ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲಿಗೆ ವ್ಯಕ್ತಿ ಬಲಿ; ಮಳೆಗೆ ಒಡೆದ ಒಡ್ಡು

Last Updated 16 ಮೇ 2017, 11:58 IST
ಅಕ್ಷರ ಗಾತ್ರ

ಮುದ್ದೇಬಿಹಾಳ (ವಿಜಯಪುರ): ತಾಲ್ಲೂಕಿನ ವಿವಿಧೆಡೆ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಹಾನಿಯುಂಟಾಗಿದೆ. ನಾಗೂರ ಗ್ರಾಮದ ವ್ಯಕ್ತಿಯೊಬ್ಬ ಸಿಡಿಲಿಗೆ ಬಲಿಯಾಗಿದ್ದಾರೆ.

ಸೋಮವಾರ ನಸುಕಿನ ಮೂರು ವರೆ ಗಂಟೆ ಸಮಯದಲ್ಲಿ ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ನಾಗೂರ ಗ್ರಾಮದ ಹೊರ ವಲಯ ದಲ್ಲಿನ ಒಂಟಿ ಮನೆಯ ಪಡಸಾಲೆಯಲ್ಲಿ ಮಲಗಿದ್ದ ಪರಸಪ್ಪ ಶಿವಪ್ಪ ನಾಯ್ಕೋಡಿ (25) ಸಿಡಿಲು ಬಡಿದು ಸ್ಥಳದಲ್ಲೇ ಮೃತ ಪಟ್ಟರೆ, ಈತನ ಪತ್ನಿ ದೇವಮ್ಮ, ಎರಡು ವರ್ಷದ ಮಗು ಗಾಯಗೊಂಡಿದ್ದಾರೆ.

ಪಟ್ಟಣದ ತಾಳಿಕೋಟೆ ಬೈಪಾಸ್ ರಸ್ತೆಯ ನಾಗಠಾಣ ಸಾಮಿಲ್ ಬಳಿ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದರಿಂದ ಅಲ್ಲಿದ್ದ  ಸಾಮಿಲ್, ಗ್ಯಾರೇಜ್‌ಗೆ ಸಾಕಷ್ಟು ಹಾನಿ ಯಾಗಿದೆ. ತಗ್ಗುಪ್ರದೇಶ ಜಲಾವೃತ ಗೊಂಡಿದ್ದವು.

ಆರೇಮುರಾಳದಲ್ಲಿ ಅರ್ಧಕ್ಕೆ ನಿಂತಿರುವ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಹೊಲಗಳ ಒಡ್ಡು ನಾಶವಾಗಿದೆ.ಈರಣ್ಣ ಬಡಿಗೇರರ 10 ಎಕರೆ ಹೊಲ ಸಂಪೂರ್ಣ ಹಾಳಾಗಿದೆ. ತಂಗಡಗಿಯಲ್ಲೂ ಸಾಮಿಲ್‌ಗಳಲ್ಲಿನ ಮರದ ದಿಮ್ಮಿಗಳು ನೀರು ಪಾಲಾಗಿವೆ. ಕೆಲವೆಡೆ ಮೇಲ್ಛಾವಣಿಗೆ ಹೊದಿಸಿದ್ದ ತಗಡುಗಳು ಹಾರಿ ಹೋಗಿವೆ.

ಕೆಬಿಜೆಎನ್‌ಎಲ್‌ ಎಂಡಿಗೆ ನೋಟಿಸ್‌
ವಿಜಯಪುರ: ‘ನೀರಾವರಿ ಸಲಹಾ ಸಮಿತಿ (ಐಸಿಸಿ) ಗಮನಕ್ಕೂ ತರದೆ ಆಲಮಟ್ಟಿ ಜಲಾಶಯದಿಂದ 3.26 ಟಿಎಂಸಿ ಅಡಿ ನೀರನ್ನು ಹೊರಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು, ಪ್ರಥಮ ಹಂತವಾಗಿ ವಕೀಲರಿಂದ ಕೆಬಿಜೆ ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ಕೊಡಿಸಲಾಗಿದೆ’ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ತಿಳಿಸಿದರು.

‘ಐಸಿಸಿ ನಿರ್ದೇಶನಗಳನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಜಿಂದಾಲ್‌ ಕಂಪೆನಿಗೆ ನೀರು ಹರಿಸಲಿ ಕ್ಕಾಗಿಯೇ ಕೆಬಿಜೆಎನ್‌ಎಲ್‌ ಎಂಡಿ ಮುಖ್ಯ ಎಂಜಿನಿಯರ್‌ಗೆ ಆದೇಶ ನೀಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಯಾರ ಪ್ರಭಾವಕ್ಕೆ ಒಳಗಾಗಿ ಈ ರೀತಿಯ ಆದೇಶ ಹೊರಡಿಸಿದ್ದಾರೋ ಗೊತ್ತಿಲ್ಲ. ಆದರೆ ಇದರಿಂದ ಅವಳಿ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಲಚರಗಳು ಜೀವ ನ್ಮರಣದ ಹೋರಾಟ ನಡೆಸುತ್ತಿವೆ. ಇದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿ ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕಾರಣಕ್ಕಾಗಿಯೇ ಹೈಕೋರ್ಟ್‌ ಮೊರೆ ಹೊಕ್ಕಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT