ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳರಿಮೆ ಬಿಡಿ; ಕೌಶಲ ತರಬೇತಿ ಪಡೆಯಿರಿ

Last Updated 16 ಮೇ 2017, 6:37 IST
ಅಕ್ಷರ ಗಾತ್ರ

ವಿಜಯಪುರ: ‘ಉತ್ತರ ಕರ್ನಾಟಕದ ಗ್ರಾಮೀಣ ಯುವಕರು–ವಿದ್ಯಾರ್ಥಿಗಳು ಕೀಳರಿಮೆ ತೊರೆದರೆ ಅಗಾಧ ಸಾಧನೆಗೈಯಬಲ್ಲರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಸಸಿಗೆ ನೀರುಣಿಸುವ ಮೂಲಕ ನಿರುದ್ಯೋಗಿ ಯುವ ಜನರ ಬೇಡಿಕೆಯ ಸಮೀಕ್ಷೆ, ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಅಂಗವಾಗಿ ಜಾಲತಾಣದ ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಸಚಿವರು, ಇಂಗ್ಲಿಷ್‌ ಮಾತನಾಡಲು ಹಿಂಜರಿಯಬೇಡಿ ಎಂಬ ಆತ್ಮಸ್ಥೈರ್ಯದ ನುಡಿಗಳನ್ನು ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ಹೇಳಿದರು.

ಗ್ರಾಮೀಣ ಯುವ ಜನಾಂಗದ ವೃತ್ತಿ ನೈಪುಣ್ಯತೆ ಹೆಚ್ಚಿಸಲು ಪ್ರತಿ ವರ್ಷ 5 ಲಕ್ಷ ಯುವ ಜನರಿಗೆ ವಿವಿಧ ಕೌಶಲಗಳಲ್ಲಿ ತರಬೇತಿ ನೀಡಲು ‘ಮುಖ್ಯಮಂತ್ರಿ ಕೌಶಲ ಕರ್ನಾಟಕ’ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರ ಪ್ರಯೋಜನ ಪಡೆಯಿರಿ ಎಂದು ಸಲಹೆ ನೀಡಿದರು.

ಇದೇ 15ರ ಸೋಮವಾರದಿಂದ ಯೋಜನೆಯಡಿ ನೋಂದಣಿ ಆರಂಭಗೊಂಡಿದೆ. 22ರವರೆಗೆ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ನಡೆಯುವ ಕೌಶಲ ಶಿಬಿರದಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಉಚಿತವಾಗಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.

ನಂತರವೂ ಕೂಡ ನೋಂದಣಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಯಾವುದೇ ಅಂತರ್ಜಾಲ, ಸೈಬರ್ ಕೆಫೆ, ಮೊಬೈಲ್ ಆ್ಯಪ್‌ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ನಕಾಶೆ ಅನಾವರಣ: ಡಿಸೆಂಬರ್‌ನೊಳಗೆ ಜಿಲ್ಲೆಯ 203 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಗು ವುದು ಎಂದು ನಕಾಶೆ ಬಿಡುಗಡೆ ಗೊಳಿಸಿದ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ₹ 13500 ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ₹ 9000 ಕೋಟಿ ಮೊತ್ತದ ಯೋಜನೆಯನ್ನು ಈ ಅವಧಿಯಲ್ಲೇ ಪೂರ್ಣಗೊಳಿಸಲಾಗು ವುದು ಎಂದು ಹೇಳಿದರು.

ಶಾಸಕ ಡಾ.ಮಕ್ಬೂಲ್ ಬಾಗವಾನ ಮಾತನಾಡಿ ಬೇಂಗ ತಲಾಬ್, ಭೂತನಾಳ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ಮಟ್ಟ ಕೂಡ ಹೆಚ್ಚಾಗುತ್ತಿದೆ. ಭೂತನಾಳ ಕೆರೆಗೆ ನೂತನ ಪಂಪ್ ಅಳವಡಿಸುವ ಪ್ರಸ್ತಾವನೆಯಿದ್ದು, ಇದು ಅನುಷ್ಠಾನಗೊಂಡಲ್ಲಿ ನಗರದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್ ಅನೀಸ್‌ ಫಾತಿಮಾ ಬಕ್ಷಿ, ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಎಡವೆ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಂ.ಸುಂದರೇಶಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎನ್‌. ಸಿದ್ಧರಾಮಪ್ಪ ಉಪಸ್ಥಿತರಿದ್ದರು. ಸಾರ್ವ ಜನಿಕ ಶಿಕ್ಷಣ ಇಲಾಖೆಯ ಅಶೋಕ ಎಂ.ಲಿಮಕರ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಉಪ ವಿಭಾಗಾಧಿಕಾರಿ ಶಂಕರ ವಣಿಕ್ಯಾಳ ಸ್ವಾಗತಿಸಿದರು.

‘ತರಬೇತಿಯಲ್ಲಿ ಭವಿಷ್ಯ ಇದೆ’
ಇಂಡಿ: ಗ್ರಾಮೀಣ ಯುವಕರಿಗೆ ಪ್ರತ್ಯೇಕವಾಗಿ ವಿವಿಧ 24 ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಕೌಶಲ ತರಬೇತಿ ಜಾರಿಗೆ ತಂದಿದ್ದು, ಇದನ್ನು ಅಚ್ಚುಕಟ್ಟಾಗಿ ನಡೆಸಿದ್ದಾದರೆ ಮಾದರಿ ಕಾರ್ಯ ಆಗು ತ್ತದೆ ಎಂದು ಶಾಸಕ ಯಶವಂತ ರಾಯ ಗೌಡ ಪಾಟೀಲ ಅಭಿಪ್ರಾಯಪಟ್ಟರು.

ಅವರು ಕೌಶಲ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ತಾಲ್ಲೂಕು ಆಡಳಿತ ಆಶ್ರಯದಲ್ಲಿ ಸೋಮವಾರ ತಾಲ್ಲೂಕು ಪಂಚಾಯತಿ ಸಭಾ ಭವನ ದಲ್ಲಿ ಆಯೋಜಿಸಿದ್ದ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ತರಬೇತಿ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಗಳ ಕೌಶಲ ತರಬೇತಿ ಮೊದಲು ಕೇವಲ ಕಾರ್ಮಿಕ ಇಲಾಖೆ ಯಲ್ಲಿತ್ತು. ಅದು ಅಷ್ಟೊಂದು ಕೆಲಸ ಮಾಡದೇ ಇರುವುದರಿಂದ ಇದನ್ನು ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಇಓ ಅವರ ನೇತೃತ್ವದಲ್ಲಿ ನೀಡಲಾಗಿದೆ ಎಂದರು.

ಜೂನ್‌ 15 ರಿಂದ22 ರ ವರೆಗೆ 16 ರಿಂದ 35 ವರ್ಷ ವಯಸ್ಸಿನ ಯುವಕರಿಗೆ ವಿವಿಧ ತರಬೇತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಯುವಕರು ತಮಗೆ ಆಸಕ್ತಿಯಿರುವ ಇಲಾಖೆಗಳ ಬಗ್ಗೆ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು ಎಂದರು.

ತಹಶೀಲ್ದಾರ್ ಎಸ್.ಎಂ.ಮ್ಯಾಕೇರಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಇಓ ರಾಜ ಕುಮಾರ ತೊರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರುಕ್ಮುದ್ದೀನ ತದ್ದೇವಾಡಿ, ಇಲಿಯಾಸ್ ಬೋರಾ ಮಣಿ, ರಾಜಕುಮಾರ ತೊರವಿ, ರಮೇಶ ಕಲ್ಮಡಿ ಇದ್ದರು.

*

ಜಗತ್ತಿನಲ್ಲೇ ಯುವ ಜನತೆ ಹೊಂದಿದ ರಾಷ್ಟ್ರ ನಮ್ಮದು. ಅದರಲ್ಲೂ ನಮ್ಮ ರಾಜ್ಯ ಜನಸಂಖ್ಯೆಯ ಅರ್ಧದಷ್ಟು ಯುವ ಸಮೂಹವನ್ನು ಹೊಂದಿರುವುದು ಹೆಗ್ಗಳಿಕೆಯ ವಿಷಯ
ಎಂ.ಬಿ.ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT