ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂದಿನ ಏಷ್ಯನ್‌ ಕೂಟದಲ್ಲಿ ಸವಾಲು ಒಡ್ಡಲಿದ್ದೇನೆ’

Last Updated 14 ಮೇ 2017, 19:30 IST
ಅಕ್ಷರ ಗಾತ್ರ
ಬಾಗಲಕೋಟೆ ತಾಲ್ಲೂಕಿನ ಬೇವನಮಟ್ಟಿಯ ಅರ್ಜುನ ಹಲಕುರ್ಕಿ ಭಾರತದ ಕುಸ್ತಿ ರಂಗದಲ್ಲಿ ಇದೀಗ ಭವಿಷ್ಯದ ತಾರೆ.
 
ಇವರು ಕಳೆದ ವರ್ಷ ಟರ್ಕಿಯ ಅಂಕಾರದಲ್ಲಿ ನಡೆದ ವಿಶ್ವ ಶಾಲಾ ಕುಸ್ತಿಯಲ್ಲಿ ಮತ್ತು ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಯುವ ಏಷ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. 
 
ಈಗ ಮತ್ತೆ ಯುವ ಏಷ್ಯನ್ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಆಯ್ಕೆ ಶಿಬಿರದಲ್ಲಿ  ಪಾಲ್ಗೊಳ್ಳುವ ಅವಕಾಶ ಪಡೆದಿರುವ ದೇಶದ ನಾಲ್ವರು ಕುಸ್ತಿಪಟುಗಳಲ್ಲಿ ಅರ್ಜುನ ಕೂಡ ಒಬ್ಬರು. 
 
ಅರ್ಜನ ಅವರು ಈಗ ಹರಿಯಾಣದ ಸೋನಿಪತ್‌ನಲ್ಲಿರುವ ರಾಷ್ಟ್ರೀಯ ಕುಸ್ತಿ ತರಬೇತಿ ಅಕಾಡೆಮಿಯಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ.  
 
*ಸೋನಿಪತ್‌ನಲ್ಲಿ ತಾಲೀಮು ಹೇಗಿದೆ?
ಪಂಜಾಬ್‌ನ ಕೋಚ್‌ ವಿಕ್ರಮ್‌ಸಿಂಗ್‌ ಅವರ ಮಾರ್ಗದರ್ಶನದಲ್ಲಿ ನಿತ್ಯ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ಕಠಿಣ ತರಬೇತಿ ನಡೆಯುತ್ತಿದೆ. ಮಧ್ಯ ಒಂದಷ್ಟು ಹೊತ್ತು ವಿಶ್ರಾಂತಿ ನೀಡಲಾಗುತ್ತಿದೆ. ರಷ್ಯಾದ ಪೈಲ್ವಾನರನ್ನು ಮಣಿಸಲು ಅಗತ್ಯವಿರುವ ತಾಂತ್ರಿಕ ಅಂಶಗಳನ್ನು ಹೇಳಿಕೊಡಲಾಗುತ್ತಿದೆ.

ಜೊತೆಗೆ ಫಿಟ್‌ನೆಸ್‌ ಕಾಯ್ದುಕೊಳ್ಳಲೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಆಹಾರ ಸೇವನೆ ವಿಚಾರದಲ್ಲಿ ಆಯ್ಕೆಗಳನ್ನು ಕಲಿಸಲಾಗುತ್ತಿದೆ. ಒಂದು ತಿಂಗಳ ಕಾಲ ಕಠಿಣ ತರಬೇತಿ ಮುಗಿಯುತ್ತಾ ಬಂದಿದೆ. ಮಧ್ಯೆ 15 ದಿನಗಳ ಬಿಡುವು ಕೊಡಲಿದ್ದಾರೆ. ಆಗ ಬಾಗಲಕೋಟೆಗೆ ಬರುವೆ. ನಂತರ ಮತ್ತೆ ಒಂದು ತಿಂಗಳು ತರಬೇತಿ ನಡೆಯುತ್ತದೆ. ನಾಲ್ವರಲ್ಲಿ ಇಬ್ಬರು ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದರಿಂದ ನಮ್ಮಲ್ಲಿಯೇ ಪೈಪೋಟಿ ಹೆಚ್ಚಾಗಿದೆ.
 
*ಮುಂದಿನ ಬಾರಿ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸೀನಿಯರ್ ತಂಡ ಪ್ರತಿನಿಧಿಸುವ ಅವಕಾಶ ಸಿಗಲಿದೆಯೇ?
2018ರ ಜುಲೈ 10ಕ್ಕೆ ನನಗೆ 21 ವರ್ಷ ತುಂಬಲಿದೆ. ಹಾಗಾಗಿ 2019ರಲ್ಲಿ ನಡೆಯಲಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಲಿದ್ದೇನೆ. ಸೀನಿಯರ್ ತಂಡದಲ್ಲಿ ಅವಕಾಶ ಪಡೆದು ದೇಶವನ್ನು ಪ್ರತಿನಿಧಿಸುವುದು ನನ್ನ ಕನಸಾಗಿದೆ.
 
ಆ ನಿಟ್ಟಿನಲ್ಲಿ ಈಗಲೇ ಸಿದ್ಧತೆಗಳನ್ನು ಕೈಗೊಂಡಿರುವೆ. ಏಷ್ಯನ್‌ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಪಡೆಯುವುದು ಈಗ ಸದ್ಯದ ಗುರಿ. ಎರಡು ತಿಂಗಳ ಹಿಂದೆ ಪಟ್ನಾದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದ ಕಾರಣ ಈಗ ಏಷ್ಯನ್‌ ಚಾಂಪಿಯನ್‌ಷಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದೇನೆ.
 
*ನಿಮಗೆ ಇಷ್ಟವಾದ ಭಾರತೀಯ ಕುಸ್ತಿಪಟು ಯಾರು. ಪ್ರಬ ಲ ವಿದೇಶಿ ತಂಡ ಯಾವುದು?
ಯೋಗೇಶ್ವರದತ್ ಇಷ್ಟ. ಅವರು ಈಗ ಸೋನಿಪತ್‌ನಲ್ಲಿಯೇ ತಾಲೀಮು ನಡೆಸುವುದರಿಂದ ಅವರೊಂದಿಗೆ ಬೆರೆಯುವ, ಕುಸ್ತಿಯ ಪಾಠ ಹೇಳಿಸಿಕೊಳ್ಳುವ ಅವಕಾಶ ದೊರೆತಿದೆ. ಅವರ ತಾಲೀಮನ್ನು ಗಂಭೀರವಾಗಿ ಗಮನಿಸುತ್ತೇನೆ. ಕೆಲವು ತಾಂತ್ರಿಕ ಅಂಶಗಳ ಜೊತೆಗೆ ಫಿಟ್‌ನೆಸ್ ವಿಚಾರದಲ್ಲಿ ಅವರಿಂದ ಟಿಪ್ಸ್ ಪಡೆದಿದ್ದೇನೆ. ರಷ್ಯಾದ ಕುಸ್ತಿ ಪಟುಗಳು ಹೆಚ್ಚು ಇಷ್ಟವಾಗುತ್ತಾರೆ. ಫಿಟ್‌ನೆಸ್ ವಿಚಾರದಲ್ಲಿ ಅವರನ್ನು ನೋಡಿ ಕಲಿಯುವುದು ಹೆಚ್ಚಿದೆ. 
 
*ಮಣ್ಣಿನ ಅಂಗಳದಲ್ಲಿ ಕುಸ್ತಿ ಆಡುತ್ತಿದ್ದವರಿಗೆ ಮ್ಯಾಟ್‌ನ ಮೇಲೆ ಆಡಲು ಅವಕಾಶ ಸಿಕ್ಕಿದೆ. ಏನನ್ನಿಸುತ್ತದೆ ?
ಎರಡರ ನಡುವೆ ಬಹಳಷ್ಟು  ವ್ಯತ್ಯಾಸ ಇದೆ. ಮ್ಯಾಟ್‌ನ ಮೇಲೆ ಕುಸ್ತಿ ಅರಾಮದಾಯಕ. ಸಾಂಪ್ರದಾಯಿಕವಾಗಿ ಆಡಲು ಮಣ್ಣಿನ ಅಂಕಣ ನೆರವಾಗುತ್ತದೆ. ಆದರೆ ವಿದೇಶಿ ಆಟಗಾರರೊಂದಿಗೆ ಆಡುವಾಗ ತಾಂತ್ರಿಕವಾಗಿ ಕೌಶಲ್ಯತೆ ಸಾಧಿಸಬೇಕಿದೆ. ಅದಕ್ಕೆ ಮ್ಯಾಟ್ ನೆರವಾಗುತ್ತದೆ. ಪಟ್ಟುಗಳನ್ನು ಹಾಕಿ ಪಾಯಿಂಟ್ (ಅಂಕ) ಹೆಚ್ಚಿಸಿಕೊಳ್ಳಲು ಮ್ಯಾಟ್‌ನ ಮೇಲೆ ಹೆಚ್ಚಿನ ಅವಕಾಶವಾಗುತ್ತದೆ.
 
*ಏಷ್ಯನ್ ಚಾಂಪಿಯನ್‌ಷಿಪ್ ನೋಡಲು ಹೋಗಿದ್ದೀರಾ?
ಮೊದಲ ದಿನ ಪಂದ್ಯಗಳನ್ನು ನೋಡಿದೆ. ಭಾರತದ ಹರಿಜಿತ್‌ಸಿಂಗ್ ಅವರ ಗೆಲುವನ್ನು ಕಣ್ಣು ತುಂಬಿಕೊಂಡು ಬಂದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT