ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಕೋಟೆಯಲ್ಲ ಐದು ಸುತ್ತಿನ ಚಕ್ರವ್ಯೂಹ!

Last Updated 15 ಮೇ 2017, 19:30 IST
ಅಕ್ಷರ ಗಾತ್ರ

-ಅನಿಲ್‌ಕುಮಾರ್‌ ಕಿತ್ತೂರ

**

‘ಈ ವರ್ಷದ ನನ್ನ ಪಯಣ ಕೋಟೆ–ಕೊತ್ತಲಗಳತ್ತ’ ಎಂಬುದು ನಿರ್ಧಾರವಾದ ಬಳಿಕ ನೋಡಲೇಬೇಕಾದ ಕೋಟೆಗಳ ಯಾದಿಯನ್ನು ಸಿದ್ಧಪಡಿಸುತ್ತಾ ಹೋದೆ. ಅದು ಹನುಮನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಯಾವ ಕೋಟೆಗೆ ಮೊದಲು ಹೋಗುವುದು ತಿಳಿಯದೆ ತಲೆ ಕೆರೆದುಕೊಳ್ಳುತ್ತಿದ್ದಾಗ ‘ಚಕ್ರವ್ಯೂಹ ಸ್ವರೂಪದ ತೋರಗಲ್‌ ಕೋಟೆಯನ್ನು ನೋಡಿರುವೆಯಾ’ ಎಂದು ಗೆಳೆಯರು ಪ್ರಶ್ನಿಸಿದರು. ಆ ಕ್ಷಣದಲ್ಲೇ ಗೊಂದಲವೆಲ್ಲ ದೂರವಾಗಿ ನನ್ನ ಕ್ಯಾಮೆರಾ ಹೆಗಲಿಗೇರಿದರೆ, ಬೈಕ್‌ ತೋರಗಲ್‌ ಕೋಟೆಯತ್ತ ಮುಖ ಮಾಡಿತು.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕು ತೋರಗಲ್‌ನಲ್ಲಿದೆ ಈ ಅಪರೂಪದ ಕೋಟೆ. ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ ಅಂದಾಜು ಹತ್ತು ಕಿ.ಮೀ. ಚಲಿಸಿದರೆ ಈ ಐತಿಹಾಸಿಕ ಊರು ಸಿಗುತ್ತದೆ. ದಾರಿಯುದ್ದಕ್ಕೂ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು. ಕೋಟೆಯ ಪಕ್ಕದಲ್ಲೇ ಇರುವ ಫ್ಯಾಕ್ಟರಿಗೆ ಅವುಗಳು ತೆರಪಿಲ್ಲದಂತೆ ಓಡಾಡುತ್ತಿದ್ದವು. ಅದರಲ್ಲೇ ಸ್ಥಳಾವಕಾಶ ಮಾಡಿಕೊಂಡು ಗುಡ್ಡ ಏರುತ್ತಾ ಹೋದಾಗ ದೂರದಿಂದಲೇ ಅಂದದ ಕೋಟೆ ಕಣ್ಣಿಗೆ ಬಿತ್ತು.

(ಅರಮನೆಯ ಭಗ್ನಾವಶೇಷಗಳು)

ಆಯಕಟ್ಟಿನ ಜಾಗ: ತೋರಗಲ್‌ ಕೋಟೆ ಎಂತಹ ಆಯಕಟ್ಟಿನ ಜಾಗದಲ್ಲಿದೆ ಗೊತ್ತೆ? ಮೂರೂ ದಿಕ್ಕುಗಳಲ್ಲಿ ಅದು ಕಲ್ಲಿನ ಗುಡ್ಡಗಳಿಂದ ಆವೃತವಾಗಿದೆ. ಮತ್ತೊಂದು ಬದಿಯಲ್ಲಿ ಮಲಪ್ರಭಾ ನದಿಯಿದೆ. ಸ್ಥಳೀಯವಾಗಿಯೇ ಸಿಕ್ಕ ಹಳದಿ–ಕೆಂಪು ಬಣ್ಣದ ಶಹಾಬಾದಿ ಕಲ್ಲುಗಳಿಂದ ನಿರ್ಮಿಸಲಾದ ಒಳ್ಳೆಯ ಮಜಬೂತಾದ ಕೋಟೆಯಿದು. ಶತ್ರುಗಳಿಂದ ರಕ್ಷಿಸಿಕೊಳ್ಳಲು ಕೋಟೆಯ ಸುತ್ತ ಅಂದಾಜು 20 ಅಡಿಗಳಷ್ಟು ಆಳ ಹಾಗೂ 15 ಅಡಿಗಳಷ್ಟು ಅಗಲದ ಕಂದಕ ಇದೆ. ಮಲಪ್ರಭಾ ನದಿ ಹಾಗೂ ಪಕ್ಕದ ಸರೋವರ ಎರಡರಿಂದಲೂ ಈ ಕಂದಕಕ್ಕೆ ನೇರವಾಗಿ ನೀರು ಹರಿಸುವಂತಹ ಸೌಲಭ್ಯವಿತ್ತಂತೆ. ಕೋಟೆಯ ಹೊರಭಾಗದಲ್ಲಿ ಕನ್ನಡ ಮತ್ತು ಪರ್ಷಿಯನ್‌ ಶಾಸನಗಳಿವೆ. ಅವುಗಳ ಮೂಲವನ್ನು ಹುಡುಕುತ್ತಾ ಹೊರಟರೆ ನಮ್ಮನ್ನು 16ನೇ ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತವೆ.

ಅಡಗುದಾಣಗಳು: ಕೋಟೆಯ ಹೊರಗಿನ ಚಲನವಲನ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿ 300 ಅಡಿಗಳಿಗೆ ಒಂದರಂತೆ ಅಡಗುದಾಣಗಳಿವೆ. ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಫಿರಂಗಿಗಳನ್ನು ಅಳವಡಿಸಿದ್ದ ಕುರುಹುಗಳಿವೆ. ಎರಡು ಫಿರಂಗಿಗಳು ಕೋಟೆ ಆವರಣದಲ್ಲಿ ಈಗಲೂ ಮಣ್ಣು ತಿನ್ನುತ್ತಾ ಬಿದ್ದುಕೊಂಡಿವೆ.

(ಚಿತ್ರಕೃಪೆ: ಗೂಗಲ್ ಅರ್ಥ್)

ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಬುರುಜು ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು ಆವರಿಸಿಬಿಡುತ್ತದೆ; ಅಷ್ಟೊಂದು ಆಹ್ಲಾದಕರ ವಾತಾವರಣ.

ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಅವರು ಯಾವ ಪಾತ್ರಧಾರಿಗಳು, ಏನು ಹೇಳಲು ಹೊರಟಿದ್ದಾರೆ ಎನ್ನುವುದು ಎಷ್ಟು ತಲೆ ಕೆರೆದುಕೊಂಡರೂ ಗೊತ್ತಾಗಲಿಲ್ಲ. ಇನ್ನೊಂದು ಕೆತ್ತನೆಯಲ್ಲಿ ಟೊಣಪ ಮೀನು ಮುಖ ಸಿಂಡರಿಸಿಕೊಂಡು ಮಲಗಿದ್ದರೆ, ಸಪೂರ ಮೀನು ಈಜಲು ಸನ್ನದ್ಧವಾಗಿದೆ. ಹೌದು, ಈ ಕಲಾಕೃತಿಗಳು ಯಾರಿಗೆ, ಯಾವ ಸಂದೇಶವನ್ನು ನೀಡುತ್ತಿವೆ?

ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತನಾಥ ದೇವಾಲಯ ಸಂಕೀರ್ಣ ಇದೆ. ಚಾಲುಕ್ಯರ ಶೈಲಿಯ ಕಟ್ಟಡ ಇದಾಗಿದ್ದು, ಸುಭದ್ರವಾಗಿದೆ. ಆದರೆ, ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ.

ರ್ಣಾವಸ್ಥೆಯಲ್ಲಿರುವ ಮಸೀದಿ ಸಹ ಇಲ್ಲಿದೆ. ಪಾಳುಬಿದ್ದ ಅರಮನೆ, ಕುದುರೆ ಲಾಯ, ನ್ಯಾಯಾಲಯ ಕಟ್ಟಡ, ನೆಲಮಹಡಿ ಗೋದಾಮುಗಳೆಲ್ಲ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿವೆ. ಮಾರುಕಟ್ಟೆಯಂತೆ ಹೋಲುವ ಭಗ್ನಾವಶೇಷವೊಂದು ಇಲ್ಲಿದ್ದು ಪ್ರಾಯಶಃ ಅದು ಆಗಿನ ಕಾಲದ ಶಸ್ತ್ರಾಗಾರ ಆಗಿದ್ದಂತೆ ತೋರುತ್ತದೆ.

ಕೋಟೆ ನಿರ್ಮಾಣಕ್ಕೆ ನಾಂದಿಹಾಡುವ ಮುಂಚೆ ಗ್ರಾಮದ ಮಲ್ಲಮ್ಮ ಎಂಬ ತುಂಬು ಗರ್ಭಿಣಿಯನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತಂತೆ. ಅಪಾರ ಪ್ರಮಾಣದ ದವಸ ಧಾನ್ಯದ ಎಡೆಯನ್ನೂ ಆಕೆಗೆ ನೀಡಲಾಗಿತ್ತು ಎಂಬ ಕಥೆ ಗ್ರಾಮದಲ್ಲಿ ಜನಜನಿತವಾಗಿದೆ. ಸಮಾಧಿ ಇದೆಯೆಂದು ಸ್ಥಳೀಯರು ತೋರಿಸುವ ಆ  ಜಾಗ ಕೋಟೆಯ ಉತ್ತರ ಭಾಗದಲ್ಲಿದೆ. ಸೋಜಿಗದ ಸಂಗತಿ ಏನೆಂದರೆ ಈ ಅಪರೂಪದ ಕೋಟೆಯ ಕುರಿತು ಬೆಳಗಾವಿ ಜಿಲ್ಲೆಯ  ಬಹುತೇಕ ಜನರಿಗೇ ಗೊತ್ತಿಲ್ಲ.

**

30 ಗ್ರಾಮಗಳಿಗೆ ಈಗಲೂ ಮಹಾರಾಜರು

ತೋರಗಲ್‌ ಜಹಗೀರ್‌ನಲ್ಲಿ 1932ರಿಂದ 1949ರವರೆಗೆ ಆಡಳಿತ ನಡೆಸಿದವರು ಕಿರಿಯ ನರಸೋಜಿರಾವ್‌ ಸಿಂಧೆ. ಅದಕ್ಕಿಂತ ಮುಂಚೆ ಸಿಂಧೆ ಮನೆತನದ ಎಂಟು ತಲೆಮಾರಿನವರು ಈ ಸಂಸ್ಥಾನವನ್ನು ಆಳಿದ್ದರು. 1949ರಲ್ಲಿ ಈ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ಒಂದಾಯಿತು.

ಆದರೆ, ತೋರಗಲ್‌ ಹಾಗೂ ಸುತ್ತಿನ 30ಕ್ಕೂ ಅಧಿಕ ಗ್ರಾಮಗಳ ಪಾಲಿಗೆ ಸಿಂಧೆ ಮನೆತನದ ಸಂಜಯ್‌ಸಿಂಗ್‌ ಈಗಲೂ ಮಹಾರಾಜರು. ಅರಮನೆ ಭಗ್ನಗೊಂಡಿದ್ದರೂ ಪಕ್ಕದಲ್ಲಿರುವ ವಾಡೆಯಲ್ಲಿ ಅವರು ವಾಸವಾಗಿದ್ದು, ಕೃಷಿಯಲ್ಲಿ ತೊಡಗಿದ್ದಾರೆ. ಸಿಂಧೆ ಮನೆತನದವರು ಎಲ್ಲಿಯೇ ಸಿಕ್ಕರೂ ‘ಮಹಾರಾಜರು’ ಎಂದು ಜನ ಅವರನ್ನು ಗೌರವದಿಂದ ಕರೆಯುತ್ತಾರೆ.

**

ಶಿವಾಜಿ ಸೈನ್ಯದ ಬೀಡು
ಭೂತಾಯಶ ಎಂಬ ರಾಜ ಕ್ರಿ.ಶ. 1100ರಲ್ಲಿ ತೋರಗಲ್‌ ಗ್ರಾಮವನ್ನು ನಿರ್ಮಾಣ ಮಾಡಿದರು. ಅವರೇ ಈ ಊರಿನ ಸುತ್ತ ಬೃಹದಾಕಾರದ ಕೋಟೆಯನ್ನೂ ಕಟ್ಟಿಸಿದರು ಎಂಬ ಪ್ರತೀತಿಯಿದೆ.

ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯ ವಿಸ್ತರಣೆ ಮಾಡಲು ದಂಡಯಾತ್ರೆ ಕೈಗೊಂಡಾಗ ಅಪ್ಪಾಜಿ ಸುರೋ ಮತ್ತು ಮಾಲಾಜಿ ಮೀರಾಸಾಹೇಬ್‌ ಭೋಸಲೆ ಎಂಬ ಯೋಧರ ನೇತೃತ್ವದಲ್ಲಿ 12 ತುಕಡಿ ಸೈನ್ಯವನ್ನು ದಕ್ಷಿಣದ ಕಡೆಗೆ ಕಳುಹಿಸಿಕೊಟ್ಟಿದ್ದರು. ಆ ಸೈನ್ಯ ತೋರಗಲ್‌ ಕೋಟೆಯಲ್ಲೇ ಬಿಡಾರ ಹೂಡಿತ್ತು. ರಾಜ್ಯ ವಿಸ್ತರಣೆಗೆ ಅದನ್ನೇ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು, ನರಗುಂದ ಸಂಸ್ಥಾನವನ್ನು ತನ್ನ ಕೈವಶ ಮಾಡಿಕೊಂಡಿತ್ತೆಂದು ದಾಖಲೆಗಳು ಹೇಳುತ್ತವೆ.

ಮೊದಲು ವಿಜಾಪುರದ ಆದಿಲ್‌ಷಾಹಿ, ಬಳಿಕ ಕೊಲ್ಲಾಪುರದ ಛತ್ರಪತಿಯವರ (ಶಿವಾಜಿ ಅವರ ಸೊಸೆ ತಾರಾಬಾಯಿ ಸ್ಥಾಪಿಸಿದ ರಾಜ್ಯ) ಮಾಂಡಲೀಕನಾಗಿ ಆಡಳಿತ ನಡೆಸಿದ ನರಸೋಜಿ ಸಿಂಧೆ ಅವರೇ ತೋರಗಲ್‌ ಸಂಸ್ಥಾನದ ಸಂಸ್ಥಾಪಕರು (ಸ್ಥಾಪನೆ: ಕ್ರಿ.ಶ. 1690). ನರಸೋಜಿ ಅವರ ಪುತ್ರಿ ಜೀಜಾಬಾಯಿಯನ್ನು ಕೊಲ್ಲಾಪುರ ರಾಜಪುತ್ರನಾದ ಸಂಭಾಜಿಯವರು ವಿವಾಹವಾಗಿದ್ದರು. ಹೀಗಾಗಿ ಈ ರಾಜ್ಯದ ಮಾಂಡಲೀಕರಲ್ಲಿ ತೋರಗಲ್‌ ಸಂಸ್ಥಾನದವರಿಗೆ ಮಹತ್ವದ ಸ್ಥಾನವಿತ್ತು. ನರಸೋಜಿ ಅವರಿಗೆ ‘ಸೇನಾ ಖಾಸ್‌ ಖೇಲ್‌’ ಎಂಬ ಬಿರುದು ನೀಡಲಾಗಿತ್ತು.

ಆ ದಿನಗಳಲ್ಲಿ ತೋರಗಲ್‌ನಲ್ಲಿ ಜನದಟ್ಟಣೆ ಹೆಚ್ಚಾಗಿತ್ತು ಎನ್ನುತ್ತವೆ ದಾಖಲೆಗಳು. ಆದರೆ, ಈಗಿನ ಜನಸಂಖ್ಯೆ ಕೇವಲ ಸಾವಿರದಷ್ಟಿದೆ!

(ಐತಿಹಾಸಿಕ ಮಾಹಿತಿ: ಬಿ.ಜಿ. ಪಾಟೀಲರು ಕೊಲ್ಲಾಪುರ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧ)

**

ನಿರೂಪಣೆ: ಪಿ.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT