ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾರೆ’ಯರ ರಾಗಾಲಾಪದ ದಾಖಲೆಯ ತಾಣ

ಬೆಟ್ಟದಂಥ ಕನಸುಗಳಿಗೆ ಪುಟ್ಟ ಸ್ಟುಡಿಯೋ
Last Updated 15 ಮೇ 2017, 6:13 IST
ಅಕ್ಷರ ಗಾತ್ರ
ಕೊಪ್ಪಳ:  ಹಾಡುವ ಹವ್ಯಾಸಿಗಳಿಗೆ ನಗರದಲ್ಲೊಂದು ಸ್ಟುಡಿಯೋ ತೆರೆದಿದೆ. ಜಿಲ್ಲೆಯಲ್ಲಿ ಇದೊಂದು ಹೊಸ ಪ್ರಯೋಗ. ನಗರದ ಯುವಕರು ಹವ್ಯಾಸಕ್ಕೊಂದು ವೇದಿಕೆ ಕಲ್ಪಿಸಿದ್ದಾರೆ.
 
ನಗರದ ಬನ್ನಿಕಟ್ಟೆಯಲ್ಲಿರುವ ಸ್ಟಾರ್‌ ಕರಾವೋಕೆ ಸಾಂಗ್ಸ್‌ ಮತ್ತು ರೆಕಾರ್ಡಿಂಗ್‌ ಸ್ಟುಡಿಯೋ ಗಾಯಕರ ಪ್ರತಿಭೆ ಒರೆಗೆ ಹಚ್ಚುತ್ತಿದೆ. 
 
ಹೇಗೆ ಕೆಲಸ ಮಾಡುತ್ತಿದೆ?: ಕನ್ನಡ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳ ಹಾಡುಗಳ ಹಿನ್ನೆಲೆ ಸಂಗೀತ (ಮ್ಯೂಸಿಕ್‌ ಟ್ರ್ಯಾಕ್‌) ಇಲ್ಲಿ ಲಭ್ಯವಿದೆ. ಇದರ ಹಕ್ಕುದಾರರಿಂದ ಸಂಗೀತದ ಟ್ರ್ಯಾಕ್‌ಗಳನ್ನು ಖರೀದಿಸಲಾಗಿದೆ.

ಕಂಪ್ಯೂಟರ್‌ನಲ್ಲಿ ಎಲ್ಲ ಹಾಡುಗಳ ಸಂಗೀತ ಸಹಿತ ಪಠ್ಯದ ವಿಡಿಯೋ ಫೈಲ್‌ ಸಂಗ್ರಹ ಇದೆ. ವಿಡಿಯೋ ಸಂಗೀತ ನುಡಿಸುತ್ತಿದ್ದಂತೆ (play)  ಮುಂದಿನ ಗೋಡೆಯಲ್ಲಿ ಅಳವಡಿಸಲಾದ ಟಿವಿ ಪರದೆಯ ಮೇಲೆ ಪಠ್ಯ ಮೂಡಿಬರುತ್ತದೆ. ಅದನ್ನು ನೋಡುತ್ತಾ ಗಾಯಕ ಹಾಡುತ್ತಾನೆ. ಅಗತ್ಯವಿದ್ದಲ್ಲಿ ಗಾಯನ ಸಹಿತ ಧ್ವನಿ ಮುದ್ರಿಸಬಹುದು. ಅಥವಾ ಸುಮ್ಮನೆ ಹಾಡಲೂಬಹುದು.
 
ಅತ್ಯಾಧುನಿಕ ಧ್ವನಿ ವ್ಯವಸ್ಥೆ, ಆಡಿಯೋ ಮಿಕ್ಸರ್‌, ಹಾಡುಗಳ ಟ್ರ್ಯಾಕ್‌ ಸಂಗ್ರಹದ ಹಾರ್ಡ್‌ಡಿಸ್ಕ್‌್, ಮೈಕ್ರೋಫೋನ್‌ ಎಲ್ಲವನ್ನೂ ಧ್ವನಿ ನಿರೋಧಕ ಕೊಠಡಿಯಲ್ಲಿ ಅಳವಡಿಸಲಾಗಿದೆ. ಹೊರಗಿನ ಯಾವುದೇ ಧ್ವನಿ ಇಲ್ಲಿನ ಚಟುವಟಿಕೆಗೆ ಬಾಧಿಸದಂತೆ ತಾಂತ್ರಿಕತೆ ಇದೆ. 
 
ಕೆಲಸವೇನು?: ಸಂಸ್ಥೆಯ ಪಾಲುದಾರ ಶಿವಪ್ರಸಾದ್‌ ಮಠಪತಿ ಹೇಳುವ ಪ್ರಕಾರ, ‘ಇದನ್ನು ವ್ಯವಹಾರ ಎಂದು ನಾವು ಮಾಡುತ್ತಿಲ್ಲ. ಮೂಲತಃ ನಾನೂ ಹವ್ಯಾಸಿ. ಹಾಡುವುದಕ್ಕೋಸ್ಕರ ಗದಗ, ಹೊಸಪೇಟೆಗೆ ಹೋಗುತ್ತಿದ್ದೆ. ಆದರೆ, ಅಲ್ಲಿ ಧ್ವನಿಮುದ್ರಣ ವ್ಯವಸ್ಥೆ ಇಲ್ಲ. ಇಲ್ಲಿನ ಹವ್ಯಾಸಿಗಳು, ತತ್ವಪದಕಾರರು ಹಾಡುಗಳ ಧ್ವನಿ ಮುದ್ರಣಕ್ಕಾಗಿ ಬನಹಟ್ಟಿ, ಬೆಂಗಳೂರಿಗೆ ಹೋಗುತ್ತಿದ್ದರು. ಇದು ಎಲ್ಲರಿಗೂ ತುಂಬಾ ದುಬಾರಿಯಾಗಿತ್ತು.
 
ಅವರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ (ದೂರದೂರಿನ ಸ್ಟುಡಿಯೋಗಳ ಅರ್ಧ ದರಕ್ಕೆ) ಇಲ್ಲಿ ಧ್ವನಿಮುದ್ರಿಸಿ ಕೊಡುತ್ತೇವೆ. ನಮ್ಮದೇನಿದ್ದರೂ ತಾಂತ್ರಿಕ ನೆರವು ಮಾತ್ರ. ಸರ್ಕಾರಿ, ಖಾಸಗಿ ಸಂಸ್ಥೆಗಳ ಜಾಹೀರಾತು ಪ್ರಕಟಣೆಗಳ ಧ್ವನಿಮುದ್ರಣ, ಹಿನ್ನೆಲೆ ಧ್ವನಿ (voice over), ಸಂಗೀತ ಪರಿಕರಗಳನ್ನು ಬಳಸಿ ಧ್ವನಿಮುದ್ರಣ ಎಲ್ಲವನ್ನೂ ಮಾಡುತ್ತೇವೆ’ ಎಂದರು. ಅವರ ಜತೆ ಗೆಳೆಯ ಶಿವಕುಮಾರ್‌ ಹಿರೇಮಠ ಅವರೂ ಕೈಜೋಡಿಸಿದ್ದಾರೆ.
 
ಮಠಪತಿ ಅವರು ಬಿ.ಕಾಂ. ಪದವೀಧರ. ಜತೆಗೆ ಮಾಹಿತಿ ತಂತ್ರಜ್ಞಾನದ ಕೋರ್ಸ್ ಓದಿದ್ದಾರೆ. ಖಾಸಗಿ ಸಂಸ್ಥೆಯೊಂದಕ್ಕೆ ಮಾಹಿತಿ ತಂತ್ರಜ್ಞಾನದ ನೆರವು ನೀಡುತ್ತಿದ್ದಾರೆ. ಹಿರೇಮಠ ಅವರು ಎಂ.ಕಾಂ ಪದವೀಧರ. ಸಹಕಾರ ಬ್ಯಾಂಕ್‌ನಲ್ಲಿ ಉದ್ಯೋಗಿ. ಇಬ್ಬರಿಗೂ ಇರುವ ಸಂಗೀತದ ಗೀಳು ಸ್ಟುಡಿಯೋ ಸ್ಥಾಪಿಸಲು ಕಾರಣವಾಗಿದೆ. ಮಠಪತಿ ಅವರ ರಸಮಂಜರಿ ತಂಡವಿದೆ. ಅಲ್ಲಿನ ಗಾಯಕರಿಗೂ ಈ ಸ್ಟುಡಿಯೋ ಅಭ್ಯಾಸ ಕೇಂದ್ರವಾಗಿಬಿಟ್ಟಿದೆ. 
****
ಸ್ಟುಡಿಯೋ ವೈಶಿಷ್ಟ್ಯ
ಶುಲ್ಕದ ವಿವರ:
ಪ್ರತಿ ಹಾಡಿಗೆ ₹ 20 ಚಿತ್ರಗೀತೆ ಧ್ವನಿಮುದ್ರಣಕ್ಕೆ ₹ 250, ಬೇರೆ ಹಾಡು ಧ್ವನಿಮುದ್ರಣಕ್ಕೆ ₹ 500
****
ಯಾರು ಬರುತ್ತಾರೆ?
ಸಂಗೀತ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ರಸಮಂಜರಿ ಗಾಯಕರು, ಪೊಲೀಸ್‌ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮೀಣ ಪ್ರದೇಶಗಳ ಯುವ ರೈತರು, ಟ್ರ್ಯಾಕ್ಟರ್‌, ರಿಕ್ಷಾ ಚಾಲಕರು, ಹೋಟೆಲ್‌, ಡಾಬಾಗಳಲ್ಲಿ ಕೆಲಸ ಮಾಡುವ ಹುಡುಗರು, ಟೀ ಅಂಗಡಿಯವರು ಹೀಗೆ ಸಂಗೀತದ ಹುಚ್ಚು ಹಿಡಿಸಿಕೊಂಡ ಹಲವರು ವೃತ್ತಿ ಬದುಕಿನ ಒತ್ತಡ ನಿವಾರಿಸಿಕೊಳ್ಳಲು ಸಂಜೆ ವೇಳೆ ಸ್ಟುಡಿಯೋದಲ್ಲಿ ಹಾಜರಿರುತ್ತಾರೆ. ವೃತ್ತಿಪರರಲ್ಲದಿದ್ದರೂ ಇವರ ಧ್ವನಿ ಖ್ಯಾತ ಗಾಯಕರಿಗೆ ಸೆಡ್ಡು ಹೊಡೆಯುವಂತಿದೆ. ಮಾಹಿತಿಗೆ ಮೊಬೈಲ್‌: 7899010055, 7899010066.
****
ಸ್ಟುಡಿಯೋದಲ್ಲಿನ ಮಾಹಿತಿ
* ಎಲ್ಲ ಭಾಷೆಗಳಲ್ಲೂ ಲಭ್ಯ ಕನ್ನಡ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳ ಹಾಡುಗಳ ಹಿನ್ನೆಲೆ ಸಂಗೀತ ಇಲ್ಲಿ ಲಭ್ಯವಿದೆ
* 15– –20 ಪ್ರತಿದಿನ ಬರುವ ಗಾಯಕರು
* ₹3.68 ಲಕ್ಷ ಸ್ಟುಡಿಯೋ ಪರಿಕರಗಳ ಒಟ್ಟು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT