ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಗಿರಿಯಲ್ಲಿ ಅರಣ್ಯ ಅಭಿವೃದ್ಧಿ

Last Updated 14 ಮೇ 2017, 5:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ತಾಲ್ಲೂಕಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಂದಿಗಿರಿ, ಸ್ಕಂದಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚನ್ನಗಿರಿ ಈ ಪಂಚಗಿರಿಗಳಲ್ಲಿ ಅರಣ್ಯವನ್ನು ಬೆಳೆಸಲು ಉದ್ದೇಶಿಸಲಾಗಿದ್ದು, ಈ ಕುರಿತು ಈಗಾಗಲೇ ಅರಣ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ’ ಎಂದು ಶಾಸಕ ಡಾ.ಕೆ. ಸುಧಾಕರ್ ಹೇಳಿದರು.

ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಿರುವ ಸಸ್ಯೋದ್ಯಾನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.‘ಸುಂದರ ಪ್ರಾಕೃತಿಕ ತಾಣಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ವ್ಯಾಪಕವಾಗಿ ಅರಣ್ಯವನ್ನು ಬೆಳೆಸಿ ಮತ್ತಷ್ಟು ಪ್ರವಾಸಿಗರನ್ನು ಈ ಭಾಗದತ್ತ ಸೆಳೆಯಲು ಚಿಂತನೆ ನಡೆಸಿದ್ದೇವೆ. ಈ ಯೋಜನೆಗಾಗಿ ಅರಣ್ಯ ಸಚಿವರು ₹ 5 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಸ್ಥಳೀಯ ಬೆಟ್ಟಗಳ ತಪ್ಪಲು ಪ್ರದೇಶದಲ್ಲಿ ಮಳೆ ನೀರು ಸಂಗ್ರಹ ಕಾರ್ಯ ಹೆಚ್ಚಿಸಬೇಕಿದೆ. ಈಗಾಗಲೇ ಅನೇಕ ಬೆಟ್ಟಗಳು ಅಕ್ರಮ ಗಣಿಗಾರಿಕೆಗೆ ಬಲಿಯಾಗಿವೆ. ಉಳಿದ ಬೆಟ್ಟಗಳನ್ನಾದರೂ ನಾವು ಜತನದಿಂದ ಕಾಪಾಡಿಕೊಂಡು ಅಭಿವೃದ್ಧಿಪಡಿಸುವ ಅಗತ್ಯವಿದೆ. ರಮಣೀಯ ತಾಣಗಳಾಗಿರುವ ದಂಡಿಗಾನಕೆರೆ, ಆವಲಬೆಟ್ಟ ಪ್ರದೇಶದ ಪರಿಸರ ಸಂಕ್ಷರಣೆಗೆ ಅಧಿಕಾರಿಗಳು ಒತ್ತು ನೀಡಬೇಕಿದೆ’ ಎಂದರು.

‘ಪ್ರಕೃತಿಯ ಮುನಿಸನ್ನು ತಡೆಯುವ ಶಕ್ತಿ ಮನುಷ್ಯನಿಗೆ ಇಲ್ಲ. ಅದನ್ನು ಅರಿತು ನಾವು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಮರಗಳನ್ನು ಹನನ ಮಾಡುವುದು ಬಿಟ್ಟು, ಪೋಷಿಸುವ ಕೆಲಸ ಮಾಡಬೇಕಿದೆ. ಇಂತಹ ಉತ್ತಮ ಕಾರ್ಯಗಳಿಗೆ ನಾಗರಿಕರು ಕೈಜೋಡಿಸಿ ಸಹಕರಿಸಬೇಕು. ಉದ್ಯಾನಕ್ಕೆ ಅಗತ್ಯವಿರುವ ನೀರನ್ನು ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಸುಗಾರ ಮಾತನಾಡಿ, ‘ನಗರ ಪ್ರದೇಶಗಳಲ್ಲಿ ಮನರಂಜನೆಯೊಂದಿಗೆ ಪರಿಸರ ಜಾಗೃತಿ ಮೂಡಿಸಲು ರಾಜ್ಯದಲ್ಲಿ ಈಗಾಗಲೇ 70 ನಗರಗಳಲ್ಲಿ ಸಸ್ಯೋದ್ಯಾನ ನಿರ್ಮಿಸಲಾಗಿದೆ. ಜಿಲ್ಲೆಯ ಇನ್ನೂ 4 ನಗರಗಳಲ್ಲಿ ಸಸ್ಯೋದ್ಯಾನ ಸಿದ್ಧಗೊಳ್ಳುತ್ತಿವೆ. ಸಾರ್ವಜನಿಕರು ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಪರಿಸರ ರಕ್ಷಣೆ ಕುರಿತು ಕಾಳಜಿ ತೋರಬೇಕು’ ಎಂದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ ಮಾತನಾಡಿ, ‘ಇವತ್ತು ಜಾಗತಿಕ ತಾಪಮಾನ ವೈಪರೀತ್ಯದ ಪರಿಣಾಮ ಅನೇಕ ಬಗೆಯ ದುಷ್ಪರಿಣಾಮಗಳು ಎದುರಾಗುತ್ತಿವೆ. ಇದನ್ನು ತಡೆಗಟ್ಟಲು ಪರಿಸರ ಬೆಳೆಸುವುದೊಂದೆ ಪರಿಹಾರ. ಜೈವಿಕ ಸಮತೋಲನ ಸಾಧಿಸದ ಹೊರತು ತಾಪಮಾನ ಹೆಚ್ಚಳ ತಹಬದಿಗೆ ಬರುವುದಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿ. ಕೇಶವಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಂಜುನಾಥ್, ಅರಣ್ಯ ಇಲಾಖೆಯ ಕೃಷ್ಣಮೂರ್ತಿ, ಎಂ. ಶ್ರೀಧರ್, ಸೈಯದ್ ನಿಜಾಮುದ್ದೀನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯ್‌ಕುಮಾರ್, ಡಿವೈಎಸ್‌ಪಿ ಎಂ.ಎಲ್. ಪುರುಷೋತ್ತಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಸ್ಯೋದ್ಯಾನವನ್ನು ಚಿಕ್ಕಬಳ್ಳಾಪುರದ ಕಬ್ಬನ್‌ ಪಾರ್ಕ್ ಆಗಿ ರೂಪಿಸಲು ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಜೊತೆ ಸಾರ್ವಜನಿಕರು ಕೈಜೋಡಿಸಿ
ಡಾ.ಕೆ.ಸುಧಾಕರ್
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT