ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ: ವರ್ಷಾಂತ್ಯದೊಳಗೆ ನೀರು

Last Updated 14 ಮೇ 2017, 6:47 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘ಬರದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ನಮ್ಮ ಆದ್ಯತೆಯಾಗಿದ್ದು,  ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಗೆ ಭದ್ರಾ ನೀರು ಹರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಅಂಗವಾಗಿ ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸೌಲಭ್ಯಗಳ ವಿತರಣೆಯೇ ಸಂಭ್ರಮ’ ಹಾಗೂ ₹ 675 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ, ವಿವಿಧ ಕಟ್ಟಡಗಳ  ಉದ್ಘಾಟನಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ವಿತರಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಹಿಂದಿನ ಸರ್ಕಾರ ಐದು ವರ್ಷಗಳಲ್ಲಿ ₹581 ಕೋಟಿ ಖರ್ಚು ಮಾಡಿತ್ತು. ನಾವು ₹1800 ಕೋಟಿ ಖರ್ಚು ಮಾಡಿದ್ದೇವೆ. ಈ ವರ್ಷವೂ ₹ 1,000 ಕೋಟಿ ಕೊಡುತ್ತಿದ್ದೇವೆ. ತ್ವರಿತಗತಿ ಕಾಮಗಾರಿಗೆ ಒತ್ತು ನೀಡಿದ್ದೇವೆ. ಶತಾಯಗತಾಯ ಚುನಾವಣೆ ಪೂರ್ವದಲ್ಲೇ ನೀರು ಹರಿಸುವ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಎತ್ತಿನಹೊಳೆಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. 24 ಟಿಎಂಸಿ ನೀರು ಸಿಗುವುದಿಲ್ಲ ಎಂದು ಟೀಕಿಸಿದ್ದರು. ಯೋಜನೆಯ ಮೊದಲ ಹಂತ ಮುಗಿದು, ಎರಡನೇ ಹಂತ ಶುರುವಾಗುತ್ತಿದೆ. ಟೀಕಿಸುವವರೆಲ್ಲ ಸುಮ್ಮನಾಗಿದ್ದಾರೆ. ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನದ ಕೆಲಭಾಗದ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಚಿತ್ರದುರ್ಗ ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ ಸಲ್ಲಿಸಿದ್ದರು. ಈಗಾಗಲೇ ₹25 ಕೋಟಿ ಕೊಡುವುದಾಗಿ ಭರವಸೆ ನೀಡಿದ್ದೇನೆ. ಇನ್ನೂ ಹೆಚ್ಚಿನ ಅನುದಾನ ನೀಡುತ್ತೇನೆ’ ಎಂದರು.
ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡುವ ಕುರಿತು ಬಜೆಟ್‌ನಲ್ಲಿ ಘೋಷಿಸಿದ್ದು, ಶುಕ್ರವಾರ ಆದೇಶವನ್ನೂ ಮಾಡಿದ್ದೇನೆ.

ಶೀಘ್ರದಲ್ಲೇ ಆಡಳಿತಾಧಿಕಾರಿ ನೇಮಕ ಹಾಗೂ ಇನ್ನಿತರ ಅಗತ್ಯ ಪ್ರಕ್ರಿಯೆಗಳು ಆರಂಭವಾಗುತ್ತವೆ. ನಗರದಲ್ಲಿ ಕೆಎಸ್‌ಆರ್‌ಟಿಸಿ ಹೈಟೆಕ್  ಬಸ್‌ ನಿಲ್ದಾಣ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

‘ತುಂಗಭದ್ರಾ  ಜಲಾಶಯದ ಹಿನ್ನೀರಿನಿಂದ ಕೂಡ್ಲಿಗಿ, ಚಳ್ಳಕೆರೆ, ಮೊಳಕಾಲ್ಮುರು ಮತ್ತು ಪಾವಗಡ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ₹1800 ಕೋಟಿ ವೆಚ್ಚದ ಯೋಜನೆ ಹಾಗೂ ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಬೇಕಾದ ಭೂ ಸ್ವಾಧೀನಕ್ಕೆ ಹಣ ನೀಡುವ ಕುರಿತು ಡಿಸೆಂಬರ್ ತಿಂಗಳೊಳಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಭದ್ರಾ ಯೋಜನೆ ತ್ವರತಿಗತಿ ಕಾಮಗಾರಿಗೆ  ಒತ್ತು ನೀಡಲು ಮನವಿ ಮಾಡಿದರು.  ಟಿ.ಬಿ.ಡ್ಯಾಮ್ ಹಿನ್ನೀರಿ ನಿಂದ ಎರಡು ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ, ವೈದ್ಯಕೀಯ ಕಾಲೇಜಿಗೆ ಅನುದಾನ, ಹೈಟೆಕ್ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ಚಿತ್ರದುರ್ಗ ಪ್ರವಾಸೋದ್ಯಮ ಕ್ಷೇತ್ರವಾಗಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ₹50 ಕೋಟಿ ವಿಶೇಷ ಪ್ಯಾಕೇಜ್, ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲು ಕೌಶಲಾಭಿವೃದ್ಧಿ ಕೇಂದ್ರದ ಸ್ಥಾಪನೆ, ಜಿಲ್ಲೆಗೆ ಜವಳಿ ಪಾರ್ಕ್ ನೀಡುವಂತೆ ಮನವಿ ಮಾಡಿದರು.

ಆಂಜನೇಯ ಅವರ ಮನವಿಯ ಮುಂದುವರಿದ ಭಾಗದಂತೆ ಮಾತನಾಡಿದ ಸಂಸದ ಬಿ.ಎನ್. ಚಂದ್ರಪ್ಪ, ‘ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ  ಜಿಲ್ಲೆಯ ಅಗತ್ಯಗಳು. ಅದನ್ನು ಮುಖ್ಯಮಂತ್ರಿ ಅವರು ಪೂರೈಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT