ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಸ್ಪಂದಿಸುವುದೇ ನಿಜವಾದ ಶಿಕ್ಷಣ

ಜೆಎಸ್‌ಎಸ್‌ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ
Last Updated 15 ಮೇ 2017, 7:52 IST
ಅಕ್ಷರ ಗಾತ್ರ
ಚಾಮರಾಜನಗರ: ‘ಮಕ್ಕಳಲ್ಲಿ ಮಾನವೀಯತೆ ಮತ್ತು ಜೀವನದ ಮೌಲ್ಯ ಬೆಳೆಸುವುದೇ ನಿಜವಾದ ಶಿಕ್ಷಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 
ನಗರದಲ್ಲಿ ನಿರ್ಮಿಸಲಾಗಿರುವ ಜೆಎಸ್‌ಎಸ್‌ ಆಸ್ಪತ್ರೆ ಮತ್ತು ಜೆಎಸ್‌ಎಸ್‌ ಮಹಿಳಾ ಕಾಲೇಜು ಸುವರ್ಣ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
 
‘ನಾವು ಯಾವ ದೇಶದಲ್ಲಿ ಇದ್ದರೂ ಮಕ್ಕಳಲ್ಲಿ ಕನ್ನಡತನ, ಸಂಸ್ಕೃತಿ ಮತ್ತು ಜೀವನದ ಮೌಲ್ಯ ಬೆಳೆಸಬೇಕು. ಪುಸ್ತಕ ಓದಿ ಪದವಿ ಶಿಕ್ಷಣವನ್ನು ಯಾರು ಬೇಕಾದರೂ ಪಡೆಯಬಹುದು. ಆದರೆ ಜೀವನಕ್ಕೆ ಸ್ಪಂದಿಸದ ಶಿಕ್ಷಣಕ್ಕೆ ಬೆಲೆಯೇ ಇಲ್ಲ’ ಎಂದು ಹೇಳಿದರು.
 
ಎಲ್ಲ ವರ್ಗದವರಿಗೆ ಶಿಕ್ಷಣ ದೊರಕಬೇಕು. ಜಿಡಿಪಿಯಷ್ಟೇ ಅಭಿವೃದ್ಧಿಯ ಮಾನದಂಡವಲ್ಲ. ಎಷ್ಟು ಮಂದಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂಬುದು ಮುಖ್ಯ. ಅಭಿವೃದ್ಧಿ ದೇಶಗಳಲ್ಲಿ ಶೇ 80ಕ್ಕಿಂತ ಹೆಚ್ಚು ಮಂದಿ ಉನ್ನತ ಶಿಕ್ಷಣ ಪಡೆವರಿದ್ದಾರೆ. ಆದರೆ ನಮ್ಮ ದೇಶದಲ್ಲಿ ಈ ಪ್ರಮಾಣ ಕೇವಲ ಶೇ 22ರಷ್ಟಿದೆ ಎಂದು ವಿಷಾದಿಸಿದರು.
 
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಿಂದಿನ ಕಾಲದಲ್ಲಿ ಮುಂದುವರಿದ ಜಾತಿಗಳಲ್ಲಿಯೂ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಇರಲಿಲ್ಲ. ಬ್ರಿಟಿಷರು ಬಂದ ಬಳಿಕ ಮತ್ತು ಸ್ವಾತಂತ್ರ್ಯಾನಂತರ ಮಹಿಳಾ ಶಿಕ್ಷಣಕ್ಕೆ ಮಹತ್ವ ದೊರಕಿದೆ ಎಂದರು.
 
ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಸುತ್ತೂರು ಮಠ ರಾಜ್ಯ ಮಾತ್ರವಲ್ಲ; ಉತ್ತರ ಪ್ರದೇಶ, ತಮಿಳುನಾಡು, ವಿದೇಶದಲ್ಲೂ ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು.
 
ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡಬೇಕು ಎಂಬ ಸಂಸದ ಆರ್‌.ಧ್ರುವನಾರಾಯಣ್ ಅವರ ಬೇಡಿಕೆಗೆ ಮುಖ್ಯಮಂತ್ರಿ, ‘ಕೃಷಿ ವಿಷಯ
ದಲ್ಲಿ ಬಿಎಸ್ಸಿ, ಎಂಎಸ್ಸಿ ಓದಿದವರು ಕೃಷಿ ಅಭಿವೃದ್ಧಿ ಕೆಲಸ ಮಾಡದೆ ಬೇರೆ ಕಡೆ ಹೋಗುತ್ತಿದ್ದಾರೆ. ಕಾಲೇಜು ಕೊಟ್ಟು ಏನು ಪ್ರಯೋಜನ. ನೀವು (ಧ್ರುವ
ನಾರಾಯಣ್‌) ಕೃಷಿ ವಿಷಯದಲ್ಲಿ ಎಂಎಸ್ಸಿ ಮಾಡಿರುವುದರಿಂದ ಈ ಒಲವು ಬಂದಿರಬೇಕು’ ಎಂದರು.
 
‘ಪದವಿ ಪಡೆದು ನೀವು ರಾಜಕಾರಣಿ ಆದಿರಿ. ವೈದ್ಯಕೀಯ ಓದಿದ ಮಹದೇವಪ್ಪ ಅವರೂ ರಾಜಕಾರಣಿ. ಕಾನೂನು ಓದಿದ ನಾನೂ ರಾಜಕೀಯಕ್ಕೆ ಬಂದೆ. ಲಾಯರ್‌ಗಳ ಕೆಲಸವೇ ರಾಜ ಕಾರಣ’ ಎಂದು ಚಟಾಕಿ ಹಾರಿಸಿದರು.
 
ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ‘ಶಕ್ತಿ, ಸಾಮರ್ಥ್ಯ ಮತ್ತು ಅಧಿಕಾರ ಹೊಂದಿರುವವರು ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಜಗತ್ತು ಸ್ಮರಿಸಲಿದೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಇನ್ನೊಬ್ಬರ ಸುಖ  ನೋಡಿ ಸುಖಪಡುವ ಗುಣ ಭಾರತೀಯರದ್ದು. ಉಳ್ಳವರ ಮನೆಯ ಸಿರಿವಂತಿಕೆ ನೋಡಿ ಬಡವರು ಖುಷಿ ಪಡುತ್ತಾರೆ. ಅದು ಭಾರತೀಯ ಸಂಸ್ಕೃತಿ’ ಎಂದರು.
 
ಸಚಿವರಾದ ಡಾ. ಎಚ್‌.ಸಿ. ಮಹದೇವಪ್ಪ, ಯು.ಟಿ. ಖಾದರ್‌, ಸುತ್ತೂರು ಮಠದ  ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಂಸದ ಆರ್‌. ಧ್ರುವನಾರಾಯಣ್‌, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಶಾಸಕಿ ಗೀತಾ ಮಹದೇವಪ್ರಸಾದ್‌,  ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಮತ್ತು ಎಸ್‌. ಜಯಣ್ಣ ಇದ್ದರು.
****
ರಸ್ತೆ ಅಭಿವೃದ್ಧಿ; ಜಿಲ್ಲಾಧಿಕಾರಿಗೆ ತಾಕೀತು
ಚಾಮರಾಜನಗರ:
‘ಚಾಮರಾಜನಗರವೂ ನನ್ನ ಜಿಲ್ಲೆಯೇ. ಇದಕ್ಕೆ ವಿಶೇಷ ಗಮನ ನೀಡುತ್ತೇನೆ. ಟೌನ್‌ಷಿಪ್‌ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ರಾಚಯ್ಯ ಜೋಡಿ ರಸ್ತೆ ನಿರ್ಮಾಣಕ್ಕೆ ₹37 ಕೋಟಿ ನೀಡಲಾಗಿದೆ. ಅದರ ಟೆಂಡರ್‌ ಕೂಡ ಕರೆಯಲಾಗಿದೆ ಎಂದು ಅವರು ಹೇಳಿದರು. ಇಷ್ಟು ದಿನ ಕಳೆದರೂ ಅದರ ಕೆಲಸ ಶುರುವಾಗಿಲ್ಲ ಎಂದು ವೇದಿಕೆ ಮೇಲಿದ್ದ ಕೆಲವು ಸ್ಥಳೀಯ ಮುಖಂಡರು ತಿಳಿಸಿದರು.

ಕೂಡಲೇ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿ ಬಿ. ರಾಮು ಅವರತ್ತ ತಿರುಗಿದ ಮುಖ್ಯಮಂತ್ರಿ, ‘ಸೂಕ್ತ ಪರಿಹಾರ ನೀಡಿ ರಸ್ತೆ ಅಗಲೀಕರಣಕ್ಕೆ ಇನ್ನು ಒಂದು ತಿಂಗಳಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ನಿಮಗೆ ಅಧಿಕಾರ ನೀಡಿದ್ದೇನೆ ಅಲ್ಲವೇ’ ಎಂದು ಪ್ರಶ್ನಿಸಿದರು.
****

ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ- ಸಿ.ಎಂ
ಚಾಮರಾಜನಗರ:
‘ಸರ್ಕಾರದ 4ವರ್ಷದ ಸಾಧನೆ ತೃಪ್ತಿ ತಂದಿದೆ. 2018ರ ವಿಧಾನಸಭೆ ಚುನಾವಣೆಯ ನೇತೃತ್ವವನ್ನು ನಾನೇ ವಹಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಅಧಿಕಾರದ ಅವಧಿಯಲ್ಲಿ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದೇನೆ. ಆದರೆ, ಬಿಜೆಪಿ ಮುಖಂಡರು ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸೋಲಿನ ಹತಾಶೆಯಿಂದ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದರು.


‘ಬಿಜೆಪಿ ಆರೋಪಕ್ಕೆ ಯಾವುದೇ ಬೆಲೆಯಿಲ್ಲ. ಸಾಕ್ಷಿಗಳು ಇದ್ದರೆ ಮಾತ್ರ ಅದು ದೋಷಾರೋಪ ಪಟ್ಟಿಯಾಗುತ್ತದೆ. ಅವರು ಮಾಡಿರುವುದು ಸುಳ್ಳು ಆರೋಪ ಪಟ್ಟಿ. ಆಧಾರ ರಹಿತವಾಗಿದೆ’ ಎಂದ ಅವರು, ‘ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಿಷನ್‌ 150 ಎಂದು ಹೇಳುತ್ತಿದ್ದಾರೆ. ಅದೇನು ಅವರ ಜೇಬಿನಲ್ಲಿ ಇದೆಯಾ’ ಎಂದು ಲೇವಡಿ ಮಾಡಿದರು.
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT