ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಸಿದ್ದೇಶ್ವರ ಜಾತ್ರೆ ಮಹೋತ್ಸವ: ಪಲ್ಲಕ್ಕಿ ಮೆರವಣಿಗೆ ಸಂಭ್ರಮ

Last Updated 14 ಮೇ 2017, 8:49 IST
ಅಕ್ಷರ ಗಾತ್ರ

ದೇವರ ಹಿಪ್ಪರಗಿ : ಪಟ್ಟಣದ ಕರಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 11 ಗ್ರಾಮಗಳ 16 ದೇವರುಗಳ ಪಲ್ಲಕ್ಕಿ ಮೆರವಣಿಗೆ ಭಕ್ತಿ ಭಾವದೊಂದಿಗೆ ಅದ್ಧೂರಿಯಾಗಿ ಜರುಗಿತು.
ಶನಿವಾರದಂದು ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಕಾಶೀಲಿಂಗ, ಕರಿಸಿದ್ಧೇಶ್ವರ ದೇವರುಗಳ ಪಲ್ಲಕ್ಕಿಗಳ ಜೊತೆ ಅಂಕಲಗಿ, ತಾಂಬಾ, ಹಚ್ಯಾಳ, ಮಣೂರ, ಇಂಗಳಗಿ, ಪಡಗಾನೂರ, ಬಿಸನಾಳ, ಕಾಮನಕೇರಿ ಬೂದಿಹಾಳ, ಜಾಲವಾದ, ರಾಮನಹಟ್ಟಿ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳು  ಸೇರಿ ಬೆಳಿಗ್ಗೆ ಗಂಗಸ್ಥಳ ಕಾರ್ಯ ಮುಗಿಸಿಕೊಂಡು ವಿವಿಧ ವಾಧ್ಯ ವೈಭವಗಳೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರಟು ಕರಿಸಿದ್ಧೇಶ್ವರ ದೇವಸ್ಥಾನ ತಲುಪಿತು.

ಮೆರವಣಿಗೆ ಸಮಯದಲ್ಲಿ ಬೀದಿಗಳನ್ನು ಸ್ವಚ್ಛಗೊಳಿಸಿ, ಹೂವುಗಳನ್ನು ಹಾಕಲಾಗಿತ್ತು. ಹೂವಿನ ಹಾಸಿನ ಮೇಲೆ ಬಿಳಿ ಬಟ್ಟೆಯ ಹೊದಿಕೆ ಹಾಕಿ ಮಡಿವಂತಿಕೆಯ ಮೂಲಕ ಪಲ್ಲಕ್ಕಿಗಳು ಸಾಗಿ ಭಕ್ತರ ಗಮನ ಸೆಳೆದವು.

ಮಹಿಳೆಯರು ರಸ್ತೆಗಳ ಎಡ ಬಲ ಬದಿಗಳಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿ ಮೆರವಣಿಗೆಗೆ ಮೆರಗು ತಂದರೆ, ಭಕ್ತರು 10 ಕ್ವಿಂಟಲ್‌ನಷ್ಟು ಭಂಡಾರ ಖರೀದಿಸಿ ಮೆರವಣಿಗೆಯುದ್ದಕ್ಕೂ ಎರಚುವುದರ ಮೂಲಕ ತಮ್ಮ ಭಕ್ತಿಯ ಪರಕಾಷ್ಠೆ ಮೆರೆದರು.

ಪಟ್ಟಣದಲ್ಲಿ ಮೆರವಣಿಗೆ ಸಾಗಿದ ರಸ್ತೆಗಳೆಲ್ಲಾ ಹೂವು ಹಾಗೂ ಭಂಡಾರಗಳಿಂದ ತುಂಬಿ ಬಂಗಾರವರ್ಣದಂತೆ  ಕಂಡು ಬಂದವು. ಉರಿಬಿಸಿಲಲ್ಲಿ ಭಕ್ತರು ಬರಿಗಾಲಲ್ಲಿ ನಡೆದು ತೆರಳುತ್ತಿದ್ದರೆ ಅವರಿಗಾಗಿ ಪಾನಕ, ಮಜ್ಜಿಗೆಯಂತಹ ತಂಪು ಪಾನೀಯದ ವ್ಯವಸ್ಥೆ ಮಾಡಿ, ಪಟ್ಟಣದ ಜನತೆ ಸೇವೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT