ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ದೊರಕಿಸುವತ್ತ ಸರ್ಕಾರದ ದಿಟ್ಟ ಹೆಜ್ಜೆ

Last Updated 16 ಮೇ 2017, 5:25 IST
ಅಕ್ಷರ ಗಾತ್ರ

ಶಿವಮೊಗ್ಗ: ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸುವತ್ತ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಶ್ಲಾಘಿಸಿದರು.

ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವ ನಿರುದ್ಯೋಗಿಗಳ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್  ಮಾತನಾಡಿ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಹಾಗೂ ಪದವಿ ಪಡೆದ ಯುವಕರಿಗೆ ಕೆಲಸ ನೀಡುವುದೇ ಸರ್ಕಾರದ ಮುಂದಿರುವ ದೊಡ್ಡ ಜವಾಬ್ದಾರಿ. ಈ ಹೊಣೆಗಾರಿಕೆಯನ್ನು ‘ಕೌಶಲ ಕರ್ನಾಟಕ ಯೋಜನೆ’ ಈಡೇರಿಸಲಿದೆ. ಪ್ರತಿ ವರ್ಷ 5 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆ ದೇಶದ ಬಹುದೊಡ್ಡ ಸವಾಲು. ಅಂತಹ ದಿಟ್ಟ ಸವಾಲು ಸ್ವೀಕರಿಸಿರುವ ರಾಜ್ಯ ಸರ್ಕಾರ, ನಿರುದ್ಯೋಗಿ ಯುವಕರಿಗೆ ಕೌಶಲ ನೀಡುವ ಮೂಲಕ ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಸಾಧನೆಗೆ ಮುನ್ನುಡಿ ಬರೆದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 5ಲಕ್ಷ ಯುವಜನರಿಗೆ ಕೌಶಲ ತರಬೇತಿ,   ಉದ್ಯೋಗ ನೀಡಲು ಪ್ರಯತ್ನಿಸಲಿದೆ ಎಂದು ಮಾಹಿತಿ ನೀಡಿದರು. ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ರವಿಕುಮಾರ್ ಸ್ವಾಗತಿಸಿದರು.  ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್ ಕುಮಾರ್, ಎ.ಸಿ. ಎಚ್.ಕೆ. ಕೃಷ್ಣಮೂರ್ತಿ, ಮಹಾನಗರ ಪಾಲಿಕೆ ಆಯುಕ್ತ ಮುಲೈ ಮುಹಿಲನ್  ಉಪಸ್ಥಿತರಿದ್ದರು.

ಸಾಗರ
ಪ್ರತಿಭಾ ಪಲಾಯನ ತಡೆಯಲು ರಾಜ್ಯ ಸರ್ಕಾರ ‘ಕೌಶಲ ಕರ್ನಾಟಕ’ ಯೋಜನೆ  ಜಾರಿಗೊಳಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಆಡಳಿತ   ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.

ತರಬೇತಿ ನೀಡಿದವರಿಗೆ ಕ್ಯಾಂಪಸ್‌ ಆಯ್ಕೆ ಇರಲಿದೆ. ಉದ್ಯೋಗಾಕಾಂಕ್ಷಿಗಳು  ಸದುಪಯೋಗ ಪಡೆಯಬೇಕು ಎಂದರು. ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಮಾತನಾಡಿ,  22ರವರೆಗೆ  ಯೋಜನೆಯಡಿ ಯುವಜನರು  ಹೆಸರನ್ನು ನೋಂದಾಯಿಸಲು ಅವಕಾಶವಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಎನ್‌.ಉಷಾ, ಉಪ ವಿಭಾಗಾಧಿಕಾರಿ ನಾಗರಾಜ್‌ ಆರ್‌.ಸಿಂಗ್ರೇರ್‌, ಉಪ ತಹಶೀಲ್ದಾರ್‌ ಮಂಜುಳಾ ಭಜಂತ್ರಿ, ಆನಂದ ನಾಯಕ ಹಾಜರಿದ್ದರು.

ಈಶ್ವರಪ್ಪನೂ ಹುಲಿಯಲ್ಲ : ಕಾಗೋಡು

ಶಿವಮೊಗ್ಗ: ‘ನಾನು ಹುಲಿಯಲ್ಲ, ಈಶ್ವರಪ್ಪನೂ ಹುಲಿಯಲ್ಲ. ನಾವಿಬ್ಬರೂ ಸಾಮಾನ್ಯ ಮನುಷ್ಯರು’ ಎಂದು ಕಾಗೋಡು ತಿಮ್ಮಪ್ಪ  ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

‘ಬೇರೆಯವರ ಬಗ್ಗೆ ಹೀಗೆ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಅಧಿಕಾರಿಗಳು ಮಾತು ಕೇಳದಿದ್ದರೆ ಅವರಿಂದ ಕೆಲಸ ತೆಗೆಯುವುದು ಗೊತ್ತಿದೆ. ಎತ್ತಿಗೆ ಬರೆ ಹಾಕುವ ರೀತಿ ಅಧಿಕಾರಿಗಳಿಂದ ಕೆಲಸ ತೆಗೆಯುತ್ತೇವೆ’ ಎಂದು ಗುಡುಗಿದರು.‘ಕೌಶಲ ವೆಬ್ ಫೋರ್ಟಲ್‌’ಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಆ ಮೂಲಕ ರಾಜ್ಯದಲ್ಲಿ 5 ಲಕ್ಷ ಯುವಕರಿಗೆ ಉದ್ಯೋಗ ದೊರಕಿಸುವ ಗುರಿ ಹೊಂದಿದ್ದೇವೆ’ ಎಂದರು.

ಸೊರಬ ವರದಿ: ‘ವಿಧಾನಸಭಾಧ್ಯಕ್ಷನಾಗಿದ್ದ ಪಕ್ಷಾತೀತವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಿದ್ದೆ. ಇಂದು ಸಚಿವ ಸ್ಥಾನದಲ್ಲಿದ್ದು ಜನಪರ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದು ಹೇಳಿದರು.

‘ಸರ್ಕಾರದ ಕಾಮಗಾರಿಗಳನ್ನು ನಿಗದಿತ ಸಮಯದ ಒಳಗೆ ಪೂರ್ಣಗೊಳಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು.’  ಎಂದು ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. 94 ಸಿ ಮತ್ತು 94 ಸಿ ಸಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ್ ಚಿಮಣೂರು, ಜೆ. ಶಿವಾನಂದಪ್ಪ, ಕೆ.ಮಂಜುನಾಥ,  ಗೋಪಾಲಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ಸುಜಾಯತ್ ಉಲ್ಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT