ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಗಣತಿಗೆ ಅರಣ್ಯ ಇಲಾಖೆ ಸಿದ್ಧತೆ

ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮ ಸಜ್ಜು; ನಾಳೆಯಿಂದ ನಾಲ್ಕು ದಿನ ಗಣತಿ ಕಾರ್ಯ
Last Updated 15 ಮೇ 2017, 8:30 IST
ಅಕ್ಷರ ಗಾತ್ರ
ಹನೂರು:  ನಾಲ್ಕು ದಿನಗಳ ಕಾಲ ನಡೆಯುವ ಆನೆ ಗಣತಿಗೆ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮ ಸಜ್ಜುಗೊಂಡಿದ್ದು, ಗಣತಿಗೆ ಅನುಕೂಲವಾಗುವಂತೆ ಸ್ಥಳ ವಿಸ್ತೀರ್ಣ ಹಾಗೂ ಬ್ಲಾಕ್‌ಗಳನ್ನು ನಿರ್ಮಿಸುವ ಕಾರ್ಯ ಅರಣ್ಯದೊಳಗೆ ಭರದಿಂದ ಸಾಗಿದೆ.
 
ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿರುವ ಕಾವೇರಿ ವನ್ಯಧಾಮ ಹಾಗೂ ಇದಕ್ಕೆ ಹೊಂದಿ
ಕೊಂಡಂತೆ ಇರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಇದೇ 16 ರಿಂದ ನಾಲ್ಕು ದಿನಗಳ ಕಾಲ ಆನೆ ಗಣತಿ ನಡೆಯಲಿದೆ.
 
ಆನೆಗಣತಿಯಲ್ಲಿ ಸ್ವಯಂಪ್ರೇರಿತಾಗಿ ಪಾಲ್ಗೊಳ್ಳಲು ಈಗಾಗಲೇ ಸ್ವಯಂ ಸೇವಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾವೇರಿ ವನ್ಯಧಾಮದಲ್ಲಿ 66 ಬ್ಲಾಕ್‌ಗಳನ್ನು  ಗುರುತು ಮಾಡಲಾಗಿದೆ. 5 ಚದರ ಕಿ.ಮೀ. ವಿಸ್ತೀರ್ಣವನ್ನು ಒಳಗೊಂಡಿರುವ ಪ್ರತಿ ಬ್ಲಾಕ್‌ನಲ್ಲಿಯೂ ಇಬ್ಬರು ಸಿಬ್ಬಂದಿ ಹಾಗೂ ಒಬ್ಬ ಸ್ವಯಂ ಸೇವಕ ಇರಲಿದ್ದಾರೆ. 
 
ಕಾವೇರಿ ವನ್ಯಧಾಮದಲ್ಲಿ 52 ಸ್ವಯಂ ಸೇವಕರು, 132 ಸಿಬ್ಬಂದಿಯನ್ನು ಮತ್ತು ಮಲೆಮಹದೇಶ್ವರ ವನ್ಯಧಾಮದಲ್ಲಿ 45 ಸ್ವಯಂ ಸೇವಕರು ಹಾಗೂ 112 ಸಿಬ್ಬಂದಿ ಮತ್ತು 5 ಸಂಪನ್ಮೂಲ ವ್ಯಕ್ತಿಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ.
 
ಆನೆ ಗಣತಿಯ ಮೊದಲನೆ ದಿನ ಆನೆಗಳು ಹೆಚ್ಚಾಗಿ ಸಂಚರಿಸುವ ದಾರಿ, ಗ್ರಾಮದೊಳಗೆ ಅವು ಪ್ರವೇಶಿಸುವ ಸ್ಥಳ, ಇವುಗಳನ್ನು ಸಿಬ್ಬಂದಿ ಸಹಾಯದಿಂದ ಪತ್ತೆ ಮಾಡಿ ನಂತರ ನಕ್ಷೆಯನ್ನು ತಯಾರಿಸಲಾಗುತ್ತದೆ. ಎರಡನೆ ದಿನ ಒಂದು ಬ್ಲಾಕ್‌ನಲ್ಲಿ ನಿಯೋಜಿಸಿರುವ ಮೂವರು ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸುತ್ತಾಟ ನಡೆಸುತ್ತಾರೆ.
 
ಈ ಸಮಯದಲ್ಲಿ ತಾವು ನೋಡಿದ ಆನೆ, ಸ್ಥಳ, ಸಮಯಗಳನ್ನು ಜಿಪಿಎಸ್‌ನಲ್ಲಿ ದಾಖಲಿಸಲಾಗುತ್ತದೆ. ಮೂರನೆಯ ದಿನ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಸಿಗುವ ಆನೆಗಳ ಲದ್ದಿಯ ಮಾದರಿ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಮಾದರಿಯನ್ನು ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಪರೀಕ್ಷಿಸಿ ಅದರ ಸಮಯ ತಿಳಿಯಲಾಗುತ್ತದೆ. ಇದರ ಆಧಾರದಲ್ಲಿ ಆನೆಗಳ ಸಂಖ್ಯೆ ನಮೂದಿಸಲಾಗುತ್ತದೆ. 
 
ಕಡೇ ದಿನ ಆಯಾ ಬ್ಲಾಕ್‌ನಲ್ಲಿರುವ ಕೆರೆಗಳ ಏರಿ ಮೇಲೆ ಸಂಜೆವರೆಗೆ ಕುಳಿತು, ನೀರು ಕುಡಿಯಲು ಬರುವ ಆನೆಗಳ ಗುಂಪಿನಲ್ಲಿ ಗಂಡು, ಹೆಣ್ಣು ಹಾಗೂ ಮರಿಯಾನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಇವು ನಾಲ್ಕು ದಿನಗಳ ಆನೆಗಣತಿಯಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು.  ಎರಡು ವನ್ಯಧಾಮಗಳಲ್ಲೂ ಈ ಪ್ರಕ್ರಿಯೆ ಯಥಾವತ್ತಾಗಿ ನಡೆಯಲಿವೆ.
 
ಮಲೆಮಹದೇಶ್ವರ ವನ್ಯಧಾಮ 7 ವಲಯಗಳಲ್ಲಿ ಈಗಾಗಲೇ ಶೇ 80ರಷ್ಟು ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ. ಸ್ವಯಂಪ್ರೇರಿತರಾಗಿ ಬರುವ ಸ್ವಯಂ ಸೇವಕರಿಗೆ ಮೇ16 ರಂದು ಕೆಲವು ಸಾಮಗ್ರಿಯನ್ನು ವಿತರಿಸಲಾಗುವುದು. ಈಗಾಗಲೇ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ. ಮಾಲತಿ ಪ್ರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.
****
ಸ್ವಯಂ ಸೇವಕರ ಕೊರತೆ
ಹನೂರು:
ಕಾವೇರಿ ವನ್ಯಧಾಮದಲ್ಲಿ ನಡೆಯುವ ಆನೆಗಣತಿಗೆ ಸ್ವಯಂ ಸೇವಕರ ಕೊರತೆ ಎದುರಾಗಿದೆ.

‘ಇನ್ನೂ 15 ಸ್ವಯಂ ಸೇವಕರ ಅಗತ್ಯವಿದೆ’ ಎಂದು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್‌ಕುಮಾರ್ ತಿಳಿಸಿದ್ದಾರೆ.  
ಚಾಮರಾಜನಗರ ಜಿಲ್ಲೆಯಲ್ಲಿ ವಾಸವಿದ್ದು, 18 ವರ್ಷ ಮೇಲ್ಪಟ್ಟ ಆಸಕ್ತ ವಿದ್ಯಾರ್ಥಿ, ಶಿಕ್ಷಕರು, ಸಮಾಜ ಸೇವಕರು ಆನೆಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು dcfcauvarywl@gmail.com ವಿಳಾಸಕ್ಕೆ ಮೇ 15 ಸಂಜೆ 5 ಗಂಟೆಯೊಳಗೆ ತಮ್ಮ ಸ್ವವಿವರ ಕಳುಹಿಸಬಹುದು. ಮಾಹಿತಿಗಾಗಿ 08224-253027 ಸಂಪರ್ಕಿಸ ಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT