ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟದ ಹಾಡು ದಲಿತ ಚಳವಳಿಗೆ ಸ್ಫೂರ್ತಿ’

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು
Last Updated 15 ಮೇ 2017, 6:42 IST
ಅಕ್ಷರ ಗಾತ್ರ
ಚಿಕ್ಕಮಗಳೂರು:   ‘ದಲಿತ ಚಳವಳಿ ಸಾಧಿಸಬೇಕಿರುವುದು ಇನ್ನು ಬಹಳಷ್ಟಿದೆ, ಹೋರಾಟದ ಹಾಡುಗಳು ದಲಿತರಲ್ಲಿ ಸ್ವಾಭಿಮಾನ, ಆತ್ಮಸ್ಥೈರ್ಯ, ಜಾಗೃತಿ ಮೂಡಿಸುತ್ತವೆ’ ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು ಹೇಳಿದರು.
 
ದಸಂಸ ತಾಲ್ಲೂಕು ಘಟಕದ ವತಿಯಿಂದ ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ಜಯಂತ್ಯುತ್ಸವದ ಅಂಗವಾಗಿ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಜೀವಜೀವದ ಹಾಡುಗಳು’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
 
‘1974–75ರಲ್ಲಿ  ದಸಂಸ ಸಂಘಟಿಸಿ ದಲಿತರನ್ನು ಎಚ್ಚರಿಸುವ ಕೆಲಸ ಶುರು ಮಾಡಲಾಯಿತು. ದಲಿತರ ಮೇಲಿನ ದಬ್ಬಾಳಿಕೆ ಖಂಡಿಸಿ ಚಳವಳಿಗಳು ನಡೆದವು. ದಲಿತ ಚಳವಳಿಗಳಿಗೆ ಸ್ಫೂರ್ತಿ ನೀಡಿದ್ದು ಹೋರಾಟದ ಹಾಡುಗಳು. ಈ ಜೀವಜೀವದ ಗೀತೆಗಳು ಚಳವಳಿಯನ್ನು ಮುನ್ನಡೆಸಿದವು’ ಎಂದರು.  
 
‘ಕೋಮುವಾದಿ ಶಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿವೆ. ಇದಕ್ಕೆ ಅವಕಾಶ ನೀಡಬಾರದು. ಪಂಚಾಂಗ ವ್ಯವಸ್ಥೆ ಅಧಿಪತ್ಯ ಸ್ಥಾಪಿಸಲು ಬಿಡಬಾರದು. ರಾಜ್ಯಾಂಗ ವ್ಯವಸ್ಥೆ ಕಾಪಾಡಿಕೊಳ್ಳಬೇಕು. ದಲಿತ ಚಳವಳಿ ಮುನ್ನುಗ್ಗಬೇಕು’ ಎಂದು ಹೇಳಿದರು.  
 
ಗಾಯಕ ಎಚ್‌.ಜನಾರ್ದನ್‌ ಮಾತನಾಡಿ, ‘ಭದ್ರಾವತಿಯಲ್ಲಿ 1974ರಲ್ಲಿ ದಸಂಸ ಉದ್ಘಾಟನೆಯಾಗಿದ್ದೆ ಸಾಂಸ್ಕೃತಿಕ ರೂಪದಲ್ಲಿ. ದಲಿತ ಲೇಖಕಕಲಾವಿದರ ಸಮ್ಮೇಳನ ಇದರ ಬುನಾದಿ’ ಎಂದರು. ‘ಜಾತಿ‌ವ್ಯವಸ್ಥೆ ಬೇರೆಬೇರೆ ರೂಪದಲ್ಲಿ ಈಗಲೂ ಇದೆ. ದಲಿತರ ವಿಮೋಚನೆ ಆಗಿಲ್ಲ.
 
ಬಂಡವಾಳಶಾಹಿ, ವಸಾಹತುಶಾಹಿ, ಕೋಮುವಾದಗಳು ದಲಿತರನ್ನು ಮುಳುಗಿಸಲು ಹುನ್ನಾರ ನಡೆಸುತ್ತಿವೆ. ಪಿತೂರಿಗಳನ್ನು ಶಮನ ಮಾಡಲು ಸಂಘಟಿತರಾಗಿ ಕಾರ್ಯೋನ್ಮುಖರಾಗಬೇಕು. ಯುವಕರು ಸಂಘಟನೆ, ಹೋರಾಟಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ‘ಖಾಸಗೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಖಜಾನೆಗೆ ಹಣ ಉಳಿಕೆ ಸಬೂಬು ನೀಡಿ ಹೊರಗುತ್ತಿಗೆ ಹೆಸರಿನಲ್ಲಿ ದಲಿತರನ್ನು ಉದ್ಯೋಗವಕಾಶಗಳಿಂದ ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ’ ಎಂದರು.  
 
‘ದಲಿತ ಸಂಘರ್ಷ ಸಮಿತಿಯು ಒಡೆದು ಹೋಳುಗಳಾಗಿ ಕವಲು ಹಾದಿಯಲ್ಲಿದೆ. ಒಡೆದ ಮನಸ್ಸುಗಳು ಒಂದಾಗಬೇಕು. ದಸಂಸವನ್ನು ಒಗ್ಗೂಡಿಸಬೇಕು. ಸಭೆಗಳನ್ನು ನಡೆಸಿ ಗೊಂದಲಗಳನ್ನು ಬಗೆಹರಿಸಿಕೊಂಡು ಸಂಘಟನೆಯನ್ನು ಮುನ್ನಡೆಸಬೇಕು’ ಎಂದರು. ಗಾಯಕ ಎಚ್‌.ಜನಾರ್ದನ್‌ ಮತ್ತು ತಂಡದವರು ಹೋರಾಟದ ಹಾಡುಗಳನ್ನು ಹಾಡಿದರು. ಮೈಸೂರಿನ ಅಂಬೇಡ್ಕರ್‌ ಅಧ್ಯಯನ ಕೇಂದ್ರದವರು ನೃತ್ಯರೂಪಕ ಪ್ರಸ್ತುತ ಪಡಿಸಿದರು. ಗಾಯನ, ನಾಟ್ಯಗಳನ್ನು ಸಭಿಕರ ಮೈನವಿರೇಳಿಸಿದವು. 
 
ದಸಂಸ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಸಂಚಾಲಕರಾದ ಹೆಬ್ಬಾಲೆ ನಿಂಗರಾಜು, ಜಿಲ್ಲಾ ಸಂಚಾಲಕರಾದ ಯಲಗುಡಿಗೆ ಹೊನ್ನಪ್ಪ, ಶಿವಕುಮಾರ್‌, ತಾಲ್ಲೂಕು ಸಂಚಾಲಕ ದೇವರಾಜ್‌ ಕೂದುವಳ್ಳಿ, ಕಾಂಗ್ರೆಸ್‌ ಮುಖಂಡ ಸತೀಶ್‌ ಎಸ್‌.ಪೇಟೆ ಇದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT