ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 30 ಸಾವಿರ ಯುವಜನರಿಗೆ ತರಬೇತಿ

Last Updated 16 ಮೇ 2017, 6:57 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಕೌಶಲ ಮಿಷನ್‌ ವತಿಯಿಂದ ಜಾರಿಗೊಳಿಸಿರುವ ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ’ ಯೋಜನೆಯಡಿ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಹಾಗೂ ನೋಂದಣಿ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ನೋಂದಣಿಗಾಗಿ ಆರಂಭಿಸಿರುವ ವೆಬ್‌ಪೋರ್ಟಲ್‌ (http://kausalakar.com) ಅನಾ ವರಣಗೊಳಿಸಿದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ನಿರುದ್ಯೋಗಿ ಯುವಜನರಿಗೆ ಕೌಶಲ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 7 ದಿನಗಳವರೆಗೆ ನೋಂದಣಿ ಶಿಬಿರ ನಡೆಯಲಿದೆ.

ನಗರದಲ್ಲಿ ಚನ್ನಮ್ಮ ವೃತ್ತ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮೇ 22ರವರೆಗೆ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಮಹತ್ವಾಕಾಂಕ್ಷಿ ಯೋಜನೆ: ‘ಯುವಜನರಿಗೆ ಅನುಕೂಲವಾಗುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದೆ. ಇದನ್ನು ಯುವಕ, ಯುವತಿಯರು ಬಳಸಿಕೊಳ್ಳಬೇಕು. ಇಂದಿನ ಜಾಗತಿಕ ಪೈಪೋಟಿಯ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅತ್ಯಗತ್ಯೆ’ ಎಂದು ರಮೇಶ ಜಾರಕಿಹೊಳಿ ಹೇಳಿದರು.

‘ನಮ್ಮವರು ಹೋಗಿ ಕೆಲಸ ಮಾಡುತ್ತಿರುವುದರಿಂದಲೇ ಜರ್ಮನಿ ಹಾಗೂ ಜಪಾನ್‌ ಅಭಿವೃದ್ಧಿ ಹೊಂದಿದ ದೇಶಗಳಾಗಿವೆ. ನಮ್ಮಲ್ಲಿನ ಯುವಜನರ ಪ್ರತಿಭೆ ಇಲ್ಲಿಗೆ ಸದ್ಬಳಕೆ ಆಗಬೇಕು’ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಫಿರೋಜ್‌ಸೇಠ್‌ ಮಾತನಾಡಿ, ‘ಯುವಜನರು ಓದು ಮುಗಿಸಿದ ನಂತರ ಮುಂದೇನು ಮಾಡಬೇಕು ಎನ್ನುವ ಪ್ರಶ್ನೆ ಸಹಜ. ಇದಕ್ಕಾಗಿ ಕೌಶಲಗಳನ್ನು ಕಲಿಯಬೇಕು. ಹೊಟ್ಟೆ ಹಸಿದಾಗೆಲ್ಲ ಊಟ ಬೇಕು ಎಂದಾದರೆ ಕೆಲಸ ಮಾಡಲೇಬೇಕಾಗುತ್ತದೆ. ಅವಕಾಶಗಳ ಸದ್ಬಳಕೆಗಾಗಿ ಕೌಶಲ ಅತ್ಯಂತ ಮಹತ್ವದ್ದಾಗಿದೆ’ ಎಂದು ತಿಳಿಸಿದರು.

‘ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಬದಲಾಗುತ್ತಿದೆ. ಅಂತೆಯೇ ಬದಲಾವಣೆಗಳೂ ವೇಗದಲ್ಲಿಯೇ ಆಗುತ್ತಿವೆ. ಹೀಗಾಗಿ ಸ್ವಂತವಾಗಿ ಹಾಗೂ ವಿಭಿನ್ನವಾಗಿ ಏನಾದರೂ ಮಾಡುತ್ತೇನೆ ಎಂದು ಯುವಜನರು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

ಯಾವುದೇ ವಿದ್ಯಾರ್ಹತೆ ಷರತ್ತಿಲ್ಲ: ‘ರಾಜ್ಯದಲ್ಲಿ 6.16 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 3.44 ಕೋಟಿ ಮಂದಿ ಯುವಜನರೇ ಇದ್ದಾರೆ. ಇವರಲ್ಲಿ ಬಹಳ ಮಂದಿಗೆ ಕೌಶಲವಿಲ್ಲ. ಯುವಜನರ ಬದುಕು ಉಜ್ವಲವಾಗಬೇಕು.

ಭರವಸೆಯ ಬೆಳಕು ಮೂಡುವುದಕ್ಕಾಗಿ ಅವರನ್ನು ಕೌಶಲ ಹಾಗೂ ಸಾಮರ್ಥ್ಯದೊಂದಿಗೆ ಸನ್ನದ್ಧಗೊಳಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಕೌಶಲ ಕರ್ನಾಟಕ ಯೋಜನೆ ಜಾರಿಗೊಳಿಸಿದೆ’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಯೋಜನೆಯಡಿ 30 ಸಾವಿರ ಮಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿವಿಧ 500 ವಿಷಯ ಕುರಿತು ತರಬೇತಿ ಕೊಡಲಾಗುವುದು. ನೋಂದಣಿಗೆ ಯಾವುದೇ ವಿದ್ಯಾರ್ಹತೆಯ ಷರತ್ತಿಲ್ಲ. 18ರಿಂದ 35 ವರ್ಷ ವಯಸ್ಸಿನವರೆಲ್ಲರೂ ನೋಂದಣಿ ಮಾಡಿಕೊಳ್ಳಬಹುದು’ ಎಂದು ವಿವರಿಸಿದರು.

‘ಇಂಥ ತರಬೇತಿಯನ್ನು ಖಾಸಗಿ ಕಂಪೆನಿಗಳಲ್ಲಿ ಪಡೆಯಬೇಕಾದರೆ ಬಹಳ ಶುಲ್ಕ ಕೊಡಬೇಕಾಗುತ್ತದೆ. ಆದರೆ, ಸರ್ಕಾರದಿಂದ ನೋಂದಣಿ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.

ತರಬೇತಿ ಪಡೆದವರಲ್ಲಿ ಶೇ  70ರಷ್ಟು ಮಂದಿಗೆ ಕೆಲಸ ಸಿಗಲಿದೆ. ಉತ್ತಮ ಗುಣಮಟ್ಟದ ತರಬೇತಿ ಕೊಡಲಾಗುವುದು. ಯುವಕ, ಯುವತಿಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಸಿಇಒ ಆರ್‌. ರಾಮಚಂದ್ರನ್‌ ಭಾಗವಹಿಸಿದ್ದರು.

*

ಉದ್ಯೋಗದಾತರು ಪದವಿಯೊಂದಿಗೆ ಕೌಶಲವುಳ್ಳ ಅಭ್ಯರ್ಥಿಗಳನ್ನು ಹುಡುಕುತ್ತಿರುತ್ತಾರೆ. ಹೀಗಾಗಿ, ಕೌಶಲ ಅಭಿವೃದ್ಧಿ ಮೂಲಕ ಯುವಜನರನ್ನು ಸಬಲರನ್ನಾಗಿಸಲು ಯೋಜನೆ ಜಾರಿಗೊಳಿಸಲಾಗಿದೆ

ಎನ್‌. ಜಯರಾಮ್‌ ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT