ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಯುಕ್ತ ಕಸುಬು ಕರಗತ ಮಾಡಿಕೊಳ್ಳಿ

Last Updated 16 ಮೇ 2017, 5:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಇವತ್ತು ಅತ್ಯಂತ ಕಠಿಣವಾದ ಸ್ಪರ್ಧೆಯ ಯುಗ ಆರಂಭವಾಗಿದ್ದು, ಉತ್ತಮ ಭವಿಷ್ಯಕ್ಕಾಗಿ ಯುವ ಜನರು ಹೆಚ್ಚೆಚ್ಚು ಕೌಶಲ, ಕಸುಬುಗಳನ್ನು ಕರಗತ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶ ಮತ್ತು ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಪ್ರಮಾಣದಲ್ಲಿ ಯುವಜನರಿದ್ದಾರೆ. ಯುವ ಪೀಳಿಗೆ ಹೆಚ್ಚಿರುವ ದೇಶ ಸಮೃದ್ಧವಾಗಿರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ನಮ್ಮಲ್ಲಿ ವಾಸ್ತವ ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ. ಏಕೆಂದರೆ ಜನಸಂಖ್ಯೆ ಮಿತಿಮೀರಿ ಬೆಳೆದಿದೆ. ಸ್ವಾತಂತ್ರ್ಯಪೂರ್ವ 35 ಕೋಟಿಯಷ್ಟಿದ್ದ ಜನಸಂಖ್ಯೆ ಇದೀಗ 100 ಕೋಟಿಯ ಗಡಿ ದಾಟಿದೆ. ಹೀಗಾಗಿ ಇವತ್ತು ನಮ್ಮ ಅಗತ್ಯಗಳು ಮೂರು ಪಟ್ಟು ಜಾಸ್ತಿಯಾಗಿವೆ. ಮೂಲಸೌಕರ್ಯಗಳ ಬೇಡಿಕೆ ಹೆಚ್ಚಿದೆ’ ಎಂದು ತಿಳಿಸಿದರು.

‘ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಇವತ್ತು ಐಟಿ ಕ್ಷೇತ್ರದಲ್ಲಿ ನೇರವಾಗಿ 20 ಲಕ್ಷ ಜನರು ಉದ್ಯೋಗ ಮಾಡುತ್ತಿದ್ದು, ಅವರನ್ನು ಅವಲಂಬಿಸಿ 20 ಲಕ್ಷ ಮಂದಿ ಬದುಕುತ್ತಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಭಾರತ ಸೇರಿದಂತೆ ವಿಶ್ವದ ಮುಂದುವರಿದ ಎಲ್ಲ ದೇಶಗಳಿಗೆ ಅನ್ವಯವಾಗುತ್ತದೆ. ಈ ಬಿಕ್ಕಟ್ಟು ಕಾಣಿಸಿಕೊಂಡಾಗಲೆಲ್ಲ ಐಟಿ ಕ್ಷೇತ್ರದಲ್ಲಿ ಯಾವಾಗ ಎಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕುತ್ತಾರೋ ಎನ್ನುವ ಅನಿಶ್ಚಿತತೆ ಕಾಡುತ್ತಲೇ ಇರುತ್ತದೆ’ ಎಂದರು.

‘ಸರ್ಕಾರ ಯುವಜನರಿಗೆ ವಿವಿಧ ಬಗೆಯ ಕೌಶಲ ತರಬೇತಿ ನೀಡುವ ಉದ್ದೇಶದಿಂದ 2016ರಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಆರಂಭಿಸಿದೆ. ರೈತರು, ರೈತ ಮಕ್ಕಳಿಗೆ, ಯುವಕರಿಗೆ ಯಾವ ರೀತಿ ಶಕ್ತಿ ಕೊಡಬೇಕು. ಪ್ರತಿಯೊಬ್ಬರಿಗೂ ಕೌಶಲ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇವತ್ತು ವಿದ್ಯಾವಂತರು ಮಾತ್ರವಲ್ಲದೆ ಫೇಲಾದವರು, ಓದದೆ ಇದ್ದವರು ಕೂಡ ತಮಗೆ ಇಷ್ಟವಾದ ಕೌಶಲ ಕಲಿತು ತಮ್ಮ ಬದುಕು ರೂಪಿಸಿಕೊಳ್ಳಬಹುದಾಗಿದೆ’ ಎಂದು ಹೇಳಿದರು.

‘ನಮ್ಮ ಉದ್ಯಮ ನೀತಿ ಮತ್ತಷ್ಟು ಸರಳವಾಗಬೇಕಿದ್ದು, ಸರ್ಕಾರ ಉದ್ಯಮಿಗಳಿಗೆ ಕಡಿಮೆ ಬೆಲೆಯಲ್ಲಿ ಜಮೀನು, ತೆರಿಗೆ ವಿನಾಯಿತಿ, ನೀರು, ವಿದ್ಯುತ್‌ನಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಆಂಧ್ರಪ್ರದೇಶ, ತೆಲಂಗಾಣ ಮಾದರಿಯಲ್ಲಿ ಹೆಚ್ಚೆಚ್ಚು ಉದ್ಯಮಿಗಳನ್ನು ಆಕರ್ಷಿಸಬೇಕಿದೆ’ ಎಂದು ತಿಳಿಸಿದರು.

ತಪ್ಪದೆ ನೋಂದಾಯಿಸಿಕೊಳ್ಳಿ
ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮಾತನಾಡಿ, ‘ಕೌಶಲಾಭಿವೃದ್ಧಿ ಯೋಜನೆಯಡಿ ತರಬೇತಿ ಪಡೆಯಲು ಆಸಕ್ತರು www.kaushalkar.com ವೆಬ್‌ ಪೋರ್ಟಲ್‌ ಅಥವಾ  kaushalkar ಮೊಬೈಲ್ ಆ್ಯಪ್‌ ಮೂಲಕ ಕೂಡ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ 504 ಬಗೆಯ ತರಬೇತಿಗಳನ್ನು ನೀಡಲಾಗುತ್ತದೆ. ತರಬೇತಿ ನೀಡುವ ಕಂಪೆನಿಗಳೇ ಶೇ70 ಉದ್ಯೋಗಾವಕಾಶ ಒದಗಿಸಿಕೊಡಲಿವೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ. ಮಂಜುನಾಥ್, ‘ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರತ್ಯೇಕ ಇಲಾಖೆಯನ್ನೇ ತೆರೆದಿದೆ. ಇವತ್ತು ಕೌಶಲವುಳ್ಳ ಜನರಿಗೆ ವಿಫುಲ ಉದ್ಯೋಗಾವಕಾಶಗಳಿವೆ. ಆದ್ದರಿಂದ ಯುವ ಜನರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ. ಮುನಿಯಪ್ಪ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ. ರಾಮಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀರಾಮ್‌ ರೆಡ್ಡಿ, ಉಪ ವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರ್ ಕೆ. ನರಸಿಂಹಮೂರ್ತಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಎಂ.ಪ್ರಸಾದ್ ಉಪಸ್ಥಿತರಿದ್ದರು.

ಕೌಶಲದಿಂದ ಹೆಚ್ಚು ಅವಕಾಶ
ಗೌರಿಬಿದನೂರು: ಯುವ ಜನರು ಶೈಕ್ಷಣಿಕವಾಗಿ ಉದ್ಯೋಗ ಪಡೆಯಲು ಸಮರ್ಥರಾಗಿದ್ದು, ಅದಕ್ಕೆ ತಕ್ಕ ವಿದ್ಯಾರ್ಹತೆ ಹೊಂದಿರುತ್ತಾರೆ. ಆದರೆ ಅಗತ್ಯ ನೈಪುಣ್ಯದ ಕೊರತೆಯಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಏರ್ಪಡಿಸಲಾಗಿದ್ದ ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ಬೇಡಿಕೆ ಸಮೀಕ್ಷೆ, ನೋಂದಣಿ ಹಾಗೂ ವೆಬ್‌ಪೋರ್ಟಲ್ ಚಾಲನೆ ನೀಡಿ ಮಾತನಾಡಿದರು.

‘ಯುವ ಸಮುದಾಯ ತಾವು ಪಡೆದಿರುವ ಶಿಕ್ಷಣಕ್ಕೆ ತಕ್ಕಂತೆ ಕೌಶಲ ತರಬೇತಿ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದೆ’ ಎಂದರು.

ತಹಶೀಲ್ದಾರ್ ಎಂ. ನಾಗರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ. ಮಂಜುನಾಥ್, ಪ್ರಮೀಳಾ ಪ್ರಕಾಶ್ ರೆಡ್ಡಿ, ಡಿ. ನರಸಿಂಹಮೂರ್ತಿ, ಇಒ ಡಾ. ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ  ಹನುಮಂತೇಗೌಡ, ಸಿಡಿಪಿಒ ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಭಾಗವಹಿಸಿದ್ದರು.

ಉದ್ಯೋಗ ಮೇಳ
ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಉದ್ದೇಶದಿಂದ ಸೆಪ್ಟೆಂಬರ್‌ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ.
ಈ ಮೇಳದಲ್ಲಿ ದೇಶದ ವಿವಿಧೆಡೆಯ 300 ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿವೆ’ ಎಂದು ಸುಧಾಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT