ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಸಲ್ಲಿಸಲು ಸಹಕಾರಿ ಕ್ಷೇತ್ರ ಮಾದರಿ

Last Updated 14 ಮೇ 2017, 10:08 IST
ಅಕ್ಷರ ಗಾತ್ರ

ಶಿರಸಿ: ಸೇವೆ ಸಲ್ಲಿಸಲು ಸಹಕಾರಿ ಕ್ಷೇತ್ರಕ್ಕಿಂತ ಮಿಗಿಲಾದ ಕ್ಷೇತ್ರ ಇನ್ನೊಂದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ ವ್ಯಕ್ತಿ ಇನ್ನಾವುದೇ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಳ್ಳಬಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿ ಆಯೋಜಿಸಿದ್ದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ಶತೋತ್ತರ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರ ದೇಶ ಭಕ್ತಿ, ರಾಷ್ಟ್ರೀಯ ಭಾವನೆ ಬೆಳೆಸುತ್ತದೆ. ಈ ರಂಗವು ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ.

ಉದ್ಯೋಗ ಸೃಷ್ಟಿಯ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬಲಿಷ್ಠವಾಗಿ ಬೆಳೆದಿರುವ ಸಹಕಾರಿ ರಂಗ ದೇಶದ ಎಲ್ಲ ಕಡೆ ವಿಸ್ತರಣೆಯಾಗಬೇಕು. ಸಹಕಾರ ಕ್ಷೇತ್ರಕ್ಕೆ ನಿರಂತರ ನೆರವು, ಪ್ರೋತ್ಸಾಹ ಅಗತ್ಯವಿದೆ. ಸರ್ಕಾರದಲ್ಲಿ ಸಹಕಾರಿ ಕ್ಷೇತ್ರದ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂದರು.

ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮಾತ ನಾಡಿ ‘ಬ್ಯಾಂಕಿಂಗ್ ಕ್ಷೇತ್ರ ಉತ್ತಮವಾಗಿ ಮುನ್ನಡೆಯಲು ಶೇರುದಾರರ ವಿಶ್ವಾಸ ಅಗತ್ಯವಾಗಿದೆ. ಈ ವಿಶ್ವಾಸವನ್ನು ಗಳಿಸಿಕೊಂಡಿರುವ ಶಿರಸಿ ಅರ್ಬನ್ ಬ್ಯಾಂಕ್ ಯಾವುದೇ ಕಪ್ಪುಚುಕ್ಕೆಯಿ ಲ್ಲದೇ ಕೆಲಸ ಮಾಡುತ್ತಿದೆ.

ಯಂತ್ರಗಳ ಯುಗದಲ್ಲಿ ಯುವಜನರು ಉದ್ಯೋಗದ ಕೊರತೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಹಕಾರಿ ಬ್ಯಾಂಕುಗಳು ಸಣ್ಣ, ಗೃಹ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಸ್ವ ಉದ್ಯೋಗ ಪ್ರೋತ್ಸಾಹಿಸಬೇಕು’ ಎಂದರು.

‘ಸಹಕಾರಿ ರಂಗದಲ್ಲಿ ಸುದೀರ್ಘ ಕೆಲಸ ಮಾಡಿರುವ ವಿ.ಎಸ್. ಸೋಂದೆ ಈ ಶತಮಾನದ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರು ಎಂದರೆ ತಪ್ಪಾಗಲಾರದು. ಅವರು ಸಹಕಾರಿ ರಂಗಕ್ಕೆ ತಿಲಕವಿದ್ದಂತೆ’ ಎಂದು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಶ್ಲಾಘಿಸಿದರು.

ಬ್ಯಾಂಕಿನ ಅಧ್ಯಕ್ಷ ವಿ.ಎಸ್. ಸೋಂದೆ ಅಧ್ಯಕ್ಷತೆ ವಹಿಸಿದ್ದರು. 1905ರಲ್ಲಿ ಕ್ರೆಡಿಟ್‌ ಸೊಸೈಟಿ ಸ್ಥಾಪನೆಗೊಂಡು ನಂತರ ಬ್ಯಾಂಕ್ ಆಗಿ ಪರಿವರ್ತನೆ ಹೊಂದುವಲ್ಲಿ ಅನೇಕರ ಶ್ರಮವಿದೆ. ಬ್ಯಾಂಕ್ 110 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ದೇಶದ ಸಹಕಾರಿ ರಂಗದಲ್ಲಿ ಹೊಸ ಇತಿಹಾಸ ರಚಿಸಿದೆ ಎಂದು ಅವರು ಹೇಳಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪೈ ಸ್ವಾಗತಿಸಿದರು. ಉಪಾಧ್ಯಕ್ಷ ಜಯದೇವ ನಿಲೇಕಣಿ ವಂದಿಸಿದರು.

ಸಾಮಾಜಿಕ ಹೊಣೆಗಾರಿಕೆ ಇರಲಿ
‘ಸಹಕಾರ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ನಿರ್ವಹಿಸುವ ಸಂಸ್ಥೆಗಳು ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು. ಸ್ವಚ್ಛ ಭಾರತ ಅಭಿಯಾನ, ಮಳೆ ನೀರು ಇಂಗಿಸುವಿಕೆ ಇಂತಹ ಸಮಾಜಪ ಚಟುವಟಿಕೆಯಲ್ಲಿ ಹೆಸರು ಮಾಡಿರುವ ಸಂಸ್ಥೆಗಳು ತೊಡಗಿಕೊಂಡರೆ ಜನರು ಸಹ ಇಂತಹ ಕಾರ್ಯಕ್ರಮಗಳ ಬಗ್ಗೆ ಆಸಕ್ತರಾಗುತ್ತಾರೆ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಹೇಳಿದರು.

ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಮಾತನಾಡಿ ‘ಶಿರಸಿಗೆ ಜಿಲ್ಲಾ ಕೇಂದ್ರ ಆಗುವ ಎಲ್ಲ ಸಾಮರ್ಥ್ಯವಿದೆ. ನಾನು ಬಹಳ ಹಿಂದೆಯೇ ಈ ವಿಷಯ ಪ್ರಸ್ತಾಪಿಸಿದ್ದೆ. ಈಗಲೂ ಈ ನಿಲುವನ್ನೇ ಹೊಂದಿದ್ದು, ಶಿರಸಿ ಜಿಲ್ಲಾ ಕೇಂದ್ರ ಆಗಬೇಕು’ ಎಂದರು.

‘ಮೈಸೂರಿನವರು ಮಾತನಾಡಿದರೆ ಮಾತ್ರ ಎಲ್ಲ ವಿಷಯಕ್ಕೂ ಮಹತ್ವ ಬರುತ್ತದೆ ಎನ್ನುವಂತಾಗಿದೆ. ಕರ್ನಾಟಕ ರಾಜ್ಯ ಆಗಿ ರೂಪುಗೊಂಡಿದ್ದರೂ ರಾಜ್ಯದ ಇನ್ನುಳಿದ ಭಾಗ ಮೈಸೂರಿನ ವಿಸ್ತರಣೆ ಎಂದು ಅಲ್ಲಿನ ಜನರು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯ ಬರೆದವರು ಯಾರೂ ಇಲ್ಲ ಎಂದು ಸಾಹಿತಿಯೊಬ್ಬರು ಇತ್ತೀಚೆಗೆ ಹೇಳಿದ್ದಾರೆ. 

ಬರವಣಿಗೆಯನ್ನು ಕೇವಲ ಮೈಸೂರು ಭಾಗಕ್ಕೆ ಗುತ್ತಿಗೆ ಕೊಡಲಾಗಿದೆಯೇ’ ಎಂದು ಅವರು ಟೀಕಿಸಿದರು. ಅರ್ಬನ್ ಬ್ಯಾಂಕಿನ ನಿರ್ದೇಶಕರಾದ ಮಿಲಿಂದ್ ಪಂಡಿತ್, ಎಸ್.ಪಿ. ಮಛಾಡೊ, ಷಣ್ಮುಖ ದುಂಡಸಿ, ಮೋಹನ ಪ್ರಭು, ರಾಮಚಂದ್ರ ನಾಯಕ, ಸಂತೋಷ ಪಂಡಿತ್, ಸದಾನಂದ ನಾಯ್ಕ, ಟಿ.ಎಸ್. ಬಾಲಮಣಿ, ಸುವರ್ಣಾ ಪ್ರಭು, ವನಿತಾ ಕೇಶವೈನ್, ಗಂಗಾಧರ ಸಾನು, ಸುರೇಂದ್ರ ರೇವಣಕರ, ಶಶಿಕಾಂತ ನಾಡಿಗ್, ಟಿ. ಶ್ರೀಧರ ಮೂರ್ತಿ ಇದ್ದರು. ವಿಠ್ಠಲದಾಸ್ ಪೈ ಸ್ವಾಗತಿಸಿದರು. ಹೇಮಲತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT