ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಗೈಯಿಲ್ಲ... ಆದರೂ ಕೆಲಸಕ್ಕೆ ಬಿಡುವಿಲ್ಲ!

ಒಂದೇ ಕೈಯಲ್ಲಿಯೇ ಕಾಯಕ ನಿರ್ವಹಿಸುವ ಛಲಯೋಗಿ ಶಿವಪ್ಪ ಹುದ್ದಾರ
Last Updated 15 ಮೇ 2017, 6:07 IST
ಅಕ್ಷರ ಗಾತ್ರ
ಹನುಮಸಾಗರ: ಈ ಯುವಕನಿಗೆ ಬಲಗೈಯೇ ಇಲ್ಲ... ಆದರೂ ಬೆಳಿಗ್ಗೆಯಿಂದ ಸಂಜೆವರೆಗೆ ಯಾವುದೇ ಅಳುಕಿಲ್ಲದೆ ಸಾಮಾನ್ಯರಂತೆ ಕಿಲೋ ಮೀಟರ್‌ ಗಟ್ಟಲೆ ದೂರ ಹೋಗಿ ನೀರು ತಂದು ಹೋಟೆಲ್‌ಗೆ ಹಾಕಿ ಹೊಟ್ಟೆ ಹೊರೆಯುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
 
28ರ ಹರೆಯದ ಈ ಯುವಕನ ಹೆಸರು ಶಿವಪ್ಪ ಫಕೀರಪ್ಪ ಹುದ್ದಾರ. ಆರನೇ ತರಗತಿವರೆಗೆ ಓದಿದ್ದಾರೆ. ಎಲ್ಲರಂತೆ ಓದಿನಲ್ಲಿ ಸಾಕಷ್ಟು ಆಸಕ್ತಿ ಇದ್ದರೂ ಕಡುಬಡತನ ಕಾರಣದಿಂದ ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಓದಿಗೆ ತಿಲಾಂಜಲಿ ಹೇಳಿ ಕಾಂಕ್ರೀಟ್‌ ಕೆಲಸದಲ್ಲಿ ತೊಡಗಿಕೊಂಡಿದ್ದ ವೇಳೆ ಕ್ರೇನ್‌ ಹಠಾತ್ತಾಗಿ ಕಳಚಿ ಬಿದ್ದ ಕಾರಣ ಸ್ಥಳದಲ್ಲೇ ಇವರ ಬಲಗೈ ತುಂಡಾಗಿ ಹೋಯಿತು. ಶಿವಪ್ಪ ಅವರು  ಬಲಗೈ ಕಳೆದುಕೊಂಡಿದ್ದು, ಒಂದು ರೀತಿಯಲ್ಲಿ ಬಡ ಕುಟುಂಬದ ಬೆನ್ನೆಲುಬೇ ಮುರಿದು ಹೋದಂತಾಗಿತ್ತು. 
 
ಎದೆಗುಂದದ ಯುವಕ: ಬಲಗೈ ಕಳೆದುಕೊಂಡರೂ ಎದೆಗುಂದದೆ ಒಂದೇ ಕೈಯಲ್ಲಿಯೇ ಏನು ಮಾಡಲು ಸಾಧ್ಯವೋ ಅದೆಲ್ಲ ಕೆಲಸನ್ನು ಬೇಸರಪಟ್ಟುಕೊಳ್ಳದೇ ಲವಲವಿಕೆಯಿಂದ ನಿತ್ಯ ಮಾಡುತ್ತಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ. ‘ನನ್ನ ಕುಟುಂಬ ನಿಂತಿರುವುದೆ ನನ್ನ ದುಡಿಮೆಯ ಆಧಾರದ ಮೇಲೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ಅವರೆಲ್ಲರನ್ನು ಜೋಪಾನ ಮಾಡುವುದು ನನ್ನ ಮುಖ್ಯ ಕರ್ತವ್ಯವಾಗಿರುವುದರಿಂದ ಕೆಲಸದ ಅನಿವಾರ್ಯತೆ ಇದೆ’ ಎಂದು ಶಿವಪ್ಪ ಹೇಳುತ್ತಾರೆ.
 
ಎಲ್ಲ ಕೆಲಸಕ್ಕೂ ಸೈ: ಜಮೀನುಗಳಲ್ಲಿ ಕಳೆ ತೆಗೆಯುವುದು, ಬೆಳೆಗಳಿಗೆ ಗೊಬ್ಬರ ಹಾಕುವುದು, ಜಾನುವಾರು ಕಾಯುವಂತಹ ಕೆಲಸಗಳನ್ನು ನಿರ್ವಹಿಸುವುದರ ಜತೆಗೆ ಆಯ್ದ ಹೋಟೆಲ್‌ಗಳಿಗೆ ಪ್ರತಿನಿತ್ಯ ನೀರು ಹಾಕುವುದನ್ನು ಮಾಡುತ್ತಿದ್ದಾರೆ.
 
ಹನುಮಸಾಗರದಲ್ಲಿ ನೀರಿನ ತೊಂದರೆ ಇರುವುದು ಇವರ ಕೆಲಸಕ್ಕೆ ಅವಕಾಶ ದೊರೆತಂತಾಗಿದೆ. ಕೊಳವೆಬಾವಿ ಹೊಂದಿದ ತೋಟ ಇಲ್ಲವೆ, ಮನೆಗಳಿಗೆ ಹೋಗಿ ₹2ಕ್ಕೆ ಒಂದು ಕೊಡದಂತೆ ನೀರು ಖರೀದಿಸಿ, ಒಂದು ಕೊಡಕ್ಕೆ ಐದು ರೂಪಾಯಿಯಂತೆ ಹೋಟೆಲ್‌ಗಳಿಗೆ ನೀರು ಹಾಕುತ್ತಾರೆ. ಒಂದು ಬಂಡಿಗೆ ಎಂಟು ಕೊಡಗಳಂತೆ ಪ್ರತಿ ದಿನ 6 ರಿಂದ 8 ಬಂಡಿ ನೀರು ವಿವಿಧ ಹೋಟೆಲ್‌ಗಳಿಗೆ ಸಾಗಿಸುತ್ತಾರೆ. 
 
ವ್ಯಾಪಾರ ಮಾಡುವ ಬಯಕೆ: ‘ಏನಾದರೊಂದು ಪುಟ್ಟದಾದ ವ್ಯಾಪಾರ ಮಾಡಿಕೊಂಡಿರಬೇಕು. ಕೈಗೆ ಕೃತಕ ಕೈ ಜೋಡಣೆ ಮಾಡಿಸಿಕೊಳ್ಳಬೇಕು ಎಂಬ ಉದ್ದೇಶವಿದೆ. ಆದರೆ ಕೈಯಲ್ಲಿ ಕಾಸು ಇಲ್ಲದ ಕಾರಣವಾಗಿ ಏನೂ ಮಾಡಲು ಆಗುತ್ತಿಲ್ಲ, ಸರ್ಕಾರ ನಮ್ಮಂತವರ ಕಡೆ ದೃಷ್ಟಿ ಹಾಯಿಸಬೇಕು’ ಎಂದು ಶಿವಪ್ಪ ದೈನಾಸಿಯಿಂದ ಹೇಳುತ್ತಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT