ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗುಳಿದ ಮರಗಳು, ಹಾರಿದ ಪತ್ರಾಸು

Last Updated 15 ಮೇ 2017, 5:10 IST
ಅಕ್ಷರ ಗಾತ್ರ

ಆಲಮಟ್ಟಿ (ನಿಡಗುಂದಿ): ಭಾನುವಾರ ಸಂಜೆ 4 ರ ಸುಮಾರು ಗುಡುಗು, ಮಿಂಚು, ಭಾರಿ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಯಿಂದ ಆಲಮಟ್ಟಿ ಸುತ್ತಮುತ್ತ 15 ಕ್ಕೂ ಹೆಚ್ಚು ಗಿಡಮರಗಳು ಧರೆಗುಳಿದಿವೆ.

ಏಕಾಏಕಿ ಬೀಸಿದ ಗಾಳಿಗೆ ಗಿಡಮರಗಳು ಕೆಲ ಮನೆಗಳ ಮೇಲೆ ಇನ್ನೂ ಕೆಲವೆಡೆ ನೆಲಕ್ಕೆ ಉರುಳಿದವು. ಯಾವುದೇ ಪ್ರಾಣಾಪಾಯ ಹಾಗೂ ಹೆಚ್ಚಿನ ಹಾನಿ ಸಂಭವಿಸಿಲ್ಲ. ಸುಮಾರು 10 ನಿಮಿಷಗಳ ಕಾಲ ಆಲಿಕಲ್ಲು ಮಳೆ ಸುರಿಯಿತು. ಆಲಿಕಲ್ಲು ಸುರಿದ ನಂತರ ಜೋರಾಗಿ ಕೆಲ ಕಾಲ ಮಳೆ ಸುರಿಯಿತು.

ಚಿಣ್ಣರಾದಿಯಾಗಿ ಆಲಿಕಲ್ಲು ಆರಿಸಿ ಸೇವಿಸುತ್ತಿದ್ದ ದೃಶ್ಯ ಕಂಡು ಬಂತು. ಚಿಕ್ಕ ಚಿಕ್ಕ ಆಲಿಕಲ್ಲು ಮಳೆಯಾದಾಗ ಮನೆಯಲ್ಲಿ ಕಲ್ಲು ಬಿದ್ದ ರೀತಿ ಸಪ್ಪಳ ಉಂಟಾಗಿತ್ತು. ಆಲಮಟ್ಟಿಯಲ್ಲಿ ಹಳೆಯ ಮನೆಯೊಂದರ ಮೇಲೆ ಗುಲ್‌ಮೊಹರ್ ಗಿಡ ಬಿದ್ದಿದ್ದು, ಮನೆ ಜಖಂಗೊಂಡಿದೆ.

ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಮರಗಳು ಬಿದ್ದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಗಾಳಿ ಸಮೇತ ಬೀಸಿದ ಗಾಳಿ ಮಳೆಗೆ ಆಲಮಟ್ಟಿ ಜಲಾಶಯದ ನೌಕರರ ವಸತಿ ಗೃಹ ಮಳೆಗೆ ಸೋರುತ್ತಿತ್ತು.

ಆಲಮಟ್ಟಿಯಲ್ಲದೇ ಅರಳದಿನ್ನಿ, ಯಲಗೂರ, ಬೇನಾಳ, ಅಗಸರಹಳ್ಳಿಯಲ್ಲಿ ಮಳೆ ಸುರಿದಿದ್ದು, ಅಲ್ಲಿಯೂ ಕೆಲ ಗಿಡಮರಗಳು ನೆಲಕ್ಕೆ ಉರುಳಿವೆ. ಅರಳದಿನ್ನಿಯಲ್ಲಿ ಒಂದೆರೆಡು ಅಂಗಡಿಗಳ ಪತ್ರಾಸು ಹಾರಿಹೋಗಿವೆ. ಬಿಸಿಲ ಬೇಗೆಯಿಂದ ನರಳುತ್ತಿದ್ದ ಜನ, ಜಾನುವಾರು, ಪಕ್ಷಿಗಳಿಗೆ ಈ ಮಳೆ ನಿರಾಳ ಭಾವ ಮೂಡಿಸಿತ್ತು.

ಭಕ್ತರ ಪರದಾಟ
ಸುಪ್ರಸಿದ್ಧ ಯಲ್ಲಮ್ಮನ­ಬೂದಿಹಾಳ ಗ್ರಾಮದ ಯಲ್ಲಮ್ಮ ಜಾತ್ರೆಗೆ ಬಂದಿದ್ದ ಸಹಸ್ರಾರು ಭಕ್ತರು ಏಕಾಏಕಿ ಸುರಿದ ಮಳೆಗೆ ಪರದಾಡಿದ ದೃಶ್ಯ ಕಂಡು ಬಂತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಸಹಸ್ರಾರು ಭಕ್ತರು ಬೂದಿಹಾಳ ಗ್ರಾಮದ ಅಕ್ಕಪಕ್ಕದ ಜಮೀನಿನಲ್ಲಿ ಟೆಂಟ್‌ ಹಾಕಿಕೊಂಡು ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಆದರೆ ಸಂಜೆ ಸುರಿದ ಮಳೆಗೆ ಭಕ್ತರ ಪರದಾಟ ಮಾತ್ರ ಹೆಚ್ಚಿತ್ತು. ತಾತ್ಕಾಲಿಕವಾಗಿ ಗ್ರಾಮಸ್ಥರ ಮನೆಗಳಲ್ಲಿ ನೆರವು ಪಡೆಯುತ್ತಿರುವುದು ಕಂಡು ಬಂತು. ಜಾತ್ರೆಯ ಕೊನೆಯ ದಿನವಾಗಿದ್ದ ಭಾನುವಾರ ಬೇವು ಇಳಿಸುವ ಕಾರ್ಯಕ್ರಮದ ನಂತರ ಮರಳಿ ತಮ್ಮ ಗ್ರಾಮಕ್ಕೆ ಹೋಗುವ ಸಂಪ್ರದಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT