ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಪ್ಪು ಮರಳಿನ ಕಡಲ ತೀರ’ಕ್ಕೆ ತೂಗು ಸೇತುವೆ

Last Updated 16 ಮೇ 2017, 6:53 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಮಾಜಾಳಿಯ ಕಡಲ ತೀರದಿಂದ ತಿಳ್‌ಮಾತಿ ಕಡಲ ತೀರ (ಕಪ್ಪು ಮರಳಿನ ಸಮುದ್ರ) ಕ್ಕೆ ತೂಗು ಸೇತುವೆ ನಿರ್ಮಾಣ ಮಾಡಲು ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದ್ದು, ಅಕ್ಟೋಬರ್ ತಿಂಗಳಾಂತ್ಯದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳ ಅಭಿವೃದ್ಧಿ ದೃಷ್ಟಿಯಿಂದ 2014 ರಲ್ಲಿಯೇ ತಿಳ್‌ಮಾತಿಯನ್ನು ಒಡಗೂಡಿ ಒಟ್ಟು ಜಿಲ್ಲೆಯ 12 ಕಡಲ ತೀರಗಳ ಅಭಿವೃದ್ಧಿಗೆ ₹ 32 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅದರಲ್ಲಿ ತಿಳ್‌ಮಾತಿ ಕಡಲ ತೀರಕ್ಕೆ ತೂಗು ಸೇತುವೆ ನಿರ್ಮಾಣ ಮಾಡಲು ₹ 1  ಕೋಟಿ ಮೀಸಲಿಡಲಾಗಿತ್ತು.

ಆದರೆ ಸ್ಥಳ ಪರಿಶೀಲನೆಯ ಬಳಿಕ ‘ಈ ಮೊತ್ತದಲ್ಲಿ ಸೇತುವೆ ನಿರ್ಮಾಣ ಅಸಾಧ್ಯ. ಕನಿಷ್ಠ ₹ 1  ಕೋಟಿ ಹೆಚ್ಚುವರಿ ಅನುದಾನ ಒದಗಿಸಬೇಕು’ ಎಂದು 2015 ರಲ್ಲಿ ಲೋಕೋಪಯೋಗಿ ಇಲಾಖೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಕಳುಹಿಸಿತ್ತು.

ಅದರಂತೆ 2016 ರಲ್ಲಿ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ₹ 1.23 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದು, ಒಟ್ಟೂ ₹ 2.23 ಕೋಟಿ ಅನುದಾನ ಬಳಸಿಕೊಂಡು ತೂಗು ಸೇತುವೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.

‘ಬೇಡಿಕೆ ಇಟ್ಟಿದ್ದ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿ, ಮಾಜಾಳಿ ಕಡಲ ತೀರದಿಂದ ತಿಳ್‌ಮಾತಿ ಕಡಲ ತೀರಕ್ಕೆ ತೂಗು ಸೇತುವೆ ನಿರ್ಮಾಣ ಮಾಡಲು ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ಸೂಚಿಸಿದೆ. ಇದೇ ತಿಂಗಳ ಅಂತ್ಯದೊಳಗೆ ತಾಂತ್ರಿಕ ಪರಿ ಶೀಲನೆ ನಡೆಸಿ, ಟೆಂಡರ್ ಕರೆಯಲಾಗು ವುದು. ಮಳೆಗಾಲ ಪ್ರಾರಂಭವಾಗುವು ದರಿಂದ ಟೆಂಡರ್ ಪ್ರಕ್ರಿಯೆ ಬೇಗ ಮುಗಿದರೂ ಕಾಮಗಾರಿಗೆ ಅಕ್ಟೋಬರ್ ತಿಂಗಳಲ್ಲಿ ಚಾಲನೆ ಸಿಗಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿ ಯರ್ ಸತ್ಯನಾರಾಯಣ ಎಸ್‌ಎಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೀಲನಕ್ಷೆ ಸಿದ್ಧ: ‘ಮಾಜಾಳಿ ಕಡಲ ತೀರದಿಂದ ತಿಳ್‌ಮಾತಿ ಕಡಲ ತೀರಕ್ಕೆ ತೆರಳಲು ನಡುವಿನ ಎರಡು ಗುಡ್ಡಗಳನ್ನು ಹತ್ತಿ ಇಳಿಯಬೇಕಾಗುತ್ತದೆ. ಈಗ ನಿರ್ಮಾಣ ಮಾಡಲು ಸಿದ್ಧತೆ ನಡೆಸುತ್ತಿರುವ ತೂಗು ಸೇತುವೆಯಿಂದ ಪ್ರವಾಸಿಗರಿಗೆ ಉಪಯೋಗವಾಗಲಿದೆ.

ಸುಮಾರು 160 ಮೀ. ಉದ್ದದ ಸೇತುವೆ ಇದಾಗಿದ್ದು, ಸಂಪೂರ್ಣ ಯೋಜನೆಯ ನೀಲನಕ್ಷೆ ಸಿದ್ಧಗೊಂಡಿದೆ. ಸಮುದ್ರದ ಉಪ್ಪು ನೀರು ಉಕ್ಕಿಗೆ ಸೋಂಕಿದ್ದಲ್ಲಿ ಬಹುಬೇಗ ಅದು ತುಕ್ಕು ಹಿಡಿಯುವ ಸಾಧ್ಯತೆ ಇರುವುದರಿಂದ ಬಾಳಿಕೆ ಬರುವಂಥ ಸ್ಟೀಲ್‌ಗಳನ್ನು ಬಳಸಲಾಗುತ್ತದೆ. ಯೋಜನೆ ಪ್ರಾರಂಭವಾದರೆ 11 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಶೀಘ್ರ ಹಾಗೂ ಗುಣಮಟ್ಟದ ಕಾಮಗಾರಿ ನಡೆಸಲು ಸೂಕ್ತ ಕಂಪೆನಿಗೆ ಟೆಂಡರ್ ನೀಡಲು ಯೋಚಿಸಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರವಾಸಿಗರಿಗೆ  ವಿಶೇಷ ಆಕರ್ಷಣೆ
ಭಾರತದಲ್ಲಿರುವ ಎರಡೇ ಕಪ್ಪು ಮರಳಿನ ಕಡಲತೀರದಲ್ಲಿ ಕಾರವಾರ ತಾಲ್ಲೂಕಿನಿಂದ 8 ಕಿ.ಮೀ. ದೂರದಲ್ಲಿರುವ ತಿಳ್‌ಮಾತಿ ಕಡಲ ತೀರ ಕೂಡ ಒಂದು. ಕಪ್ಪು ಬಣ್ಣದ ಎಳ್ಳಿನ ಗಾತ್ರದಲ್ಲಿರುವ ಇಲ್ಲಿನ ಮರಳಿನಿಂದ ಇದು ಪ್ರವಾಸಿಗರಿಗೆ ವಿಶೇಷ ಹಾಗೂ ಅತ್ಯಾಕರ್ಷಣೀಯ ತಾಣವಾಗಿದೆ.

ವಿದ್ಯಾರ್ಥಿಗಳ ನೈಸರ್ಗಿಕ ಚಾರಣಗಳಿಗೆ, ಪ್ರಕೃತಿ ಪ್ರೇಮಿ ಹಾಗೂ ಕಡಲ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತೀರವಾಗಿದೆ. ಈಗ ತೂಗು ಸೇತುವೆ ನಿರ್ಮಾಣವಾದರೆ ಇಲ್ಲಿನ ಸೌಂದರ್ಯ ಸವಿಯಲು ಸ್ಥಳೀಯರೊಂದಿಗೆ ಇನ್ನಷ್ಟು ಪ್ರವಾಸಿಗರು ಸಹ ಬರುವ ಸಾಧ್ಯತೆಗಳಿವೆ.

*

ತೂಗು ಸೇತುವೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಸದ್ಯದಲ್ಲೇ ಹಣ ಬಿಡುಗಡೆಯಾಗಲಿದೆ
ಗೋಪಾಲಕೃಷ್ಣ ಬೇಕಲ್
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT