ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯೆ, ಕೌಶಲ ಇದ್ದರೆ ಯಶಸ್ಸು: ಸಚಿವ

Last Updated 16 ಮೇ 2017, 5:41 IST
ಅಕ್ಷರ ಗಾತ್ರ

ಉಡುಪಿ:  ನಮ್ಮ ಯುವಕರಲ್ಲಿ ಪದವಿ, ಸಾಮರ್ಥ್ಯ ಎಲ್ಲವೂ ಇದೆ. ಆದರೆ, ಕೌಶಲದ ಕೊರತೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ಕೌಶಲ ಮತ್ತು  ಮಾರ್ಗದರ್ಶನ ನೀಡಿದರೆ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಜಿಲ್ಲಾಡಳಿತ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಬೋರ್ಡ್‌ ಹೈಸ್ಕೂಲ್‌ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ವೆಬ್‌ ಪೋರ್ಟಲ್‌ ಹಾಗೂ ಕೌಶಲ ತರಬೇತಿ ಆಕಾಂಕ್ಷಿತ ಯುವ ಜನರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯು ದೇಶದಲ್ಲಿಯೇ ಮೌಲ್ಯಭರಿತ ಮಾನವ ಸಂಪನ್ಮೂಲವನ್ನು ಹೊಂದಿದೆ. ಆದ್ದರಿಂದ ಯುವಕರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲು ಉಡುಪಿ ಅತ್ಯಂತ ಪ್ರಶಸ್ತ್ಯವಾದ ಜಿಲ್ಲೆಯಾಗಿದೆ. ನಮ್ಮ ಜಿಲ್ಲೆಯ ಶೈಕ್ಷಣಿಕ ದಾಖಲೆಗಳು ಅದನ್ನು ಸಾಬೀತು ಪಡಿಸುತ್ತವೆ. ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಪಡೆದಿದೆ ಎಂದರು. 

ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗ ಮೇಳಗಳು ನಡೆಯುತ್ತವೆ. ಆದರೆ, ಅದರಲ್ಲಿ ಭಾಗವಹಿಸುವವರಲ್ಲಿ ಶೇ. 10ರಿಂದ 15ರಷ್ಟು ಮಂದಿಗೆ ಮಾತ್ರ ಉದ್ಯೋಗಾವಕಾಶ ಲಭಿಸುತ್ತದೆ. ಹಾಗಾಗಿ ಈ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 9,100 ಮಂದಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಗುರಿ ನಿಗದಿಪಡಿಸಲಾಗಿದೆ. ಈ ಪೈಕಿ 809 ಪರಿಶಿಷ್ಟ ಜಾತಿ, 452 ಪರಿಶಿಷ್ಟ ಪಂಗಡ, 1309 ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದ 7 ಸಾವಿರ ಜನರಿಗೆ ತರಬೇತಿ ನೀಡಲಾಗುವುದು. ಈಗ ನೀಡಿರುವ ಗುರಿ ಕಡಿಮೆಯಾದರೆ ಅದನ್ನು ಹೆಚ್ಚಳ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ನೋಟು ರದ್ದತಿಯ ಪರಿಣಾಮದಿಂದ ಮುಂದಿನ ಮೂರು ವರ್ಷಗಳಲ್ಲಿ ದೇಶದ ಐಟಿ ಕ್ಷೇತ್ರದಲ್ಲಿ 2 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಾಗಾಗಿ ದೇಶದ ಪ್ರಧಾನಮಂತ್ರಿಗಳು ಉದ್ಯೋಗವನ್ನು ಹೆಚ್ಚಿಸಬೇಕೋ ಅಥವಾ ಉದ್ಯೋಗದಲ್ಲಿದ್ದವರನ್ನು ಮನೆಗೆ ಕಳುಹಿಸಬೇಕೋ ಎನ್ನುವುದರ ಬಗ್ಗೆ ಚಿಂತಿಸಬೇಕಾಗಿದೆ ಎಂದರು. 

ಶಿಕ್ಷಣದ ಜೊತೆಗೆ ಕೌಶಲವೂ ಇದ್ದರೆ, ಉದ್ಯೋಗವನ್ನು ಪಡೆಯಲು ಹೆಚ್ಚು ಅನುಕೂಲ ಆಗುತ್ತದೆ. ಆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ತಿಳಿಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮಾತನಾಡಿ, 18ರಿಂದ 35 ವರ್ಷದೊಳಗಿನವರು ಈ ಕಾರ್ಯಕ್ರಮದಡಿ ನೋಂದಣಿ ಮಾಡಬಹುದು. ಆಯಾ ಗ್ರಾಮ ಪಂಚಾಯಿತಿ, ಶಾಲಾ ಕಾಲೇಜುಗಳಲ್ಲಿ ಅಥವಾ ಖುದ್ದಾಗಿ ಎಲ್ಲಿ ಬೇಕಾದರು ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸದಸ್ಯೆ ಗೋಪಿ ಕೆ. ನಾಯ್ಕ್‌, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಜಿಲ್ಲಾ ಸಣ್ಣ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಮಾನಂದ ನಾಯಕ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್‌. ದಿವಾಕರ ಶೆಟ್ಟಿ, ಪೌರಾಯುಕ್ತ ಡಿ. ಮಂಜುನಾಥಯ್ಯ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್‌ ಕುಮಾರ್‌ ಉಪಸ್ಥಿತರಿದ್ದರು. ವೆಬ್‌ ಪೋರ್ಟಲ್‌ ಕಾರ್ಯಕ್ರಮದ ಜಿಲ್ಲಾ ನೋಡಲ್‌ ಅಧಿಕಾರಿ ನಯನ ಸ್ವಾಗತಿಸಿದರು.

**

ಕೌಶಲ ತರಬೇತಿ ನೋಂದಣಿ ಕಾರ್ಯಕ್ರಮವು ಯುವಕರ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಐತಿಹಾಸಿಕ ಕಾರ್ಯಕ್ರಮವಾಗಿದೆ.
-ಪ್ರಮೋದ್‌ ಮಧ್ವರಾಜ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT