ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸಿಂಪಿ: ಪ್ರವರ್ಗ 2 ‘ಎ’ಗೆ ಸೇರಿಸಲು ಒತ್ತಾಯ

ಸಮಾಜದ ಜಿಲ್ಲಾ ಸಮಾವೇಶದಲ್ಲಿ ತುಮಕೂರು ಇತಿಹಾಸ ವಿಭಾಗದ ಮುಖ್ಯಸ್ಥ ಕೊಟ್ರೇಶ್‌
Last Updated 15 ಮೇ 2017, 3:58 IST
ಅಕ್ಷರ ಗಾತ್ರ
ದಾವಣಗೆರೆ: ‘ಕೌಶಲ ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಕುಲಕಸುಬು ಕಿತ್ತುಕೊಂಡಿರುವ ಸರ್ಕಾರ, ಶಿವಸಿಂಪಿ ಸಮುದಾಯದ ಅಭಿವೃದ್ಧಿಗೆ ಗಮನ ನೀಡಬೇಕು’ ಎಂದು ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಕೊಟ್ರೇಶ್‌ ಒತ್ತಾಯಿಸಿದರು.
 
ಇಲ್ಲಿನ ಶಿವಯೋಗಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಶಿವಸಿಂಪಿ ಸಮಾಜದ ಸಮಾವೇಶದಲ್ಲಿ ಮಾತನಾಡಿದರು.
 
ನೇಯುವ, ನೂಲುವ, ವಸ್ತ್ರ ಹೊಲಿಯುವ ಕುಲಕಸುಬು ಶಿವಸಿಂಪಿ ಸಮಾಜದ ಕೈತಪ್ಪಿದೆ. ಕಾರ್ಖಾನೆಗಳಲ್ಲಿ ತಯಾರಾದ ಉಡುಪನ್ನೇ ಜನ ಖರೀದಿಸುತ್ತಾರೆ. ನಿರುದ್ಯೋಗ ನಿವಾರಣೆ ಹೆಸರಿನಲ್ಲಿ ದರ್ಜಿ ವೃತ್ತಿ ತರಬೇತಿ ನೀಡಲು ಆರಂಭಿಸಿದ ನಂತರವಂತೂ ಸಮಾಜಕ್ಕೆ ದೊಡ್ಡಪೆಟ್ಟು ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
 
ಸೂಜಿ ಕಾಯಕದಲ್ಲಿ ತೊಡಗಿಸಿಕೊಂಡ ಶಿವಸಿಂಪಿ ಸಮಾಜಕ್ಕೆ ಕೇಂದ್ರ ಸರ್ಕಾರ ಹಿಂದುಳಿದ ಪ್ರವರ್ಗ 2 ‘ಎ’ ಸ್ಥಾನ ನೀಡಿದೆ. ಪಕ್ಕದ ಮಹಾರಾಷ್ಟ್ರ
ದಲ್ಲೂ ಇದೇ ಮೀಸಲಾತಿ ನೀಡಲಾಗಿದೆ. ಇಷ್ಟಾದರೂ ರಾಜ್ಯದಲ್ಲಿ ಸಮುದಾಯಕ್ಕೆ ಪ್ರವರ್ಗ 2 ‘ಎ’ ಸ್ಥಾನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಶಿವಸಿಂಪಿ ಸಮಾಜಕ್ಕೆ ಇತ್ತ ಕುಲಕಸುಬೂ ಇಲ್ಲ. ಭೂಮಿಯ ಒಡೆತನವೂ ಸಿಕ್ಕಿಲ್ಲ. ಹೀಗಾಗಿ ಸಮಾಜ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ಎಲ್ಲ ಸರ್ಕಾರ
ಗಳೂ ಈ ಸಮಾಜವನ್ನು ಅಲಕ್ಷಿಸಿವೆ. ಇನ್ನಾದರೂ ಸೂಕ್ತ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. 
 
ಈ ಭಾಗದಲ್ಲಿ ಶಿವಸಿಂಪಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕುಲಗುರು ಶಿವದಾಸಿಮಯ್ಯ ಅವರ ಅಧ್ಯಯನ ಪೀಠವನ್ನು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆರಂಭಿಸಬೇಕು. ಹಾಗೆಯೇ ಶಿವದಾಸಿಮಯ್ಯ ಜಯಂತಿಯನ್ನು ಸರ್ಕಾರದಿಂದಲೇ ರಜೆ ರಹಿತ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಒತ್ತಾಯಿಸಿದರು. 
 
ಜೇನುಗೂಡಿನಂತೆ ಒಗ್ಗೂಡಿ: ಸಾನ್ನಿಧ್ಯ ವಹಿಸಿದ್ದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಶಿವಸಿಂಪಿ ಸಮಾಜವು ಜೇನುಗೂಡಿನಂತೆ ಒಂದಾಗಲಿ. ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ, ಹಕ್ಕುಗಳು, ಸೌಲಭ್ಯ ಪಡೆದುಕೊಳ್ಳಲು ಸಂಘಟನೆಯನ್ನು ಬಲಪಡಿಸಿಕೊಳ್ಳಿ’ ಎಂದು ಕರೆ ನೀಡಿದರು.
 
ದಾವಣಗೆರೆ ನಗರದಲ್ಲಿ ಶಿವಸಿಂಪಿ ಸಮಾಜದವರು 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದರೂ ಸೂಕ್ತ ರಾಜಕೀಯ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಮಾಜದ ಮತಗಳನ್ನು ಪಡೆದು ಆಯ್ಕೆಯಾಗುತ್ತಿದ್ದಾರೆ. ಗೆದ್ದವರು ಸಮಾಜವನ್ನು ಮರೆಯುತ್ತಿದ್ದಾರೆ. ಎಲ್ಲ ಪಕ್ಷಗಳೂ ಈ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಅವರು ಒತ್ತಾಯಿಸಿದರು. 
 
ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಮಾತನಾಡಿ, ಶಿವದಾಸಿಮಯ್ಯ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. 
 
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಬೇವಿನಕಟ್ಟಿ ಉಪನ್ಯಾಸ ನೀಡಿದರು. 
ಜಿಲ್ಲಾ ಶಿವಸಿಂಪಿ ಸಮಾಜದ ಅಧ್ಯಕ್ಷ ಗುರುಬಸಪ್ಪ ಬೂಸ್ನೂರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್, ಶಿವಸಿಂಪಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಜವಳಿ, ಬಾವಿಕಟ್ಟೆ ಜಗದೀಶ್, ಹೇಮಣ್ಣ ಜವಳಿ, ಚಿಗಟೇರಿ ಜಯಪ್ರಕಾಶ್, ಪ್ರಕಾಶ್‌ ಬೂಸ್ನೂರ್ ಇದ್ದರು. 
 
ಚಿಂದೋಡಿ ಶ್ರೀಕಂಠೇಶ್, ಚಿಂದೋಡಿ ಮಧುಕೇಶ್, ಕರಿಬಸಪ್ಪ ಮನೋಹರ ಗೊಂದಿ, ಚಂದ್ರಕಾಂತ ತಾಳಿಕೋಟೆ, ರೇವಣಸಿದ್ದಪ್ಪ ಗಳಿಗಿ, ಜಿ.ದೀಪುಕುಮಾರ್, ಡಾ.ಎ.ಸಿ.ನಿಪುಣ, ಅರುಣ್‌ಕುಮಾರ್, ವೇದಮೂರ್ತಿ, ಅಣಿಯಪ್ಳ ಮಹೇಶ, ಎ.ಗಂಗಾಧರ್, ಜವಳಿ ನಾಗರಾಜ, ಸಿ.ಪಿ.ನವೀನ್‌
ಕುಮಾರ್, ಡಿ.ಎಚ್.ಕೊಟ್ರೇಶಪ್ಪ, ಸಿ.ಬಕ್ಕೇಶ್, ಎಂ.ಕೆ.ರುದ್ರಮನಿ, ಎ.ಶಂಕರ್, ಕೆ.ಕೊಟ್ರೇಶ್, ಕೆ.ಜಿ.ಮಲ್ಲಿಕಾರ್ಜುನ, ಕೆ.ಬಸವರಾಜ, ಬಿ.ಬಸವರಾಜ ಅವರನ್ನು ಸನ್ಮಾನಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT