ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮಿಷ್ಟ, ನೀವು ಏನಾದ್ರೂ ಮಾಡಿಕೊಳ್ರಿ

Last Updated 16 ಮೇ 2017, 7:09 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಗಡಿ ಪ್ರದೇಶಗಳಲ್ಲಿನ ಫಲಾನುಭವಿಗಳಿಗೆ ಅಡುಗೆ ಅನಿಲ ಗ್ಯಾಸ್‌ ಕಿಟ್‌ ವಿತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯ್ತಿ ಬಿಜೆಪಿ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಧರಣಿ ನಡೆಸಿದ ಘಟನೆ ಸೋಮವಾರ ನಡೆಯಿತು.

ತಾಲ್ಲೂಕಿನ ಅರಣ್ಯಗಡಿಯಂಚಿನ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಅಡುಗೆ ಅನಿಲ ಮತ್ತು ಸೋಲಾರ್ ದೀಪ ವಿತರಣೆ ಕುರಿತಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕೆ.ನಾಗಮ್ಮ ಮಾತು ತಪ್ಪಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷದ 10 ಜನ ಸದಸ್ಯರು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ಬಹಿಷ್ಕರಿಸಿ ಸೋಮವಾರ ತಾಲ್ಲೂಕು ಪಂಚಾಯ್ತಿ ಎದುರು ಪ್ರತಿಭಟನೆ ಸೋಮವಾರ ನಡೆಸಿದರು.

ಸಭೆಯ ಆರಂಭದಲ್ಲೇ ಈ ಹಿಂದಿನ ಸಭೆಯಲ್ಲಿ ಇದೇ 10 ರಂದು ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವುದಾಗಿ ಅಧ್ಯಕ್ಷೆ ಭರವಸೆ ನೀಡಿರುವುದನ್ನು ಸದಸ್ಯರಾದ ಜಾಣ ಅನಿಲ್ ಕುಮಾರ್‌,  ಮಾಳಗಿ ಗಿರೀಶ್ ಪ್ರಸ್ತಾಪಿಸಿದರು. ಕೂಡಲೇ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವಂತೆ ಸ್ಥಾಯಿಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಸದಸ್ಯ ತಿಪ್ಪೇರುದ್ರಮುನಿ ಒತ್ತಾಯಿಸಿದರು. ಸದಸ್ಯರಾದ ಪ್ರಭಾಕರ, ನಾಗಾನಾಯ್ಕ. ಪದ್ಮಾವತಿ, ಶ್ಯಾಮಲಾ ಧ್ವನಿಗೂಡಿಸಿದರು.

ಅಧ್ಯಕ್ಷೆ ನಾಗಮ್ಮ ಪ್ರತಿಕ್ರಿಯಿಸಿ ‘ನೀವು ಏನಾದ್ರೂ ಮಾಡಿಕೊಳ್ಳಿ, ಶಾಸಕರ ಅನುಮೋದನೆ ದೊರೆತ ನಂತರ ವಿತರಿಸಲಾಗುವುದು’ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ಸಭೆಯಲ್ಲಿ ಗೊಂದಲ ಸೃಷ್ಟಿ ಆಯಿತು.

ಸಭೆ ಬಹಿಷ್ಕಾರ: ತಾಲ್ಲೂಕು ಪಂಚಾಯ್ತಿ ಆಡಳಿತದಲ್ಲಿ ಸ್ಥಳೀಯ ಶಾಸಕರು ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷದ 10ಜನ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು.

ಗ್ರಾಮ ಪಂಚಾಯ್ತಿ ಸಭೆಯಲ್ಲಿ ಆಯ್ಕೆಯಾದ ಪಟ್ಟಿಗೆ ತಾಲ್ಲೂಕು ಪಂಚಾಯ್ತಿಯಲ್ಲಿ ಅನುಮೋದನೆಯಾಗಬೇಕು ಎಂಬ ನಿಯಮಾವಳಿ ಇದೆ ಎಂದು ಮಾಳಗಿ ಗಿರೀಶ್, ಬುಡ್ಡಿಬಸವರಾಜ ತಿಳಿಸಿದರು. ಕೊಟ್ಟ ಮಾತಿನಂತೆ ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯಾಗದಿದ್ದರೆ ಸಭೆ ಬಹಿಷ್ಕರಿಸಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

‘ನಿಮ್ಮಿಷ್ಟ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು. ಇದರಿಂದಾಗಿ ತೀವ್ರ ಆಕ್ರೋಶಗೊಂಡ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದು, ಕಚೇರಿ ಎದುರು ಪ್ರತಿಭಟನೆಗಿಳಿದರು.

ತಾಲ್ಲೂಕಿನಲ್ಲಿ  ವಸತಿ, ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತಂತೆ ಚರ್ಚಿಸಬೇಕಿದೆ. ಈ ಹಿನ್ನಲೆಯಲ್ಲಿ ಸಭೆ ಮುಂದುವರಿಸುವಂತೆ ತಂಬ್ರಹಳ್ಳಿ ಸದಸ್ಯ ಪಿ.ಕೊಟ್ರೇಶ್‌, ನಾಮನಿರ್ದೇಶಿತ ಸದಸ್ಯ ಎಚ್.ದೊಡ್ಡಬಸಪ್ಪ ಸದಸ್ಯರ ಮನವೊಲಿಸಲು ಯತ್ನಿಸಿದರು. ಆಗ ಬಿಜೆಪಿ ಸದಸ್ಯರು ತಾಲ್ಲೂಕು ಪಂಚಾಯ್ತಿ ಆಡಳಿತದಲ್ಲಿ ಶಾಸಕರು ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದು ಹೀಗೆ ಮುಂದು ವರೆದರೆ ಶಾಸಕರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಸದಸ್ಯರಾದ ಬಿಕ್ಯಾಮುನಿಬಾಯಿ, ನೇತ್ರಾವತಿ, ಸೊನ್ನದ ಪ್ರಭಾಕರ ಇತರರು ಇದ್ದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮಲ್ಲಾನಾಯ್ಕಗೆ ಮನವಿ ಸಲ್ಲಿಸಿದರು. ಈ ಕುರಿತಂತೆ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT