ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಶ್ರೀಲಂಕಾ ಭೇಟಿ ಸಂಬಂಧ ಸುಧಾರಣೆಯ ಹೆಜ್ಜೆ

Last Updated 15 ಮೇ 2017, 20:16 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಶ್ರೀಲಂಕಾ ಭೇಟಿ ಮಹತ್ವದ ಒಪ್ಪಂದಗಳಿಗೆ ವೇದಿಕೆಯಾಗದಿದ್ದರೂ, ಉಭಯ ದೇಶಗಳ ನಡುವಣ ಸೌಹಾರ್ದ ಸಂಬಂಧ ರೂಪಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಮೋದಿ ಅವರ ಎರಡನೇ ಶ್ರೀಲಂಕಾ ಭೇಟಿ ಇದಾಗಿದ್ದು, ಪ್ರಸಕ್ತ ಭೇಟಿ ಅವರು ಪಾಲಿಸಿಕೊಂಡು ಬಂದಿರುವ ‘ನೆರೆಹೊರೆ ನೀತಿ’ಗೆ ಅನುಗುಣವಾಗಿದೆ ಹಾಗೂ ಶ್ರೀಲಂಕಾದೊಂದಿಗೆ ಸಂಬಂಧ ಸುಧಾರಣೆಗೆ ಅನುಕೂಲಕರವಾಗಿದೆ.

ನೆರೆದೇಶದೊಂದಿಗಿನ ಸಂಬಂಧ ಸುಧಾರಣೆಗೆ ಮೋದಿ ಅವರು ‘ಸಾಂಸ್ಕೃತಿಕ’ ಸಂಗತಿಗಳನ್ನು ಬಳಸಿಕೊಂಡಿರುವುದು ವಿಶೇಷ. ಕೊಲಂಬೊದಲ್ಲಿ ನಡೆದ ‘ಬುದ್ಧ ಪೂರ್ಣಿಮೆ’ ಕಾರ್ಯಕ್ರಮದಲ್ಲಿ, ಕೊಲಂಬೊ ಮತ್ತು ವಾರಾಣಸಿ ನಡುವೆ ‘ಏರ್‌ ಇಂಡಿಯಾ’ ನೇರ ವಿಮಾನ ಸಂಪರ್ಕ ಕಲ್ಪಿಸಲಿದೆ ಎಂದು ಅವರು ಹೇಳಿದ್ದಾರೆ.

ಬೌದ್ಧರ ಪ್ರಮುಖ ಯಾತ್ರಾಸ್ಥಳಗಳಲ್ಲೊಂದಾದ ಸಾರಾನಾಥಕ್ಕೆ ವಾರಾಣಸಿಯಿಂದ ಕೇವಲ 10 ಕಿ.ಮೀ. ದೂರ ಎನ್ನುವುದು ಈ ವಿಮಾನಯಾನ ಪ್ರಕಟಣೆಗೆ ವಿಶೇಷ ಮಹತ್ವ ತಂದುಕೊಟ್ಟಿದೆ. ಉದ್ದೇಶಿತ ವಿಮಾನಯಾನದಿಂದಾಗಿ ಶ್ರೀಲಂಕಾದಲ್ಲಿನ ಬೌದ್ಧಧರ್ಮದ ಅಪಾರ ಅನುಯಾಯಿಗಳು ಸಾರಾನಾಥಕ್ಕೆ ಬಂದುಹೋಗುವುದು ಸಲೀಸಾಗಲಿದೆ.

ಬುದ್ಧ ಜನಿಸಿದ ಲುಂಬಿನಿ ಪ್ರದೇಶ ನೇಪಾಳದಲ್ಲಿದ್ದರೂ, ಬುದ್ಧನಿಗೆ ಜ್ಞಾನೋದಯವಾದ ಸ್ಥಳ, ಮೊದಲು ಬೋಧನೆ ಮಾಡಿದ ಸ್ಥಳ, ಬುದ್ಧನ ಸಾವು– ಇವುಗಳೆಲ್ಲ ನಡೆದುದು ಭಾರತದಲ್ಲಿಯೇ. ಗುರುವಿನ ಸಂದೇಶಗಳೊಂದಿಗೆ ಬೌದ್ಧಭಿಕ್ಷುಗಳು ಮೊದಲು ಪ್ರಯಾಣ ಮಾಡಿದ್ದು ಶ್ರೀಲಂಕಾಗೆ. ಎರಡೂ ದೇಶಗಳ ನಡುವಣ ಪ್ರಬಲ ಸಾಂಸ್ಕೃತಿಕ ಕೊಂಡಿಯಾದ ಈ ‘ಬೌದ್ಧ ನಂಟು’ ನವೀಕರಿಸುವ ಪ್ರಯತ್ನವನ್ನು ಮೋದಿ ಮಾಡಿದಂತಿದೆ.

ಚೀನಾ ಕೂಡ ‘ಬೌದ್ಧ ಸಂಬಂಧ’ದ ಮೂಲಕ ಶ್ರೀಲಂಕಾದೊಂದಿಗೆ ಸ್ನೇಹ ಸಾಧಿಸುವ ತಂತ್ರಗಾರಿಕೆ ಪ್ರದರ್ಶಿಸಿದೆ. ಬುದ್ಧನ ‘ಸದ್ಧರ್ಮ ಪುಂಡರೀಕ ಸೂತ್ರ’ (ಲೋಟಸ್‌ ಸೂತ್ರ) ನೆನಪಿಸುವ ‘ಲೋಟಸ್‌ ಟವರ್‌’ ಎನ್ನುವ ಬೃಹತ್‌ ಟೆಲಿಕಮ್ಯುನಿಕೇಷನ್‌ ಗೋಪುರವನ್ನು ಕೊಲಂಬೊದಲ್ಲಿ ನಿರ್ಮಿಸಲು  ಚೀನಾ ನೆರವು ನೀಡಿತ್ತು. ಮಹೀಂದ್ರ ರಾಜಪಕ್ಸೆ ಅವರು ಶ್ರೀಲಂಕಾದ ಅಧ್ಯಕ್ಷರಾಗಿದ್ದಾಗ ಚೀನಾದೊಂದಿಗಿನ ಮೈತ್ರಿಗೆ ಅವರು ಹೆಚ್ಚು ಒಲವು ವ್ಯಕ್ತಪಡಿಸಿದ್ದರು.

ಭಾರತಕ್ಕೆ ಆತಂಕ ಮೂಡಿಸುವಂತೆ, ಚೀನಾದ ಸಬ್‌ಮೆರಿನ್‌ಗಳಿಗೆ ಕೊಲಂಬೊದ ರೇವಿನಲ್ಲಿ 2014ರಲ್ಲಿ ನೆಲೆ ಕಲ್ಪಿಸಲಾಗಿತ್ತು. ಚೀನಾ ಮತ್ತು ಭಾರತಗಳಿಗೆ ಶ್ರೀಲಂಕಾ ಆಯಕಟ್ಟಿನ ಪ್ರದೇಶವಾದುದರಿಂದ, ದ್ವೀಪರಾಷ್ಟ್ರದೊಂದಿಗಿನ ಸ್ನೇಹ ಎರಡು ದೇಶಗಳಿಗೂ ಮುಖ್ಯವಾದುದು.

ರಾಜೀವ್‌ ಗಾಂಧಿ ಹತ್ಯೆಯ ನಂತರ ಶ್ರೀಲಂಕಾ–ಭಾರತ ನಡುವಣ ದ್ವಿಪಕ್ಷೀಯ ಸಂಬಂಧದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿರಲಿಲ್ಲ. ಕಳೆದ ಎರಡೂವರೆ ದಶಕಗಳಲ್ಲಿ ಭಾರತದ ಯಾವೊಬ್ಬ ಪ್ರಧಾನಿಯೂ ನೆರೆಯ ದ್ವೀಪರಾಷ್ಟ್ರಕ್ಕೆ ಭೇಟಿಕೊಟ್ಟಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೋದಿ ಅವರ ಎರಡು ಭೇಟಿಗಳು ಮಹತ್ವ ಗಳಿಸಿವೆ. ಪ್ರಸ್ತುತ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಕೂಡ ಭಾರತದೊಂದಿಗೆ ಸ್ನೇಹ–ಸಂಬಂಧ ವೃದ್ಧಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಿರಿಸೇನಾ ಅವರು ತಮ್ಮ ಪ್ರಥಮ ವಿದೇಶ ಪ್ರವಾಸಕ್ಕೆ ಭಾರತವನ್ನು ಆರಿಸಿಕೊಂಡಿದ್ದರು.

ಶ್ರೀಲಂಕಾ ಭೇಟಿ ಸಂದರ್ಭದಲ್ಲಿ ಮೋದಿ ಅವರು ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದಾರೆ. ಅವರಲ್ಲಿ, ಮೋದಿ ಶ್ರೀಲಂಕಾಕ್ಕೆ ಬಂದರೆ ಕಪ್ಪುಬಾವುಟ ಹಾರಿಸುವುದಾಗಿ ಹೇಳಿರುವ ರಾಜಪಕ್ಸೆ ಅವರೂ ಇರುವುದು ಗಮನಾರ್ಹ.

ಈ ನಡವಳಿಕೆ ಕೂಡ ನೆರೆದೇಶದೊಂದಿಗಿನ ಮೈತ್ರಿ ಬಲಪಡಿಸುವ ಮಾರ್ಗವೇ ಆಗಿದೆ. ಶ್ರೀಲಂಕಾದ ಕಡಲ ಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯ ಸಾಧಿಸುವ ಮೂಲಕ ಭಾರತದ ಸುರಕ್ಷತೆಗೆ ಆತಂಕ ಒಡ್ಡುವ ತಂತ್ರಗಾರಿಕೆಯನ್ನು ವಿಫಲಗೊಳಿಸುವ ಪ್ರಯತ್ನವೂ ಮೋದಿ ಅವರ ಭೇಟಿಯಲ್ಲಿದೆ.

ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಂಸಿಂಘೆ ತಮ್ಮ ಇತ್ತೀಚಿನ ಭಾರತ ಭೇಟಿಯಲ್ಲಿ ಬಂದರು, ಇಂಧನ ಹಾಗೂ ಸಾರಿಗೆ ವಲಯಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿಹಾಕಿದ್ದರು. ಭಾರತ ಬಂಡವಾಳ ತೊಡಗಿಸುವ ಈ ಒಪ್ಪಂದಗಳ ಬಗ್ಗೆ ಶ್ರೀಲಂಕಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಶ್ರೀಲಂಕಾದ ಆಸ್ತಿಗಳನ್ನು ಭಾರತಕ್ಕೆ ವಹಿಸಿಕೊಟ್ಟಂತಾಗುತ್ತದೆ ಎನ್ನುವುದು ವಿರೋಧಿಸುತ್ತಿರುವವರ ಆತಂಕ.

ಸಾರ್ವಜನಿಕರ ಮನಸ್ಸಿನಲ್ಲಿರುವ ಈ ಸಂಶಯವನ್ನು ತಿಳಿಗೊಳಿಸುವ ದೃಷ್ಟಿಯಿಂದ ಕೂಡ ಮೋದಿಯವರ ‘ಸಾಂಸ್ಕೃತಿಕ ರಾಜತಾಂತ್ರಿಕ ನಡೆ’ ಮುಖ್ಯವಾದುದು. ಎಲ್‌ಟಿಟಿಇ ಸಮಸ್ಯೆ ಕಾವು ಕಳೆದುಕೊಂಡಿರುವ ಸಂದರ್ಭದಲ್ಲಿ ಮೋದಿ ಅವರ ಶ್ರೀಲಂಕಾ ಭೇಟಿ ಹಾಗೂ ಅದರ ಮೂಲಕ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ನಡೆದಿರುವ ಪ್ರಯತ್ನ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT