ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಮೇಲೆ ನಂಬಿಕೆ ಇಲ್ಲವಾಗಿದೆ

Last Updated 16 ಮೇ 2017, 4:58 IST
ಅಕ್ಷರ ಗಾತ್ರ

ಕೋಲಾರ: ‘ಉನ್ನತ ಶಿಕ್ಷಣ ಪಡೆದವರೂ ಸಹ ಶೈಕ್ಷಣಿಕ ದಾಖಲೆಪತ್ರಗಳನ್ನು ಹಿಡಿದು ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿರುವುದರಿಂದ ಶಿಕ್ಷಣದ ಮೇಲೆ ನಂಬಿಕೆ ಇಲ್ಲವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ಕೌಶಲಾ ಅಭಿವೃದ್ಧಿ ಅಭಿಯಾನದ ಅಡಿ ಹಮ್ಮಿಕೊಂಡಿರುವ ಯುವ ನಿರುದ್ಯೋಗಿಗಳ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯದ ವೆಬ್‌ಸೈಟ್‌ ಹಾಗೂ ಮೊಬೈಲ್‍ ಆ್ಯಪ್‌ಗೆ ನಗರದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಶಿಕ್ಷಣ ಪಡೆದ ಯುವಕ ಯುವತಿಯರು ಉದ್ಯೋಗ ಸಿಗದೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

‘ಉದ್ಯೋಗ ಹುಡುಕಿಕೊಂಡು ಹೋಗುವವರಿಗೆ ಎಲ್ಲ ಕಡೆ ಅನುಭವ ಕೇಳುತ್ತಿದ್ದಾರೆ. ಆದರೆ, ಕೆಲಸವೇ ಇಲ್ಲದೆ ಅನುಭವ ಪಡೆಯುವುದು ಹೇಗೆ ಸಾಧ್ಯ. ಇಂದು ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡದೆ ಉನ್ನತ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಏರುಪೇರಾಗಿದೆ. ಉದ್ಯೋಗ ವಿನಿಮಯ ಕೇಂದ್ರಗಳಿಂದ ಯಾವುದೇ ಉಪಯೋಗವಿಲ್ಲ. ಹೀಗಾಗಿ ಸರ್ಕಾರ ಕೌಶಲ ಅಭಿವೃದ್ಧಿ ಅಭಿಯಾನ ಹಮ್ಮಿಕೊಂಡಿದ್ದು, ನಿರುದ್ಯೋಗಿ ಯುವಕ ಯುವತಿಯರು ಅಭಿಯಾನದ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಉದ್ಯೋಗ ಬೇಡಿಕೆಯ ಸಮೀಕ್ಷೆ ನಡೆಸಿದ ಬಳಿಕ ಕಾಲೇಜುಗಳಿಗೆ ಅನುಮತಿ ನೀಡಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ, ಸಮೀಕ್ಷೆ ನಡೆಸದೆ ಅನುಮತಿ ನೀಡಿರುವುದರಿಂದ ವಿದ್ಯಾವಂತ ನಿರುದ್ಯೋಗಿಗಳು ಶೈಕ್ಷಣಿಕ ದಾಖಲೆಪತ್ರಗಳನ್ನು ಹಿಡಿದು ಕೆಲಸಕ್ಕೆ ಸುತ್ತಾಡುವಂತಾಗಿದೆ. ಯಾವ ಪುರುಷಾರ್ಥಕ್ಕೆ ಮೂಲೆ ಮೂಲೆಯಲ್ಲೂ ಕಾಲೇಜುಗಳು ಆರಂಭವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮೋಜಿಗಾಗಿ ಮಾಡುತ್ತಿಲ್ಲ: ‘ಸರ್ಕಾರ ಕೇವಲ ಮೋಜಿಗಾಗಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಏ.22 ಮತ್ತು 23ರಂದು ಜಿಲ್ಲೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,678 ಮಂದಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಗಿದೆ. ಇನ್ನೂ ಕೆಲ ಅಭ್ಯರ್ಥಿಗಳನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿದೆ. ಕಷ್ಟದ ಸನ್ನಿವೇಶದಲ್ಲಿ ಬದುಕು ನಡೆಸುತ್ತಿರುವ ಕುಟುಂಬಗಳ ಉಪಯೋಗಕ್ಕಾಗಿ ಈ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಸರ್ಕಾರ ಯುವ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶಕ್ಕಾಗಿ ಯುವ ನಿರುದ್ಯೋಗಿಗಳ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯ ನಡೆಸುತ್ತಿದೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಶಿಕ್ಷಣ ಪಡೆದ ಯುವಕ ಯುವತಿಯರು ಹೆಸರು ನೋಂದಣಿ ಮಾಡಿಸುವ ಮೂಲಕ ಅಭಿಯಾನದ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ನೂರಾರು ನಿರುದ್ಯೋಗಿ ಯುವಕ ಯುವತಿಯರು ಕಾರ್ಯಕ್ರಮದ ಬಳಿಕ ಅಭಿಯಾನದಲ್ಲಿ ಹೆಸರು ನೋಂದಣಿ ಮಾಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸುರೇಶ್, ಸಹಾಯಕ ನಿರ್ದೇಶಕ ರವಿಚಂದ್ರ ಪಾಲ್ಗೊಂಡಿದ್ದರು.

ಅರಿವು ಮೂಡಿಸಿ
ಆಂಗ್ಲ ಭಾಷೆಯ ಪರಿಚಯ ಮತ್ತು ಸಂಪರ್ಕದಿಂದಾಗಿ ಮಕ್ಕಳು ಎಲ್ಲರಿಗಿಂತ ಬುದ್ಧಿವಂತರಾಗಿದ್ದರೂ ಹಾಗೂ ಜ್ಞಾನ ಹೊಂದಿದ್ದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಮಕ್ಕಳು ಭಯದ ವಾತಾವರಣದಲ್ಲಿ ಬೆಳೆದಿದ್ದಾರೆ. ಈ ಮಕ್ಕಳ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಬೇಕು. ಜತೆಗೆ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಸಂದರ್ಶನ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಬೇಕು.
–ಕೆ.ಆರ್‌.ರಮೇಶ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT