ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಸಂತ್ರಸ್ತರು ಯಾರೆಲ್ಲ?

Last Updated 14 ಮೇ 2017, 20:11 IST
ಅಕ್ಷರ ಗಾತ್ರ

ದುಃಖ ನಿವಾರಣೆಗಾಗಿ ರೂಪುಗೊಂಡ ಒಂದು ಶಾಸನವೇ ಹೊಸ ಸಂತ್ರಸ್ತರನ್ನು ನಿರ್ಮಾಣ ಮಾಡಿರುವುದಕ್ಕೆ ಒಂದು ಉದಾಹರಣೆ ಬೇಕೆಂದರೆ ಅದು ಆರ್‌ಟಿಇ ಶಾಸನ ಎನ್ನಬಹುದು. ಇದಕ್ಕೆ ಸಂಬಂಧಿಸಿ ಯಾರನ್ನು ಮಾತಾಡಿಸಿದರೂ ತಾವು ಸಂತ್ರಸ್ತರೆನ್ನುತ್ತಾರೆ.

ಸಂತ್ರಸ್ತರ ನಿಜವಾದ ಸಮಸ್ಯೆ ಕಾಣುವುದು ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಶಾಲೆಗೆ ಸೇರಿದ ಮಕ್ಕಳನ್ನು ಪ್ರತ್ಯೇಕಿಸಿ ತಾತ್ಸಾರವಾಗಿ ಕಾಣುವ ಸಂದರ್ಭಗಳಲ್ಲಿ. ಅವರ ಕೇಶ ಮುಂಡನ ಮಾಡುವುದು, ಪ್ರತ್ಯೇಕವಾದ ಅಡ್ಡ ಬೆಂಚುಗಳಲ್ಲಿ ಅಥವಾ ನೆಲದಲ್ಲಿ ಕೂರಿಸುವುದು, ಪ್ರಯೋಗಾಲಯ, ಗ್ರಂಥಾಲಯದಂತಹ ಸೌಲಭ್ಯಗಳಿಂದ ವಂಚಿಸುವುದು, ನೇರವಾಗಿ ಶಿಕ್ಷಕರು ಹಾಗೂ ಸಹಪಾಠಿಗಳು ನಿಂದನೆ ಮಾಡುವುದು, ಸಮವಸ್ತ್ರ, ಬ್ಯಾಗ್, ಪುಸ್ತಕ... ಹೀಗೆ ಬೇರೆ ಬೇರೆ ನೆಪಗಳಿಂದ ಶುಲ್ಕ ವಸೂಲಾತಿಗೆ ಆಡಳಿತ ಮಂಡಳಿಗಳು ಯತ್ನಿಸುವುದು, ಮುಂದಿನ ವರ್ಷ ಬೇರೆ ಶಾಲೆಗೆ ಹೋಗಿ ಎನ್ನುವುದೇ ಮುಂತಾಗಿ ವಿವಿಧ ಕ್ರಮಗಳಿಂದ ಪ್ರತ್ಯೇಕತೆ ಮತ್ತು ಪರಿತ್ಯಕ್ತತೆಗೆ ಒಳಗಾಗುವ ಮಕ್ಕಳು ನಿಜವಾಗಿ ಸಂತ್ರಸ್ತರು. ಅಂತೂ ಕಲಿಕೆಯ ಪ್ರಕ್ರಿಯೆಯು ಮಕ್ಕಳಿಗೂ ಹೆತ್ತವರಿಗೂ ಭಯದಲ್ಲೇ ಸಾಗುತ್ತದೆ. ಭಯದ ನೆರಳಲ್ಲಿ ನಡೆಯುವ ಶಿಕ್ಷಣಕ್ಕೆ ಅರ್ಥವಿದೆಯೇ?

ಇತ್ತೀಚೆಗೆ ನನ್ನ ಮೊಬೈಲ್‌ಗೆ ಒಂದು vioce call ಬಂತು. ಅದನ್ನು ಮಾಡಿದವರು ಖಾಸಗಿ ಶಿಕ್ಷಣ ಸಂಸ್ಥೆಗಳ ಯಾವುದೋ ಒಂದು ಸಂಘಟನೆಯ ಕಾರ್ಯದರ್ಶಿ. ಅವರು ಹೇಳಿದ ಪ್ರಕಾರ ಶಿಕ್ಷಣ ಸಂಸ್ಥೆಯವರೇ ಈಗ ಸಂತ್ರಸ್ತರಾಗಿದ್ದಾರೆ.

ಏಕೆಂದರೆ ಇದೇ ಮಾರ್ಚ್‌ 3ರಂದು ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಶಿಕ್ಷಣ ಇಲಾಖೆ, ಸೇರ್ಪಡೆಗೆ ಕಳಿಸುವ ಶೇ 25ರಷ್ಟು ಆರ್.ಟಿ.ಇ. ವಿದ್ಯಾರ್ಥಿಗಳ ಎಲ್ಲಾ ವೆಚ್ಚಗಳನ್ನು ಶುಲ್ಕ ಕೊಟ್ಟು ಬರುವ ಶೇ 75ರಷ್ಟು ವಿದ್ಯಾರ್ಥಿಗಳ ಮೇಲೆ ಹೊರಿಸಬೇಕಾಗುತ್ತದೆ.

ಎಲ್ಲಾ ವೆಚ್ಚಗಳೆಂದರೆ ಪಠ್ಯಪುಸ್ತಕಗಳು, ಬರೆಯುವ ಪುಸ್ತಕಗಳು, ಸ್ಟೇಷನರಿ ಸಾಮಗ್ರಿ ಹಾಗೂ ಸಮವಸ್ತ್ರಗಳನ್ನು ನಿರ್ದಿಷ್ಟ ಅಂಗಡಿಯಿಂದಲೇ ದುಬಾರಿ ದರ ನೀಡಿ ಖರೀದಿಸಬೇಕೆಂಬ ನಿಯಮ ಹೇರುವಂತಿಲ್ಲ. ಶಾಲೆಯ ಗ್ರಂಥಾಲಯ, ಮಾಹಿತಿ ತಂತ್ರಜ್ಞಾನ ಸೌಲಭ್ಯಗಳು, ಸಹಪಠ್ಯ ಚಟುವಟಿಕೆಗಳು, ಕ್ರೀಡೆ, ಮಧ್ಯಾಹ್ನದ ಬಿಸಿಯೂಟ ಇತ್ಯಾದಿಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಅಂದರೆ ಅವುಗಳೆಲ್ಲ ಶೈಕ್ಷಣಿಕ ಚಟುವಟಿಕೆಗಳ ಭಾಗವೆಂದೇ ಪರಿಗಣಿಸಲಾಗುತ್ತವೆ.

ದುರ್ಬಲ ಮತ್ತು ಅಶಕ್ತ ವರ್ಗದ ಮಕ್ಕಳಿಗೆ ಅವುಗಳನ್ನು ಒದಗಿಸದೇ ಇರುವಂತಿಲ್ಲ. ಏಕೆಂದರೆ ಎಲ್ಲ ಮಕ್ಕಳನ್ನೂ ಸಮಾನವಾಗಿ ಕಾಣಬೇಕೆಂಬುದೇ ನಿಯಮ. ಈ ನಿಯಮವಿಲ್ಲದಿದ್ದರೆ ಸಮಾನತೆಯಿಂದ ಆರ್.ಟಿ.ಇ. ಮಕ್ಕಳನ್ನು ಕಾಣುವ ಸಾಧ್ಯತೆಯೇ ಇಲ್ಲ. ಆಡಳಿತ ಮಂಡಳಿಗಳು, ಶುಲ್ಕ ತೆರುವ ಹೆತ್ತವರು ಹಾಗೂ ಮಕ್ಕಳೂ ಕೂಡಾ ದುರ್ಬಲ ಮಕ್ಕಳನ್ನು ದೂರೀಕರಿಸುವವರೇ. ಅವರು ತಮ್ಮನ್ನೇ ಸಂತ್ರಸ್ತರೆನ್ನುವ ಮಾತಿನ ಹಿಂದೆ ದ್ವಿಮುಖ ನೀತಿಯ ಮನಸ್ಸು ಇರುವುದು ಸ್ಪಷ್ಟವಾಗುತ್ತದೆ.

ಈ ದ್ವಿಮುಖ ನೀತಿ ಯಾಕೆಂದರೆ ಇವರು ಶಾಲೆಯನ್ನು ಸ್ಥಾಪಿಸಿರುವುದು ಸಮಾಜ ಸೇವಾ ದೃಷ್ಟಿಯಿಂದ ಆಗಿರುವುದಿಲ್ಲ. ಅವರದು ಕೇವಲ ಶಿಕ್ಷಣದ ಸೇವಾಕಾರ್ಯವಷ್ಟೇ ಆಗಿದ್ದರೆ ಗ್ರಂಥಾಲಯಕ್ಕೆ, ಪ್ರಯೋಗಾಲಯಕ್ಕೆ, ಕಂಪ್ಯೂಟರ್‌ಗೆ, ಆಟದ ಬಯಲಿಗೆ ಅಂತ ಪ್ರತ್ಯೇಕ ಶುಲ್ಕ ಇಡುತ್ತಿರಲಿಲ್ಲ. ಇಲ್ಲಿ ಶುಲ್ಕ ವಸೂಲಿ ಮುಖ್ಯವೇ ಹೊರತು ಸೌಲಭ್ಯ ಮುಖ್ಯವಲ್ಲ.

ಸಂತ್ರಸ್ತರ ಸಮಸ್ಯೆಯ ಇನ್ನೊಂದು ಮುಖ ಹೀಗಿದೆ. ವಾಸ್ತವದಲ್ಲಿ ಆರ್.ಟಿ.ಇ. ಸೀಟುಗಳನ್ನು ಪಡೆದವರೆಲ್ಲರೂ ಬಡವರಲ್ಲ. ಕೆಲವರದ್ದು ಆದಾಯ ಸರ್ಟಿಫಿಕೇಟ್ ಮಾತ್ರ ಬಡತನದ್ದು. ಉನ್ನತ ಅಧಿಕಾರದಲ್ಲಿರುವ ಯಾರಿಂದಲಾದರೂ ವಶೀಲಿ ಮಾಡಿಸಿ ಆರ್.ಟಿ.ಇ. ಸೀಟು ಪಡೆದವರಿದ್ದಾರೆ.

ಕಾರುಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದು ಬಿಡುವವರಿದ್ದಾರೆ. ಇಂತಹವರಿಗೆಲ್ಲ ಎಲ್ಲವನ್ನೂ ಉಚಿತವಾಗಿ ಯಾಕೆ ಕೊಡಬೇಕು ಎಂಬುದು ಕೂಡಾ ಖಾಸಗಿ ಶಾಲೆಗಳವರ ಆಕ್ಷೇಪಗಳಿಗೆ ಕಾರಣವಾಗಿದೆ.

ವಿಪರ್ಯಾಸದ ಈ ವಿದ್ಯಮಾನಕ್ಕೆ ಕಾರಣವೇನು? ಒಂದೇ ಕಾರಣವೆಂದರೆ ಶಿಕ್ಷಣ ಇಲಾಖೆ ಮಾಡಿರುವ ಕಾನೂನು ಭಂಗದ ಕೌಶಲ. ಒಂದನೆಯದಾಗಿ ಸರ್ಕಾರಿ ಶಾಲೆಗಳನ್ನು ಶಿಕ್ಷಕರ ನೇಮಕಾತಿಯ ಮೂಲಕ ಸದೃಢಗೊಳಿಸಿ ಎಲ್ಲ ಮಕ್ಕಳಿಗೂ  ಮುಕ್ತವಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾದ ಶಾಸನದ ಪಾಲನೆ ಮಾಡಿಲ್ಲ.

ಈ ಕಾನೂನು ಭಂಗಕ್ಕಾಗಿ ಶಿಕ್ಷಣ ಇಲಾಖೆಯ ಮೇಲೆ ಕ್ರಿಮಿನಲ್ ದಾವೆ ಹೂಡಬೇಕು. ಎರಡನೆಯದಾಗಿ, ಈ ವೈಫಲ್ಯವನ್ನು ಮುಚ್ಚಲು ಹೆಚ್ಚು ಲಾಭದಾಯಕವಾದ ಅವಕಾಶವಾಗಿ ಅನುದಾನರಹಿತ ಖಾಸಗಿ ಶಾಲೆಗಳತ್ತ ಬಡವರ ಚಿತ್ತ ಹರಿಸುವಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಗಿದ್ದು.

ಮೊದಲೇ ಆಂಗ್ಲ ಮಾಧ್ಯಮದ ಕಡೆಗೆ ಆಕರ್ಷಿತರಾಗಿದ್ದ ಜನರಿಗೆ ಇದು ಸದವಕಾಶವಾಯಿತು. ಪರಿಣಾಮವಾಗಿ ಸರ್ಕಾರಕ್ಕೆ ಖಾಸಗಿ ಶಾಲೆಗಳಲ್ಲಿ ಸೇರಿದ ಆರ್.ಟಿ.ಇ. ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯ ಹೊರೆ ಹೆಚ್ಚುತ್ತಲೇ ಇದೆ. ಅಂದರೆ ಸಂತ್ರಸ್ತರ ಸಾಲಿಗೆ ಸರ್ಕಾರವೂ ಸೇರಿದಂತಾಗುತ್ತದೆ.

ಮೂರನೆಯದಾಗಿ, ಲಾಬಿ ಮಾಡಲು ಸಾಧ್ಯವಿದ್ದವರ ಅಪೇಕ್ಷೆಗಳ ಪೂರೈಕೆಗಾಗಿ ನೆರೆಹೊರೆಯ ಶಾಲೆ ಎಂಬ ಪರಿಕಲ್ಪನೆಯನ್ನು ಹಿಗ್ಗಾ ಮುಗ್ಗಾ ವಿಸ್ತರಿಸಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳನ್ನು ತುಂಬಿಸಲು ಪರಿಶ್ರಮಪಟ್ಟದ್ದು. ಶಿಕ್ಷಣ ಇಲಾಖೆಯು ಇದೇ ಪರಿಶ್ರಮವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪಟ್ಟಿದ್ದರೆ ಇಂದು ಕರ್ನಾಟಕದ ಶಿಕ್ಷಣದ ಚಿತ್ರಣವೇ ಬೇರೆ ಇರುತ್ತಿತ್ತು.

ಆರ್.ಟಿ.ಇ.ಯ ನಿಜವಾದ ಅಳವಡಿಕೆ ಆಗಬೇಕಿದ್ದರೆ ಒಂದು ಕ್ರಾಂತಿಕಾರಿ ಹೆಜ್ಜೆ ಅನಿವಾರ್ಯ. ಮೊದಲನೇ ಹೆಜ್ಜೆ ಎಂದರೆ ಬದುಕಲು ಹೆಣಗಾಡುತ್ತಿರುವ ಸರ್ಕಾರಿ ಶಾಲೆಗಳ ಪುನರ್ ಪ್ರತಿಷ್ಠೆಯ ಕಾರ್ಯ ಆಗಬೇಕು. ಇದಕ್ಕಾಗಿ ಯಾವುದಾದರೂ ದಾರಿಯಿಂದ ಸಂಪನ್ಮೂಲಗಳನ್ನು ರೂಢಿಸಿಕೊಂಡು ಮೊದಲಿಗೆ ತರಗತಿಗೊಬ್ಬರಂತೆ ಶಿಕ್ಷಕರ ನೇಮಕಾತಿ ಆಗಬೇಕು. ಆಗ ನೆರೆಹೊರೆಯಲ್ಲಿ ಗುಣಮಟ್ಟದ ಶಾಲೆ ಮಕ್ಕಳಿಗೆ ಲಭ್ಯವಾಗುತ್ತದೆ.

ಎರಡನೇ ಹೆಜ್ಜೆ, ಈಗಾಗಲೇ ಆದಾಯ ಸರ್ಟಿಫಿಕೇಟ್ ಆಧಾರಿತವಾಗಿ ಸೀಟು ಪಡೆದವರ ನಿಜವಾದ ಆದಾಯ ಮತ್ತು ಜೀವನ ಮಟ್ಟವನ್ನು ಪ್ರತಿವರ್ಷ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡುವ ಅಧಿಕಾರವನ್ನು ಶಾಲೆಗಳಿಗೆ ನೀಡಬೇಕು. ಅದನ್ನು ತನಿಖೆ ಮಾಡಿ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು.

ಮೂರನೆಯ ಅತ್ಯಂತ ಕ್ರಾಂತಿಕಾರಕ ಹೆಜ್ಜೆ ಎಂದರೆ ಶಿಕ್ಷಣ ಇಲಾಖೆಯು ಅಳೆದು ತೂಗಿ ಮರು ಪಾವತಿಯ ಹೆಸರಲ್ಲಿ ನೀಡುವ ಚಿಲ್ಲರೆ ಮೊತ್ತವನ್ನು ಶಾಲೆಗಳಿಗೆ ನೀಡುವುದೇ ಬೇಡ. ಬದಲಿಗೆ ಆ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಶಿಕ್ಷಕರನ್ನು ನೇಮಿಸಲು ಉಪಯೋಗಿಸಲಿ. ನಾಲ್ಕನೆಯದಾಗಿ, ಆರ್.ಟಿ.ಇ. ಸೀಟುಗಳಿಗಾಗಿ ಆಯ್ಕೆ ಪ್ರಕ್ರಿಯೆಯು ಒಂದು ವರ್ಷ ಮೊದಲೇ ಆರಂಭವಾಗಲಿ.

ಆಗ ಸುಳ್ಳು ಆದಾಯ ಪ್ರಮಾಣ ಪತ್ರಗಳಿದ್ದಲ್ಲಿ ಕಂದಾಯ ಇಲಾಖೆಯ ಮೂಲಕ ಪರಿಶೀಲಿಸಿಯೇ ಅರ್ಜಿಗಳನ್ನು ಆಯ್ಕೆಗೆ ಸ್ವೀಕರಿಸಬಹುದು. ಇಂತಹ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡದಿದ್ದರೆ ಸದ್ಯೋಭವಿಷ್ಯದಲ್ಲಿ ಸರ್ಕಾರಿ ಶಾಲೆಗಳು ಸ್ಥಗಿತಗೊಂಡು ಅವುಗಳ ಭೂಮಿ ಮತ್ತು ಕಟ್ಟಡಗಳು ಯಾರದೋ ಪಾಲಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT