ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ನಿರ್ಲಕ್ಷ್ಯ

ನಾಗಾ ಉಗ್ರರ ಜತೆಗೆ ಹಿಂಬಾಗಿಲ ಮಾತುಕತೆ ನಡೆಸುತ್ತಿರುವ ಸರ್ಕಾರ, ಕಾಶ್ಮೀರ ವಿಚಾರದಲ್ಲಿ ಏಕೆ ಹಿಂದೇಟು ಹಾಕುತ್ತಿದೆ?
Last Updated 14 ಮೇ 2017, 13:28 IST
ಅಕ್ಷರ ಗಾತ್ರ

ಕಾಶ್ಮೀರ ಕಾರ್ಯತಂತ್ರಕ್ಕೆ ಸಂಬಂಧಿಸಿ ಕೇಂದ್ರದ ಬಿಜೆಪಿ ಸರ್ಕಾರ ಎರಡು ಪ್ರಮುಖ ಅಂಶಗಳನ್ನು ನಿರ್ಲಕ್ಷಿಸಿದೆ.

ಒಂದು, ಕಣಿವೆ ಮತ್ತು ಜಮ್ಮು ನಡುವೆ ಸ್ವಾತಂತ್ರ್ಯಪೂರ್ವದಲ್ಲೇ ಇದ್ದ ಬಿರುಕು, ಬದಲಾದ ಸನ್ನಿವೇಶದಲ್ಲಿ ವಿವಿಧ ಕಾರಣಗಳಿಗಾಗಿ ಈಗ ಮತ್ತೆ ಕಾಣಿಸಿಕೊಂಡಿದೆ. ಮೂಲದಲ್ಲಿ ಇದು ಮುಸ್ಲಿಮರ ವಿರುದ್ಧ ಹಿಂದೂಗಳು ಎಂಬ ಸಂಘರ್ಷ ಆಗಿರಲಿಲ್ಲ. ಬದಲಿಗೆ ಅದು ಕಣಿವೆ ಮತ್ತು ಜಮ್ಮು ನಡುವಣ ಜಗಳವೇ ಆಗಿತ್ತು. ಮಹಾರಾಜರ ಆಡಳಿತದಲ್ಲಿ ಅನಾದರಕ್ಕೆ ಒಳಗಾಗುತ್ತಿದ್ದೇವೆ ಎಂಬ ಭಾವನೆಯನ್ನು  ಮುಸ್ಲಿಮರಲ್ಲಿ ಮೂಡಿಸಿತ್ತು.

ಮುಸ್ಲಿಮರ ಹಕ್ಕುಗಳಿಗಾಗಿ 1932ರಲ್ಲಿ ಶೇಖ್‌ ಅಬ್ದುಲ್ಲಾ ಅವರು ಅಖಿಲ ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಕಾನ್ಫರೆನ್ಸ್‌ (ಎಜೆಕೆಎಂಸಿ) ಎಂಬ ಸಂಘಟನೆ ಸ್ಥಾಪಿಸಿದರು. 1939ರಲ್ಲಿ ಚೌಧರಿ ಗುಲಾಂ ಅಬ್ಬಾಸ್‌ ಎಂಬುವರು ಜಿನ್ನಾ ಬೆಂಬಲದಲ್ಲಿ ಮುಸ್ಲಿಂ ಕಾನ್ಫರೆನ್ಸ್‌ ಎಂಬ ಸಂಘಟನೆ ಸ್ಥಾಪಿಸಿದಾಗ ಅಬ್ದುಲ್ಲಾ ತಮ್ಮ ಸಂಘಟನೆ ಹೆಸರನ್ನು ನ್ಯಾಷನಲ್ ಕಾನ್ಫರೆನ್ಸ್‌ ಎಂದು ಬದಲಾಯಿಸಿದರು. ಕಾಶ್ಮೀರ, ಪಾಕಿಸ್ತಾನಕ್ಕೆ ಸೇರಬೇಕು ಎಂದು 1947ರ ಜುಲೈ 22ರಂದು ಮುಸ್ಲಿಂ ಕಾನ್ಫರೆನ್ಸ್‌ ಆಗ್ರಹಿಸಿತು.

1948ರಲ್ಲಿ ಪ್ರಕಟವಾದ ಅಮೃತ ಬಜಾರ್‌ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ‘ಕಾಶ್ಮೀರ ಯಾಕೆ ಭಾರತಕ್ಕೆ ಸೇರಬೇಕು ಮತ್ತು ಪಾಕಿಸ್ತಾನಕ್ಕೆ ಯಾಕೆ ಸೇರಬಾರದು’ ಎಂಬುದನ್ನು ವಿವರಿಸಿ ಅಬ್ದುಲ್ಲಾ ಅವರು ಲೇಖನವೊಂದನ್ನು ಬರೆದಿದ್ದರು. ಹರಿಸಿಂಗ್‌ ವಿರುದ್ಧ ಅವರು ನಿರಂತರವಾಗಿ ನಡೆಸಿದ ಹೋರಾಟಕ್ಕಾಗಿ ಮತ್ತು 1946ರ ‘ಕ್ವಿಟ್‌ ಕಾಶ್ಮೀರ’ ಚಳವಳಿಗಾಗಿ ಹಲವು ಬಾರಿ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು. ಅಬ್ದುಲ್ಲಾ ಅವರ ಚಳವಳಿಗಳಿಗೆ ನೆಹರೂ ಬೆಂಬಲ ಇತ್ತು.

1946–47ರಲ್ಲಿ ಜಮ್ಮು ಮತ್ತು ಕಣಿವೆಯ ನಡುವಣ ಸಂಘರ್ಷ ಇನ್ನಷ್ಟು ಕಹಿಯಾಯಿತು. ಹಿಂದೂ ರಾಜ್ಯವೊಂದು ಜಾತ್ಯತೀತ ಭಾರತದಲ್ಲಿ ವಿಲೀನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಾರದು ಎಂಬುದು ಪ್ರಜಾ ಪರಿಷತ್‌ ಎಂಬ ಸಂಘಟನೆಯ ವಾದವಾಗಿತ್ತು. ಪ್ರಜಾ ಪರಿಷತ್‌ ಈಗಿನ ಬಿಜೆಪಿಯ ಮಾತೃಸಂಸ್ಥೆ.

ಭಾರತದ ಜತೆ ವಿಲೀನ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದ ಕಾಶ್ಮೀರದ ಹಿರಿಯ ರಾಜಕಾರಣಿ ಬಲರಾಜ್‌ ಪುರಿಯಂಥವರನ್ನು ಈ ಸಂಘಟನೆ ದೇಶದ್ರೋಹಿ ಎಂದು ಕರೆಯಿತು. ಗಾಂಧೀಜಿ ಕೂಡ ಈ ಸೂಕ್ಷ್ಮವನ್ನು ಗಮನಿಸಿದ್ದರು ಮತ್ತು ಅವರು ಕಣಿವೆಯ ಜನರ ಪಕ್ಷಪಾತಿಯಾಗಿದ್ದರು.

1947ರ ಆ. 1ರಂದು ಕಾಶ್ಮೀರಕ್ಕೆ ಭೇಟಿ ನೀಡಿದ ಗಾಂಧೀಜಿ, ಮಹಾರಾಜನಿಗೆ ಕಾಶ್ಮೀರದ ಆಳ್ವಿಕೆಯ ಹಕ್ಕು ನೀಡುವ ಅಮೃತಸರ ಒಪ್ಪಂದವನ್ನು ಪ್ರಸ್ತಾಪಿಸುತ್ತಾರೆ. ‘ಸಾರ್ವಭೌಮತ್ವ ಬೆಲೆ ಕಳೆದುಕೊಳ್ಳುವುದರೊಂದಿಗೆ ಈ ಮಾರಾಟ ಒಪ್ಪಂದವೂ ಅಸಿಂಧುವಾಗಿದೆ’ ಎಂದು ಅವರು ಹೇಳಿದ್ದರು. ‘ಸಾರ್ವಭೌಮತ್ವ ಎಂಬುದು ಜನರಿಗೆ ಸೇರಿದ್ದೇ ಹೊರತು ಆಳುವವರಿಗಲ್ಲ’ ಎಂದೂ ಗಾಂಧಿ ಅಭಿಪ್ರಾಯಪಟ್ಟಿದ್ದರು.

ಭಾರತದ ಜತೆ ಸೇರಬೇಕು ಎಂಬ ವಿಚಾರದಲ್ಲಿ ಜಮ್ಮುವಿನ ಎಲ್ಲ ಹಿಂದೂಗಳಲ್ಲಿ ಒಮ್ಮತವಿರಲಿಲ್ಲ. ಭಾರತದ ಜತೆ ವಿಲೀನ ಆಗಬೇಕು ಎಂಬುದಕ್ಕೆ 1947ರಲ್ಲಿ ಬೆಂಬಲ ಕೊಟ್ಟದ್ದು ಕಾಶ್ಮೀರದ ಮುಸ್ಲಿಂ ನಾಯಕರು. ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಪಿಡಿಪಿ 2014ರಲ್ಲಿ ಒಂದಾದಾಗ ಹಳೆಯ ಅನುಮಾನ ಮತ್ತೆ ಕಾಡತೊಡಗಿತು.

ಕಾಶ್ಮೀರದಂತಹ ಬಂಡಾಯದ ಸಂಘರ್ಷ ಸ್ಥಿತಿಯನ್ನು ಬಲ ಪ್ರಯೋಗದಿಂದ ಪರಿಹರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಇರುವುದು ಕೇಂದ್ರದ ಎರಡನೇ ನಿರ್ಲಕ್ಷ್ಯ. ವಿವೇಚನೆಯಿಂದ ಕೂಡಿದ ಹಿಂಬಾಗಿಲ ಮಾತುಕತೆಗಳು ಮಾತ್ರ ವಿಶ್ವಾಸ ವೃದ್ಧಿಗೆ ನೆರವಾಗಿ ಸಂಘರ್ಷದ ಬಿಸಿಯನ್ನು ತಗ್ಗಿಸಬಹುದು. ಹಾಗಾಗಿಯೇ ನಿವೃತ್ತ ಮತ್ತು ಸೇವೆಯಲ್ಲಿರುವ ಸೇನಾ ಕಮಾಂಡರ್‌ಗಳು ಕೂಡ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಘೋಷಿಸಿರುವ ನಾಗಾ ಉಗ್ರರ ಜತೆಗೆ ಹಿಂಬಾಗಿಲ ಮಾತುಕತೆ ನಡೆಸುತ್ತಿರುವ ಸರ್ಕಾರ, ಕಾಶ್ಮೀರ ವಿಚಾರದಲ್ಲಿ ಮಾತುಕತೆಗೆ ಹಿಂದೇಟು ಹಾಕುತ್ತಿರುವುದು ಯಾಕೆಂದೇ ಅರ್ಥವಾಗುತ್ತಿಲ್ಲ. ಇದಕ್ಕೆ ಯಾವ ಕಾರಣಗಳನ್ನೂ ಸರ್ಕಾರ ಕೊಟ್ಟಿಲ್ಲ. ಹಾಗಾಗಿ ಕಣಿವೆಯ ಜನರ ಧರ್ಮವೇ ಇದಕ್ಕೆ ಕಾರಣ ಎಂಬ ಭಾವನೆ ಸೃಷ್ಟಿಯಾಗುವುದನ್ನು ತಡೆಯುವುದು ಸಾಧ್ಯವಿಲ್ಲ.

ಬಿಜೆಪಿ ಸರ್ಕಾರದಲ್ಲಿ ಕೆಲ ಬಲಪಂಥೀಯ ವಾದಿಗಳಿದ್ದಾರೆ. 2001ರ ನಂತರ ಪ್ಯಾಲೆಸ್ಟೀನನ್ನು ನಿರ್ಲಕ್ಷಿಸುವ ಕಾರ್ಯತಂತ್ರವನ್ನು ಇಸ್ರೇಲ್‌ ಅನುಸರಿಸಿದ ರೀತಿಯಲ್ಲಿಯೇ ಕಾಶ್ಮೀರದಲ್ಲಿ ಬಲಪ್ರಯೋಗಿಸಬೇಕು ಎಂದು ಅವರು ಬಯಸುತ್ತಿದ್ದಾರೆ.

ಇಸ್ರೇಲ್‌ನ ಬಲಪಂಥೀಯರು ಪ್ಯಾಲೆಸ್ಟೀನಿಯರ ಎಲ್ಲ ಪ್ರತಿಭಟನೆಯನ್ನು ‘ಭಯೋತ್ಪಾದನೆ’ ಎಂದೇ ಪರಿಗಣಿಸುತ್ತಾರೆ. ಹಾಗೆಯೇ, ಕಾಶ್ಮೀರದ ಯುವಕರನ್ನು ‘ಪಾಕಿಸ್ತಾನ ಪರ ಪರೋಕ್ಷ ಹೋರಾಟಗಾರರು’ ಎಂದು ಪರಿಗಣಿಸಿ ದಮನಿಸಬೇಕು ಎಂಬುದು ಸರ್ಕಾರದಲ್ಲಿರುವ ಬಲಪಂಥೀಯರ ವಾದ.

ಈ ಸಂಕುಚಿತ ವಾದವನ್ನು ನಾವು ತಿರಸ್ಕರಿಸಬೇಕು. ಯಾಕೆಂದರೆ 2000ಕ್ಕೆ ಮೊದಲಿನ ವಿವೇಚನೆಯಿಂದ ಕೂಡಿದ ಇಸ್ರೇಲ್‌ ನಾಯಕತ್ವ ಪ್ಯಾಲೆಸ್ಟೀನ್‌ ಮುಖಂಡರ ಜತೆ ಹಿಂಬಾಗಿಲ ಮಾತುಕತೆ ಕೈಗೊಂಡಿತ್ತು. ಹಾಗಾಗಿ ಆ ದಿನಗಳಲ್ಲಿ ಇಸ್ರೇಲ್‌–ಪ್ಯಾಲೆಸ್ಟೀನ್‌ನಲ್ಲಿ ಶಾಂತಿ ನೆಲೆಸಿತ್ತು ಎಂಬುದು ಅಲ್ಲಿನ ಸಂಘರ್ಷದ ಇತಿಹಾಸ ನೋಡಿದರೆ ತಿಳಿಯುತ್ತದೆ.

ಆದರೆ, 2000ನೇ ಇಸವಿಯ ಸೆ. 28ರಂದು ಈ ನೀತಿ ಕೈಬಿಟ್ಟ ಇಸ್ರೇಲ್‌ ಮುಖಂಡ ಏರಿಯಲ್ ಶೆರೋನ್‌ ಅವರು ಪ್ಯಾಲೆಸ್ಟೀನಿಯನ್ನರನ್ನು ಅವಮಾನಿಸುವುದಕ್ಕಾಗಿಯೇ ಹರಮ್‌ ಅಲ್  ಷರೀಫ್‌ಗೆ ಹೋದರು. ಇದರಿಂದ ಇಸ್ರೇಲ್‌ಗೆ ಆದ ನಷ್ಟವೇ ಹೆಚ್ಚು. ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿದರು.

ಕಾಶ್ಮೀರದ ಯುವಕರಲ್ಲಿ ಯಾರಿಗೂ ದೇಶಪ್ರೇಮ ಇಲ್ಲ ಎಂಬ ಆರೋಪ ಹುಸಿ ಎಂಬುದು ಸಾಬೀತಾಗಿದೆ. ಸೇನೆ ಮತ್ತು ಪೊಲೀಸ್‌ ನೇಮಕಾತಿಗೆ ವ್ಯಕ್ತವಾಗಿರುವ ಭಾರಿ ಪ್ರತಿಕ್ರಿಯೆ ಅಲ್ಲಿನ ಯುವಕರಿಗೆ ಸರ್ಕಾರ ಸೇರುವುದಕ್ಕೆ ಇರುವ ಉತ್ಕಟ ಆಸೆಯನ್ನು ತೋರಿಸುತ್ತದೆ.


ಇಂತಹ ಯುವಕರ ಜತೆ ಹಿಂಬಾಗಿಲ ಮಾತುಕತೆ ಆರಂಭಿಸುವುದು ಮತ್ತು ಅವರನ್ನು ಪಾಕಿಸ್ತಾನ ಪರ ಶಕ್ತಿಗಳಿಂದ ದೂರ ಮಾಡುವುದು ಚತುರ ಕಾರ್ಯತಂತ್ರವಾಗುತ್ತದೆ. ಆದರೆ ಹಾಗೆ ಮಾಡದಿರುವ ಮೂಲಕ ಭಾರತದ ಪರವಾಗಿರುವವರೂ ಪಾಕಿಸ್ತಾನದ ಮುಷ್ಠಿ ಸೇರುವಂತೆ ಕೇಂದ್ರ ಸರ್ಕಾರ ಮಾಡುತ್ತಿದೆ.

ವಪ್ಪಲ ಬಾಲಚಂದ್ರನ್‌, ನಿವೃತ್ತ ಐಪಿಎಸ್‌ ಅಧಿಕಾರಿ, ರಾಷ್ಟ್ರೀಯ ಭದ್ರತೆ ಮತ್ತು ಬೇಹುಗಾರಿಕೆ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT