ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು -ಹಿಂಗಾರು ತಕಟ ಮಸಾನ

ಚಂದಾಲಿಂಗೇಶ್ವರ ಜಾತ್ರೆಯಲ್ಲಿ ವಗ್ಗಯ್ಯನ ನುಡಿ
Last Updated 15 ಮೇ 2017, 6:01 IST
ಅಕ್ಷರ ಗಾತ್ರ
ಹನುಮಸಾಗರ:  ರೈತರ ಜಾತ್ರೆ ಎಂದೇ ಬಿಂಬಿತವಾಗಿರುವ ಸಮೀಪದ ಐತಿಹಾಸಿಕ ಕ್ಷೇತ್ರ ಚಂದಾಲಿಂಗೇಶ್ವರದಲ್ಲಿ ಜಾತ್ರೆಯ ನಿಮಿತ್ತ ಶನಿವಾರ ವಗ್ಗಯ್ಯನ ನುಡಿ ಕೇಳುವುದಕ್ಕಾಗಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
 
ಪರಂಪರೆಯಂತೆ ನುಡಿ ಹೇಳುವ ಗಿಡಕ್ಕೆ ವಿವಿಧ ಪೂಜೆ ಮಾಡುವುದರ ಮೂಲಕ ಸರಸರನೇ ಮರವೇರಿ ‘ಮುಂಗಾರು -ಹಿಂಗಾರು ತಕಟ ಮಸಾನ’ ಎಂದು ಹೇಳಿ ರೈತರಿಗೆ ಸಂತಸದ ಚಿಲುಮೆ ಮೂಡಿಸಿದರು. ಈ ಬಾರಿ ಮುಂಗಾರು ಮಳೆ ಹಾಗೂ ಬೆಳೆ ಹಿಂಗಾರಿಗಿಂತಲೂ ಉತ್ತಮವಾಗಿರುತ್ತವೆ ಎಂಬುದು ವಗ್ಗಯ್ಯನ ನುಡಿಯ ಅರ್ಥವಾಗಿತ್ತು. 
 
ಈ ನುಡಿ ಕೇಳುವುದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ನಿಂತಿದ್ದ ಜನಸ್ತೋಮ ನುಡಿ ಹೊರಬರುವ ಸಂದರ್ಭದಲ್ಲಿ ಸಂಪೂರ್ಣ ನಿಶ್ಯಬ್ಧದಿಂದ ಕೂಡಿತ್ತು. ವಗ್ಗಯ್ಯನವರ ನುಡಿ ಹೊರ ಬಂದ ಬಳಿಕವೇ ರೈತರು ಬಿತ್ತನೆ ಕಾರ್ಯ ಕೈಕೊಳ್ಳುವುದು ಈ ಭಾಗದ ರೈತರ ವಾಡಿಕೆಯಾಗಿರುತ್ತದೆ. ಬಳಿಕ ಕಬ್ಬಿಣ ಸರಪಳಿ ಹರಿಯುವ ಪವಾಡ ಜರುಗಿತು.
 
ವಿವಿಧ ರೀತಿಯ ವೇಷಭೂಷಣಗಳನ್ನು ಧರಿಸಿದ ವಗ್ಗಯ್ಯನವರು ಜಾತ್ರೆಯಲ್ಲಿ ಗಮನಸೆಳೆದರು. ಬೆಳಿಗ್ಗೆ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಕಳಸಾರೋಹಣ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಈ ಬಾರಿ ಜಾತ್ರೆಗೆ ತಾಲ್ಲೂಕು ಆಡಳಿತ ನೇತೃತ್ವ ವಹಿಸಿತ್ತು. 
 
ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ದಾವಣಗೇರೆ, ಧಾರವಾಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ವಿವಿಧ ವಾಹನಗಳಲ್ಲಿ ಬಂದಿದ್ದರು. 
ಹನುಮಸಾಗರ, ಮನ್ನೇರಾಳ, ಬೀಳಗಿ, ಗುಡೂರ, ದಮ್ಮೂರ, ಸೇಬಿನಕಟ್ಟಿ, ಕಬ್ಬರಗಿ, ಹೂಲಗೇರಿ, ಯರಗೇರಿ ಗ್ರಾಮಗಳ ಭಕ್ತರು ಚಂದಾಲಿಂಗನಿಗೆ ಹರಕೆಗಳನ್ನು ಸಮರ್ಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT