ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿ ಲೋಕದಲ್ಲಿ ಸುಜಿತ್‌ ಪಯಣ

Last Updated 14 ಮೇ 2017, 8:30 IST
ಅಕ್ಷರ ಗಾತ್ರ

ಹನುಮಸಾಗರ:  ‘ಹೈದ್ರಾಬಾದ್‌ ಕರ್ನಾಟಕ ಎಂದು ಮೂಗು ಮುರಿಯಬೇಡಿ, ಈ ಭಾಗದಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಹಾರಿ ಬರುವ ಹಕ್ಕಿಗಳಿಗೆ ನೆಚ್ಚಿನ ತಾಣವಿದು, ನಮ್ಮಲ್ಲಿ ಎಂತೆಂಥಹ ಬಗೆಯ ಹಕ್ಕಿಗಳು ಬರುತ್ತವೆ. ಒಂದು ಬಾರಿ ಕಣ್ಣು ಹಾಯಿಸಿ ನೋಡಿ, ನಿಬ್ಬೆರಗಾಗುವ ಪಕ್ಷಿ ಪ್ರಪಂಚ ನಿಮ್ಮ ಕಣ್ಣೆದುರಿಗೆ ಅನಾವರಣವಾಗುತ್ತದೆ’ಎಂದು ಹವ್ಯಾಸಿ ಪರಿಸರ ಛಾಯಾಗ್ರಾಹಕ ಸುಜಿತ್‌ ಶೆಟ್ಟರ್‌ ಅಭಿಮಾನದಿಂದ ಹೇಳುತ್ತಾರೆ.

ವೃತ್ತಿ ಜೊತೆಗೆ ಛಾಯಾಗ್ರಹಣ: ಎಂಬಿಎ ಪದವೀಧರರಾಗಿರುವ ಸುಜಿತ್‌ ಮೂಲತಃ ವ್ಯಾಪಾರಸ್ಥರು. ಪ್ರಾಣಿ ಪಕ್ಷಿಗಳ ಮೇಲೆ ಸಾಕಷ್ಟು ಅನುಕಂಪ ಹೊಂದಿರುವ ಕಾರಣವಾಗಿ, ಆರಂಭದಲ್ಲಿ ಅವುಗಳನ್ನು ನೋಡಿ ಖುಷಿಪಟ್ಟುಕೊಳ್ಳುತ್ತಿದ್ದರು. ಬಳಿಕ ಛಾಯಾಗ್ರಹಣಕ್ಕೆ ಕೈ ಹಾಕಿದರು. ಈಗ ಪಕ್ಷಿಗಳ ಚಲನ ವಲನ ಅವುಗಳ ಗುಣಲಕ್ಷಣಗಳನ್ನು ಅಭ್ಯಾಸ ಮಾಡಿ ಶಾಲಾ ಮಕ್ಕಳಿಗೆ ಹಾಗೂ ಪರಿಸರ ಪ್ರಿಯರಿಗೆ ಹಾಡು ಹಕ್ಕಿಗಳ ಉಚಿತ ಪರಿಸರ ಪಾಠ ಮಾಡಲು ಸಿದ್ಧರಾಗಿದ್ದಾರೆ.

ಛಾಯಾಗ್ರಹಣಕ್ಕೆ ದೂರ ಹೋಗಿಲ್ಲ: ಪಕ್ಷಿಗಳ ಛಾಯಾಗ್ರಹಣಕ್ಕಾಗಿ ದೂರದ ಸ್ಥಳಗಳಿಗೆ ಹೋಗಿಲ್ಲ. ಕೊಪ್ಪಳ, ಬಳ್ಳಾರಿ, ರಾಯಚೂರು ಭಾಗಗಳಲ್ಲಿಯೇ ಇವರಿಗೆ ಸಾಕಷ್ಟು ಪಕ್ಷಿಗಳು ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿವೆ. ಯಾವ ಸಂದರ್ಭದಲ್ಲಿ ಯಾವ ದೇಶದ ಪಕ್ಷಿಗಳು ಯಾವ ಸ್ಥಳಕ್ಕೆ ಬರುತ್ತವೆ ಎಂಬ ಪಕ್ಕಾ ಮಾಹಿತಿ ಇವರಲ್ಲಿದೆ. ಪಕ್ಷಿಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸಿರುವ ಸುಜಿತ್‌ ಎತ್ತರ ಮರದಲ್ಲಿ ಕೂಡುವ ಪಕ್ಷಿಗಳಾವವು, ಪೊದೆಗಳಲ್ಲಿ, ಪುಟ್ಟ ಮರದಲ್ಲಿ, ಕಂಟಿಗಳಲ್ಲಿ, ಹುಲ್ಲಿನಲ್ಲಿ ವಾಸ ಮಾಡಿ ಸಂತಾನ ಅಭಿವೃದ್ಧಿ ಮಾಡುವ ಪಕ್ಷಿಗಳ ಪಟ್ಟಿಯನ್ನು ಕೊಡುತ್ತಾರೆ.

ಯಲಬುರ್ಗಾ ತಾಲ್ಲೂಕಿನ ಕಲಕಬಂಡಿ ಗ್ರಾಮದ ಹತ್ತಿರದ ತಮ್ಮ ಆರು ಎಕರೆ ಜಮೀನಿನಲ್ಲಿ ವಿವಿಧ ಪಕ್ಷಿಗಳಿಗೆ ಅವುಗಳ ಗುಣಲಕ್ಷಣಗಳನ್ನಾಧರಿಸಿ ಅರಣ್ಯ ಬೆಳೆಸುತ್ತಿದ್ದಾರೆ. ಹಕ್ಕಿಗಳ ಚಿತ್ರ ತೆಗೆಯುವುದು ಸರಳವಲ್ಲ: ಮೂಡಣದಿಂದ ನೇಸರನ ಕಿರಣಗಳು ನಭೋಮಂಡಲಕ್ಕೆ ಚಿಮ್ಮುತ್ತಿದ್ದಂತೆ ಹಾಗೂ ಭಾಸ್ಕರ ಪಡುವಣದಲ್ಲಿ ಮರೆಯಾಗಿ ಬಾನಂಗಳದಲ್ಲಿ ಕೆಂಪಿಡುತ್ತಿದ್ದಂತೆ ಕೆರೆಯತ್ತ ಹಾರಿ ಬರುವ ಪಕ್ಷಿ ಪುಂಜವನ್ನು ಗಂಟೆಗಟ್ಟಲೆ ಕಾಯ್ದು ಚಿತ್ರೀಕರಿಸುವ ಇವರ ತಾಳ್ಮೆ ಮೆಚ್ಚುವಂತಹದ್ದು. ‘

ಹಕ್ಕಿಗಳ ಫೋಟೊ ತೆಗೆಯುವುದು ಸರಳವಲ್ಲ. ಮೊದಲು ಅವುಗಳ ಜೊತೆಗೆ ನಾವು ಸ್ನೇಹ ಬೆಳೆಸಬೇಕು. ಇವರಿಂದ ನಮಗೆ ಯಾವ ಅಪಾಯವಿಲ್ಲ ಎಂಬ ಮನವರಿಕೆಯಾದಾಗ ಮಾತ್ರ ಪಕ್ಷಿಗಳು ತಮ್ಮ ಸಹಜ ಚಟುವಟಿಕೆಗಳನ್ನು ಆರಂಭಿಸುತ್ತವೆ. ಅಷ್ಟೇ ಅಲ್ಲ ಸದ್ದುಗದ್ದಲ ಮಾಡದೆ ಮೌನಕ್ಕೆ ಶರಣಾಗಿದ್ದರೆ ಹಕ್ಕಿಗಳು ನಮ್ಮ ಮನದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಬಲ್ಲವು’ ಎಂದು ಶೆಟ್ಟರ್‌ ಹೇಳುತ್ತಾರೆ.

ಇವರು ತೆಗೆದ ಚಿತ್ರಗಳಲ್ಲಿ ರಾಜಹಂಸ, ಏಷಿಯನ್ ಓಪೆನ್ ಬಿಲ್ಸ್, ಬಾರ್ಹೆಡೆಡ್ ಗೂಸ (ಪಟ್ಟಿತಲೆ ಹೆಬ್ಬಾಕು), ಡೆಮೊಸಿಲ್ ಕ್ರೇನ್, ಕಾಜಲಕ್ಕಿ, ಗ್ರೆಹೆರಾನ್, ಮಂಗೋಲಿಯನ್‌, ಏಷಿಯನ್‌, ಡೆಕನ್‌ ಫ್ಲೆಮಿಂಗ್‌, ವಿನಾಶದ ಅಂಚಿನಲ್ಲಿರುವ ನೇಸರ್‌ ಫ್ಲೋರೇಕಿನ್‌, ಪಿಂಕ್‌ ರನ್‌ವೇ, ಗ್ರೇ ಫ್ರಾಂಕೋಲಿನ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಕೊಕ್ಕರೆಗಳ ಚಿತ್ರಗಳ ಕಣ್ಮನಸೆಳೆಯುತ್ತವೆ.

ಛಾಯಾಗ್ರಾಹಕರಿಗೆ ಟಿಪ್ಸ್‌: ‘ಕ್ಯಾಮೆರಾ ಎಲ್ಲರ ಕೈಯಲ್ಲಿ ಇರುತ್ತವೆ ಆದರೆ, ಸಮಯ, ಸ್ಥಳ, ನೆರಳು ಬೆಳಕು ಬಳಸಿಕೊಂಡು ಸುಂದರ ಚಿತ್ರ ತೆಗೆಯುವ ಮನಸ್ಸು ಇರುವುದು ವಿರಳ’ ಎಂದು ಸುಜಿತ್‌ ಹೇಳುತ್ತಾರೆ. ಚಿತ್ರ ತೆಗೆಯುವಾಗ ನೆರಳು ಬೆಳಕು ಮುಖ್ಯಪಾತ್ರವಹಿಸುತ್ತವೆ. ಇಳಿಬಿಸಿನಲ್ಲಿ ಸುಂದರ ಚಿತ್ರಗಳು ಬರುತ್ತವೆ. 

ಬೆಳಗಿನ ಜಾವದಲ್ಲಿ ಧೂಳಿಕಣಗಳು ಇಲ್ಲದಿರುವ ಕಾರಣ ಚಿತ್ರಗಳ ಶುಭ್ರತೆ ಕಾಣುತ್ತೇವೆ, ಪ್ರಕಾಶಮಾನ ಬೆಳಕು ಕ್ಯಾಮೆರಾ ಹಿಡಿದವನ ಹಿಂದೆ ಇರಬೇಕೆ ವಿನಃ ಮುಂದೆ ಇರಬಾರದು. ಬೆಟ್ಟ, ಪಕ್ಷಿ, ಬೆಳೆಗಳ ಚಿತ್ರ ತೆಗೆಯುವಾಗ ನೀಲಿ ಗಗನ ಬ್ಯಾಕ್‌ಗ್ರೌಂಡ್‌ ಆಗಿದ್ದರೆ ಚಿತ್ರ ಅದ್ಭುತವಾಗಿರುತ್ತದೆ ಎಂದು ಫೋಟೊ ತೆಗೆಯುವವರಿಗೆ ವಿವಿಧ ಬಗೆಯ ಟಿಪ್ಸ್‌ಗಳನ್ನು ಅವರು ನೀಡುತ್ತಾರೆ.
ಕಿಶನರಾವ್‌ ಕುಲಕರ್ಣಿ

ಕಲಾತ್ಮಕ ಚಿತ್ರಗಳನ್ನು ಸೆರೆಹಿಡಿಯುವರ ಸಂಖ್ಯೆ ಕಡಿಮೆ. ಅದಕ್ಕೆ ತಾಳ್ಮೆ, ಶ್ರದ್ಧೆ ಅವಶ್ಯ. ಕೆಲವೊಂದು ಸಮಯ ಶ್ರಮಕ್ಕೆ ಪ್ರತಿಫಲ ದೊರಕದೆಯೂ ಇರಬಹುದು.
ಸುಜಿತ್‌ ಶೆಟ್ಟರ್‌, ಹವ್ಯಾಸಿ ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT