ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಸುರಿದರೂ ತಪ್ಪದ ನೀರಿನ ಬವಣೆ

Last Updated 15 ಮೇ 2017, 6:17 IST
ಅಕ್ಷರ ಗಾತ್ರ

ಗದಗ: ಮುಂಗಾರು ಪೂರ್ವ ಮಳೆ ಸುರಿದರೂ ನಗರದ ಜನರಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ತುಂಗಭದ್ರಾ ನದಿ ಪಾತ್ರ ಬರಿದಾಗಿ ರುವುದರಿಂದ ಕಳೆದ ಏ.20ರಿಂದಲೇ ನಗರಕ್ಕೆ ಕುಡಿಯುವ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಗರಸಭೆ ವತಿಯಿಂದ ಕೆಲವು ವಾರ್ಡ್‌ಗಳಿಗೆ ತುಂಗಭದ್ರಾ ನೀರು ಪೂರೈಕೆಯಾಗಿ 50 ರಿಂದ 60 ದಿನಗಳು ಕಳೆದಿವೆ.

ಸದ್ಯ ನಗರದ  ಜನತೆ ಸಂಪೂರ್ಣವಾಗಿ ಟ್ಯಾಂಕರ್‌ ನೀರನ್ನೇ ಅವಲಂಬಿಸಿದ್ದು, ನಗರಸಭೆಯು ನಿತ್ಯ ಪ್ರತಿ ವಾರ್ಡ್‌ಗಳಿಗೆ ಖಾಸಗಿ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ. ಆದರೆ, 5 ರಿಂದ 8 ಸಾವಿರ ಜನಸಂಖ್ಯೆ ಹೊಂದಿರುವ ವಾರ್ಡ್‌ಗಳಲ್ಲಿ, ಒಂದು ಟ್ಯಾಂಕರ್‌ ನೀರು ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ.

ನೀರಿನ ಟ್ಯಾಂಕರ್‌ ದಾರಿಯನ್ನೇ ಕಾಯುತ್ತಾ ವಾರ್ಡ್‌ಗಳಲ್ಲಿ ಗೃಹಿಣಿಯರು ಖಾಲಿ ಕೊಡಗಳನ್ನು ಜೋಡಿಸಿಟ್ಟು ಗಂಟೆಗಟ್ಟಲೆ ಕಾಯಬೇಕಿದೆ. ಟ್ಯಾಂಕರ್‌ ಬಂದ ಕೂಡಲೇ ನೀರಿಗಾಗಿ ಮುಗಿ ಬೀಳುವುದು, ಜಗಳ ನಡೆಯುವುದು ಸಾಮಾನ್ಯ ದೃಶ್ಯವಾಗಿದೆ.  ‘ಟ್ಯಾಂಕರ್‌ ವಾರ್ಡ್‌ನೊಳಗೆ ಪ್ರವೇಶಿಸುತ್ತಿದ್ದಂತೆ ಜನರು ಕೊಡ ಗಳೊಂದಿಗೆ ಮುಗಿಬೀಳುತ್ತಾರೆ.

ಕೆಲವರು ಟ್ಯಾಂಕರ್‌ ಮೇಲೇರಿ, ಮುಚ್ಚಳ ತೆಗೆದು ನೀರು ತುಂಬಿಸಿಕೊಳ್ಳು ತ್ತಾರೆ. ನೀರು ಸಿಕ್ಕವರಿಗೆ ಹಬ್ಬ. ಉಳಿದವರು ಮುಂದಿನ ಟ್ಯಾಂಕರ್‌ ಬರುವ ತನಕ ದಾರಿ ಕಾಯಬೇಕು. ಈ ನೀರು ಕುಡಿ ಯಲು ಯೋಗ್ಯವಲ್ಲ. ಗೃಹ ಬಳಕೆಗೆ ಮಾತ್ರ ಉಪಯೋಗಿಸಬಹುದು’ ಎನ್ನುತ್ತಾರೆ ಪಂಚಾಕ್ಷರಿ ನಗರದ ಗೃಹಿಣಿ ಈರಮ್ಮ ಸುಮಂಗಲಾ ಜಗ್ಗಲ   ಅವರು.

ನಗರಸಭೆ ಪೂರೈಸುವ ಟ್ಯಾಂಕರ್‌ ನೀರು ಕುಡಿಯಲು ಯೋಗ್ಯವಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಜನರು ಶುದ್ಧ ಕುಡಿಯುವ ನೀರಿನ ಘಟಕಗಳ ಎದುರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುತ್ತಾ ನಿಲ್ಲಬೇಕು.

ನೀರಿನ ಕೊರತೆ ಯಿಂದ ಹೆಚ್ಚಿನ ಘಟಕಗಳು ಸ್ಥಗಿತ ಗೊಂಡಿವೆ. ನೀರಿನ ಲಭ್ಯತೆ ಇರುವ ಬೆಟಗೇರಿ ಜರ್ಮನ್‌ ಆಸ್ಪತ್ರೆ, ರಂಗಪ್ಪಜ್ಜನ ಮಠದ ಎದುರಿನ ಘಟಕ, ಎಪಿಎಂಪಿ, ಶಹಾಪೂರ ಪೇಟೆ ಘಟಕಗಳ ಮುಂದೆ ಜನದಟ್ಟಣೆ ಹೆಚ್ಚಿರುತ್ತದೆ. ‘ಖಾಸಗಿ ಕಂಪೆನಿಗಳು ಪೂರೈಸುವ ಶುದ್ಧ ಕುಡಿಯುವ ನೀರಿನ 20 ಲೀಟರ್‌ ಕ್ಯಾನಿಗೆ  ₹ 60 ದರ ಇದೆ. ಒಂದು ಕೊಡ ನೀರಿಗಾಗಿ ಅಲೆಯ ಬೇಕು. ಕೊನೆಗೂ ನೀರು ಸಿಕ್ಕರೆ ಪುಣ್ಯ’ ಎನ್ನುತ್ತಾರೆ ಬೆಟಗೇರಿ ನಿವಾಸಿ ಶರಣಪ್ಪ ಹಳೇಮನಿ .

ತಿಂಗಳಾಂತ್ಯಕ್ಕೆ ತುಂಗಭದ್ರಾ ನೀರು

ತುಂಗಭದ್ರಾ ನದಿ ಪಾತ್ರ ಬತ್ತಿರುವುದರಿಂದ ಹಮ್ಮಿಗೆ ಬ್ಯಾರೇಜ್‌ನಲ್ಲಿ ಬೊಗಸೆಯಷ್ಟು ಮಾತ್ರ ನೀರು ಮಾತ್ರ ಉಳಿದಿದೆ. ಈ  ಡೆಡ್‌ಸ್ಟೋರೇಜ್‌  ನೀರನ್ನೂ ಬಳಸಿಕೊಳ್ಳಲು ಜಿಲ್ಲಾಡಳಿತ ಸರ್ವ ಪ್ರಯತ್ನ ನಡೆಸಿದೆ. ಈ ನಡುವೆ ಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ 4 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಭದ್ರಾ ಜಲಾಶಯದಿಂದ ನೀರನ್ನು ಬಿಡಲಾಗಿದೆ. ಆದರೆ, 230 ಕಿ.ಮೀ ಕೆಳಗಿರುವ ಹಮ್ಮಿಗೆ ಬ್ಯಾರೇಜ್‌ಗೆ ಈ ನೀರು ಬಂದು ತಲುಪಲು ಕನಿಷ್ಠ 14 ದಿನ ತೆಗೆದುಕೊಳ್ಳುತ್ತದೆ. ಸದ್ಯ ಬಿಡುಗಡೆ ಮಾಡಿರುವ ನೀರು ಅರ್ಧ ಹಾದಿ ದಾಟಿದ್ದು ಬ್ಯಾರೇಜ್‌ಗೆ ಬಂದು ಸಂಗ್ರಹಗೊಳ್ಳಲು ಇನ್ನೂ ಒಂದೆರಡು ದಿನ ತೆಗೆದುಕೊಳ್ಳುತ್ತದೆ.

ಬ್ಯಾರೇಜ್‌ನಲ್ಲಿ ನೀರು ಸಂಗ್ರಹಗೊಂಡ ನಂತರ ಅದನ್ನು ಕೊರ್ಲಹಳ್ಳಿ ಜಾಕ್‌ವೆಲ್‌ಗೆ ಬಿಡಲಾಗುತ್ತದೆ. ಅಲ್ಲಿಂದ ನೀರೆತ್ತಿ ಅವಳಿ ನಗರಕ್ಕೆ ಪೂರೈಕೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಗದಗ–ಬೆಟಗೇರಿ ಅವಳಿ ನಗರದ ಜನತೆಗೆ ಈ ತಿಂಗಳಾಂತ್ಯಕ್ಕೆ ತುಂಗಭದ್ರಾ ಕುಡಿಯುವ ನೀರಿನ ಭಾಗ್ಯ ಲಭಿಸುವ ಸಾಧ್ಯತೆಗಳಿವೆ.

ಕುಡಿಯುವ ನೀರು ಪೂರೈಕೆಗಾಗಿಯೇ ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಅನುದಾನ ಸೇರಿ ಪ್ರಸಕ್ತ ಸಾಲಿನಲ್ಲಿ ₹ 3.99 ಕೋಟಿ ವೆಚ್ಚ ಮಾಡಲಾಗಿದೆ. ಆದರೂ, ಜನರ ಬವಣೆ ತಪ್ಪಿಲ್ಲ. ನಗರದ ನೀರಿನ ಸಮಸ್ಯೆಗೆ ಇರುವ ಏಕೈಕ ಪರಿಹಾರವೆಂದರೆ ಮಳೆ. ಈ ಬಾರಿಯಾದರೂ ಭದ್ರಾ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಮಳೆ ಲಭಿಸಲಿ, ತುಂಗಭದ್ರಾ ನದಿ ಮತ್ತೆ ತುಂಬಿ ಹರಿಯಲಿ, ಹಮ್ಮಿಗೆ ಬ್ಯಾರೇಜ್‌ ಭರ್ತಿಯಾಗಲಿ ಎಂದು ನಗರದ ಜನತೆ ಮುಗಿಲಿನತ್ತ ಮುಖಮಾಡಿ ಪ್ರಾರ್ಥಿಸುತ್ತಿದ್ದಾರೆ.

*

ಗದಗ-–ಬೆಟಗೇರಿ ಅವಳಿ ನಗರ ಹಾಗೂ ಗಜೇಂದ್ರಗಡ ಪಟ್ಟಣದಲ್ಲಿ ಸದ್ಯ ಪ್ರತಿ ದಿನ 36 ಟ್ಯಾಂಕರ್‌ಗಳ ಮೂಲಕ 239 ಸುತ್ತು ನೀರು ಪೂರೈಕೆ ಮಾಡಲಾಗುತ್ತಿದೆ.
ಮನೋಜ್‌ ಜೈನ್‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT