ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಾಪುರ ನುಗ್ಗೆ ವಿದೇಶಕ್ಕೆ ಲಗ್ಗೆ

Last Updated 15 ಮೇ 2017, 19:30 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಅವಿನಾಶ ಕೋರಾ ಎಂಬ ಯುವರೈತನ ಎಂಟು ಎಕರೆ ತೋಟವಿದೆ. ಅದಕ್ಕೆ ಅಶೋಕವನ ಎಂಬ ಹೆಸರಿಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ತೋಟದ ತುಂಬಾ ವಿವಿಧ ಹಣ್ಣಿನ ಗಿಡಗಳು. ಭವಿಷ್ಯದಲ್ಲಿ ಕೈತುಂಬ ಕಾಸು ತಂದುಕೊಡುವ ಅರಣ್ಯ ಕೃಷಿ ಸಹ ಅಲ್ಲಿ ನಡೆದಿದೆ.

ಹಣ್ಣಿನ ಗಿಡಗಳ ಸಾಲಿನಿಂದ ಸಾಲಿನ ನಡುವೆ ಎಂಟು ಅಡಿಗಳ ಅಂತರವಿದೆ. ಮಧ್ಯದಲ್ಲಿರುವ ಭೂಮಿ ಹಣ್ಣಿನ ಗಿಡಗಳಿಗೆ ನೀಡಿದ ಗೊಬ್ಬರ ತಿಂದು, ನೀರು ಕುಡಿದು ಕೊಬ್ಬಿದೆ. ಈ ನೆಲವನ್ನು ಪುಕ್ಕಟೆ ಯಾಕೆ ಬಿಡಬೇಕು ಎಂಬ ಯೋಚನೆ ಮೊಳಕೆಯೊಡೆದಿದ್ದೇ ತಡ ಅವಿನಾಶ, ಆರು ಎಕರೆ ಪ್ರದೇಶದಲ್ಲಿ ನುಗ್ಗೆ ಬೀಜ ಊರಿದ್ದರು. ಆ ಬೆಳೆ ಮೂರು ತಿಂಗಳ ಅವಧಿಯಲ್ಲಿ ₹ 3ಲಕ್ಷ ಆದಾಯ ತಂದು ರೈತ ಹಿರಿಹಿರಿ ಹಿಗ್ಗುವಂತೆ ಮಾಡಿದೆ. ಬಹುತೇಕ ಉಳಿದ ಬೆಳೆಗಳಿಗೆ ಮಾಡಿದ ಖರ್ಚು ಈ ನುಗ್ಗೆಯೇ ತಂದುಕೊಟ್ಟಿದೆ ಎಂದು ಅವರು ಹೇಳುತ್ತಾರೆ.

ಅವಿನಾಶ ಅವರಿಗೆ ಹಣ್ಣುಗಳು ಮುಖ್ಯಬೆಳೆಯಾದರೆ ನುಗ್ಗೆ ಉಪಬೆಳೆ. ಕಡಿಮೆ ತೇವಾಂಶದಲ್ಲಿ ಹೆಚ್ಚು ಬೆಳೆಯುವ ನುಗ್ಗೆ ರೈತರಿಗೆ ಒಂದು ವರವೇ ಸರಿ. ರಾಸಾಯನಿಕ ಗೊಬ್ಬರದ ಘಾಟು ಇಲ್ಲ, ಕ್ರಿಮಿನಾಶಕದ ಕಿರಿಕಿರಿ ಇಲ್ಲ. ಅವಿನಾಶ ಅವರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಟ್ಟಿದೆ ನುಗ್ಗೆ.

‘ಎಂಟು ವರ್ಷದ ನಂತರ ಬರುವ ಹೆಬ್ಬೇವು ಬೆಳ್ಳಿಯಾದರೆ, 12 ವರ್ಷದ ನಂತರ ಬರುವ ಶ್ರೀಗಂಧ ಬಂಗಾರವಿದ್ದಂತೆ. ಇನ್ನು ರಕ್ತಚಂದನ ವಜ್ರಕ್ಕೆ ಸರಿಸಾಟಿ’ ಎನ್ನುತ್ತಾರೆ ಅವಿನಾಶ. ತಲಾ 500ರಂತೆ ಲಿಂಬೆ, ಪೇರಲ, ಸೀತಾಫಲ, ನೇರಲೆ, ರಕ್ತ ಚಂದನ, ಹೆಬ್ಬೇವು, ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದಾರೆ. ಆರು ಎಕರೆಯಲ್ಲಿ ಎರಡೂವರೆ ಸಾವಿರ ಹಣ್ಣಿನ ಸಸಿಗಳು ಹಾಗೂ ಸುಮಾರು ನಾಲ್ಕುಸಾವಿರ ಇತರ ಸಸಿಗಳು ಹನಿ ನೀರಾವರಿಯಲ್ಲಿ ಬೆಳೆಯುತ್ತಿವೆ.

(ನುಗ್ಗೆಕಾಯಿಗಳನ್ನು ಮಾರುಕಟ್ಟೆಗೆ ಸಾಗಿಸಲು ನಡೆದ ತಯಾರಿ)

ನೇರವಾಗಿ ಬೀಜ ಊರಿದರು
ನುಗ್ಗೆ ಬೀಜಗಳನ್ನು ಸಸಿಗಳನ್ನಾಗಿಸಿಕೊಂಡು ನಾಟಿ ಮಾಡುವುದು ಸಾಮಾನ್ಯ. ಆದರೆ ಅಧಿಕ ಖರ್ಚು ಮಾಡುವುದಾದರೂ ಏಕೆ, ಒಂದು ಪ್ರಯೋಗ ಮಾಡೋಣ ಎಂದು ಅವಿನಾಶ ನೇರವಾಗಿ ಎರಡೂವರೆ ಕೆ.ಜಿ ಬೀಜಗಳನ್ನು ಊರಿದ್ದರು. ಹಾಳಾಗಿದ್ದು ಸುಮಾರು 50 ಸಸಿಗಳಷ್ಟೆ. ಉಳಿದವುಗಳು ಚೆನ್ನಾಗಿ ಬೆಳೆದು ನಿಂತಿವೆ. ಒಂದೊಂದು ಗಿಡ 200ರಿಂದ 250 ಕಾಯಿಗಳಿಂದ ತುಂಬಿ ಜೀಕುತ್ತಿದೆ. ಅವಿನಾಶ ಅವರಿಗೆ ಅದನ್ನು ತೋರಿಸುವುದೇ ಒಂದು ಸಂಭ್ರಮ.

‘ನುಗ್ಗೆ ಕೃಷಿಗಾಗಿ ಖರ್ಚು ಮಾಡಿದ್ದು ₹ 40 ಸಾವಿರ ಮಾತ್ರ. ಬಂದ ಲಾಭ ₹ 3 ಲಕ್ಷ! ಆದರೆ, ಬೆವರುಹರಿಸಿ ಬೆಳೆಯುವುದರ ಜೊತೆಗೆ ಉತ್ತಮ ಮಾರುಕಟ್ಟೆ ಹುಡುಕುವುದು, ಸ್ಪರ್ಧಾತ್ಮಕ ಬೆಲೆ ತರುವುದು ಮುಖ್ಯವಾಗಿದೆ’ ಎಂದು ಅವರು ಹೇಳುತ್ತಾರೆ. ಅವಿನಾಶ ಹೇಳಿಕೇಳಿ ವ್ಯಾಪಾರಸ್ಥರೂ ಹೌದು. ಮೂರು ದಿನಕ್ಕೊಮ್ಮೆ ಅವರ ತೋಟದಲ್ಲಿ ನುಗ್ಗೆಕಾಯಿಯ ಜಾತ್ರೆಯೇ ನಡೆಯುತ್ತದೆ. ಹತ್ತಾರು ಜನ ಕಾಯಿಗಳನ್ನು ಕೊಯ್ಲು ಮಾಡಿದರೆ, ಅಷ್ಟೇ ಸಂಖ್ಯೆಯ ಕಾರ್ಮಿಕರು ತೂಕಮಾಡಿ ಹತ್ತು ಕೆ.ಜಿಯ ಪ್ಯಾಕೆಟ್‌ಗಳನ್ನು ಸಿದ್ಧಪಡಿಸುತ್ತಿರುತ್ತಾರೆ. ವಾರದಲ್ಲಿ ಎರಡು ದಿನ ಬಿಡುವಿಲ್ಲದ ಕೆಲಸ. ನುಗ್ಗೆಕಾಯಿಯ ತಾಜಾತನ ಉಳಿಯಲು ಮಾರುಕಟ್ಟೆ ತಲುಪುವವರೆಗೆ ಸಾಕಷ್ಟು ಜಾಗೃತಿ ವಹಿಸುವುದೇ ಕೈತುಂಬ ಕಾಸು ಬರಲು ಕಾರಣ.

ಬಂಪರ್‌ ಫಸಲು
25 ಟನ್‌ ನುಗ್ಗೆ ಫಸಲು ಬಂದಿದ್ದು ಮುಂದಿನ ಅವಧಿಗೆ ಇದಕ್ಕಿಂತಲೂ ಹೆಚ್ಚು ಫಲ ಬರುವ ನಿರೀಕ್ಷೆಯಿದೆ. ಏಕೆಂದರೆ ಗಿಡಗಳೆಲ್ಲ ಮತ್ತೆ ಹೂವು ಹೊದ್ದು ನಿಂತಿವೆ. ಬೇಸಿಗೆ ನುಗ್ಗೆ ಹಿಗ್ಗಿನಿಂದ ಬಂದರೆ ಚಳಿಗಾಲಕ್ಕೆ ಕೊಂಚ ಮುದುಡಿಕೊಳ್ಳುತ್ತದೆ. ಈ ಕಾರಣವಾಗಿಯೇ ಆ ಸಮಯದಲ್ಲಿ ಪ್ರತಿ ಕೆ.ಜಿ ನುಗ್ಗೆಗೆ ಸುಮಾರು ₹40ರಷ್ಟು ದರ ದೊರಕುತ್ತದೆ. ಮುಂದಿನ ಬೆಳೆ ಚಳಿಗಾಲಕ್ಕೆ ಬರುವಂತೆ ವ್ಯವಸ್ಥೆ ಮಾಡುತ್ತಿದ್ದೇನೆ’ ಎಂದು ಅವಿನಾಶ ಹೇಳುತ್ತಾರೆ.

ನುಗ್ಗೆ ಬೆಳೆಗಿಂತ ಮೊದಲು ಇದೇ ರೀತಿಯಾಗಿ ಹಣ್ಣಿನ ಬೆಳೆಗಳ ಮಧ್ಯೆ ಹಾಕಿದ ಚೆಂಡು ಹೂವು ಬೆಳೆ ₹45 ಸಾವಿರ ಲಾಭ ತಂದುಕೊಟ್ಟಿತ್ತು. ಪರಾವಲಂಬಿ ಸಸ್ಯ ಗಂಧದ ಸಸ್ಯಗಳ ಸಂರಕ್ಷಣೆಗಾಗಿ ಹಾಕಿದ್ದ ತೊಗರಿ ಬೆಳೆಯೂ ಇವರ ಕೈಹಿಡಿದಿತ್ತು.

ಆರಂಭದಲ್ಲಿ ನುಗ್ಗೆ ಫಸಲನ್ನು ಸ್ಥಳೀಯ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದರು. ಆದರೆ, ನಿರೀಕ್ಷಿತ ಬೆಲೆ ದೊರಕದ ಕಾರಣ ಅಂತರ್ಜಾಲದ ಮೂಲಕ ಬೆಳಗಾವಿಯ ತರಕಾರಿ ರಫ್ತು ಮಾಡುವ ವ್ಯಾಪಾರಿಯೊಬ್ಬರ ಸಂಪರ್ಕ ದೊರಕಿಸಿಕೊಂಡರು. ವ್ಯವಸ್ಥಿತವಾಗಿ ಫಸಲು ಕಳಿಸಿದರೆ ಪ್ರತಿ ಕೆ.ಜಿಗೆ ₹ 12ರಂತೆ ಖರೀದಿಸುವುದಾಗಿ ಆ ವ್ಯಾಪಾರಿ ಹೇಳಿದರು. ಅದೇ ರೀತಿ ವಾರಕ್ಕೆ ಎರಡು ಬಾರಿಯಂತೆ ಸುಮಾರು ಎರಡರಿಂದ ಮೂರು ಟನ್‌ವರೆಗೆ ನುಗ್ಗೆ ಫಸಲು ಹೋಗುತ್ತಿದೆ. ಇತ್ತ ತೂಕ ಮಾಡಿದ ಮರುಗಳಿಗೆಯಲ್ಲಿಯೇ ಬ್ಯಾಂಕ್‌ ಖಾತೆಗೆ ಹಣ ಜಮೆಯಾದರೆ, ಅತ್ತ ನುಗ್ಗೆಕಾಯಿ ವಿಮಾನ ಏರಿ ವಿದೇಶಕ್ಕೆ ಹಾರಿ ಹೋಗುತ್ತಿರುತ್ತದೆ.

(ನುಗ್ಗೆ ಬೆಳೆಯೊಂದಿಗೆ ರೈತ ಅವಿನಾಶ ಕೋರಾ)

‘ಎಲ್ಲವೂ ಆನ್‌ಲೈನ್‌ ಮೂಲಕ ನಡೆಯುವುದರಿಂದ ನಮಗೆ ಸ್ಪರ್ಧಾತ್ಮಕ ಬೆಲೆ ಸಿಗಲು ಸಾಧ್ಯವಾಗಿದೆ. ರೈತರು ಉತ್ತಮ ಫಸಲು ಬಂದರೂ ಮಾರುಕಟ್ಟೆಯ ಮಾಹಿತಿ ಇಲ್ಲದ ಕಾರಣವಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಸೊರಗುತ್ತಿದ್ದಾರೆ’ ಎಂದು ಕೋರಾ ಹೇಳುತ್ತಾರೆ.

ಉತ್ತಮ ಮಾರ್ಗದರ್ಶನ ಪಡೆದು ಪ್ಯಾಕಿಂಗ್‌, ಗುಣಮಟ್ಟದ ಕಾಯಿಗಳ ಕೊಯ್ಲು, ಸಮಯಕ್ಕೆ ಸರಿಯಾಗಿ ಸಾಗಾಣಿಕೆ ಮಾಡಿದರೆ ರೈತರು ನಿರೀಕ್ಷಿಸಿದ ಬೆಲೆಯನ್ನು ಪಡೆಯಬಹುದಾಗಿದೆ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ.

‘ಜಿಗುಟು ಮಣ್ಣು ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಮಣ್ಣಿನಲ್ಲಿ ಬೆಳೆಯಲು ಮುಂದಿರುವ ನುಗ್ಗೆ ಮಧ್ಯಮವರ್ಗದ ರೈತರಿಗಂತೂ ಹೇಳಿಮಾಡಿಸಿದ ಉಪಬೆಳೆ. ಇಲ್ಲಿನ ಮಣ್ಣು, ನೀರು, ಉಷ್ಣ ಹವಾಮಾನ ನುಗ್ಗೆ ಬೆಳೆಗೆ ಸೂಕ್ತವಾಗಿದೆ’ ಎಂದು ಅವಿನಾಶ ಅವರಿಗೆ ಮಾರ್ಗದರ್ಶನ ಮಾಡಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗನಗೌಡ ಪಾಟೀಲ ಹೇಳುತ್ತಾರೆ.
ಅವಿನಾಶ ಅವರ ಸಂಪರ್ಕಕ್ಕೆ: 9901885899

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT