ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ದರ ಏರಿಕೆ ಸದ್ಯಕ್ಕಿಲ್ಲ

Last Updated 16 ಮೇ 2017, 5:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೀರಿನ ದರ ಪರಿಷ್ಕರಣೆ ಮಾಡಬೇಕೆಂಬ ಜಲಮಂಡಳಿಯ ಪ್ರಸ್ತಾವಕ್ಕೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಕ್ಕೊರಲ ವಿರೋಧ ವ್ಯಕ್ತಪಡಿಸಿದ ಕಾರಣ ನೀರಿನ ದರ ಏರಿಕೆಯನ್ನು ಸದ್ಯಕ್ಕೆ ಮಾಡದಿರಲು ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ತೀರ್ಮಾನಿಸಲಾಯಿತು.

ವಿದ್ಯುತ್‌ ದರ ಏರಿಕೆ ಆಧರಿಸಿ ಆಗಸ್ಟ್‌ 2014 ರಿಂದ ಅನ್ವಯವಾಗುವಂತೆ ನೀರಿನ ದರವನ್ನು ಪರಿಷ್ಕರಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶವನ್ನು ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕರಿಯಪ್ಪ ಸಾಮಾನ್ಯಸಭೆಯ ಮುಂದೆ ತಂದಾಗ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಅವಳಿ ನಗರಕ್ಕೆ ಸರಿಯಾಗಿ ನೀರು ಪೂರೈಕೆಯಾಗದೇ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬರದ ಹಿನ್ನೆಲೆಯಲ್ಲಿ ಸದ್ಯ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಲೆ ಹೆಚ್ಚಳ ಮಾಡಿದರೆ, ಜನರಿಗೆ ಹೊರೆಯಾಗುತ್ತದೆ ಎಂದು ಸದಸ್ಯರಾದ ವೀರಣ್ಣ ಸವಡಿ, ಸುಭಾಸ್‌ ಶಿಂಧೆ, ರಾಜಣ್ಣ ಕೊರವಿ, ಪಾಂಡುರಂಗ ಪಾಟೀಲ ಹೇಳಿದರು.

ನೀರಿನ ದರ ಹೆಚ್ಚಳ ವಿರೋಧಿಸಿ ಈಗಾಗಲೇ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಒಂದು ವೇಳೆ ದರ ಹೆಚ್ಚಳ ಮಾಡಿದರೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ ಎಂದರು. ವಿದ್ಯುತ್‌ ದರ ಹೆಚ್ಚಳ ಸರಿದೂಗಿಸಲು ನೀರಿನ ದರ ಹೆಚ್ಚಳ ಮಾಡುವುದು ಸರಿಯಲ್ಲ. ಅವಳಿ ನಗರದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಇನ್ನೂ ಪೂರ್ಣ ಅನುಷ್ಠಾನವಾಗಿಲ್ಲ.

ಪಾಲಿಕೆ ನೀರಿನ ಮಾರಾಟಕ್ಕೆ ನಿಲ್ಲುವುದು ಅಪರಾಧ. ನೀರನ್ನು ಪೂರೈಕೆ ಮಾಡುವುದು ಪಾಲಿಕೆಯ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.‘ಸರ್ಕಾರದ ಆದೇಶವಿದೆ. ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಇದಕ್ಕೆ ಸದಸ್ಯರು ಸಹಕರಿಸಬೇಕು’ ಎಂದು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮನವಿ ಮಾಡಿದರು.

ಬಿಆರ್‌ಟಿಎಸ್‌ಗೆ ನೋಟಿಸ್‌: ಬಿಆರ್‌ಟಿಎಸ್‌ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಈ ಕುರಿತು ಚರ್ಚಿಸಲು ಸಭೆಗೆ ಬರುವಂತೆ ಮೇಯರ್‌ ಅವರು ಸೂಚಿಸಿದ್ದರೂ, ಸಭೆಗೆ ಬಾರದ ಬಿಆರ್‌ಟಿಎಸ್‌ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸದಸ್ಯರಾದ ರಾಜಣ್ಣ ಕೊರವಿ, ವೀರಣ್ಣ ಸವಡಿ, ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು.

ಬಿಆರ್‌ಟಿಎಸ್‌ ಕಾಮಗಾರಿ ವಿಳಂಬ ವಿರೋಧಿಸಿ ಉಣಕಲ್‌ನಲ್ಲಿ ರಸ್ತೆ ತಡೆ ನಡೆಸೋಣ ಎಂದು ಸದಸ್ಯ ವೀರಣ್ಣ ಸವಡಿ ಹೇಳಿದರು.  ರಸ್ತೆ ತಡೆ ನಡೆಸುವುದರಿಂದ ಪ್ರಯೋಜನವಿಲ್ಲ. ಬಿಆರ್‌ಟಿಎಸ್‌ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸೋಣ ಎಂದು ಶಿವಾನಂದ ಮುತ್ತಣ್ಣವರ ಸಲಹೆ ನೀಡಿದರು. ಸಭೆಗೆ ಹಾಜರಾಗದ ಬಿಆರ್‌ಟಿಎಸ್‌ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಮೇಯರ್‌ ಡಿ.ಕೆ.ಚವ್ಹಾಣ ಅವರು ಆಯುಕ್ತರಿಗೆ ಸೂಚಿಸಿದರು.

*

ಸದ್ಯಕ್ಕೆ ನೀರಿನ ದರ ಹೆಚ್ಚಳ ಮಾಡುವುದು ಬೇಡ. ಈ ಸಂಬಂಧ ಯಾವುದೇ ತೀರ್ಮಾನ ಕೈಗೊಳ್ಳುವುದು ಬೇಡ. ಮರು ಪರಿಶೀಲನೆಗೆ  ಸರ್ಕಾರಕ್ಕೆ ಪತ್ರ ಬರೆಯಿರಿ
ಡಿ.ಕೆ.ಚವ್ಹಾಣ
ಮೇಯರ್‌, ಹು–ಧಾ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT