ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ಮುಕ್ತ ತುಮಕೂರಿಗಾಗಿ ಪಣ

Last Updated 15 ಮೇ 2017, 5:37 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಬೆಂಗಳೂರು, ತುಮಕೂರು ನಗರಗಳಲ್ಲಿನ ವಾಯು ಮಾಲಿನ್ಯ ಆತಂಕಕಾರಿ ಸ್ಥಿತಿ ತಲುಪಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆ ವರದಿ ಬಹಿರಂಗಗೊಳಿಸಿದ ಬೆನ್ನಲ್ಲಿ ನಗರದಲ್ಲಿ ‘ಪರಿಸರ ಉಳಿಸಿ’ ಎನ್ನುವ ಕೂಗು ಪ್ರಬಲವಾಗುತ್ತಿದೆ.

ಒಂದು ವೇಳೆ ಮಾಲಿನ್ಯ ತಹಬದಿಗೆ ಬಾರದಿದ್ದರೆ ಭವಿಷ್ಯತ್ತಿನಲ್ಲಿ ಹೆಚ್ಚು ಬೆಲೆ ತೆರಬೇಕಾಗುತ್ತದೆ ಎನ್ನುವುದನ್ನು ಪರಿಸರವಾದಿಗಳು ಮತ್ತು ವಿವಿಧ ಸಂಘಟನೆಗಳು ನಾಗರಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ತೊಡಗಿವೆ.

ಈ ದಿಸೆಯಲ್ಲಿ ಸಿಜ್ಞಾ ಯುವ ಸಂವಾದ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಯುವ ಮುನ್ನಡೆ ಸಂಘಟನೆಗಳು ಪ್ರಮುಖ ಹೆಜ್ಜೆಗಳನ್ನು ಇಟ್ಟಿವೆ. ‘ಸ್ಟಾಪ್ ಪೊಲ್ಯೂಷನ್ ಇನ್ ತುಮಕೂರು’ ಮತ್ತು ‘ಮಾಲಿನ್ಯ ಮುಕ್ತ, ಸ್ವಚ್ಛ ಹಸಿರು ತುಮಕೂರು’ ಆಂದೋಲನದ ಹೆಸರಿನಲ್ಲಿ ಜನಜಾಗೃತಿಗೆ ಮುಂದಾಗಿವೆ. ಈ ಆಂದೋಲನದಲ್ಲಿ 50 ಮಂದಿ ಸ್ವಯಂ ಸೇವಕರು ಸಕ್ರಿಯವಾಗಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ಆಂದೋಲನಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.  ಪರಿಸರ ಜಾಗೃತಿ ಪ್ರತಿ ವಾರ್ಡ್‌ಗಳು ಮತ್ತು ಮನೆಗಳನ್ನು ತಲುಪಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ನಗರದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ರಾಸಾಯನಿಕ ಬಲು ವೇಗವಾಗಿ ವಾತಾವರಣಕ್ಕೆ ಸೇರ್ಪಡೆಯಾಗುತ್ತಿದೆ. ಗ್ರೀನ್ ಪೀಸ್ ಸಂಸ್ಥೆಯ ವರದಿ ಬಂದ ಕೂಡಲೇ ಈ ಬಗ್ಗೆ ಚಿತ್ರಗಳನ್ನು ಫೇಸ್‌ಬುಕ್ ಪುಟದಲ್ಲಿ ಸ್ವಯಂ ಸೇವಕರು ಅಪ್‌ಲೋಡ್ ಮಾಡಿದರು.

ಅಂದಿನ ಉಪಮೇಯರ್ ನಾಗರಾಜು ಇದನ್ನು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದರು. ಅಲ್ಲದೆ ಪರಿಸರ ವಿಭಾಗದ ಎಂಜಿನಿಯರ್‌ಗಳ ಸಭೆ ನಡೆಸಿದ್ದರು.

‘ಕ್ಲೀನ್ ತುಮಕೂರು’ ಹೆಸರಿನಲ್ಲಿ ಫೇಸ್‌ಬುಕ್ ಪುಟವಿದ್ದು ಅಲ್ಲಿ ನಗರದ ಮಾಲಿನ್ಯ ಮತ್ತು ಪರಿಸರ ಉಳಿವಿಗೆ ಸಂಬಂಧಿಸಿದ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ‘ಹಸಿರು ತುಮಕೂರು’ ಮತ್ತು ‘ನಮ್ಮ ತುಮಕೂರು’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಈ ಗ್ರೂಪ್‌ ಸದಸ್ಯರು ಮಾಲಿನ್ಯ ಮತ್ತು ತಡೆ ಕುರಿತು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

‘ನಗರದ ಪ್ರಮುಖ ರಸ್ತೆಗಳಲ್ಲಿ ಮಾಲಿನ್ಯ ಅಳೆಯುವ ಮಾಪಕಗಳನ್ನು ಅಳವಡಿಸುವಂತೆ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ’ ಎನ್ನುವರು ಸಿಜ್ಞಾ ಯುವ ಸಂವಾದದ ಜ್ಞಾನಸಿಂಧು ಸ್ವಾಮಿ. 

ಟ್ರೀ ಮ್ಯಾಪಿಂಗ್: ನಗರದ ಯಾವ ರಸ್ತೆಗಳಲ್ಲಿ ಎಷ್ಟು ಮರಗಳಿವೆ. ಎಷ್ಟು ಮರಗಳನ್ನು ಕಡಿಯಲಾಗಿದೆ, ಕಾರಣವೇನು ಎನ್ನುವ ಕುರಿತು ಈಗಾಗಲೇ ಸ್ವಯಂ ಸೇವಕರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನಂತರ ಈ ಭಾಗದ ಜನರಿಗೆ ತಿಳಿವಳಿಕೆ ನೀಡಲಾಗುತ್ತದೆ. ಅಲ್ಲದೆ ರಸ್ತೆಗಳಲ್ಲಿ ಮರಗಳನ್ನು ನೆಡುವಂತೆ ಅರಣ್ಯ ಇಲಾಖೆಗೆ ಮನವಿ ನೀಡಲು ಸಂಘಟನೆಗಳು ಉದ್ದೇಶಿಸಿವೆ.

‘ನನ್ನ ಮರ’ ಜಾಗೃತಿಯಡಿ ನಾಗರಿಕರಿಗೆ ಸಸಿಗಳನ್ನು ದತ್ತು ನೀಡಿ ಅವುಗಳನ್ನು ಬೆಳೆಸುವ ಅರಿವು ಮೂಡಿಸಲಾಗುತ್ತಿದೆ.

‘ಮನವಿ, ಹೋರಾಟಗಳು ಒಂದು ಕಡೆ ಇದ್ದರೆ ನಾವೇ ಜನರನ್ನು ತಲುಪುವ ಮೂಲಕ ಜಾಗೃತಿ ಮೂಡಿಸಬೇಕು. ಈಗ ಆರಂಭಿಕ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಖಂಡಿತ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತದೆ, ಜಾಗೃತರಾಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸುವರು ಸ್ವಾಮಿ. ವಾಟ್ಸ್‌ಆ್ಯಪ್ ಸಂಖ್ಯೆ–9449768426

ಕಿಚನ್ ಗಾರ್ಡನ್
‘ವಾರ್ಡ್‌ಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆಗಳು ನಡೆದಿವೆ. ಕಿಚನ್ ಗಾರ್ಡನ್ ಪರಿಕಲ್ಪನೆಯನ್ನು ಜಾರಿಗೊಳಿಸಲಾಗುವುದು. ಈಗಾಗಲೇ ಸಿಜ್ಞಾ ಕಚೇರಿಯಲ್ಲಿ ಇದನ್ನು ಜಾರಿ ಮಾಡಲಾಗಿದೆ’ ಎನ್ನುತ್ತಾರೆ ಜ್ಞಾನಸಿಂಧು ಸ್ವಾಮಿ.

‘ಮನೆಯ ಚಾವಣಿ, ಮುಂಭಾಗದ ಖಾಲಿ ಜಾಗದಲ್ಲಿ ತರಕಾರಿ ಇಲ್ಲವೆ ಸೊಪ್ಪನ್ನು ಸಣ್ಣದಾಗಿ ಬೆಳೆಯುವ ಪರಿಕಲ್ಪನೆ ಕಿಚನ್ ಗಾರ್ಡನ್‌. ಮನೆಯ ಹಸಿ ಕಸವನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಇದರಿಂದ ಹಸಿ ಕಸ ಪರಿಸರ ಸೇರದಂತೆ ಎಚ್ಚರವಹಿಸಬಹುದು’ ಎನ್ನುವರು.

‘ಕಸ ನಿರ್ವಹಣೆ ಕುರಿತು ಸಂಸ್ಥೆಯ ಯತೀಶ್ ಹಾಗೂ ಸನಜ್ ಅವರು ಎರಡು ವಾರ್ಡ್‌ಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ನಾವು ಮಾರ್ಗದರ್ಶಕರಾಗಿ ಮಾತ್ರ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ನಮ್ಮ ಮನೆಯಿಂದಲೇ ಪ್ರಾರಂಭ
‘ಮಾಲಿನ್ಯ ಮುಕ್ತ, ಸ್ವಚ್ಛ ಹಸಿರು ತುಮಕೂರು’ ಕಾರ್ಯಕ್ರಮಕ್ಕೆ ರಶ್ಮಿ ಮತ್ತು ಮೇಘನಾ ಅವರು ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಆರಂಭದಲ್ಲಿ ಹೋಟೆಲ್‌ ಇಲ್ಲವೆ ಅಂಗಡಿಗಳಿಗೆ ತೆರಳಿದಾಗ ಮನೆಯಿಂದಲೇ ಬ್ಯಾಗ್ ತೆಗೆದುಕೊಂಡು ಹೋಗುತ್ತಿದ್ದೆ. ನಿನ್ನೊಬ್ಬಳಿಂದ ಪರಿಸರ ರಕ್ಷಣೆ ಸಾಧ್ಯವೇ ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು. ಆದರೆ ಈಗ ನಮ್ಮ ಮನೆ ಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿದೆ’ ಎನ್ನುವರು ಮೇಘನಾ.

‘ಕಸಕ್ಕೆ ಬೆಂಕಿ ಹಚ್ಚುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರೆ ಜಾಗೃತಿ ಮೂಡುತ್ತದೆಯೇ ಎಂದು ನಮಗೆ ಆರಂಭದಲ್ಲಿ ಅನ್ನಿಸಿತು. ಹೀಗೆ ಪ್ರಕಟವಾಗುತ್ತಿದ್ದಂತೆ ಉಪಮೇಯರ್ ಪ್ರತಿಕ್ರಿಯಿಸಿದರು. ಮಾಧ್ಯಮಗಳಲ್ಲಿಯೂ ಸುದ್ದಿ ಆಯಿತು’ ಎನ್ನುವರು.

‘ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ನಮ್ಮ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟೆವು. ನಾನೂ ನಿಮ್ಮ ಬೆಂಬಲಕ್ಕೆ ನಿಲ್ಲುವೆ. ಮೊದಲು ಒಂದು ವಾರ್ಡ್‌ ಅನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಕೆಲಸದಲ್ಲಿ ತೊಡಗಿ ಎಂದರು. ಈ ಬಗ್ಗೆ ಪ್ರಾತ್ಯಕ್ಷಿಕೆ ಸಿದ್ಧ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

10 ಶಾಲೆಗಳಲ್ಲಿ ಇಕೊ ಕ್ಲಬ್
‘ವಿಜ್ಞಾನ ಕೇಂದ್ರದಿಂದ ನಗರದ 10 ಶಾಲೆಗಳಲ್ಲಿ ಇಕೊ ಕ್ಲಬ್ ಮತ್ತು ‘ಗ್ರೀನ್ ಬ್ರಿಗೇಡ್’ ಆರಂಭಿಸಲಾಗುವುದು. ಚೇತನಾ ವಿದ್ಯಾಮಂದಿರ, ಸರ್ವೋದಯ, ಸೋಮೇಶ್ವರ, ಬಾಪೂಜಿ ಶಾಲೆಗಳಲ್ಲಿ ಆರಂಭಕ್ಕೆ ಒಪ್ಪಿಗೆ ದೊರೆತಿದೆ. ವಿದ್ಯಾಚೇತನ ಮತ್ತಿತರ ಶಾಲೆಗಳ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು ಪರಿಸರವಾದಿ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿ.ಯತಿರಾಜು.

‘ಗ್ರೀನ್ ಬ್ರಿಗೇಡ್ ಮೂಲಕ ಯುವ ಸಮುದಾಯಕ್ಕೆ ಪರಿಸರ ಉಳಿಸುವ ಜಾಗೃತಿ ಮೂಡಿಸಲಾಗುತ್ತದೆ. ವಾಯುಮಾಲಿನ್ಯ ಕಡಿಮೆ ಮಾಡಬೇಕು ಎಂದು ‘ಜನಾಗ್ರಹ’ ಆಂದೋಲನ ರೂಪಿಸಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಶಿರಾ, ಚಿಕ್ಕನಾಯಕನಹಳ್ಳಿಯಲ್ಲಿ ಅರಣ್ಯಕ್ಕೆ ಸೀಡ್ ಬಾಲ್ ಹಾಕುವ ಕಾರ್ಯಕ್ರಮ ನಡೆಸಲಾಗಿದೆ’ ಎನ್ನುವರು.

‘ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವನ್ನು ಯಾವ ರೀತಿ ಪಡೆಯಬೇಕು ಎಂಬ ಬಗ್ಗೆ ಮಂಥನಗಳು ನಡೆಯುತ್ತಿವೆ. ಪ್ರತಿ ವರ್ಷ ವಿಶ್ವ ಪರಿಸರ ದಿನದ ಸಮಯಲ್ಲಿ ಜಿಲ್ಲಾಡಳಿತಕ್ಕೆ ಪರಿಸರ ಮಾಲಿನ್ಯ, ರಕ್ಷಣೆ ಕುರಿತು ವರದಿಯನ್ನು ನೀಡಲಾಗುವುದು’ ಎಂದು ಅವರು ವಿವರಿಸಿದರು.

ಸೀಡ್‌ಬಾಲ್ ತಯಾರಿಕೆ
ಮೇ 21ರಂದು ಕೋರಾ ಸಾಮಾಜಿಕ ಅರಣ್ಯದಲ್ಲಿ ಸೀಡ್‌ಬಾಲ್ ತಯಾರಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಎರಡು ಮೂರು ದಿನಗಳ ನಂತರ ಸೀಡ್‌ಬಾಲ್‌ಗಳನ್ನು ಅರಣ್ಯ ಇಲಾಖೆ ಹೇಳಿದ ಸ್ಥಳಗಳಲ್ಲಿ ಸೀಡ್‌ಬಾಲ್‌ಗಳನ್ನು ಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT