ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಬಾಲಕಿಯರೇ ಮೇಲುಗೈ

Last Updated 14 ಮೇ 2017, 5:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಕಳಪೆಯಾಗಿದೆ. ಕಳೆದ ಸಾಲಿನಲ್ಲಿ  ಶೇ81.28ರಷ್ಟು ಫಲಿತಾಂಶ ಗಳಿಸಿ 13ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಸಲ ಒಟ್ಟಾರೆ ಶೇ 70.13ರಷ್ಟು ಫಲಿತಾಂಶ ಪಡೆಯುವ ಮೂಲಕ 28ನೇ ಸ್ಥಾನ ಕುಸಿದಿದೆ.

ಈ ವರ್ಷ ಪರೀಕ್ಷೆ ಬರೆದ ಹೊಸಬರ ಪೈಕಿ ಶೇ 70.13ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟಾರೆ ಶೇ 69.52 ರಷ್ಟು ಫಲಿತಾಂಶ ದೊರೆತಿದೆ. ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪಾಸಾದವರ ಪ್ರಮಾಣ ಶೇ 73.25ರಷ್ಟಿದೆ. ಶೇ 67.04 ಬಾಲಕರು ಮಾತ್ರ ಉತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೂಡ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು ಶೇ 70.53 ರಷ್ಟು ಗ್ರಾಮೀಣ ಪ್ರತಿಭೆಗಳು ಗೆಲುವಿನ ನಗೆ ಬೀರಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳ ಪೈಕಿ ಶೇ69.49 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಈ ಬಾರಿ ಖಾಸಗಿಯಾಗಿ ಪರೀಕ್ಷೆ ಬರೆದ 358 ವಿದ್ಯಾರ್ಥಿಗಳ ಪೈಕಿ ಕೇವಲ 6 ಮತ್ತು ಮರು ಪರೀಕ್ಷೆ ಬರೆದ 1,773 ವಿದ್ಯಾರ್ಥಿಗಳಲ್ಲಿ 330 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದವರಿಗಿಂತ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರೇ ಹೆಚ್ಚಿನ ಸಂಖ್ಯೆಯಲ್ಲಿ (ಶೇ85) ಉತ್ತೀರ್ಣರಾಗಿದ್ದಾರೆ.

25 ಶಾಲೆಗಳ ಉತ್ತಮ ಸಾಧನೆ
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 275 ಪ್ರೌಢಶಾಲೆಗಳಿವೆ. ಈ ಪೈಕಿ 23 ಖಾಸಗಿ, ತಲಾ 1 ಸರ್ಕಾರಿ, ಅನುದಾನಿತ ಶಾಲೆಗಳು ಶೇ100 ರಷ್ಟು ಫಲಿತಾಂಶ ಪಡೆದಿವೆ. ಯಾವುದೇ ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ.

ಶಿಡ್ಲಘಟ್ಟ ಉತ್ತಮ ಸಾಧನೆ
ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿರುವ ಶಿಡ್ಲಘಟ್ಟ ಎಸ್ಸೆಸ್ಸೆಲ್ಸಿ ಕೂಡ ಉತ್ತಮ ಸಾಧನೆ (ಶೇ 76.50) ತೋರಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಚಿಂತಾಮಣಿ (ಶೇ 75.76) ಎರಡನೇ ಸ್ಥಾನದಲ್ಲಿದೆ. ಫಲಿತಾಂಶದಲ್ಲಿ ಶೇ 56.22 ರಷ್ಟು ಪ್ರಗತಿ ಕಂಡಿರುವ ಗೌರಿಬಿದನೂರು ಕೊನೆಯ ಸ್ಥಾನದಲ್ಲಿದೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

ಚಿಂತಾಮಣಿಯ ಕಿಶೋರ್ ವಿದ್ಯಾಭವನ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಹರ್ಷಿತಾ (620),  ನ್ಯೂ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸೋನಾಲ್ ವಿನುತಾ (620), ಗೌರಿಬಿದನೂರಿನ ಬಿಜಿಎಸ್ ಪಬ್ಲಿಕ್ ಪ್ರೌಢಶಾಲೆಯ ವಿದ್ಯಾರ್ಥಿ ಜೆ.ಎನ್.ಶಿವರಾಜ್ (618), ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಬಿಜಿಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಧನುಶ್ರೀ (617), ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿಯ ಬಿಜಿಎಸ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಯೋಗಿತಾ ಎಂ.ರಾಜ್ (617), ಬಾಗೇಪಲ್ಲಿಯ ಯಂಗ್‌ ಇಂಡಿಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಮೈಥಲಿ (616), ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎಂ.ಪ್ರತ್ಯುಷಾ (616) ಮತ್ತು ಗುಡಿಬಂಡೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಜಿ.ವಿ.ಶಿರೀಷಾ (606) ಅತಿ ಹೆಚ್ಚು ಅಂಕ ಪಡೆದಿದ್ದಾರೆ.

ಅಂಕಿ ಅಂಶಗಳು

17,587 ಪರೀಕ್ಷೆಗೆ ಹಾಜರಾದವರು

11,176 ಪಾಸಾದವರು

69.52 ಶೇಕಡಾವಾರು ಫಲಿತಾಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT