ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಸಮುದಾಯ ಅಭಿವೃದ್ಧಿ

Last Updated 16 ಮೇ 2017, 5:13 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕುರುಬ ಸಮುದಾಯದವರು ಶೈಕ್ಷಣಿಕವಾಗಿ ಮುಂದುವರಿದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದಲ್ಲಿ ಭಾನುವಾರ ಕಲ್ಲೇಶ್ವರ ಸ್ವಾಮಿ ಮತ್ತು ಸಿದ್ಧರಾಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ‘ಕುರುಬ ಸಮುದಾಯಕ್ಕೆ ಆಡಳಿತ, ನಾಯಕತ್ವ ಹೊಸತೇನಲ್ಲ. ಸಾಮ್ರಾಜ್ಯ ಕಟ್ಟಿ ಬೆಳೆಸಿ, ಆಡಳಿತ ನಡೆಸಿದ್ದಾರೆ. ಸಮುದಾಯ ಸಂಘಟನೆಯ ನಾಯಕತ್ವವೂ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಇದಕ್ಕೆ ತಕ್ಕಂತೆ ಸಮುದಾಯದ ಬಡವರ ಏಳ್ಗೆಗೆ ರಚನಾತ್ಮಕ ಕೆಲಸ ನಡೆಯುತ್ತಿಲ್ಲ’ ಎಂದು ವಿಷಾದಿಸಿದರು.

ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯೂ ಸೇರಿದಂತೆ ಕುರುಬ ಸಮುದಾಯ ವಿವಿಧ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಲೆ ಮೇಲೆ ತೆಂಗಿನ ಕಾಯಿ ಒಡೆಯುವ ಸೇವೆ ಪವಿತ್ರವಾದುದು. ನಿಷ್ಠೆ, ಶ್ರದ್ಧೆ, ಭಕ್ತಿಯಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಕಲ್ಲೇಶ್ವರಸ್ವಾಮಿ ಮತ್ತು ಸಿದ್ಧರಾಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತಲೆ ಮೇಲೆ ತೆಂಗಿನ ಕಾಯಿ ಒಡೆಯುವ ಹಾಲು ಮತಸ್ಥರ ಪವಿತ್ರ ಪದ್ಧತಿಯನ್ನು  ಸುಗಟೂರು, ಎದ್ದಲತಿಪ್ಪೇನಹಳ್ಳಿ ಹಾಗೂ ಜಂಗಮಕೋಟೆಯಲ್ಲಿ ನಡೆಸಿ ಕೊಡಲಾಯಿತು. ಗೋಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆದವು.

ಶಾಸಕ ಎಂ.ರಾಜಣ್ಣ, ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಸೋಮಶೇಖರ್, ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಎಸ್.ಎಂ. ನಾರಾಯಣಪ್ಪ, ಅಧ್ಯಕ್ಷ ಆರ್. ಮಂಜುನಾಥ್, ಉಪಾಧ್ಯಕ್ಷ ಕೆ.ಶಿವಣ್ಣ, ಖಜಾಂಚಿ ಕಲ್ಲಪ್ಪ ಹಾಜರಿದ್ದರು.

ತಲೆಗೆ ಕಾಯಿ ಒಡೆಸಿಕೊಳ್ಳುವ ಭಿನ್ನ ಕಲೆ
ಜನಪದ ಆಚರಣೆಗಳು ವೈವಿಧ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ ‘ತೆಂಗಿನಕಾಯಿ ಪವಾಡ’. ಕುರುಬ ಜನಾಂಗದವರು ನಡೆಸುವ ಈ ಜಾನಪದ ಕಲೆಯು ದೈವಾರಾಧಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಒಡೆಸಿ ಕೊಳ್ಳುವುದು ಕುತೂಲಹಕರ.

ಈರಗಾರು ಆವೇಶ ಬಂದಂತೆ ‘ಭಲರೇ, ಭಾಲ್ವರೇ ವೀರ, ವೀರಾಧಿವೀರ, ವಿಸ್ಮಯಕಾರ, ದಶಾವತಾರ, ಭಗಿನಿಕುಮಾರ, ರಾರಾ ನಾ ಮುದ್ದುಲ ವೀರಭದ್ರ, ಭಲರೇ ಬಾಲ್ವರೇ ವೀರ’ ಎಂದು ಲಯಬದ್ಧವಾಗಿ ನುಡಿಯುತ್ತಾರೆ. ತಮ್ಮ ತಲೆ ಮೇಲೆ ಕಾಯಿ ಒಡೆಸಿಕೊಳ್ಳಲು ಕೊರಳಿಗೆ ಹೂಮಾಲೆ ಹಾಕಿಕೊಂಡು ಗುರುಗಳಿಂದ ಆಶೀರ್ವಾದ ಪಡೆದು ದಂಡಕದೊಂದಿಗೆ ಸಿದ್ಧರಾಗಿರುತ್ತಾರೆ. ಹೀಗೆ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವುದನ್ನು ತೆಂಗಿನಕಾಯಿ ಪವಾಡ ಎನ್ನುತ್ತಾರೆ.

‘ಭಾಗವಹಿಸುವ ಮಕ್ಕಳು ಉಪವಾಸ ವ್ರತ ಕೈಗೊಂಡಿರುತ್ತಾರೆ. ಕಟ್ಟುನಿಟ್ಟಾಗಿ ಭಕ್ತಿಯಿಂದ ಕಾಯಿ ಒಡೆಸಿಕೊಳ್ಳುವರು. ಕಾಯಿ ಕರಟ ತಗುಲಿ ರಕ್ತ ಬಂದರೂ ಭಂಡಾರ ಹಚ್ಚಿದರೆ ವಾಸಿಯಾಗುತ್ತದೆ’ ಎನ್ನುತ್ತಾರೆ ಕಾಯಿ ಒಡೆಯುವ ಗುರುಗಳು.

**

ವೈಯಕ್ತಿಯವಾಗಿ ಏನೇ ಭಿನ್ನಾಭಿಪ್ರಾಯ ಇದ್ದರೂ ಸಮುದಾಯದ ವಿಚಾರದಲ್ಲಿ ಸಂಘಟಿತ ಹೋರಾಟದ ಮೂಲಕ ಅಭಿವೃದ್ಧಿಗೆ ಮುಂದಡಿ ಇಡಿ
ಈಶ್ವರಾನಂದಪುರಿ ಸ್ವಾಮೀಜಿ
-ಕನಕ ಗುರು ಪೀಠ, ಶಾಖಾ ಮಠ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT