ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸಂಪರ್ಕವೂ ಇಲ್ಲ, ದೂರವಾಣಿ ಸಂಪರ್ಕವೂ ಇಲ್ಲ!

ಇಡಕಿಣಿ , ಕೋಟೆಮಕ್ಕಿ, ಹಡ್ಲುಗದ್ದೆ ಗ್ರಾಮಗಳಲ್ಲಿ ಹತಾಶೆ, ಬೇಸರ
Last Updated 15 ಮೇ 2017, 6:45 IST
ಅಕ್ಷರ ಗಾತ್ರ
ಕಳಸ: ಹೋಬಳಿಯ ದುರ್ಗಮ ಪ್ರದೇಶದ ಅನೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಅಥವಾ ದೂರವಾಣಿ ಸಂಪರ್ಕ ಎರಡರಲ್ಲೊಂದು ಸಮರ್ಪಕವಾಗಿದೆ. ರಸ್ತೆ  ಹಾಗೂ  ದೂರವಾಣಿ ಸಂಪರ್ಕ ಎರಡೂ ಇಲ್ಲದ ಕೆಲವು ಗ್ರಾಮಗಳು ಇಡಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವೆ.
 
ಹಿರೇಬೈಲಿನಿಂದ ಕೋಟೆಮಕ್ಕಿ ,ಇಡಕಿಣಿ ,ಹೆಮ್ಮಕ್ಕಿ ಮೂಲಕ ಗಬ್‌ಗಲ್‌ ಸಂಪರ್ಕಿಸುವ ರಸ್ತೆಯು ಹೋಬಳಿ ಯಲ್ಲೇ ಅತ್ಯಂತ ಹದಗೆಟ್ಟ ರಸ್ತೆಗಳ ಪೈಕಿ ಮುಂಚೂಣಿಯಲ್ಲಿದೆ. ದೌರ್ಭಾಗ್ಯ ಎಂದರೆ ಈ ಗ್ರಾಮಗಳ ಜನರಿಗೆ ಮೊಬೈಲ್‌ ಸಿಗ್ನಲ್‌ ಕೂಡ ಸಿಗದೆ ಅವರು ಬಂಧು ಬಾಂಧವರೊಡನೆ ಸಂವಹನ ನಡೆಸಲು ಅಸಾಧ್ಯವಾಗಿದೆ.
 
ಹಿರೇಬೈಲಿನಿಂದ ಕೋಟೆಮಕ್ಕಿ, ಇಡಕಿಣಿ,ಹೆಮ್ಮಕ್ಕಿ ಮೂಲಕ ಗಬ್‌ಗಲ್‌ ಗ್ರಾಮಕ್ಕೆ 15 ಕಿ.ಮೀ. ದೂರ ಆಗುತ್ತದೆ. ಈ ಪೈಕಿ ಈ ವರ್ಷ ಮೊದಲ 1 ಕಿ.ಮೀ ಸುಸಜ್ಜಿತ ರಸ್ತೆ ನಿರ್ಮಾಣ ಆಗಿದೆ. ಆದರೆ ಉಳಿದ 14 ಕಿ.ಮೀ ರಸ್ತೆ ಬಳಸಲು ವಾಹನ ಸವಾರರಿಗೆ ಎದೆಗಾರಿಕೆಯೇ ಬೇಕು. ಇಂತಹ ರಸ್ತೆ ದುರಸ್ತಿ ಬಗ್ಗೆ ತಮ್ಮ ಗ್ರಾಮಕ್ಕೆ 4 ವರ್ಷದ ಹಿಂದೆ ಬಂದಿದ್ದ ಶಾಸಕರಿಗೆ  ಸ್ಥಳೀಯರು ಮನವಿ ಸಲ್ಲಿಸಿದ್ದರು.
 
‘ರಸ್ತೆ ದುರಸ್ತಿ ಮಾಡಿ, ಒಂದು ವಾರದಲ್ಲೇ ಈ ಗ್ರಾಮಗಳಿಗೆ ಬಸ್‌ ಸಂಚಾರ ಆರಂಭಿಸುತ್ತೇನೆ ಎಂದು ಅಂದು ಶಾಸಕರು ಘೋಷಿಸಿದ್ದರು. ಆದರೆ 4 ವರ್ಷ ಕಳೆದರೂ ರಸ್ತೆಗೆ ಚಿಕ್ಕಾಸೂ ಸಿಗಲಿಲ್ಲ.  ಗ್ರಾಮಕ್ಕೆ ಬಸ್ಸೂ ಬರಲಿಲ್ಲ’ ಎಂದು ಗ್ರಾಮಸ್ಥರು ನಿರಾಶೆಯಿಂದ ಹೇಳುತ್ತಾರೆ.
 
  ಹಡ್ಲುಗದ್ದೆಯಿಂದ ಪ್ರತಿದಿನ 8 ಕಿ.ಮೀ ಮತ್ತು ಕೋಟೆಮಕ್ಕಿ, ಇಡಕಿಣಿಯಿಂದ 5 ಕಿ.ಮೀ ನಡೆದು ಹಿರೇಬೈಲಿನ ಶಾಲೆ ಮತ್ತು ಕಳಸದ ಕಾಲೇಜು ತಲುಪುವ ಉತ್ಸಾಹಿ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಆದರೆ ಸೂಕ್ತ ವಾಹನದ ವ್ಯವಸ್ಥೆ ಇಲ್ಲದೆ ಈ ವಿದ್ಯಾರ್ಥಿಗಳು ಬವಣೆ ಪಡುತ್ತಿದ್ದಾರೆ.
 
‘ಈ ಪ್ರದೇಶದ 200–300 ಮನೆಗಳ ನಿವಾಸಿಗಳಿಗೆ ಹಿರೇಬೈಲು ಅಥವಾ ಕಳಸ ತಲುಪುವುದೆಂದರೆ ನರಕಯಾತನೆ. ಅನಾರೋಗ್ಯದ ಸಂದರ್ಭದಲ್ಲಿ  ಸಮಸ್ಯೆ ಹೆಚ್ಚುತ್ತದೆ’ ಎಂದು ಹಳ್ಳಿಗರು ಬೇಸರದಿಂದ ಹೇಳುತ್ತಾರೆ.
 
‘ಈ ರಸ್ತೆಯನ್ನು 4 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆಗಾಲದ ನಂತರ ರಸ್ತೆಗೆ ಅನುದಾನ ದೊರಕುವ ಭರವಸೆ ಇದೆ ’ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌. ಪ್ರಭಾಕರ್‌ ಹೇಳಿಕೆ ಗ್ರಾಮಸ್ಥರ ಮಟ್ಟಿಗೆ ಏಕೈಕ ಆಶಾಕಿರಣ ಆಗಿದೆ.
 
ಹದಗೆಟ್ಟ ರಸ್ತೆಯನ್ನೂ ಹೇಗೋ ಸಹಿಸಲು ಗ್ರಾಮಸ್ಥರು ಕಲಿತಿದ್ದಾರೆ. ಆದರೆ ದೂರವಾಣಿ ಸಂಪರ್ಕಕ್ಕೆ ಪರ್ಯಾಯವಾಗಿ ಇಲ್ಲಿನ ಜನರಿಗೆ ಬೇರೆ ಪರಿಹಾರ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿ ಬಾಧಿಸುತ್ತಿದೆ. 
 
’ಇಡೀ ಕಳಸ ಹೋಬಳಿಯಲ್ಲಿ ಮೊಬೈಲ್‌ ಸಂಪರ್ಕ ಸಿಗದೆ ಇರುವ ಪ್ರದೇಶ ನಮ್ಮ ಗ್ರಾಮಗಳು ಮಾತ್ರ. ‘ಯಾವುದಾದರೂ ಮರ ಅಥವಾ ಕೊಟ್ಟಿಗೆ ಮೇಲೆ ಹತ್ತಿದರೆ ಒಂದು ಗೆರೆ ಸಿಗ್ನಲ್‌ ಸಿಗುತ್ತೆ. ಆಗಲೂ ಸರಿಯಾಗಿ ಮಾತಾಡುವುದು ಕೇಳಿಸಲ್ಲ. ಇಡಕಿಣಿಗೊಂದು ಟವರ್‌ ಹಾಕಿ ಅಂತ ಎಲ್ಲರನ್ನೂ ಬೇಡಿಕೊಂಡರೂ ಇನ್ನೂ ನಮಗೆ ನ್ಯಾಯ ಸಿಕ್ಕಿಲ್ಲ’ ಎಂದು ಸ್ಥಳೀಯರು ಹತಾಶೆಯಿಂದ ಹೇಳುತ್ತಾರೆ.
 
‘5 ವರ್ಷದ ಹಿಂದೆಯೇ ಇಲ್ಲಿ ಟವರ್‌ ನಿಲ್ಲಿಸಲು ಸಮೀಕ್ಷೆ ಮಾಡಿದ್ದರು. ಆದರೆ ಆಗ ಎಸ್‌.ಕೆ. ಮೇಗಲ್‌ಗೆ ಟವರ್‌ ಭಾಗ್ಯ ಸಿಕ್ಕಿತು. ನಮಗೆ ಈವರೆಗೂ ಸಿಕ್ಕಿಲ್ಲ’ ಎಂದು ಗ್ರಾಮದ ಯುವಕ ಪ್ರಶಾಂತ ಹೇಳುತ್ತಾರೆ. ’ಇತ್ತೀಚೆಗೆ ಬಿಎಸ್‌ಎನ್‌ಎಲ್‌ ಟವರ್‌ಗಾಗಿ  ನಾವು ಒಂದಷ್ಟು ಜನ ಚಿಕ್ಕಮಗಳೂರಿಗೆ ಹೋಗಿ ಮನವಿ ಮಾಡಿದೆವು. ಸಂಸದರ ಶಿಫಾರಸ್ಸು ನಮ್ಮ ಊರಿನ ಟವರ್‌ಗೆ ಸಿಗಲಿಲ್ಲ’ ಎಂದು  ಸ್ಥಳೀಯರು ಆಕ್ರೋಶಗೊಳ್ಳುತ್ತಾರೆ.
 
   ಕೊನೆ ಪಕ್ಷ ಗ್ರಾಮಸ್ಥರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸ್ಥಿರ ದೂರವಾಣಿಯಾದರೂ ಇದೆಯೇ ಎಂದು ಕೇಳಿದರೆ, ‘ಅವು ಕೆಟ್ಟು ನಿಂತು ದೀರ್ಘ ಕಾಲವೇ ಆಗಿದೆ. ಕಚ್ಛಾ ರಸ್ತೆ ಅಗೆದಾಗ ಹಾಳಾದ ಫೋನ್‌ಗಳು ಈಗ ರಿಂಗ್‌ ಆಗುವುದೇ ಇಲ್ಲ. ದುಡ್ಡಿದ್ದವರು ಹೇಗೋ ದುರಸ್ತಿ ಮಾಡಿಸಿಕೊಂಡರು, ನಮ್‌ ಫೋನ್‌ ಎಲ್ಲ ಮೂಲೇಲಿ ಬಿದ್ದಿದಾವೆ’ ಎಂದು ಸ್ಥಳೀಯರು ಹೇಳುತ್ತಾರೆ. ರಸ್ತೆ ಹಾಗೂ ದೂರವಾಣಿ ಸಂಪರ್ಕದಿಂದಲೂ ವಂಚಿತರಾಗಿರುವ ಈ ಗ್ರಾಮಗಳ ಜನರು ಇವೆರಡು ಸಂಪರ್ಕ ನೀಡಲು ಅಧೀಕಾರಿಗಳು, ಚುನಾಯಿತ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. 
ರವಿ ಕೆಳಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT