ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಶಾಮಕ ಠಾಣೆಗೂ ತಟ್ಟಿದ ಬಿಸಿ

Last Updated 15 ಮೇ 2017, 5:33 IST
ಅಕ್ಷರ ಗಾತ್ರ

ಕೋಲಾರ: ನಗರದೆಲ್ಲೆಡೆ ನೀರಿಗೆ ಹಾಹಾಕಾರವಾಗಿದ್ದು, ಅಗ್ನಿಶಾಮಕ ಠಾಣೆಗೂ ಜಲ ಕ್ಷಾಮದ ಬಿಸಿ ತಟ್ಟಿದೆ. ನಗರದ ಬಹುಪಾಲು ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಸಿಬ್ಬಂದಿ ಅಗ್ನಿನಂದಕ ವಾಹನಗಳಿಗೆ ನೀರು ತುಂಬಿಸಿಕೊಳ್ಳಲು ಹೊರವಲಯದ ಕೆರೆ ಕುಂಟೆಗಳಿಗೆ ಅಲೆಯುವಂತಾಗಿದೆ.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ ಇರುವ ಅಗ್ನಿಶಾಮಕ ಠಾಣೆಯು ನಗರಸಭೆಯ ಟಮಕ ವಾರ್ಡ್‌ ವ್ಯಾಪ್ತಿಗೆ ಸೇರಿದೆ. 1984ರಲ್ಲಿ ಕಾರ್ಯಾರಂಭ ಮಾಡಿದ ಠಾಣೆಯು ಈ ಹಿಂದೆ ನಗರದೊಳಗೆ ಪುರಸಭೆ (ಈಗಿನ ನಗರಸಭೆ) ಆವರಣದಲ್ಲಿತ್ತು. ಬಳಿಕ 2005ರಲ್ಲಿ ಟಮಕ ಬಳಿ ಹೊಸ ಕಟ್ಟಡ ನಿರ್ಮಿಸಿ  ಅಲ್ಲಿಗೆ ಸ್ಥಳಾಂತರಿಸಲಾಯಿತು.

ಅಗ್ನಿಶಾಮಕ ಠಾಣೆಯ ಹಿಂಭಾಗದಲ್ಲೇ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಸಿಬ್ಬಂದಿಗೆ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಸಮುಚ್ಚಯದಲ್ಲಿ 12 ಮನೆಗಳಿವೆ. ಅಗ್ನಿನಂದಕ ವಾಹನಗಳು ಹಾಗೂ ಇಲಾಖೆಯ ಸಿಬ್ಬಂದಿಗೆ ಅಗತ್ಯವಿರುವ ನೀರಿನ ಸೌಕರ್ಯಕ್ಕಾಗಿ ಠಾಣೆ ಹಿಂಭಾಗದಲ್ಲೇ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಈ ಮೂರೂ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಸಮಸ್ಯೆ ಸೃಷ್ಟಿಯಾಗಿದೆ.

ಸಿಬ್ಬಂದಿಯ ವಸತಿ ಸಮುಚ್ಚಯಕ್ಕೆ  ಮಾತ್ರ ನಗರಸಭೆಯು ಟ್ಯಾಂಕರ್‌ ಮೂಲಕ  ವಾರದಲ್ಲಿ ಎರಡು ಲೋಡ್‌ ನೀರು ಪೂರೈಸುತ್ತಿದೆ.  ಆದರೆ, ಈ ನೀರು ಸಾಕಾಗುತ್ತಿಲ್ಲ.  ಬೇರೆ ದಾರಿ ಇಲ್ಲದೆ ಸಿಬ್ಬಂದಿ ಕಡಿಮೆ ನೀರಿನಲ್ಲೇ ದಿನ ದೂಡುತ್ತಿದ್ದಾರೆ.

ಹೆಚ್ಚಿದ ಅಗ್ನಿ ಅವಘಡ: ಅಗ್ನಿ ಅವಘಡ ಸಂಬಂಧ ಅಗ್ನಿಶಾಮಕ ಠಾಣೆಗೆ ತಿಂಗಳಲ್ಲಿ ಸರಾಸರಿ 20 ಕರೆಗಳು ಬರುತ್ತವೆ. ಈಗ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚಿದ್ದು, ಇದಕ್ಕೆ ಅನುಗುಣವಾಗಿ ಠಾಣೆಗೆ ಬರುವ ಕರೆಗಳ ಸಂಖ್ಯೆ 50ರ ಗಡಿ ದಾಟಿದೆ.

ರಕ್ಷಣಾ ಕಾರ್ಯಾಚರಣೆಗೆ ನೀರು ಅತ್ಯಗತ್ಯ. ಆದರೆ, ಠಾಣೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಅಗ್ನಿನಂದಕ ವಾಹನಗಳಿಗೆ ನೀರು ಸಿಗುತ್ತಿಲ್ಲ. ಮತ್ತೊಂದೆಡೆ ವಾಹನಗಳಿಗೆ ಖಾಸಗಿ ಕೊಳವೆ ಬಾವಿ ಅಥವಾ ಟ್ಯಾಂಕರ್‌ಗಳಿಂದ ನೀರು ಖರೀದಿಸಲು ಸರ್ಕಾರ ಇಲಾಖೆಗೆ ಅನುದಾನ ಕೊಡುವುದಿಲ್ಲ. ಇದರಿಂದ ಇಲಾಖೆ ಸಿಬ್ಬಂದಿ  ವಾಹನಗಳಿಗೆ ನೀರು ತುಂಬಿಸಿಕೊಳ್ಳಲು ಬವಣೆ ಪಡುವಂತಾಗಿದೆ.

ಕುಂಟೆಯ ನೀರು: ಠಾಣೆಯ ಹತ್ತಿರದಲ್ಲಿ ಯಾವುದೇ ಕೆರೆ ಕುಂಟೆಗಳಿಲ್ಲ. ಹೀಗಾಗಿ ಸಿಬ್ಬಂದಿಯು ತಾಲ್ಲೂಕಿನ ನೆರ್ನಹಳ್ಳಿ, ತಲಗುಂದ, ಬೇತಮಂಗಲ ರಸ್ತೆಯಲ್ಲಿನ ಭಟ್ಟರಹಳ್ಳಿ ಹಾಗೂ ಶ್ರೀನಿವಾಸಪುರ ರಸ್ತೆ ಬಳಿಯ ಕುಂಟೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅಗ್ನಿನಂದಕ ವಾಹನಗಳಿಗೆ ತುಂಬಿಸಿಕೊಂಡು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದಾರೆ.

ಈ ಕುಂಟೆಗಳು ಠಾಣೆಯಿಂದ ಸುಮಾರು 10 ಕಿ.ಮೀ ದೂರದಲ್ಲಿವೆ. ಸಿಬ್ಬಂದಿ ನೀರು ತುಂಬಿಸಿಕೊಳ್ಳಲು ವಾಹನಗಳೊಂದಿಗೆ ಈ ಕುಂಟೆಗಳಿಗೆ ಹೋಗಿ ಬರಲು ಸಾಕಷ್ಟು ಇಂಧನ ವ್ಯಯವಾಗುತ್ತಿದೆ. ಇದರಿಂದ ಇಲಾಖೆಗೆ ಇಂಧನ ವೆಚ್ಚದ ಹೊರೆ ಹೆಚ್ಚುತ್ತಿದೆ.

ಸಿಬ್ಬಂದಿಗೂ ಕಷ್ಟ: ನಗರಸಭೆಯಿಂದ ಪೂರೈಸುತ್ತಿರುವ ಟ್ಯಾಂಕರ್‌ ನೀರಿನಲ್ಲಿ ವಿಷಕಾರಿ ಫ್ಲೋರೈಡ್‌ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಈ ನೀರು ಕುಡಿಯಲು ಮತ್ತು ಅಡುಗೆಗೆ ಬಳಸಲು ಯೋಗ್ಯವಾಗಿಲ್ಲ. ಹೀಗಾಗಿ ಸಿಬ್ಬಂದಿ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಟಮಕ ಬಡಾವಣೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ₹ 5ಕ್ಕೆ 20 ಲೀಟರ್‌ನಂತೆ ಪ್ರತಿನಿತ್ಯ ನೀರು ಖರೀದಿಸಿಕೊಂಡು ಬಂದು ಕುಡಿಯುವುದಕ್ಕೆ ಮತ್ತು ಅಡುಗೆಗೆ ಬಳಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕ ತುಂಬಾ ದೂರ ಇರುವುದರಿಂದ ಕೆಲ ಸಿಬ್ಬಂದಿ ಸಮುಚ್ಚಯದ ಬಳಿಯೇ ಬರುವ ವಾಣಿಜ್ಯ ಉದ್ದೇಶದ ಟ್ಯಾಂಕರ್‌ ಮಾಲೀಕರಿಗೆ ಹೆಚ್ಚಿನ ಹಣ ಕೊಟ್ಟು ಶುದ್ಧ ನೀರು ಖರೀದಿಸುತ್ತಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ಸಿಬ್ಬಂದಿ ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ.

ದೊಡ್ಡ ಸಮಸ್ಯೆ
ನೀರು ಹೊಂದಿಸುವುದೇ ದೊಡ್ಡ ಸಮಸ್ಯೆಯಾಗಿದೆ. ನಗರಸಭೆಯಿಂದ ಕೊಡುವ ಟ್ಯಾಂಕರ್‌ ನೀರು ಸಿಬ್ಬಂದಿಯ ವಾಣಿಜ್ಯ ಸಮುಚ್ಚಯಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ ಅಗ್ನಿನಂದಕ ವಾಹನಗಳಿಗೆ ಸುತ್ತಮುತ್ತಲಿನ ಕುಂಟೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದೇವೆ.
–ಬಿ.ಎಂ.ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT