ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ: ರೈತರ ಹರ್ಷ

Last Updated 16 ಮೇ 2017, 7:04 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ಉತ್ತಮ ವರ್ಷಧಾರೆಯಾದ ವರದಿಯಾಗಿದೆ. ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಪಟ್ಟಣದ ಸುತ್ತಮುತ್ತ 52 ಮಿಮೀ ಮಳೆ ಸುರಿದಿದ್ದು, ತಾಲ್ಲೂಕಿ ನಾದ್ಯಂತ ಸರಾಸರಿ 4 ಸೆಂ.ಮೀಗಳಷ್ಟು ಮಳೆ ಸುರಿದ ವರದಿಯಾಗಿದೆ.

ಗುಡುಗು, ಸಿಡಿಲಿನ ಆರ್ಭಟ ದೊಂದಿಗೆ ನಸುಕಿನ ಜಾವ ಶುರುವಾದ ಮಳೆದೊಡ್ಡ ಗಾತ್ರದ ಹನಿಗಳೊಂದಿಗೆ ಉದುರಿದೆ. ಅಲ್ಲಲ್ಲಿ ಮಳೆಯ ಸಂದರ್ಭದಲ್ಲಿ ಮಧ್ಯಮ ಗಾತ್ರದ ಆಲಿಕಲ್ಲುಗಳು ಬಿದ್ದಿವೆ.

ಬಿಸಿಲಿನ ಝಳದಿಂದ ತತ್ತರಿಸಿದ ಜನ ಮತ್ತು ಜಾನುವಾರುಗಳಿಗೆ ಅಕಾಲಿಕ ಮಳೆ ನೆಮ್ಮದಿ ತಂದಿದ್ದು, ಮನಸ್ಸಿಗೆ ಸಮಾಧಾನ ತಂದ ಮಳೆಯಿಂದಾಗಿ ತಾಲ್ಲೂಕಿನ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಿರೇಬಾಗೇವಾಡಿ ವರದಿ: ಸೋಮವಾರ ಬೆಳಗಿನ ಜಾವ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.ಒಮ್ಮೆಲೆ ಗುಡುಗು ಮಿಂಚುಗಳಿಲ್ಲದೇ ನಿಶ್ಯಬ್ದವಾಗಿ ಪ್ರಾರಂಭವಾದ ಭಾರೀ ಮಳೆ ಹಳ್ಳ ಕೊಳ್ಳಗಳನ್ನೆಲ್ಲ ತುಂಬಿಸಿ ಹರಿಸಿತ್ತು.

ಓಣಿಗಳಲ್ಲಿ ಹಳ್ಳದಂತೆ ನೀರು ಹರಿಯತೊಡಗಿತ್ತು. ಕಾದ್ರಿ ದರ್ಗಾದ ಬಳಿಯ ಹಳ್ಳವಂತೂ ತುಂಬಿ ಹರಿಯತೊಡಗಿದ್ದರಿಂದ ಬೆಳಗಿನ ಜಾವ ಮಳೆಯನ್ನು ಲೆಕ್ಕಿಸದೇ ಜನ ತುಂಬಿ ಹರಿವ ಹಳ್ಳ ನೋಡಲು ಮುಗಿ ಬಿದ್ದಿದ್ದರು. ಹೊಲ ಗದ್ದೆಗಳಲ್ಲೆಲ್ಲ ನೀರು ನಿಂತಿತ್ತು. ಸುಮಾರು ಒಂದು ಗಂಟೆಯ ವರೆಗೆ ಸುರಿದ ಭಾರಿ ಮಳೆ ಗ್ರಾಮಸ್ಥರಲ್ಲಿ ನೆಮ್ಮದಿಯನ್ನು ಮೂಡಿಸಿದೆ.

ನಡುಗಡ್ಡೆಯಾದ ಗಾಂಧಿನಗರ ಬಡಾ ವಣೆ: ಇಲ್ಲಿಯ ಗಾಂಧಿನಗರ ಬಡಾವಣೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಪ್ರತಿ ಬಾರಿಯಂತೆ ಸೋಮವಾರ ಬೆಳಗಿನ ಜಾವವೂ ಕೂಡ ಮನೆಗಳಲ್ಲಿ ನೀರು ನುಗ್ಗಿ  ಕಾಳು ಕಡಿ ಸೇರಿದಂತೆ ಮನೆ ಬಳಕೆಯ ಸಾಮಗ್ರಿಗಳನ್ನೆಲ್ಲ ನಾಶ ಪಡಿಸಿದೆ. ನಂತರ  ಜೆಸಿಬಿ ತಂದು ನಿಂತಿದ್ದ ನೀರನ್ನು ತೆರವುಗೊಳಿಸಿದರು.

ಕೆರೆಗೆ ನೀರು: ಇತ್ತೀಚೆಗಷ್ಟೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಹೂಳು ತೆಗೆದ ಸಿದ್ದನಬಾವಿ ಕೆರೆಗೂ ನೀರು ಬಂದು ಹೂಳು ತೆಗೆದ ಸುಮಾರು ಭಾಗವನ್ನು ಆವರಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಒಂದು ಹನಿಯೂ ನೀರಿಲ್ಲದೇ ಖಾಲಿಯಾಗಿದ್ದ ಈ ಕೆರೆಗೆ ಈಗ ನೀರು ಬಂದದ್ದು ರೈತರ ಮತ್ತು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.ಈ ದೃಶ್ಯವನ್ನು ಕಣ್ತುಂಬಿಸಿಕೊಂಡು ಆನಂದ ಪಡಲು ಕೆರೆಗೂ ಗ್ರಾಮಸ್ಥರು ಲಗ್ಗೆಯಿಟ್ಟಿದ್ದರು.

ಮೂಡಲಗಿ ವರದಿ: ಮೂಡಲಗಿಯಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 45 ನಿಮಿಷ ಬಿರುಸಿನಿಂದ ಮಳೆ ಯಾಯಿತು. ಪ್ರಾರಂಭದಲ್ಲಿ ಜೋರಾದ ಗಾಳಿಯೊಂದಿಗೆ ಗುಡುಗು, ಮಿಂಚು ಅಬ್ಬರಿಸಿತು. ಬೆಳಿಗ್ಗೆ ಇಲ್ಲಿಯ ಜನರಿಗ ಸೂರ್ಯ ದರ್ಶನದ ಬದಲಾಗಿ ಮಳೆರಾಯನ ದರ್ಶನವಾಗಿ ತಂಪೆರಿದ ವಾತಾವರಣ ಸೃಷ್ಟಿಯಾಗಿತ್ತು. ಮಳೆ ನಿಂತ ಮೇಲೆ ಸಹ ಅರ್ಧ ಗಂಟೆಯ ವರೆಗೆ ರಸ್ತೆ ಮತ್ತು ಚರಂಡಿಗಳಲ್ಲಿ ನೀರು ಹರಿದುಹೋಯಿತು.

ರೈತರಿಗೆ ಖುಷಿ: ಕಳೆದ ಎರಡು ವಾರದಲ್ಲಿ ಮೂರು ಬಾರಿ ಮಳೆ ಬಿದ್ದು ರೈತರಿಗೆ ಖುಷಿ ತಂದಿದೆ. ‘ಇವತ್ತು ಆಗಿದ್ದ ಮಳಿ ಬಾಳ ಚಲೋ ಆತರ್ರೀ...’ ಎಂದು ಪರಪ್ಪ ಶಿವಾಪುರ ಮಳೆ ಅನುಭವದ ಖುಷಿ ಹಂಚಿಕೊಂಡ.

ಕಬ್ಬು, ಗೋವಿನ ಜೋಳ, ಸೊಯಾಬಿನ್‌ ಬಿತ್ತನೆಗೆ ಸಕಾಲವಾಗಿದ್ದು ಸದ್ಯ ರೈತರೆಲ್ಲ ಕೃಷಿ ಚಟುವಟೆಕೆಗಳಲ್ಲಿ ಬಿಡುವಿಲ್ಲದೆ ತೊಡಗಿದ್ದಾರೆ. ಈ ಬಾರಿಯೂ ಅರಿಷಿಣ ನಾಟಿಗೆ ಹೆಚ್ಚಿನ ರೈತರು ಮುಂದಾಗಿದ್ದು, ಅರಿಷಿಣ ಬೀಜಗಳ ಖರೀದಿಯ ವಹಿವಾಟು ಬಿರುಸಿನಿಂದ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT