ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಕಾ ರಾಜ್ಯಭಾರದಲಿ ಕೃಷಿ ತಯಾರಿ ಹೀಗಿರಲಿ

Last Updated 15 ಮೇ 2017, 19:30 IST
ಅಕ್ಷರ ಗಾತ್ರ

ಪೂರ್ವ ಮುಂಗಾರು ಋತುವಿನಲ್ಲಿ ಕೃತಿಕಾ ಮತ್ತು ರೋಹಿಣಿ ಸರಾಸರಿ ಪ್ರಮಾಣದ ಮಳೆಯನ್ನೇ ತರುವ ನಿರೀಕ್ಷೆ ಇದೆ. ಕೃತಿಕಾ (ಮೇ 11–ಮೇ 24) ಸರಾಸರಿ 46.6 ಮಿ.ಮೀ ಹಾಗೂ ರೋಹಿಣಿ (ಮೇ 25–ಜೂನ್7) ಸರಾಸರಿ 55.2 ಮಿ.ಮೀ ಮಳೆ ಸುರಿಸುವ ಮುನ್ಸೂಚನೆಯಿದೆ.

ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯು ಬಿರುಸಾಗಿದ್ದು ಏಪ್ರಿಲ್‌ ಕೊನೆಯ ವಾರದಿಂದ ಮಳೆ ಬೀಳತೊಡಗಿದೆ. ಈ ಪ್ರದೇಶಗಳಲ್ಲಿ ಎರಡು ಬೆಳೆ ಬೆಳೆಯುವ ಪದ್ಧತಿ ವಾಡಿಕೆಯಲ್ಲಿದೆ. ಎರಡು ಬೆಳೆ ಪದ್ಧತಿಯನ್ನು ಅನುಸರಿಸುವ ರೈತರು ಮಳೆನೀರನ್ನು ಸಂರಕ್ಷಣೆ ಮಾಡಿಕೊಂಡು ವರ್ಷದಲ್ಲಿ ಎರಡು ಬೆಳೆಗಳನ್ನು ಖುಷ್ಕಿ ಪ್ರದೇಶದಲ್ಲಿಯೂ ತೆಗೆಯಬಹುದು.

ರಾಜ್ಯದ ಮಧ್ಯದ ಒಣ ಪ್ರದೇಶದಲ್ಲಿ (ಚಿತ್ರದುರ್ಗ, ದಾವಣಗೆರೆ, ಹಾಸನ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆ) ಮೊದಲನೇ ಬೆಳೆಯಾಗಿ ಹೈಬ್ರೀಡ್ ಸಜ್ಜೆ, ತೃಣ ಧಾನ್ಯ, ಹೆಸರು, ಅಲಸಂದೆ ಅಥವಾ ಉದ್ದು ಬೆಳೆಯುವುದು ಲಾಭದಾಯಕ.

ಪೂರ್ವ ಒಣ ಪ್ರದೇಶದಲ್ಲಿ (ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಪೂರ್ಣ ಹಾಗೂ ತುಮಕೂರು ಜಿಲ್ಲೆ ಭಾಗಶಃ) ಮೊದಲ ಬೆಳೆಯಾಗಿ ಎಳ್ಳು, ಹುಚ್ಚೆಳ್ಳು, ಅಲಸಂದೆ, ಮೇವಿನ ಮುಸುಕಿನ ಜೋಳ ಅಥವಾ ನೆಲಗಡಲೆಯಂತಹ ಅಲ್ಪಾವಧಿ ಬೆಳೆಗಳನ್ನು ಮೇ ತಿಂಗಳ ಎರಡನೇ ವಾರದಿಂದ ಜೂನ್ ಮೊದಲ ವಾರದವರೆಗೆ ಬಿತ್ತನೆ ಮಾಡುವುದು ಸೂಕ್ತ. ಈ ಬೆಳೆಗಳು ಆಗಸ್ಟ್‍ ಎರಡನೇ ಅಥವಾ ಮೂರನೇ ವಾರದಲ್ಲಿ ಕಟಾವಿಗೆ ಬರುತ್ತವೆ. ಕಟಾವು ಮಾಡಿದ ತಕ್ಷಣ ಸಸಿ ಮಡಿಯಲ್ಲಿ ಸಿದ್ಧವಾಗಿರುವ ರಾಗಿಯನ್ನು ನಾಟಿ ಮಾಡಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಅಲಸಂದೆ, ಸೆಣಬು, ಇನ್ನಿತರ ದ್ವಿದಳ ಬೆಳೆಗಳನ್ನು ಹಸಿರೆಲೆ ಗೊಬ್ಬರದ ಬೆಳೆಯಾಗಿ ಹಾಕಬಹುದು. ಮೇ ತಿಂಗಳಲ್ಲಿ ದೀರ್ಘಾವಧಿ ಬೆಳೆ ತೊಗರಿಯನ್ನು ಏಕಬೆಳೆಯಾಗಿ ಬೆಳೆದರೆ ಹೆಚ್ಚು ಲಾಭದಾಯಕ. ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಆಳ ಕಡಿಮೆ ಇರುವ ಕಡೆಯಲ್ಲಿ ತೊಗರಿ, ಹರಳಿನ ಬದಲಾಗಿ ಎಳ್ಳು, ಅಲಸಂದೆ ಅಥವಾ ನೆಲಗಡಲೆಯನ್ನು ಬೆಳೆಯುವುದು ಅನುಕೂಲಕರ.

ದಕ್ಷಿಣ ಒಣ ಪ್ರದೇಶಗಳಲ್ಲಿ (ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳು ಪೂರ್ಣ ಮತ್ತು ತುಮಕೂರು, ಹಾಸನ ಜಿಲ್ಲೆಗಳು ಭಾಗಶಃ) ಹುರಳಿ, ಎಳ್ಳು, ಹೆಸರು, ಅಲಸಂದೆ, ಉದ್ದು ಹಾಗೂ ಹೆಚ್ಚು ತೇವಾಂಶ ಒದಗಿಸುವ ಗೋಡು ಮಣ್ಣಿನ ಪ್ರದೇಶಗಳಲ್ಲಿ ಸೂರ್ಯಕಾಂತಿ, ಹರಳು ಮತ್ತು ತೃಣ ಧಾನ್ಯಗಳನ್ನು ಮೊದಲನೇ ಬೆಳೆಯಾಗಿ ಬಿತ್ತನೆ ಮಾಡುವುದು ಒಳಿತು.

ಅರೆ ಮಲೆನಾಡು ಪ್ರದೇಶದಲ್ಲಿ (ಶಿವಮೊಗ್ಗ ಜಿಲ್ಲೆ ಪೂರ್ಣ, ಹಾಸನ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ ಜಿಲ್ಲೆಗಳು ಭಾಗಶಃ) ಮಳೆಯ ವಿತರಣೆ ಚೆನ್ನಾಗಿ ಇರುವುದರಿಂದ ಸಾಮಾನ್ಯವಾಗಿ ಎರಡು ಬೆಳೆ ಪದ್ಧತಿಯು ವಾಡಿಕೆಯಲ್ಲಿದೆ. ಮೊದಲ ಬೆಳೆಯಾಗಿ ಹೈಬ್ರೀಡ್‌, ಸಜ್ಜೆ, ಹೊಗೆಸೊಪ್ಪು, ಆಲೂಗಡ್ಡೆ, ಮೆಣಸಿನ ಕಾಯಿ, ಶೇಂಗಾ, ಎಳ್ಳು, ತೃಣಧಾನ್ಯ ಹಾಗೂ ಅಲ್ಪಾವಧಿ ಬೇಳೆ ಕಾಳುಗಳನ್ನು ಬೆಳೆಯುವುದು ಉತ್ತಮ.

ಉತ್ತರ ಅರೆ ಮಲೆನಾಡು ಪ್ರದೇಶದಲ್ಲಿ (ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳು) ಶೇಂಗಾ, ಸೋಯಅವರೆ, ಸೂರ್ಯಕಾಂತಿ, ಎಳ್ಳು, ಸಾಮೆ, ಸಜ್ಜೆ, ದ್ವಿದಳ ಧಾನ್ಯಗಳನ್ನು ಮೊದಲನೆ ಬೆಳೆಯಾಗಿ ಬೆಳೆಯಬಹುದು.

ಸಾಮಾನ್ಯವಾಗಿ ದ್ವಿದಳ ಬೆಳೆಗಳು (ಅಲಸಂದೆ, ಉದ್ದು, ಹೆಸರು) ಹೆಕ್ಟೇರಿಗೆ 20-30 ಕೆ.ಜಿ ಸಾರಜನಕವನ್ನು ಸ್ಥೀರಿಕರಿಸುತ್ತವೆ. ಮುಂಗಾರಿನಲ್ಲಿ ಹೊದಿಕೆ ಬೆಳೆಗಳಾಗಿ ಮಣ್ಣಿನ ಸಂರಕ್ಷಣೆಯನ್ನು ಮಾಡುತ್ತವೆ. ಮಳೆಯ ಮುನ್ಸೂಚನೆಯನ್ನು ಅನುಸರಿಸಿ ರೈತರು ಸೂಕ್ತ ಬೆಳೆ ಪದ್ಧತಿಗಳನ್ನು ಕೈಗೊಂಡರೆ ಉತ್ತಮ ಇಳುವರಿಯನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT