ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಡಿ ಅದಲಾತ್‌: ಅಧಿಕಾರಿಗಳಿಗೆ ತಕ್ಕ ಶಾಸ್ತಿ

Last Updated 16 ಮೇ 2017, 5:08 IST
ಅಕ್ಷರ ಗಾತ್ರ

ಕೋಲಾರ: ‘ಅಕ್ರಮ -ಸಕ್ರಮ, ಪೋಡಿ ಅದಾಲತ್ ಕಾರ್ಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಎಸಗುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಕ್ರಮದ ಆರೋಪ ಕೇಳಿ ಬಂದಿರುವ ಅಧಿಕಾರಿಗಳ ಕಚೇರಿಗೆ ದಿಢೀರ್‌ ಭೇಟಿ ನೀಡುತ್ತೇನೆ. ಈ ವೇಳೆ ಅಧಿಕಾರಿಗಳು ಗುರುತರ ತಪ್ಪು ಎಸಗಿರುವ ಮಾಹಿತಿ ಸಿಕ್ಕರೆ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇನೆ’ ಎಂದರು.

‘ಕಂದಾಯ ಇಲಾಖೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಬೇಡಿ. ಬಡವರಿಗೆ ನೀಡುವ ಸವಲತ್ತುಗಳಲ್ಲಿ ಯಾವುದೇ ಲೋಪವಾಗಬಾರದು. ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆದಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ವಿಚಾರದಲ್ಲೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕಮಿಷನ್ ಆಸೆಗೆ ಗುತ್ತಿಗೆದಾರರಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಬಿಲ್ ಮಾಡುವ ಸಿಬ್ಬಂದಿಗೆ ಬಿಸಿ ಮುಟ್ಟಿಸಬೇಕು. ಸಾಧ್ಯವಾದರೆ ಅಂತಹವರನ್ನು ಬೇರೆಡೆಗೆ ವರ್ಗಾವಣೆ ಮಾಡಿ’ ಎಂದು ಸೂಚಿಸಿದರು.

15 ದಿನಗಳಲ್ಲಿ ಬಗೆಹರಿಸಿ: ‘ಜಿಲ್ಲೆಯ 116 ಗ್ರಾಮಗಳಲ್ಲಿನ ನೀರಿನ ಸಮಸ್ಯೆಯನ್ನು 15 ದಿನದೊಳಗೆ ಬಗೆಹರಿಸಬೇಕು. ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಿ ಶೀಘ್ರವೇ ನೀರು ಕೊಡಬೇಕು. ಜನರಿಗೆ ನೀರು ಕೊಡುವ ಜವಾಬ್ದಾರಿ ನಮ್ಮದು. ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ತಾತ್ಕಾಲಿಕ. ಅದನ್ನೂ ಹೆಚ್ಚು ದಿನ ಮುಂದುವರಿಸಬಾರದು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಟ್ಯಾಂಕರ್ ಮೂಲಕ ನೀರು ಪೂರೈಸಲು ಹೆಚ್ಚು ಹಣ ಬೇಕಾಗುತ್ತದೆ. ಜತೆಗೆ ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಸಾಧ್ಯತೆ ಹೆಚ್ಚು. ಟ್ಯಾಂಕರ್ ನೀರು ವ್ಯವಹಾರದಲ್ಲಿ ಸಾಕಷ್ಟು ಗೋಲ್‌ಮಾಲ್‌ ನಡೆಯುತ್ತಿವೆ. ಹೀಗಾಗಿ ಕೊಳವೆ ಬಾವಿಗಳನ್ನು ಕೊರೆಸಿ ನೀರು ಕೊಡಿ. ಇದಕ್ಕೆ ಅನುದಾನದ ಕೊರತೆ ಇಲ್ಲ. ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ’ ಎಂದರು.

ಪೋಡಿ ಸಮಸ್ಯೆ: ‘ಜಿಲ್ಲೆಯ ಎಲ್ಲಾ 20,000 ರೈತರ ಪೋಡಿ ಸಮಸ್ಯೆಗಳು ಬಗೆಹರಿಯಬೇಕು. ರಿಜಿಸ್ಟರ್‌ ಪೋಸ್ಟ್‌ ಮೂಲಕ ರೈತರ ಮನೆ ಬಾಗಿಲಿಗೆ ದಾಖಲೆಪತ್ರಗಳನ್ನು ಸೇರಿಸುವ ವ್ಯವಸ್ಥೆ ಆಗಬೇಕು. ರೈತರು ತಹಶೀಲ್ದಾರ್‌ ಕಚೇರಿಗೆ ಅಲೆಯುವುದು ನಿಲ್ಲಬೇಕು. ಈ ಸಮಸ್ಯೆ ದಶಕಗಳಿಂದಲೂ ರೈತರನ್ನು ಕಾಡುತ್ತಿದೆ. ಹೊಸ ನಂಬರ್‌ ಕೊಟ್ಟು ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಹೇಳಿದರು.

‘ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರ ಮನೆಗಳನ್ನು ಸಕ್ರಮಗೊಳಿಸಬೇಕು. ಸರ್ಕಾರದ ಯಾವುದೇ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ ಅದನ್ನು ಸಕ್ರಮ ಮಾಡಿಸಿಕೊಡುವುದು ಅಧಿಕಾರಿಗಳ ಜವಾಬ್ದಾರಿ. ಬಡವರಿಗೆ ಸೂರು ಕೊಡದೆ ಹೋದರೆ ಹೇಗೆ. ಗುಂಡು ತೋಪು ಮತ್ತು ಸ್ಮಶಾನಗಳ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರ ಅರ್ಜಿಗಳನ್ನು 8 ದಿನಗಳಲ್ಲಿ ಸರ್ಕಾರಕ್ಕೆ ಕಳುಹಿಸಬೇಕು’ ಎಂದರು.

ಪಾಪದ ಕೃತ್ಯ: ‘ಬಗರ್ ಹುಕುಂ ಸಾಗುವಳಿ ಸಮಸ್ಯೆ ಆ.1ರೊಳಗೆ ಬಗೆಹರಿಯಬೇಕು. ಒಂದು ಅರ್ಜಿಯೂ ಬಾಕಿ ಉಳಿಯಬಾರದು. ಅನುಭವದಲ್ಲಿದ್ದ ಜಾಗವನ್ನು ಬಿಡಿಸುವುದು ಕೊಲೆ ಮಾಡಿದಷ್ಟೇ ಪಾಪದ ಕೃತ್ಯ. ಯಾರ ಮಾತಿಗೂ ಬೆಲೆ ಕೊಡದೆ ಮಧ್ಯವರ್ತಿಗಳ ಉಪಟಳ ತಪ್ಪಿಸಿ ಯೋಜನೆಯ ಫಲವನ್ನು ಬಡವರು ಅನುಭವಿಸುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ತೀವ್ರ ಬರವಿದೆ. ಇನ್ನೂ ಒಂದೂವರೆ ತಿಂಗಳು ನೀರು ಹಾಗೂ ಮೇವಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕು. ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಗೆ ಸುಮಾರು 1,000 ಟನ್ ಸಂಗ್ರಹಣಾ ಸಾಮರ್ಥ್ಯದ ಶೈತ್ಯಾಗಾರದ ಅಗತ್ಯವಿದೆ. ಟೊಮೆಟೊ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಕೆಡದಂತೆ ಶೈತ್ಯಾಗಾರದಲ್ಲಿ ಸಂರಕ್ಷಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಪಾಲ್ಗೊಂಡಿದ್ದರು.

ತೆರವುಗೊಳಿಸಿ
‘ಪ್ರಸಕ್ತ ವರ್ಷದಲ್ಲಿ ಹೆಚ್ಚು ಮಳೆಯಾಗುವ ಶುಭ ಸೂಚನೆ ಇದೆ. ಜಿಲ್ಲೆಯಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಹೊಂಗೆ ಸಸಿಗಳನ್ನು ನೆಡಬೇಕು. ರಾಜ್ಯ ಸರ್ಕಾರ ನೀಲಗಿರಿ ಮರಗಳ ತೆರವಿಗೆ ಕಾನೂನು ರೂಪಿಸಿದ್ದು, ಒಂದು ತಿಂಗಳೊಳಗೆ ಜಿಲ್ಲೆಯಾದ್ಯಂತ ನೀಲಗಿರಿ ಮರಗಳನ್ನು ಸಂಪೂರ್ಣ ತೆಗೆಯಿರಿ’ ಎಂದು ಸಚಿವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT