ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆ ಅಭಿವೃದ್ಧಿಗೆ ಕಂಟಕ: ಶಾಸಕ

ಅಂಬೇಡ್ಕರ್‌ ಅಭಿಮಾನಿ ಸಂಘದಿಂದ ಜನ್ಮ ದಿನಾಚರಣೆ
Last Updated 15 ಮೇ 2017, 6:36 IST
ಅಕ್ಷರ ಗಾತ್ರ
ಮೂಡಿಗೆರೆ:  ‘ದೇಶದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆ ತೊಲಗದೆ ದೇಶದ ಸುಧಾರಣೆ ಅಸಾಧ್ಯದ ಮಾತಾಗಿದೆ’ ಎಂದು ಶಾಸಕ ಬಿ.ಬಿ. ನಿಂಗಯ್ಯ ಅಭಿಪ್ರಾಯಪಟ್ಟರು.
 
ಆಲ್ದೂರು ಸಮೀಪದ ಹಾಂದಿ ಗ್ರಾಮದಲ್ಲಿ ಡಾ. ಬಿ.ಆರ್‌್. ಅಂಬೇಡ್ಕರ್‌ ಅಭಿಮಾನಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್‌ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
 
‘ಜಾತಿ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಕಂಟಕವಾಗಿದೆ. ಜಾತಿ ರಹಿತ ಸಮಾಜವನ್ನು ನಿರ್ಮಿಸಬೇಕು’ ಎಂದರು. ‘ಜಾತಿ ರಹಿತ ಸಮಾಜ ನಿರ್ಮಾಣ ಅಂಬೇಡ್ಕರರ ಕನಸುಗಳಲ್ಲಿ ಒಂದಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂಬುದು ಅವರ ತತ್ವವಾಗಿತ್ತು.
 
ಸಮಾಜದ ಎಲ್ಲಾ ವರ್ಗದವರೂ ಶಿಕ್ಷಿತರಾಗಿ ಅಂಬೇಡ್ಕರ್‌ ಆಶಯಗಳನ್ನು ಈಡೇರಿಸಬೇಕು’ ಎಂದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ‘ಸಂವಿಧಾನ ರಚನೆಯಾದ ನಂತರ ಸರ್ಕಾರಗಳು ಯಾವುದೇ ಯೋಜನೆ ಜಾರಿಗೊಳಿಸಿದ್ದರೂ ಅವುಗಳೆಲ್ಲವೂ ಅಂಬೇಡ್ಕರರು ಯೋಜಿಸಿ ನೀಡಿದ ಕಾನೂನಿನನ್ವಯ ಜಾರಿಯಾಗಿವೆ ಎಂಬ ಅರಿವು ಮೂಡಬೇಕು.
 
ಸಂವಿಧಾನದ ಆಶಯಗಳಾದ ಏಕತೆ, ಸಹೋದರತೆ, ಸಮಾನತೆ ಇದುವರೆಗೂ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿಲ್ಲ. ಇವು  ಜಾರಿಯಾಗಿರುವವರೆಗೂ ಶೋಷಿತ ವರ್ಗಗಳು ಹೋರಾಟ ನಡೆಸಬೇಕು’ ಎಂದರು.
 
ಡಾ. ಬಿ.ಆರ್‌. ಅಂಬೇಡ್ಕರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಂದಿಲಕ್ಷ್ಮಣ್‌ ಮಾತನಾಡಿ, ‘ಮೀಸಲಾತಿ ಶೋಷಿತ ವರ್ಗಗಳಿಗೆ ನೀಡಿರುವ ಭಿಕ್ಷೆಯಲ್ಲ. ಅದು  ಹಕ್ಕಾಗಿದೆ. ಸುಪ್ರಿಂಕೋರ್ಟ್ ಆದೇಶಿಸಿರುವ ಬಡ್ತಿಮೀಸಲಾತಿ ತಡೆ ಆದೇಶವನ್ನು ಪುನರ್‌ ಪರಿಶೀಲನೆ ನಡೆಸುವಂತೆ ಸರ್ಕಾರವು ಮೇಲ್ಮನವಿ ಅರ್ಜಿ ಸಲ್ಲಿಸುವಂತೆ ಒತ್ತಡ ತರಲು ಶೋಷಿತ ವರ್ಗಗಳೆಲ್ಲವು ಒಂದಾಗಿ ಹೋರಾಟ ನಡೆಸಬೇಕು’ ಎಂದರು. 
 
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ರಾಧಕೃಷ್ಣ, ಬಿವಿಎಸ್‌ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಎಂ.ಎನ್‌. ಚದಂಬರ್‌, ಜಾನಪದ ಕಲಾವಿದ ಅಮ್ಮರಾಮಚಂದ್ರ, ಜನಪ್ರತಿನಿಧಿಗಳಾದ ರಮೇಶ್‌, ಕವೀಶ್‌, ಜಗದೀಶ್‌, ಪದ್ಮಗೋಪಾಲ್‌, ಇದ್ರೀಸ್‌ಅಹಮ್ಮದ್‌, ಪುಟ್ಟೇಗೌಡ, ನಾಗೇಶ್‌, ಬಾಬು, ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT