ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ವಿಭಾಗದಲ್ಲಿ ಶ್ರುತಿಗೆ ಐದನೇ ಸ್ಥಾನ

Last Updated 14 ಮೇ 2017, 10:27 IST
ಅಕ್ಷರ ಗಾತ್ರ

ಹರಪನಹಳ್ಳಿ: ‘ಮನೆಯಿಂದ ಕಾಲೇಜಿಗೆ ನಿತ್ಯ 60 ಕಿ.ಮೀ. ಪ್ರಯಾಣ. ನಂತರ ನಾಲ್ಕು ಕಿ.ಮೀ. ನಡಿಗೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ಸರ್ಕಾರದ ಉನ್ನತ ಹುದ್ದೆ ಪಡೆಯಬೇಕು ಎಂಬ ಛಲದಿಂದ ಕಷ್ಟ ಪಟಟು ಓದಿದ್ದೇನೆ. ಅದಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ...’

ಇದು ಹರಪನಹಳ್ಳಿಯ ಶ್ರೀ ಉಜ್ಜ ಯಿನಿ ಜಗದ್ಗುರು ಮರುಳಾರಾಧ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ವಾಲೇಕಾರ್‌ ಅವರ ಮನದಾಳದ ಮಾತು. ಈ ಬಾರಿಯ ದ್ವಿತೀಯ ಪಿ.ಯು ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಅವರು ಗಳಿಸಿದ ಅಂಕಗಳು ಇಂತಿವೆ. ಕನ್ನಡ 91, ಸಂಸ್ಕೃತ 100, ಐಚ್ಛಿಕ ಕನ್ನಡ 97, ಇತಿಹಾಸ 100, ರಾಜ್ಯಶಾಸ್ತ್ರ 94, ಶಿಕ್ಷಣ 97. ಒಟ್ಟು 579 ಅಂಕಗಳು.

‘ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಕನ್ನಿಹಳ್ಳಿ ಗ್ರಾಮದಿಂದ ಇಟಗಿ ಗ್ರಾಮಕ್ಕೆ ಎರಡು ಕಿ.ಮೀ. ನಡೆದು ಹರಪನಹಳ್ಳಿಗೆ ಬಸ್‌ನಲ್ಲಿ ಪ್ರಯಾಣಿಸು ತ್ತೇವೆ. ತರಗತಿ ಮುಗಿಸಿಕೊಂಡು ಪುನಃ  ಮನೆ ಸೇರುವಷ್ಟರಲ್ಲಿ ರಾತ್ರಿ  ಎಂಟು ಗಂಟೆಯಾಗುತ್ತಿತ್ತು. ಸ್ನೇಹಿತೆಯರಾದ ಕಾವ್ಯಾ, ನೇತ್ರಾ, ರೇಖಾ, ಸುಶೀಲಾ, ಕರಿಬಸಮ್ಮ, ಸುನಿತಾ, ಮಂಗಳಾ ಅವರೂ ಇದೇ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಾರೆ. ಗಾಳಿ, ಮಳೆ, ಚಳಿ, ಕತ್ತಲೆ ಎನ್ನದೆ ಸಂಕಷ್ಟಗಳನ್ನು ಎದುರಿಸಿದ್ದೇವೆ’ ಎಂದು ಅವರು ತಾವು ಪಟ್ಟ ಕಷ್ಟಗಳನ್ನು ವಿವರಿಸಿದರು.

‘ಸಂಜೆ ಮನೆ ಸೇರುತ್ತಿದ್ದಂತೆ ಎಲ್ಲ ಸ್ನೇಹಿತೆಯರೂ ನನ್ನ ಮನೆಯಲ್ಲಿ ಒಟ್ಟಾಗಿ ಕುಳಿತು ಅಂದಿನ ದಿನದ ಪಾಠವನ್ನು ಮನನ ಮಾಡಿಕೊಳ್ಳುತ್ತಿದ್ದೆವು. ನಾನು ಸ್ನೇಹಿತೆಯರೊಂದಿಗೆ ಚರ್ಚೆ ನಡೆಸುತ್ತಿದ್ದೆ. ನನ್ನ ಗೆಳತಿಯರೂ ಉತ್ತೀರ್ಣರಾಗಿದ್ದು ಹೆಚ್ಚಿನ ಸಂತೋಷವಾಗಿದೆ. ಕಾಲೇಜಿನ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ನೆರವನ್ನು ಸ್ಮರಿಸುತ್ತೇನೆ’ ಎಂದು ಶ್ರುತಿ ಹೇಳಿದರು.

‘ನನ್ನ ತಂದೆ ನಿಧನರಾಗಿ ಏಳು ವರ್ಷ ಗಳಾಗಿವೆ. ನಾಲ್ವರು ಸಹೋದರಿಯರು, ಒಬ್ಬ ಸಹೋದರನಿರುವ ಕುಟುಂಬ ನಮ್ಮದು. ತಾಯಿ ಹುಲಿಗೆಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ನನ್ನ ಅಕ್ಕ ಅನಿತಾ ವಾಲೇಕಾರ್‌, ಉಜ್ಜಯಿನಿ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಎಂಟು ತಿಂಗಳಿನಿಂದ ಹೊಸಪೇಟೆ ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ಕೆಲಸದಲ್ಲಿದ್ದಾಳೆ. 

ಆಕೆಯ ವಿದ್ಯಾರ್ಥಿ ವೇತನದಿಂದ ಕಾಲೇಜು ಶುಲ್ಕ ಕಟ್ಟಿದ್ದನ್ನು  ಮರೆಯುವಂತಿಲ್ಲ. ಮುಂದೆ ಓದಿ ಉನ್ನತ ಹುದ್ದೆ ಪಡೆಯುವ  ಹಂಬಲವಿದೆ. ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನಿ ಸುತ್ತೇನೆ’ ಎಂದು ತಿಳಿಸಿದರು.ಕಾಲೇಜಿನ ಕಾರ್ಯದರ್ಶಿ ಎಂ.ಎಂ. ಹರ್ಷವರ್ಧನ್‌ ಮತ್ತು ಉಜ್ಜಯಿನಿ ಪೀಠದ ಸ್ವಾಮೀಜಿ ಅವರು ಶ್ರುತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT