ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲಾಸ್ಟಿಕ್‌ ಬಳಕೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ’

Last Updated 16 ಮೇ 2017, 6:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಸ್ವಚ್ಛತೆ ದೃಷ್ಟಿಯಿಂದ ಪ್ಲಾಸ್ಟಿಕ್‌ ಬಳಕೆಯ ಸಂಪೂರ್ಣ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಪ್ಲಾಸ್ಟಿಕ್‌ ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ಅವಳಿ ನಗರದ ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂಬ ಆಡಳಿತರೂಢ ಬಿಜೆಪಿ, ವಿರೋಧಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಆಗ್ರಹಕ್ಕೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಹುಬ್ಬಳ್ಳಿ–ಧಾರವಾಡ ಗಲೀಜು ನಗರವೇನಲ್ಲ. ಪ್ರತಿ ದಿನ 374 ಟನ್‌ ಕಸ ಉತ್ಪಾದನೆಯಾಗುತ್ತಿದ್ದು, ವಿಲೇವಾರಿಗೆ ಪಾಲಿಕೆ ಅಗತ್ಯ ಕ್ರಮಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.

ಘನತ್ಯಾಜ್ಯ ವಿಲೇವಾರಿ ಸಂಬಂಧ ₹ 25 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿತ್ತು.  ಆದರೆ, ಈ ಟೆಂಡರ್‌ ರದ್ದು ಪಡಿಸುವಂತೆ ಕೆಲ ಗುತ್ತಿಗೆದಾರರು ಕೋರ್ಟ್‌ ಮೆಟ್ಟಿಲೇರಿದ್ದರು. ಪಾಲಿಕೆ ಪರವಾಗಿ ಕೋರ್ಟ್‌ ತೀರ್ಪು ನೀಡಿದೆ. ಶೀಘ್ರದಲ್ಲೇ ಕಾರ್ಯಾದೇಶ (ವರ್ಕ್‌ ಆರ್ಡರ್‌) ನೀಡಲಾಗುವುದು ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ ಸಂಬಂಧ 19 ಹೊಸ ಟಿಪ್ಪರ್‌ ಹಾಗೂ 130 ಆಟೊ ಟಿಪ್ಪರ್‌  ಖರೀದಿಸಲಾಗುತ್ತಿದೆ. ಮನೆ, ಮನೆಯಿಂದ ಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.

‘ಭಗೀರಥ’ ಸ್ವಯಂ ಸೇವಾ ಸಂಘಟನೆಯು ಅವಳಿ ನಗರದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಸಂಬಂಧ ಸಾರ್ವಜನಿಕರಲ್ಲಿ ಮತ್ತು ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಆರೋಗ್ಯಾಧಿಕಾರಗಳ ನೇಮಕ ಪ್ರಕ್ರಿಯೆ ನಡೆದಿದ್ದು, ಇನ್ನೊಂದು ವಾರದೊಳಗೆ ಪ್ರತಿ ವಾರ್ಡ್‌ಗೆ ಒಬ್ಬ ಆರೋಗ್ಯಾಧಿಕಾರಿಯನ್ನು ನಿಯೋಜಿಸಲಾಗುವುದು ಎಂದರು.
‘ವೈಯಕ್ತಿಕ ಶೌಚಾಲಯ ಮತ್ತು ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಪಾಲಿಕೆಯಿಂದ ಆದ್ಯತೆ ನೀಡಲಾಗಿದೆ.

ವಾರದಲ್ಲಿ ಒಂದು ದಿನ ಮೇಯರ್‌ ಅವರೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡಿ, ಸ್ವಚ್ಛತೆ ಕಾರ್ಯ ಪರಿಶೀಲಿಸಲಾಗುವುದು ’ಎಂದು ಸಭೆಗೆ ತಿಳಿಸಿದರು.ಮೇಯರ್‌ ಡಿ.ಕೆ.ಚವ್ಹಾಣ, ಸ್ವಚ್ಛ ನಗರ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದರು.ಸದಸ್ಯರಾದ ಗಣೇಶ ಟಗರಗುಂಟಿ, ಅಲ್ತಾಫ್‌ ಕಿತ್ತೂರ, ಸುಧೀರ್‌ ಸರಾಫ್‌, ಗಣೇಶ, ಶಿವಾನಂದ ಮುತ್ತಣ್ಣವರ ಪಾಲ್ಗೊಂಡಿದ್ದರು.

ಕಸ ವಿಲೇವಾರಿ ಕಾರ್ಯಕ್ಕೆ ಅಸಮಾಧಾನ

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರು ಯುದ್ಧ ಘೋಷಣೆ ಮಾಡಬೇಕು ಎಂದು ಸದಸ್ಯ ವೀರಣ್ಣ ಸವಡಿ ಆಗ್ರಹಿಸಿದರು.

ಸಾಮಾನ್ಯ ಸಭೆಯ ಆರಂಭದಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ ಅವರು, ಅವಳಿ ನಗರವನ್ನು ಕಸ ಮುಕ್ತಗೊಳಿಸಲು ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ವಚ್ಛತೆ ವಿಷಯದಲ್ಲಿ ಪಾಲಿಕೆ ಅಧಿಕಾರಿಗಳ ಕಾರ್ಯ ತೃಪ್ತಿದಾಯಕವಾಗಿಲ್ಲ. ಆರೋಗ್ಯಾಧಿಕಾರಿ, ಪರಿಸರ ಎಂಜಿನಿಯರ್‌್ಸ್ ಈ ನಿಟ್ಟಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಸುಭಾಷ್ ಶಿಂಧೆ, ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಅಂಗಡಿಗಳವರು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ತಂದು ಸುರಿಯುತ್ತಿದ್ದಾರೆ. ಅವರ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಕಾಂಗ್ರೆಸ್‌ ಸದಸ್ಯ ಪ್ರಕಾಶ ಕ್ಯಾರಕಟ್ಟಿ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಒಂದು ಅಥವಾ ಎರಡು ವಾರ್ಡಿಗೊಬ್ಬ ಆರೋಗ್ಯಾಧಿಕಾರಿ ಮತ್ತು ವಿಶೇಷಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದರು.

ದಶರಥ ವಾಲಿ ಮಾತನಾಡಿ, ಹಳೆ ಕಟ್ಟಡಗಳ ತ್ಯಾಜ್ಯವನ್ನು ಖಾಲಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಾರೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.

*

ಸ್ವಚ್ಛತೆಗಾಗಿ ಪ್ರತಿ ವರ್ಷ ₹ 36 ಕೋಟಿ ಖರ್ಚು ಮಾಡುತ್ತಿದ್ದರೂ, ಯಾವುದೇ ಪ್ರಯೋಜವಾಗುತ್ತಿಲ್ಲ. ಈ ಬಗ್ಗೆ ಕೂಲಂಕಷ ಪರಿಶೀಲನೆಯಾಗಬೇಕು
ರಾಜಣ್ಣ ಕೊರವಿ
ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT