ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡ ಸದೃಶವಾಗಿ ಪಾರಾದ ಹಸುಗೂಸು

Last Updated 16 ಮೇ 2017, 5:47 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಭಾನುವಾರ ರಾತ್ರಿ ಬೀಸಿದ ಬಿರುಗಾಳಿಗೆ ಹಲವು ಮನೆಗಳ ಚಾವಣಿಗಳು ಹಾರಿ ಹೋಗಿವೆ. ಹಸುಳೆಯೊಂದು ಪವಾಡಸದೃಶವಾಗಿ ಪಾರಾಗಿದೆ. ಸಮೀಪದ ಪಾಡಗಟ್ಟೆ ಗ್ರಾಮದಲ್ಲಿ ರಾತ್ರಿ ಸುಮಾರು 8 ಗಂಟೆಯಲ್ಲಿ ಬಿರುಗಾಳಿ ಸಹಿತ ಆರಂಭವಾದ ಮಳೆಗೆ ಪರಿಶಿಷ್ಟ ಕಾಲೊನಿಯ ರುದ್ರಪ್ಪರ ರಂಗಪ್ಪ ಎಂಬುವರ ಮನೆಗೆ ಹಾಕಲಾಗಿದ್ದ 24 ಸಿಮೆಂಟ್ ಶೀಟುಗಳಲ್ಲಿ 18 ಶೀಟುಗಳು ಹಾರಿ ಹೋಗಿವೆ. 6 ಶೀಟುಗಳು ಮುರಿದು ಬಿದ್ದಿವೆ.ಇದರಿಂದ ಮನೆಯೊಳಗೇ ನೀರು ನಿಂತಿದೆ.ಒಂದು ಶೇಟ್‌ಗೆ ₹ 550 ರಂತೆ ₹13,200 ಲಗೇಜ್‌ ಬಾಡಿಗೆಗೆ ₹ 1000 ಕೊಟ್ಟು ತಂದು ಹಾಕಲಾಗಿತ್ತು ಎನ್ನುತ್ತಾರೆ ರಂಗಪ್ಪ.

ಪಾರಾದ ಹಸುಗೂಸು: 8 ದಿನಗಳ ಹಿಂದಷ್ಟೆ ಹುಟ್ಟಿದ್ದ ಮಗುವನ್ನು ಮನೆಯೊಳಗೆ ಮಲಗಿಸಲಾಗಿತ್ತು. ಮಗು ಅತ್ತಿತೆಂದು ತಾಯಿ ಬಾಣಂತಿ ಸುನೀತಾ ಅವರು ಮಗುವನ್ನು ಎತ್ತಿಕೊಂಡು ಪಕ್ಕಕ್ಕೆ ಬರುತ್ತಿದ್ದಂತೆ ಮಗು ಮಲಗಿದ್ದ ಜಾಗದ ಮೇಲೆ ತಗಡು ಶೀಟು ತುಂಡಾಗಿ ಬಿದ್ದಿದೆ ಎಂದು ಮಗುವಿನ ತಂದೆ ರಂಗಪ್ಪ ತಿಳಿಸಿದ್ದಾರೆ.

ಮನೆ ಹೋದರೂ ಪರವಾಗಿಲ್ಲ. ಮಗು ಉಳಿಯಿತಲ್ಲ ಎಂದು ಸುನೀತಾ ಅಳುತ್ತಾ ಹೇಳುತ್ತಿರುವುದು ಮನಕಲಕುವಂತಿತ್ತು. ಈಗ ಪಕ್ಕದ ಮನೆಯಲ್ಲಿ ತಾಯಿ, ಮಗು ಆಶ್ರಯ ಪಡೆದಿದ್ದಾರೆ.

ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬುವರ ಮನೆಗೆ ಹಾಕಲಾಗಿದ್ದ 12ಸಿಮೆಂಟ್‌ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಮಳೆಗೆ ಮನೆಯೊಳಗೆ ನೀರು ತುಂಬಿ ಮುಂಜಾನೆ ನೀರನ್ನು ತೆಗೆಯುತ್ತಿದ್ದದೃಶ್ಯ ಕಂಡು ಬಂದಿತು.

ಅಲ್ಲದೆ, ಗ್ರಾಮದ ಸಣ್ಣ ರಂಗಪ್ಪ ಎಂಬುವರ ಬಚ್ಚಲು ಮನೆಗೆ ಹಾಕಲಾಗಿದ್ದ 8 ಸಿಮೆಂಟ್‌ ಶೀಟುಗಳು, ಹಳೆ ಪರಿಶಿಷ್ಟರ ಕಾಲೊನಿಯ ದೇವಿಗೆರೆ ರಂಗಸ್ವಾಮಿ ಎಂಬುವರ ಗುಡಿಸಲು ಮನೆಗೆ ಹಾಕಲಾಗಿದ್ದ 8 ಶೀಟುಗಳು, ಡಿ. ತಿಮ್ಮಪ್ಪ ಎಂಬುವರ ಗುಡಿಸಲು ಮನೆಗೆ ಹಾಕಲಾಗಿದ್ದ 8 ಶೀಟುಗಳು ಹಾರಿಹೋಗಿವೆ.

ಬಾಣಗೆರೆ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದ್ದ ಬೇವಿನ ಮರದ ದೊಡ್ಡ ಕೊಂಬೆಯೊಂದುಮುರಿದು ಬಿದ್ದಿದೆ. ಬಾಣಗೆರೆ ಚಿಕ್ಕಜಾಜೂರು ರಸ್ತೆಯಲ್ಲಿ ಬೃಹತ್‌ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದಿದೆ.

ಚಿಕ್ಕಜಾಜೂರಿನಲ್ಲಿ ರಾತ್ರಿ ಬಿರುಗಾಳಿ ಸಹಿತ, ಗುಡುಗು, ಮಿಂಚಿನೊಂದಿಗೆ ಸುಮಾರು ಅರ್ಧ ಗಂಟೆ ಜೋರಾಗಿ ಮಳೆ ಸುರಿಯಿತು. ಗ್ರಾಮದ ಮಾರುತಿ ನಗರದಿಂದ ರೈಲ್ವೆ ನಿಲ್ದಾಣದವರೆಗೆ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿದಿದೆ. ಅಲ್ಲದೆ, ಸಮೀಪದ ಅಪ್ಪರಸನಹಳ್ಳಿ, ಆಡನೂರು, ಚಿಕ್ಕಂದವಾಡಿ, ಅರಸನಘಟ್ಟ ಮೊದಲಾದ ಗ್ರಾಮಗಳಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ.

ಮಾಡದಕೆರೆಯಲ್ಲಿ 257 ಮನೆಗಳಿಗೆ ಹಾನಿ, ಸಿಡಿಲಿಗೆ ಎಮ್ಮೆ ಬಲಿ

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆಯಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಗ್ರಾಮದ  257 ಮನೆಗಳಿಗೆ ಹಾನಿಯಾಗಿದೆ.ರಸ್ತೆ ಬದಿಯಲ್ಲಿದ್ದ ಎರಡು ದೊಡ್ಡ ಬೇವಿನ ಮರಗಳು ಉರುಳಿ ಕಂಬಾರ ತಿಮ್ಮಣ್ಣ, ರಾಜಮ್ಮ ತಿಮ್ಮಣ್ಣ, ಕರಿಯಮ್ಮ ಕದುರಪ್ಪನಿಗೆ ಸೇರಿದ ಮನೆಗಳು ಸಂಪೂರ್ಣ ಹಾಳಾಗಿವೆ. ಹಾಗೆಯೇ ಮಾರುತಿ ಕಾರೊಂದು ಜಖಂಗೊಂಡಿದೆ.

ಬಿರುಗಾಳಿಗೆ ಮನೆಗಳ ಮೇಲಿನ ಹೆಂಚು, ಶೀಟುಗಳು ಹಾರಿ ಹೋಗಿವೆ. ಭಾರಿ ಮಳೆಗೆ ಹಲವು ಮನೆಗಳ ಒಳಗೆ ನೀರು ನುಗ್ಗಿತ್ತು. ವಿದ್ಯುತ್‌ ಕಂಬಗಳು ನೆಲಕ್ಕುರುಳಿ ಇಡೀ ರಾತ್ರಿ ಕತ್ತಲೆಯ ಗವಿಯಲ್ಲಿ ಕಾಲ ಕಳೆಯುವಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಲಿಲ್ಲ ಎಂದು ಗ್ರಾಮದ ಕರಿಯಮ್ಮ, ತಿಮ್ಮಣ್ಣ, ಹನುಮಂತಪ್ಪ, ತಿಪ್ಪೇಸ್ವಾಮಿ ‘ಪ್ರಜಾವಾಣಿ’ ಜತೆಗೆ ತಮ್ಮ ಅಳಲು ತೋಡಿಕೊಂಡರು.

ಸರ್ಕಾರದ ನಿಯಮ ಪ್ರಕಾರ ಒಂದು ಮನೆಗೆ ಹಾನಿಯಾದರೆ ₹ 5,200 ಪರಿಹಾರ ಕೊಡಬೇಕು. ಹಾನಿಯಾಗಿರುವ ಒಟ್ಟು 257 ಮನೆ ಮಾಲೀಕರಿಗೆ ₹ 13,36,400 ಹಾಗೂ ಸಿಡಿಲಿನ ಬಡಿತಕ್ಕೆ ಬಾಗೂರಿನಲ್ಲಿ ಎಮ್ಮೆಯೊಂದು ಬಲಿಯಾಗಿದ್ದು ಅದಕ್ಕೆ ₹ 30,000 ಪರಿಹಾರ  ಕೊಡುವುದು ಸೇರಿದಂತೆ ₹ 13,66,400 ನಷ್ಟವಾಗಿದೆ.

97.7 ಮಿ.ಮೀ ಮಳೆ:  ಭಾನುವಾರ ಸಂಜೆ ಬಾಗೂರು 30.5 ಮಿ.ಮೀ, ಶ್ರೀರಾಂಪುರ 30.2 ಮಿ.ಮೀ, ಮಾಡದಕೆರೆ 19.2 ಮಿ.ಮೀ, ಮತ್ತೋಡು 9.4ಮಿ.ಮೀ ಹಾಗೂ ಹೊಸದುರ್ಗ 8.4ಮಿ.ಮೀ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಒಟ್ಟು 97.7ಮಿ.ಮೀ ಮಳೆಯಾಗಿದೆ.

ಭಾರಿ ಮಳೆಗೆ ಕೆಲವೆಡೆ ಕೃಷಿಹೊಂಡಗಳು ಭರ್ತಿಯಾಗಿವೆ. ಅಂತರ್ಜಲ ಕುಸಿತದಿಂದ ಒಣಗುವ ಸ್ಥಿತಿಯಲ್ಲಿದ್ದ ತೆಂಗು, ಅಡಿಕೆ ಮರಗಳಿಗೆ ಜೀವಕಳೆ ಬಂದಿದೆ. ಇದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಸೋಮವಾರ ಬೆಳಿಗ್ಗೆ ಶಾಸಕ ಬಿ.ಜಿ.ಗೋವಿಂದಪ್ಪ, ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ಇಒ ಮಹಾಂತೇಶ್‌, ಕಂದಾಯ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಮಾಡದಕೆರೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ವಿವಿಧೆಡೆ ಮಳೆ
ಮೊಳಕಾಲ್ಮುರು: ತಾಲ್ಲೂಕಿ ನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ.ಮೊಳಕಾಲ್ಮುರು 9.4 ಮಿ.ಮೀ, ರಾಯಾಪುರ 16.4 ಮಿ.ಮೀ, ಬಿ.ಜಿ.ಕೆರೆ 9.3 ಮಿ.ಮೀ, ರಾಂಪುರ 23.2 ಮಿ.ಮೀ ಹಾಗೂ ದೇವಸಮುದ್ರ ದಲ್ಲಿ 24.2 ಮಿಮೀ ಮಳೆ ದಾಖಲಾಗಿದೆ.

ಮೊಳಕಾಲ್ಮುರು ಕಸಬಾ ಗ್ರಾಮಗಳಲ್ಲಿ ಮಳೆಯಿಂದಾಗಿ ಶೇಂಗಾ ಬಿತ್ತನೆ ಪೂರ್ವ ಕಾರ್ಯ ಗಳಿಗೆ ಮತ್ತು ದೇವಸಮುದ್ರ ಹೋಬಳಿ ಅನೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT