ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ಇವೆ; ಆದರೆ, ಏನೂ ಇಲ್ಲ!

Last Updated 14 ಮೇ 2017, 19:30 IST
ಅಕ್ಷರ ಗಾತ್ರ
ಕಲಬುರ್ಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ  ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್‌ ಟ್ರ್ಯಾಕ್‌, ಈಜುಕೊಳ, ಲಾನ್‌ ಟೆನಿಸ್‌ ಹಾಗೂ ಸುಸಜ್ಜಿತ ಸ್ಕ್ವಾಷ್ ಅಂಕಣಗಳು ಇವೆ. ಇಲ್ಲಿ ರಾಷ್ಟ್ರೀಯ ಮಟ್ಟದ ಹಲವು ಚಾಂಪಿಯನ್‌ಷಿಪ್‌ಗಳು ಯಶಸ್ವಿಯಾಗಿ ನಡೆದಿವೆ.
 
ಹೊರ ರಾಜ್ಯಗಳಿಂದ ಬಂದ ಕ್ರೀಡಾಪಟುಗಳು ಇಲ್ಲಿನ ಸಿಂಥೆಟಿಕ್‌ ಟ್ರ್ಯಾಕ್‌, ಈಜುಕೊಳ, ಲಾನ್‌ ಟೆನಿಸ್‌ ಅಂಕಣಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಕ್ರೀಡಾಪಟುಗಳು ಮಾತ್ರ ಹೊರಬರುತ್ತಲೇ ಇಲ್ಲ.
 
ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಓಡುವವರನ್ನು ಕಾಣುವುದು ಕಷ್ಟ. ಈಜುಕೊಳದಲ್ಲಿ ಕಿರಿಯರಿಗಿಂತ ಹಿರಿಯರೇ ಹೆಚ್ಚು ಕಾಣಿಸುತ್ತಾರೆ. ಇಲ್ಲಿ ಕ್ರೀಡಾ ಸಾಧನೆಗಿಂತ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವ ಕಾಳಜಿ ಇರುವವವರು ಬರುತ್ತಾರೆ.
 
ಬೇಸಿಗೆಯಲ್ಲಿ ಮಾತ್ರ ಈಜುಕೊಳ ಭರ್ತಿಯಾಗಿರುತ್ತದೆ. ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ನೀರಿನಲ್ಲಿ ಆಟವಾಡುತ್ತಾ ಖುಷಿಪಡುವ ಸಲುವಾಗಿಯೇ ಇಲ್ಲಿಗೆ ಬರುತ್ತಾರೆ. ಹೀಗಾಗಿ ಬೇಸಿಗೆ ಸಮಯದಲ್ಲಿ ಈಜುಕೊಳ ಸದಾ ಭರ್ತಿಯಾಗಿಯೇ ಇರುತ್ತದೆ.
 
 ಒಂದೂವರೆ ವರ್ಷಗಳ ಹಿಂದೆ ₹45 ಲಕ್ಷ ವೆಚ್ಚದಲ್ಲಿ ಸ್ಕ್ವಾಷ್ ಅಂಕಣವನ್ನು ರೂಪಿಸಲಾಗಿದೆ. ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ. ಏಕೆಂದರೆ  ಇಲ್ಲಿ ಯಾರಿಗೂ ‘ಸ್ಕ್ವಾಷ್‌’ ನ ಪರಿಚಯವೇ ಇಲ್ಲ. ಅಲ್ಲದೇ ತರಬೇತುದಾರರೂ ಇಲ್ಲ! ಹೀಗಾಗಿ ಅದು ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಷಟಲ್‌ ಬ್ಯಾಡ್ಮಿಂಟನ್‌ ಹಿರಿಯರು ಮತ್ತು ‘ಅಧಿಕಾರಿ’ಗಳ ಆಟವಾಗಿದೆ. ಟೇಬಲ್‌ ಟೆನಿಸ್‌ ಆಡಲು ಒಬ್ಬರೂ ಬರುತ್ತಿಲ್ಲ!
 
ಇಲ್ಲಿನ ಕ್ರೀಡಾಪಟುಗಳು ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ಬೇರೆ ಬೇರೆ ತಂಡಗಳೊಂದಿಗೆ ಸೇರಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
 
‘ಕ್ರೀಡೆಯ ಬಗ್ಗೆ ಚರ್ಚಿಸಲು ಸಭೆ ಕರೆದರೆ ‘ಹಿರಿಯ’ರೇ ಬರುತ್ತಾರೆ. ಯುವಕರು ಇತ್ತ ಸುಳಿಯುವುದೇ ಇಲ್ಲ. ಇಲ್ಲಿ ಎಲ್ಲಾ ರೀತಿಯ ಮೂಲ ಸೌಲಭ್ಯಗಳಿವೆ. ಆದರೆ ಪ್ರಮುಖವಾಗಿ ತರಬೇತುದಾರರು ಹಾಗೂ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವವರೇ ಇಲ್ಲದಂತಾಗಿದೆ’ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ್‌.
 
ಕಲಬುರ್ಗಿ ನಗರದಲ್ಲಿ ಹಲವಾರು ಕ್ರೀಡಾ ಕ್ಲಬ್‌ಗಳು, ಸಂಘ, ಸಂಸ್ಥೆಗಳು ಇವೆ. ಇವು ಕ್ರೀಡೆಯನ್ನು ಉತ್ತೇಜಿಸುವ ಹುಮ್ಮಸ್ಸಿನಲ್ಲಿವೆ. ಆದರೆ ಜಿಲ್ಲಾ ಕ್ರೀಡಾ ಸಮಿತಿ ಮತ್ತು ಇವುಗಳ ನಡುವೆ ಹೊಂದಾಣಿಕೆಯ ಕೊರತೆ ಇರುವುದನ್ನು ಕ್ರೀಡಾ ಪ್ರೇಮಿಗಳು ಬೇಸರದಿಂದಲೇ ಹೇಳುತ್ತಾರೆ.
 
ಎಲ್ಲವೂ ಇದ್ದೂ ಚಟುವಟಿಕೆಗಳೇ ನಡೆಯದೇ ಹೋದರೆ ಕ್ರೀಡಾ ಪರಿಕರಗಳು ತುಕ್ಕು ಹಿಡಿಯುತ್ತವೆ. ಅಂಕಣಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತವೆ. ಈಗ ಮೂರು ಮಂದಿ ತಾತ್ಕಾಲಿಕ ತರಬೇತುದಾರರು ಇದ್ದಾರೆ. ಎಲ್ಲ ಕ್ರೀಡೆಗಳಿಗೂ ಕಾಯಂ ತರಬೇತುದಾರರು ನೇಮಕವಾದರೆ ಕಲಬುರ್ಗಿಯಲ್ಲೂ ಕ್ರೀಡಾ ಕಲರವವನ್ನು ಕೇಳಬಹುದು.
****
ತೆರೆದಬಾವಿಗಳೇ ಈಜುಕೊಳ!
ಹೈದರಾಬಾದ್‌ ಕರ್ನಾಟಕದ ಗ್ರಾಮೀಣ ಪ್ರದೇಶದ ಬಾಲಕರು, ಯುವಕರು ಬಿರುಬಿಸಿಲಿನಲ್ಲೂ ಹೊಲದತ್ತ ತೆರಳುತ್ತಾರೆ! ಅವರು ಅಲ್ಲಿ ಕೆಲಸ ಮಾಡುವುದಿಲ್ಲ; ತೆರೆದಬಾವಿಗೆ ಜಿಗಿದು ಈಜುತ್ತಾ ಸುಖಿಸುತ್ತಾರೆ. ಈ ಭಾಗದ ಹೆಚ್ಚಿನ ಮಂದಿ ಈಜು ಕಲಿತಿರುವುದು, ಕಲಿಯುವುದು ಇಲ್ಲಿಯೇ.
 
ಹಿರಿಯರು ತಮ್ಮ ಬಾಲ್ಯದ ಬೇಸಿಗೆಯ ದಿನಗಳ ಬಗ್ಗೆ ಮಾತನಾಡುವಾಗ ತೆರೆದಬಾವಿಯಲ್ಲಿ ಈಜಾಡಿದ ಖುಷಿಯನ್ನು ಮರೆಯದೇ ನೆನಪಿಸಿಕೊಳ್ಳುತ್ತಾರೆ.
ತೆರೆದಬಾವಿ ಜೊತೆಗೆ ಬಾಂದಾರಗಳು (ಬ್ಯಾರೇಜ್‌), ಕಲ್ಲು ಕ್ವಾರಿಗಳು ಇಲ್ಲಿಯ ಬೇಸಿಗೆಯ ಬೇಗೆಯ ದಿನಗಳನ್ನು ತಂಪು ಮಾಡುವ ಸ್ಥಳಗಳಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT