ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದವಿ ಪಡೆದರೆ ಸಾಲದು, ವೃತ್ತಿ ಕೌಶಲ ಅಗತ್ಯ’

Last Updated 16 ಮೇ 2017, 6:04 IST
ಅಕ್ಷರ ಗಾತ್ರ

ಧಾರವಾಡ: ಪ್ರಸ್ತುತ ಉದ್ಯಮ ಕ್ಷೇತ್ರವು ಕೇವಲ ಪದವಿ, ಅಂಕಗಳನ್ನು ಅಪೇಕ್ಷಿಸುತ್ತಿಲ್ಲ. ಅವುಗಳ ಜತೆಗೆ ವೃತ್ತಿಗೆ ಅಗತ್ಯವಾದ ಕೌಶಲ ಅಪೇಕ್ಷಿಸುತ್ತಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಂಟಿಯಾಗಿ ಸೋಮವಾರ ಏರ್ಪಡಿಸಿದ್ದ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮದ ‘ವೆಬ್‌ ಪೋರ್ಟಲ್’ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾವಂತ ಯುವ ಸಮುದಾಯ ಕೇವಲ ಪದವಿ, ಡಿಪ್ಲೊಮಾ, ಐಟಿಐ ಪ್ರಮಾಣಪತ್ರ ಪಡೆದರೆ ಸಾಲದು, ಉದ್ಯೋಗ ಪಡೆಯಲು ಬೇಕಾದ ಅಗತ್ಯ ವೃತ್ತಿ ಕೌಶಲ, ನೈಪುಣ್ಯತೆಗಳನ್ನು ಮೈಗೂಡಿಸಿಕೊಳ್ಳಬೇಕು. ಮಾತೃಭಾಷೆಯ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿಯೂ ವ್ಯವಹರಿಸುವ ಪ್ರತಿಭೆ ಗಳಿಸಿಕೊಳ್ಳಬೇಕು. ಉತ್ತಮ ಸಂವಹನ ಸಾಮರ್ಥ್ಯ ಇಂದಿನ ಸ್ಪರ್ಧಾಯುಗದ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

‘ಪ್ರತಿ ವರ್ಷ ಎಂಜಿನಿಯರಿಂಗ್ ಪದವಿ ಗಳಿಸುವವರಲ್ಲಿ ಶೇ 64 ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಯುವಜನರು ತಾವು ಅಧ್ಯಯನ ಮಾಡಿದ ವಿಷಯಗಳಲ್ಲಿ ವೃತ್ತಿ ಕೌಶಲ ಗಳಿಸಿಕೊಂಡರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ’ ಎಂದರು.

‘ದೇಶ, ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ  ಉದ್ಯೋಗದಾತ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸಿ, ಆ ಸಂಸ್ಥೆಗಳು ಬಯಸುವ ಅಗತ್ಯ ಕೌಶಲದ ತರಬೇತಿ ನೀಡಲು  ಪ್ರತ್ಯೇಕ ಇಲಾಖೆಯನ್ನೇ ಸ್ಥಾಪಿಸಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ‘ಪ್ರತಿ ವರ್ಷ 67 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, 34 ಲಕ್ಷ ವಿದ್ಯಾರ್ಥಿಗಳು ಪಿಯುಸಿ, 12 ಲಕ್ಷ ಜನ ಪದವಿ ಪಡೆಯುತ್ತಿದ್ದಾರೆ. ಇವರಿಗೆಲ್ಲ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ಸೃಜನೆ ಯೋಜನೆಯಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ವರ್ಷ 2.5 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಗುರಿ ಇದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಓ ಸ್ನೇಹಲ್‌ ಆರ್., ಜಿಲ್ಲಾ ಪಂಚಾಯ್ತಿ ಸದಸ್ಯ ಕರಿಯಪ್ಪ ಮಾದರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಹಾಜರಿದ್ದರು.

‘ಸಮರ್ಪಕ ಅನುಷ್ಠಾನ ಮುಖ್ಯ’
ಹುಬ್ಬಳ್ಳಿ: ಯೋಜನೆಗಳನ್ನು ಘೋಷಿಸುವುದು ಮಾತ್ರ ಸರ್ಕಾರದ ಕಾರ್ಯ ಆಗಬಾರದು. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಇಲ್ಲಿನ ಅಶೋಕ ನಗರದಲ್ಲಿರುವ ಕನ್ನಡ ಭವನದಲ್ಲಿ ‘ವೆಬ್‌ ಪೋರ್ಟಲ್‌’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕೌಶಲ ಅಭಿವೃದ್ಧಿ ಯೋಜನೆಯನ್ನು ರಾಜ್ಯ ಸರ್ಕಾರವು ಕಳೆದ ವರ್ಷವೇ ಬಜೆಟ್‌ನಲ್ಲಿ ಘೋಷಿಸಿತ್ತು, ಆದರೆ, ಅದು ಜಾರಿಯಾಗಲು ಒಂದು ವರ್ಷ ಬೇಕಾಯಿತು’ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

‘ರಾಜ್ಯ ಸರ್ಕಾರ ಜಾರಿ ಗೊಳಿಸಿದ ಹಲವಾರು ಯೋಜನೆಗಳು ಇಂದು ಆಮೆಗತಿಯಲ್ಲಿ ಸಾಗಿದ್ದು, ಅವುಗಳ ಲಾಭ ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರಿಗೆ ದೊರೆಯುತ್ತಿಲ್ಲ’ ಎಂದು ಟೀಕಿಸಿದರು.

‘ಈ ಯೋಜನೆ ಕೆವಲ ಪೋರ್ಟಲ್‌ನಲ್ಲಿ ಮಾತ್ರ ಸೀಮಿತವಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ‘ಯೋಜನೆಯ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವ ನಿರುದ್ಯೋಗಿಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ. ಬೊಮ್ಮಕ್ಕನವರ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೌಶಲ ಕಡಿಮೆಯಾಗುತ್ತಿರುವುದು ಬೆಸರದ ಸಂಗತಿ. ಯುವಕರ ಕೌಶಲ ಅಭಿವೃದ್ಧಿಗಾಗಿ ಈ ಯೋಜನೆಯಲ್ಲಿ ಅವರ ವಿದ್ಯಾರ್ಹತೆಯ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕ ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ ಗೊರ್ಲ, ಉಪಾಧ್ಯಕ್ಷೆ ಸರೋಜಾ ಅಳಗವಾಡಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮಚಂದ್ರ ಹೊಸಮನಿ ಇದ್ದರು.

ನೂತನ ಆ್ಯಪ್‌
‘ನಿರುದ್ಯೋಗಿಗಳು kaushalkar.com ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಬಿ.ಆರ್.ಅಂಬೇಡ್ಕರ್ ಭವನದಲ್ಲಿರುವ ವಿದ್ಯಾಸ್ನೇಹಿ ಉಚಿತ ದೂ. 18004255540 ಸಂಪರ್ಕಿಸಬಹುದು.

ಮೊಬೈಲ್‌ನಲ್ಲಿಯೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು’ ಎಂದು ಸಚಿವ ವಿನಯ ಕುಲಕರ್ಣಿ ತಿಳಿಸಿದರು.

*

ವೆಬ್‌ ಪೋರ್ಟಲ್‌ ಯೋಜನೆಯ ಉದ್ದೇಶ ಉತ್ತಮವಾಗಿದೆ. ಸಮರ್ಪಕವಾಗಿ ಇದರ ಉಪಯೋಗ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು
ಜಗದೀಶ ಶೆಟ್ಟರ್‌
ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT