ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ದೇವಾಲಯಕ್ಕೆ ಕಾಯಕಲ್ಪ

Last Updated 16 ಮೇ 2017, 6:35 IST
ಅಕ್ಷರ ಗಾತ್ರ

-ವಡ್ಡನಹಳ್ಳಿ ಬೊಜ್ಯಾನಾಯ್ಕ

**

ದೇವನಹಳ್ಳಿ: ವಿಜಯನಗರ ಅರಸರ ಸಮಕಾಲೀನ ದೇವಾಲಯ ಎಂದು ಪರಿಗಣಿಸಲ್ಪಟ್ಟಿರುವ ತಾಲ್ಲೂಕಿನ ಬನ್ನಿಮಂಗಲ ಗ್ರಾಮದ ಐತಿಹಾಸಿಕ ವೀರಾಂಜನೇಯ ಸ್ವಾಮಿ ದೇವಾಲಯ ಸಂಪೂರ್ಣ ಕಾಯಕಲ್ಪಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ಅರ್ಕಾವತಿ ನದಿ ಪಾತ್ರ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ ಮತ್ತು ಆಲೂರುದುದ್ದನಹಳ್ಳಿ ಕವಲು ನದಿಯ ಬನ್ನಿಮಂಗಲ ಕೆರೆ ಪಕ್ಕದಲ್ಲಿ ನಿರ್ಮಿಸಿರುವ  ದೇವಾಲಯದಲ್ಲಿ ಲಭ್ಯವಿರುವ ತುಂಡಾಗಿರುವ ಕಲ್ಲಿನ ಶಾಸನದಲ್ಲಿರುವಂತೆ ವಿಜಯನಗರ ಸಾಮ್ರಾಜ್ಯದಲ್ಲಿನ ರಾಜಗುರುಗಳಾಗಿದ್ದ ವ್ಯಾಸರು ಸತತ ಆರುತಿಂಗಳ ಕಾಲ ರಾಜ್ಯವನ್ನು ಪ್ರವಾಸ ಮಾಡಿ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ಒಟ್ಟು 708 ವಿವಿಧ ದೇವರುಗಳ ಮೂರ್ತಿ ಪ್ರತಿಷ್ಠಾಪಿಸಿ ಶಿಲಾನ್ಯಾಸ ಮಾಡಿದ್ದರು. ಈ ಪೈಕಿ ಬನ್ನಿಮಂಗಲ ವೀರಾಂಜನೇಯ ವಿಗ್ರಹ ಮೂರ್ತಿಯು ಒಂದಾಗಿದೆ ಎಂಬುದು ಇತಿಹಾಸ.

ಚೋಳರ ಸಾಧಾರಣ ಶೈಲಿಯ ಕೆತ್ತನೆಯಲ್ಲಿ ನಿರ್ಮಿಸಿದ್ದ ದೇವಾಲಯ ಚಿಕ್ಕದಿದ್ದರೂ ಇದರ ಮೂರ್ತಿ ಮತ್ತು ಕೀರ್ತಿ ಬಹುದೊಡ್ಡದು ಎಂಬುದು ಗ್ರಾಮದ ಹಿರಿಯ ಭಕ್ತರ ಅಭಿಪ್ರಾಯ.

ಆಂಜನೇಯ ಸ್ವಾಮಿ ಬಹುತೇಕ ದೇವಾಲಯಗಳು ದಕ್ಷಿಣಾಭಿಮುಖವಾಗಿ ನಿರ್ಮಾಣದಲ್ಲಿರುತ್ತವೆ. ಈ ದೇವಾಲಯ ಪಶ್ಚಿಮಾಭಿಮುಖವಾಗಿ ಕಾಣುವಂತೆ ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷವಾದರು ಸ್ಥಳೀಯ ಗ್ರಾಮ ವ್ಯಾಪ್ತಿ ಮತ್ತು ಕೆರೆಯಿಂದ ಹೊರಬರುವ ನೀರು ಆಧರಿಸಿ ವಾಸ್ತು ಪ್ರಕಾರ ನಿರ್ಮಾಣ ಮಾಡಲಾಗಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.

ಮುಜರಾಯಿ ಇಲಾಖೆಗೆ  ಒಳಪಟ್ಟಿರುವ ಈ ದೇವಾಲಯದ ವೀರಾಂಜನೇಯ ವಿಗ್ರಹವನ್ನು ಸಾಲಿಗ್ರಾಮ ಕಲ್ಲಿನಲ್ಲಿ  ಒಂಭತ್ತುವರೆ ಅಡಿ ಎತ್ತರ, ಆರುವರೆ ಅಡಿ ಅಗಲ, ಎರಡುವರೆ ಇಂಚು ದಪ್ಪದ ಕಲ್ಲಿನಲ್ಲಿ ಕೆತ್ತಲಾಗಿದ್ದು ,ಬಲಗೈ ಅಭಯ ಹಸ್ತ, ಎಡಗೈ ಸೊಂಟದ ಮೇಲೆ ಇದ್ದು ಲಾಂಗೋಲ ಮುಖದ ಪಕ್ಕದಲ್ಲಿರುವಂತೆ ಆಕರ್ಷಕವಾಗಿ ಕೆತ್ತನೆ ಮಾಡಲಾಗಿದೆ. ಸುಂದರ ಮೂರ್ತಿ ವೀರಾಜಮಾನನಂತೆ ಕಂಗೋಳಿಸುತ್ತದೆ.

ಈ ದೇವಾಲಯವನ್ನು ಭಕ್ತರ ನೇರವಿನಿಂದ 1923 ರಲ್ಲಿ ದುರಸ್ತಿ ಗೊಳಿಸಲಾಗಿತ್ತು, ಮತ್ತೆ ಭಕ್ತರ ಆಶಯದಂತೆ  ಪ್ರತಿಷ್ಠಾಪನೆ ಮತ್ತು ಕಾಮಗಾರಿಗೆ ಶಂಕುಸ್ಥಾಪನೆ ನಡೆದು 2003 ರಲ್ಲಿ ಉದ್ಘಾಟನೆಯಾಗಿತ್ತು. ದೇವಾಲಯದ ಒಕ್ಕಲು ಹೆಚ್ಚಿದಂತೆ ದೇವಾಲಯ ಅಭಿವೃದ್ಧಿ ಸಮಿತಿ ರಚಿಸಿ ಚದುರಿಹೊಗಿದ್ದ ಒಕ್ಕಲು ಮನೆತನದವರನ್ನು ಒಂದೆಡೆ ಸೇರಿಸಿ ಭಕ್ತರ ಅಗತ್ಯತೆಗೆ ಅನುಗುಣವಾಗಿ 25 ಅಡಿ ಎತ್ತರದ ರಾಜಗೊಪುರ, ನವಗ್ರಹ ದೇವಾಲಯ, ಅಶ್ವಥಕಟ್ಟೆ, ಶಿವಪಾರ್ವತಿ, ಗಣೇಶ, ಪಂಚಲೊಹದ  ಉತ್ಸವ ಮೂರ್ತಿ ಮತ್ತು ಚಿಕ್ಕ ಮಾರಮ್ಮ ದೇವಾಲಯವನ್ನು ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಮೋಹನ್ ಕುಮಾರ್, ಕಾರ್ಯದರ್ಶಿ ಎ.ಶಿವರಾಮಯ್ಯ, ಮುಜರಾಯಿ ಇಲಾಖೆ ಸಮಿತಿ ಸದಸ್ಯ ಪಿಳ್ಳಾಂಜಿನಪ್ಪ ಅವರ ಪ್ರತಿಕ್ರಿಯೆ.

ನಂಬಿದವರಿಗೆ ವೀರಾಂಜನೇಯ ಅಭಯ ಹಸ್ತ: ವಿವಾಹಕ್ಕೆ, ಅರ್ಥಿಕ ಸಂಕಷ್ಠ, ವ್ಯಾಪಾರವಹಿವಾಟು, ಸಂತಾನಭಾಗ್ಯ ಯಾವುದೇ ರೀತಿಯ ತೊಂದರೆ ಇದ್ದು, ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರೆ ಸಾಕು ಒಳ್ಳೆಯದಾಗುತ್ತದೆ. ನಂಬಿದವರಿಗೆ ಅಭಯ ಹಸ್ತ ನೀಡುತ್ತಾನೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.

**

ಮೇ 16ರಿಂದ  ಧಾರ್ಮಿಕ ಕಾರ್ಯಕ್ರಮ

ಮೇ 16ಕ್ಕೆ ಬೆಳಿಗ್ಗೆ ಸುಪ್ರಭಾತ ಸೇವೆ, ವೇದ ಪಾರಾಯಣ, ವಿಶ್ವಕ್ಷೇನ ಪೂಜೆ, ಪುಣ್ಯಹವಾಚನ ಅಭಿಷೇಕ, ಅಲಂಕಾರ ,ಅಷ್ಠಾವಧಾನ ಸೇವೆ, ನೈವೇದ್ಯ.ಸಂಜೆ ವಿಷ್ಟು ಸಹಸ್ರ ನಾಮ ಪಾರಾಯಣ, ವೇದ ಪಾರಾಯಣ, ಅನುಘ್ನೆ ಸ್ವತ್ತಿವಾಚನ, ರಕ್ಷಾಬಂಧನ ಅಂಕುರಾರ್ಪಣಾ , ಯಾಗ ಶಾಲಾ ಪ್ರವೇಶ, ಹೊಮ, ಪುರ್ಣಾಹುತಿ.

17 ರಂದು ಬೆಳಿಗ್ಗೆ ಯಥಾಸ್ಥಿತಿ ನಿತ್ಯದ ಸೇವೆಯ ನಂತರ ಮಂಡಲಾಸ್ವರಾಧನೆ, ಹೊಮ, ರಾಜ ಗೋಪುರ ಪ್ರತಿಷ್ಠಾನ ಹೋಮ, ಮೂರ್ತಿ ಹೋಮ, ಪುರ್ಣಾಹುತಿ, ಮಂತ್ರ ಪುಪ್ಪ ನೈವೇದ್ಯ .ಸಂಜೆ ವಿಷ್ಣು ಮತ್ತು ಲಲಿತ ಸಹಸ್ರನಾಮ ಹಾಗೂ ವೇದ ಪಾರಾಯಣ, ಹೋಮ, ನೇತ್ರೋನ್ಮಿಲನ, ಕರ್ಮಾಂಗ ಸ್ವಪ್ನ ಹೋಮ, ಪೂರ್ಣಾಹುತಿ ಶಯಾನಿವಾಸ, ರತ್ನಾದಿವಾಸ, ಪುಪ್ಪಾಧಿವಾಸ, ನೈವೇದ್ಯ.

18ರಂದು ಬೆಳಗಿನ ಜಾವ 3.45 ರಿಂದ 5.30 ಕ್ಕೆ ರಾಜಗೋಪುರ ಕಲಶಗಳು ಮತ್ತು ಪಂಚಲೋಹದ ನೂತನ ನಂದಿ ವಾಹನ ಸಮೇತ  ಶಿವಪಾರ್ವತಿ ಮತ್ತು ನವಗ್ರಹ ಹಾಗೂ ಚಿಕ್ಕ ಮಾರಮ್ಮ ದೇವಿ ಪ್ರತಿಷ್ಠಾಪನೆ ನಡೆಯಲಿದ್ದು ಅದಿಚುಂಚನಗಿರಿ ಮಠ ಪೀಠಾಧ್ಯಕ್ಷ ನಿರ್ಮಾಲಾನಂದ ಸ್ವಾಮಿ, ವಿಶ್ವಒಕ್ಕಲಿಗರ ಮಹಾ ಸಂಸ್ಥಾನ ಪೀಠಾಧ್ಯಕ್ಷ ಚಂದ್ರಶೇಖರ ನಾಥಸ್ವಾಮಿ, ಸ್ಪಟಿಕ ಪುರಿ ಕ್ಷೇತ್ರದ  ನಂಜಾವಧೂತ ಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ .

**

ಹನುಮ ಜಯಂತಿ ಜೊತೆಗೆ ವಾರ್ಷಿಕ ಶ್ರಾವಣ ಶನಿವಾರ, ಕಾರ್ತಿಕ ಸೋಮವಾರ, ಶ್ರೀರಾಮನವಮಿ, ಹುಣ್ಣಿಮೆ ಮತ್ತು ಪೌರ್ಣಿಮೆಗಳಲ್ಲಿ ವಿಶೇಷ ಪೂಜೆ, -ಲಕ್ಷದೀಪೋತ್ಸವ ನಡೆಯುತ್ತದೆ.
-ರಾಮಾನುಜಂ,  ದೇಗುಲ ಅರ್ಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT