ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್ ರದ್ದತಿಗೆ ಕೂಡಿಬಂದ ಕಾಲ

Last Updated 14 ಮೇ 2017, 6:59 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ಅನ್ನು ವಿರೋಧಿಸಿತ್ತು. ಸುಪ್ರೀಂ ಕೋರ್ಟ್‌ ಸಹ  ಈ ಪದ್ಧತಿಯನ್ನು ಅತ್ಯಂತ ಕೆಟ್ಟ ವಿಧಾನ ಎಂದು ಅಭಿಪ್ರಾಯಪಟ್ಟಿದೆ. ಪದ್ಧತಿ ರದ್ದತಿಗೆ ಈಗ ಕಾಲ ಕೂಡಿಬಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.

ಶುಭಮಂಗಳ ಸಮುದಾಯ ಭವನ ದಲ್ಲಿ ಶನಿವಾರ ಪಂಡಿತ್‌ ದೀನದಯಾಳ್‌ ಜನ್ಮಶತಾಬ್ಧಿ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಮರು ಮೂರು ಬಾರಿ ತಲಾಖ್‌ ಹೇಳಿ  ಎಷ್ಟು ಬಾರಿಯಾದರೂ ಮದುವೆ ಆಗುತ್ತಾರೆ. ಬೇರೆ ರಾಷ್ಟ್ರಗಳಲ್ಲಿ ಇಲ್ಲದ ತಲಾಖ್ ಪದ್ಧತಿ ಭಾರತದಲ್ಲಿದೆ. ಮುಸ್ಲಿಂ ಹೆಣ್ಣುಮಕ್ಕಳೇ  ಈ ಪದ್ಧತಿ ವಿರೋಧಿಸುತ್ತಿದ್ದಾರೆ ಎಂದರು.

ಉತ್ತರಪ್ರದೇಶದಲ್ಲಿ ಹಲವು ಮುಸ್ಲಿಮರು ಗೋವಿನ ರಕ್ಷಣೆ ಮಾಡಲು ಮುಂದಾಗುತ್ತಿದ್ದಾರೆ. ಈ ಬಾರಿ ಆ ರಾಜ್ಯದ ಬಹುತೇಕ ಮುಸ್ಲಿಮರು ಬಿಜೆಪಿಗೆ ಮತ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

ಸಿದ್ದರಾಮಯ್ಯ ಉಪಚುನಾವಣೆ ಗೆದ್ದ ಮೇಲೆ ವಿಶ್ವಸಂಸ್ಥೆಯನ್ನೇ ಗೆದ್ದಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಹಿಂದಿನ ಚುನಾವಣೆಯಲ್ಲಿ ಬಿಜೆಪಿ–ಕೆಜೆಪಿ  ಇಬ್ಭಾಗವಾದ ಕಾರಣ ಪಕ್ಷ ಸೋಲು ಅನುಭವಿಸಿತು. ಈ ಬಾರಿ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ರಾಜ್ಯ ಸರ್ಕಾರ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವುದೇ ಸಾಧನೆ ಎಂದು ಕೊಂಡಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಜನ ಬಿಜೆಪಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. 

ಅಭ್ಯರ್ಥಿ  ಯಾರು ಎಂಬುದು ಮುಖ್ಯ ವಲ್ಲ. ಮುಖಂಡರು ಯಾರಿಗೆ ಟಿಕೆಟ್‌ ನೀಡಿದರೂ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿದ್ದರು.  ಬಿಜೆಪಿ ಆಡಳಿತದ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.

ಶಾಸಕ ಬಿ.ವೈ. ರಾಘವೇಂದ್ರ, ಎಪಿಎಂಸಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಮಾಜಿ ಸಂಸದ ಆಯನೂರು ಮಂಜುನಾಥ್‌, ಮಾಜಿ ಶಾಸಕರಾದ ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ಜಿ.ಡಿ. ನಾರಾಯಣಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಅರುಣ್, ಮುಖಂಡರಾದ ಸ್ವಾಮಿರಾವ್, ದೇವದಾಸ್ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT