಳಿ ಬರುತ್ತಿವೆ.

ಕಳೆದ ಬಾರಿ 21ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಈ ಬಾರಿ 7ನೇ ಸ್ಥಾನಕ್ಕೆ ಏರಿದ್ದು ಗಮನಾರ್ಹ ವಿಚಾರ. ಅಂತಹ ಸಾಧನೆ ಜಿಲ್ಲೆಯಲ್ಲಿ ಏಕಿಲ್ಲ ಎನ್ನುವುದು ಸದ್ಯ ಎಲ್ಲೆಡೆ ಕೇಳಿ ಬರುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರಿಸಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಆತ್ಮಾವಲೋಕನದ ಮಾತಗಳನ್ನು ಆನಾಡುತ್ತಿದ್ದಾರೆ.

ಕುಸಿತಕ್ಕೆ ನಿರ್ಲಕ್ಷ್ಯವೇ ಕಾರಣ?
‘ಜಿಲ್ಲೆಯಲ್ಲಿ ಏಕಾಏಕಿ ಈ ರೀತಿ ಫಲಿತಾಂಶ ಕುಸಿತವಾಗಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಶಿಕ್ಷಣ ವ್ಯವಸ್ಥೆ ಕುರಿತು ನಿರ್ಲಕ್ಷ್ಯ ತಾಳಿದ್ದೇ ಇದಕ್ಕೆಲ್ಲ ಕಾರಣ. ಬದ್ಧತೆಯಿಂದ ಕೆಲಸ ಮಾಡಬೇಕಾದ ಶಿಕ್ಷಕರು ಪಾಠ ಬಿಟ್ಟು ಉಳಿದೆಲ್ಲ ಮಾಡಲು ಹೊರಟಿದ್ದೆ ಫಲಿತಾಂಶಕ್ಕೆ ಮುಳುವಾಗಿದೆ. ಜಿಲ್ಲಾಡಳಿತ ಫಲಿತಾಂಶವನ್ನು ಗಂಭೀರವಾಗಿ ತೆಗೆದುಕೊಂಡು, ಶಿಕ್ಷಕರು ಸರಿಯಾಗಿ ಪಾಠ ಮಾಡುವಂತೆ ನೋಡಿಕೊಂಡರೆ ಎಲ್ಲಾ ಸರಿ ಹೋಗುತ್ತದೆ’ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

‘ಜಿಲ್ಲೆಯ ಆಡಳಿತ ಯಂತ್ರಾಂಗ ಸಂಪೂರ್ಣ ಕುಸಿದಿದೆ. ಜನಪ್ರತಿನಿಧಿಗಳು ಶಿಕ್ಷಣ ವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶವೇ ನಿದರ್ಶನ. ಯಾವ ಶಾಸಕನಿಗೂ ಶಾಲಾ, ಕಾಲೇಜುಗಳಲ್ಲಿ ಏನು ನಡೆಯುತ್ತಿದೆ? ಏನೇನು ಸಮಸ್ಯೆಗಳಿವೆ ಎನ್ನುವ ಅರಿವಿಲ್ಲ. ಶಿಕ್ಷಕರ ಬದ್ಧತೆ ಪರೀಕ್ಷಿಸುತ್ತಿಲ್ಲ. ಶಿಕ್ಷಕರಲ್ಲಿ ಇವತ್ತು ಶಿಕ್ಷಣದ ಬಗ್ಗೆ ಕಾಳಜಿ ಹೊರಟು ಹೋಗಿದೆ’ ಎನ್ನುತ್ತಾರೆ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ.

‘ಶಿಕ್ಷಕರು ಬೋಧನೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಜಿಲ್ಲಾಡಳಿತ ಅತ್ತ ಗಮನ ಹರಿಸುತ್ತಿಲ್ಲ. ರಾಜಕಾರಣಿಗಳು ಶಿಕ್ಷಕರನ್ನು ತಮ್ಮ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರ ಮುಲಾಜಿಗೆ ಕಟ್ಟು ಬಿದ್ದು ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ’ ಎಂದು ತಿಳಿಸಿದರು.

‘ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಫಲಿತಾಂಶ ಉತ್ತಮ ಪಡಿಸಲು ಆಸಕ್ತಿ ತೋರಿಸಿದೆ. ಅದು ನಮ್ಮಲ್ಲಿ ಆಗಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರ ಕಾರ್ಯವೈಖರಿ ಮೇಲೆ ಹದ್ದಿನ ಕಣ್ಣಿಟ್ಟು, ತಪ್ಪು ಮಾಡಿದಾಗ ಶಿಸ್ತುಕ್ರಮ ಜರುಗಿಸಿದ್ದರೆ ವ್ಯವಸ್ಥೆ ಸರಿಯಾಗಿ ಇರುತ್ತಿತ್ತು. ಅಧಿಕಾರಿಗಳು, ಶಿಕ್ಷಕರು ವಿಶೇಷ ಕಾಳಜಿ, ಮುತುವರ್ಜಿ ವಹಿಸಿದಾಗ ಮಾತ್ರ ಫಲಿತಾಂಶ ಸುಧಾರಿಸಲು ಸಾಧ್ಯ’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಹೇಳಿದರು.

‘ಖಾಸಗಿ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚಿನ ವಿದ್ಯಾಭ್ಯಾಸ, ಪರಿಣತಿ ಹೊಂದಿದ್ದಾರೆ. ಹೀಗಿದ್ದರೂ ಸರ್ಕಾರಿ ಶಾಲೆಗಳ ಫಲಿತಾಂಶ ಕಳಪೆಯಾಗುತ್ತಿದೆ ಎಂದರೆ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಶಿಕ್ಷಕರು ಬೋಧನೆಗೆ ಹೆಚ್ಚಿನ ಆಸಕ್ತಿ ವಹಿಸಬೇಕಿತ್ತು. ಆದರೆ ಅವರು ಮಾಡಬೇಕಾದ ಕೆಲಸ ಬಿಟ್ಟು ಉಳಿದೆಲ್ಲವನ್ನೂ ಮಾಡಲು ಹೊರಟಿದ್ದಾರೆ. ಅದರ ಪರಿಣಾಮ ಇದು’ ಎಂದರು.

‘ಸಮನ್ವಯದಿಂದ ಕೆಲಸ ಮಾಡುವ ಜತೆಗೆ ಶಿಕ್ಷಣ ಇಲಾಖೆಯವರು ಶೈಕ್ಷಣಿಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಸಾಲದು. ಶಿಕ್ಷಕರು ಬೋಧನೆಗೆ ವೈಯಕ್ತಿಕ ಕಾಳಜಿ ತೋರಬೇಕಿದೆ. ಫಲಿತಾಂಶದಲ್ಲಿ ಹೆಚ್ಚಿನ ಕೊಡುಗೆ ಇರುವುದೇ ಶಿಕ್ಷಕರಿಂದ. ಹೀಗಾಗಿ ಶಿಕ್ಷಕರು ಶಾಲೆಯನ್ನು ಮೇಲೆ ತರುವ ಬದ್ಧತೆ ಇಟ್ಟುಕೊಂಡು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಿ, ಕಲಿಕಾ ಸಾಮರ್ಥ್ಯವನ್ನೂ ಹೆಚ್ಚಿಸಲು ಅದ್ಯತೆ ನೀಡಬೇಕು’ ಎನ್ನುತ್ತಾರೆ ಶಿಕ್ಷಣ ತಜ್ಞ ಕೋಡಿ ರಂಗಪ್ಪ.

‘ಮಕ್ಕಳಲ್ಲಿ ಕಂಠಪಾಠ ಮಾಡಿ ರ್‌್ಯಾಂಕ್‌ ಪಡೆಯುವ ಧಾವಂತ ಕಡಿಮೆ ಮಾಡಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ರಚನಾತ್ಮಕವಾಗಿ ಬೋಧನೆ ಮಾಡಬೇಕು. ಅಧ್ಯಯನ ಶೀಲತೆ ಕಲಿಸಿಕೊಡಬೇಕು. ವಿಷಯ ಪರಿಣಿತರು ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪರೀಕ್ಷೆಗಳನ್ನು ವಿಶ್ಲೇಷಣೆ ಮಾಡಬೇಕು’ ಎಂದು ಹೇಳಿದರು.

‘ಇಂದಿನ ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುತ್ತಿಲ್ಲ. ಜತೆಗೆ ಅವರಿಗೆ ಭಾಷೆಯ ಬಲವಿಲ್ಲ. ಹೀಗಾಗಿ ವಿಷಯ ಗೊತ್ತಿದ್ದರೂ ಪರೀಕ್ಷೆಯಲ್ಲಿ ಬರೆಯಲು ಆಗುತ್ತಿಲ್ಲ. ಇವತ್ತು ಶಿಕ್ಷಕರು ಶಿಕ್ಷಣ, ತಮ್ಮ ಪಾವಿತ್ರ್ಯ ಉಳಿಸಿಕೊಳ್ಳಬೇಕಾದರೆ ಬೋಧನೆಯಲ್ಲಿ ವೈಜ್ಞಾನಿಕ ಪ್ರಯತ್ನ ಮಾಡಬೇಕು. ಹೊಸ ಬೋಧನಾ ವಿಧಾನ ಅಳವಡಿಸಿಕೊಂಡು, ತಮ್ಮ ಕೆಲಸದ ಕಾರ್ಯಶೈಲಿ ಬಗ್ಗೆ ಮರು ಚಿಂತನೆ ನಡೆಸಿದರೆ ಸಾಕು ತಾನಾಗಿಯೇ ಉತ್ತಮ ಫಲಿತಾಂಶ ದೊರೆಯುತ್ತದೆ’ ಎಂದು ತಿಳಿಸಿದರು.

ಡಿಡಿಪಿಐ ತವರು ತಾಲ್ಲೂಕಿನಲ್ಲೇ ಅತ್ಯಂತ ಕಳಪೆ ಫಲಿತಾಂಶ!

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶ್ವತ್ಥರೆಡ್ಡಿ ಅವರು ತವರು ತಾಲ್ಲೂಕು ಗೌರಿಬಿದನೂರಿನಲ್ಲಿಯೇ ಈ ಬಾರಿ ಅತ್ಯಂತ ಕಳಪೆ ಫಲಿತಾಂಶ (ಶೇ56.22) ದಾಖಲಾಗಿದೆ. ‘ಫಲಿತಾಂಶ ಕುಸಿಯಲು ಏನು ಕಾರಣ ಎಂದು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು ಆತ್ಮಾವಲೋಕನ, ಪರಾಮರ್ಶೆ ಮಾಡಿಕೊಳ್ಳುತ್ತೇವೆ.

ಇಷ್ಟೊಂದು ಫಲಿತಾಂಶ ಕುಸಿಯಲು ಯಾವ ಅಂಶಗಳೆಲ್ಲ ಕಾರಣ ಎಂಬುದು ಪತ್ತೆ ಮಾಡಿ, ಪಟ್ಟಿ ಮಾಡುವ ಜತೆಗೆ ಬರುವ ಶೈಕ್ಷಣಿಕ ವರ್ಷಗಳಲ್ಲಿ ಸಮಸ್ಯೆಗಳನ್ನು ಆರಂಭದ ದಿನದಿಂದಲೇ ಬಗೆಹರಿಸಿಕೊಳ್ಳುವ ಕೆಲಸ ಮಾಡಿ, ಪುನಃ ಗತ ವೈಭವ ಮರು ಗಳಿಸಲು ಪ್ರಯತ್ನ ಮಾಡುತ್ತೇವೆ. ನಾವು ಇದೀಗ ಆತ್ಮವಂಚನೆ ಇಲ್ಲದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಅಶ್ವತ್ಥರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT