ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿ ಸಂಕುಲಕ್ಕೆ ಮಡಕೆಯಲ್ಲಿ ನೀರು

Last Updated 14 ಮೇ 2017, 8:48 IST
ಅಕ್ಷರ ಗಾತ್ರ

ವಿಜಯಪುರ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಕೃಷ್ಣೆ–ಭೀಮೆ–ಡೋಣಿ ಮೈದುಂಬಿ ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪದು.ಹತ್ತಾರು ಯೋಜನೆ ಅನುಷ್ಠಾನಗೊಂಡಿದ್ದರೂ ಹನಿ ಹನಿ ನೀರಿಗಾಗಿ ಜನತೆ ಪರಿತಪಿಸುತ್ತಿದೆ. ಪ್ರಸ್ತುತ ವರ್ಷ ಸಮಸ್ಯೆ ತೀವ್ರ ಉಲ್ಭಣಗೊಂಡಿದೆ. ಜನ–ಜಾನುವಾರುಗಳಿಗೆ ನೀರೊದಗಿಸಲು ಜಿಲ್ಲಾಡಳಿತ ಅಹೋರಾತ್ರಿ ಶ್ರಮಿಸುತ್ತಿದೆ.

ಈ ಬಾರಿಯ ಬಿಸಿಲ ಝಳ ಖಗ ಸಂಕುಲಕ್ಕೂ ವ್ಯಾಪಕ ಪ್ರಮಾಣದಲ್ಲಿ ತಟ್ಟಿದೆ. ಕೆರೆ ತುಂಬುವ ಯೋಜನೆಗಳಡಿ ಕೆರೆ ತುಂಬಿದರೂ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಜಲಾಶಯದಲ್ಲೂ ನೀರಿನ ಸಂಗ್ರಹ ಕಡಿಮೆಯಿದೆ. ಹಳ್ಳ–ಕೊಳ್ಳ ಬತ್ತಿವೆ. ಬಾವಡಿಗಳು ಬರಿದಾಗಿವೆ. ಪಕ್ಷಿ ಸಂಕುಲ ನೀರಿಲ್ಲದೆ ಪರಿತಪಿಸುತ್ತಿದೆ.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ವಿಜಯಪುರ ನಗರದ ಪರಿಸರ ರಕ್ಷಣಾ ವೇದಿಕೆ ಸಂಘಟನೆಯ ಕಾರ್ಯಕರ್ತರು ಇದೀಗ ಖಗ ಸಂಕುಲಕ್ಕೆ ನೀರಿನ ಆಸರೆಯೊದಗಿಸುವ ಸಂಕಲ್ಪ ತೊಟ್ಟು ಕಾರ್ಯೋನ್ಮುಖರಾಗಿದ್ದಾರೆ.

‘ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಸಿ ಪಕ್ಷಿ ಸಂಕುಲದ ನೆರವಿಗೆ ಧಾವಿಸುವುದು ಸಂಘಟನೆಯ ಪ್ರಮುಖ ಆದ್ಯತೆಯಾಗಿದೆ. ಇದಕ್ಕಾಗಿ ಗುಳೇದಗುಡ್ಡದಲ್ಲಿ ಮಣ್ಣಿನ ಮಡಿಕೆ ತಯಾರಿ ಮಾಡುವವರನ್ನು ಸಂಪರ್ಕಿಸಿ ವಿಶೇಷ ರೀತಿಯಲ್ಲಿ ಮಾಡಿಕೊಡುವಂತೆ ಮನವಿ ಮಾಡಿದ್ದೆವು.

ನಾವು 5000 ಪಾತ್ರೆಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಈಗಾಗಲೇ ಮೊದಲ ಹಂತದಲ್ಲಿ 500 ಮಣ್ಣಿನ ಮಡಿಕೆ ಪಾತ್ರೆ ಬಂದಿದ್ದು, ನಗರದ ಪ್ರಮುಖ ಉದ್ಯಾನಗಳಲ್ಲಿನ ಮರಗಳಿಗೆ ಜೋತು ಬಿಟ್ಟು ನೀರು ಹಾಕುವ ಕೆಲಸ ನಡೆಸಿದ್ದೇವೆ’ ಎಂದು ಪರಿಸರ ರಕ್ಷಣಾ ವೇದಿಕೆಯ ಅಧ್ಯಕ್ಷ ವಿರೂಪಾಕ್ಷಪ್ಪ ಝಳಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಸಂಘಟನೆ 2012ರಲ್ಲಿ ಏಳು ಸದಸ್ಯರಿಂದ ಆರಂಭಗೊಂಡಿತು. ಇದೀಗ ನಮ್ಮ ಜತೆ 60ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಮುಕ್ತಮನದಿಂದ ತೊಡಗಿಸಿಕೊಂಡು ಖುಷಿ ಪಡುತ್ತಿದ್ದೇವೆ.

ಈ ಬಾರಿ ನೀರಿನ ಹಾಹಾಕಾರ ನಮ್ಮ ಕಣ್ತೆರೆಸಿತು. ಕೊಂಚ ವಿಳಂಬವಾದರೂ ಖಗ ಸಂಕುಲದ ನೆರವಿಗೆ ಸಂಕಲ್ಪ ತೊಟ್ಟೆವು. ವರ್ಷ ಪೂರ್ತಿ ನಗರದ ಎಲ್ಲೆಡೆ ಮಣ್ಣಿನ ಮಡಕೆಯ ಪಾತ್ರೆ ಕಟ್ಟುವ ಕಾಯಕ ನಮ್ಮದು.

ಸಂಘಟನೆಯ ಸದಸ್ಯರೇ ದೇಣಿಗೆ ವಂಚಿಸಿಕೊಂಡಿದ್ದೇವೆ. ಒಂದು ಮಣ್ಣಿನ ಪಾತ್ರೆಗೆ ₹ 20. ಐದು ಸಾವಿರ ಮಣ್ಣಿನ ಪಾತ್ರೆಯ ಬೆಲೆ ₹1 ಲಕ್ಷ ಆಗಲಿದೆ. ನಗರದ ಹೊರ ವಲಯದಲ್ಲಿರುವ ಶಿವಗಿರಿ ಆಸುಪಾಸು, ರುಕ್ಮಾಂಗದ ಪಂಡಿತರ ಸಮಾಧಿ ಉದ್ಯಾನ, ರಾಮನಗರದ ಉದ್ಯಾನ, ಜಲನಗರದಲ್ಲಿನ ವಿಡಿಎ ಉದ್ಯಾನ, ವಿವೇಕ ನಗರದಲ್ಲಿನ ವಿಡಿಎ ಉದ್ಯಾನದಲ್ಲಿ ಸದ್ಯ 500 ಮಣ್ಣಿನ ಪಾತ್ರೆ ಕಟ್ಟಿದ್ದೇವೆ.

ನಮ್ಮ ಸದಸ್ಯರು ಸೇರಿದಂತೆ ಆಸಕ್ತರು ಆಯಾ ಭಾಗದಲ್ಲಿ ನಿತ್ಯ ಮಣ್ಣಿನ ಪಾತ್ರೆಗಳಿಗೆ ನೀರು ಹಾಕುತ್ತಿದ್ದಾರೆ. ಇದರಿಂದ ನಾವು ಪಾತ್ರೆ ಇಟ್ಟಿರುವ ಸ್ಥಳಗಳಲ್ಲಿ ಹಕ್ಕಿಗಳ ಕಲರವ ದಿನದಿಂದ ದಿನಕ್ಕೆ ಹೆಚ್ಚಿದೆ’ ಎಂದು ಸಂಘಟನೆಯ ಕಾರ್ಯದರ್ಶಿ ಶ್ರೀಧರ ನಾರಾಯಣಕರ ಹೇಳಿದರು.

‘ಐದು ಸಾವಿರ ಮಣ್ಣಿನ ಮಡಕೆ ಪಾತ್ರೆ ಕಟ್ಟುವ ಗುರಿ ನಮ್ಮದು. ಪಕ್ಷಿ ಪ್ರೇಮಿಗಳು, ಪರಿಸರಾಸಕ್ತರು ಸಹ ಈ ಪಾತ್ರೆಗಳನ್ನು ನಮ್ಮ ಬಳಿ ಉಚಿತವಾಗಿ ಪಡೆಯಬಹುದು. ಆಸಕ್ತರು 98864 75881, 9844478350 ಸಂಪರ್ಕಿಸಿ. ಮನೆಯ ಅಂಗಳ,  ಉದ್ಯಾನದಲ್ಲಿ ಇವುಗಳನ್ನು ಕಟ್ಟಿ ಖಗ ಸಂಕುಲಕ್ಕೆ ನೀರುಣಿಸುವ ಕಾಯಕದಲ್ಲಿ ನಮ್ಮ ಜತೆ ಕೈ ಜೋಡಿಸಬಹುದು’ ಎನ್ನುತ್ತಾರೆ ವಿರೂಪಾಕ್ಷಪ್ಪ ಝಳಕಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT