ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಬ್ಲಾಕ್‌: 53ರಲ್ಲಿ 42 ಬಂದ್‌!

Last Updated 16 ಮೇ 2017, 8:39 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಎದುರಾಗಿರುವ ಮರಳು ಕೊರತೆ, ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ತಿಂಗಳ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು. ಜಿಲ್ಲೆಯಲ್ಲಿ ಒಟ್ಟಾರೆ 53 ಮರಳು ಬ್ಲಾಕ್‌ಗಳಿವೆ. ಅವುಗಳಲ್ಲಿ ಟೆಂಡರ್‌ ಅವಧಿ ಪೂರ್ಣಗೊಂಡಿರುವ 42 ಬ್ಲಾಕ್‌ಗಳಿಂದ ಸದ್ಯ ಮರಳು ತೆಗೆಯುವುದು ಸ್ಥಗಿತಗೊಂಡಿದೆ.

ಅಫಜಲಪುರ, ನದಿ ಸಿನ್ನೂರ, ಜೇವರ್ಗಿ ಹಾಗೂ ಸೇಡಂ ವಿಭಾಗದಲ್ಲಿ ಮೂರು ಬ್ಲಾಕ್‌ಗಳಿಂದ ಮಾತ್ರ ಮರಳು ತೆಗೆಯಲಾಗುತ್ತಿದೆ. ಮರಳು ತೆಗೆಯುವ ಪ್ರಮಾಣ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ. ಇದು ಸಮಸ್ಯೆ ಕಾರಣ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

‘ಹೊಸ ಮರಳು ನೀತಿಯಂತೆ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಟೆಂಡರ್‌ ಕರೆದು ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡಬೇಕು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಬ್ಲಾಕ್‌ಗಳಿಂದ ಮರಳು ತೆಗೆಯುವುದು ಆರಂಭಗೊಳ್ಳಲಿದ್ದು, ಆ ನಂತರ ಕೊರತೆ ನೀಗಬಹುದು’ ಎಂದು ಹೇಳಿದರು.

‘ಈಗ ಚಾಲ್ತಿಯಲ್ಲಿರುವ ಬ್ಲಾಕ್‌ಗಳಲ್ಲಿ ಯಂತ್ರಗಳನ್ನು ಬಳಸಿ ಮರಳು ತೆಗೆಯಲು ಅನುಮತಿ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವಾಣ್‌ ಆಗ್ರಹಿಸಿದರು.

‘ನಮ್ಮ ಗ್ರಾಮ, ನಮ್ಮ ರಸ್ತೆ ಕಾಮಗಾರಿಯಲ್ಲಿ ಅರ್ಧದಷ್ಟು ಮಾತ್ರ ಗುರಿ ಸಾಧಿಸಲಾಗಿದೆ’ ಎಂದು ಸುವರ್ಣಾ ಮಲಾಜಿ ಅಸಮಾಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಶೋಭಾ ಶಿರಸಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಹಿರೇಮಠ ಸೇರಿದಂತೆ ಅಧಿಕಾರಿಗಳು ಇದ್ದರು.

ಸಿಇಒ, ಕೆಲ ಅಧಿಕಾರಿಗಳ ಗೈರು!

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹಾಗೂ ಕೆಲ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಬಹುಪಾಲು ಅಧಿಕಾರಿಗಳು ಸಭೆಗೆ ಬಂದಿಲ್ಲ. ಸಿಇಒ ಅವರು ಮಾಹಿತಿ ನೀಡದೆ ಸಭೆಗೆ ಗೈರು ಉಳಿದಿದ್ದು ಸರಿಯಲ್ಲ. ಕನಿಷ್ಠ ದೂರವಾಣಿಯ ಮೂಲಕವಾದರೂ ಮಾಹಿತಿ ನೀಡಬೇಕಿತ್ತು’ ಎಂದು ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದರು.

‘ಅನಾರೋಗ್ಯದ ಕಾರಣ ಸಿಇಒ ಸಭೆಗೆ ಬಂದಿಲ್ಲ. ಅಷ್ಟಕ್ಕೂ ತ್ರೈಮಾಸಿಕ ಕೆಡಿಪಿ ಸಭೆ ಸಿಇಒ ಅವರ ಉಪಸ್ಥಿತಿಯಲ್ಲಿ ನಡೆಯುತ್ತದೆ. ಆದರೆ, ಮುಖ್ಯ ಯೋಜನಾಧಿಕಾರಿಯಾಗಿರುವ ನಾನೇ ತಿಂಗಳ ಕೆಡಿಪಿ ಸಭೆಯ ಸದಸ್ಯ ಕಾರ್ಯದರ್ಶಿ ಆಗಿದ್ದೇನೆ’ ಎಂದು ಪ್ರವೀಣಪ್ರಿಯಾ ಹೇಳಿದರು.

‘ಗೈರು ಉಳಿದಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಕಾರಣಕೇಳಿ ನೋಟಿಸ್‌ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಅನುದಾನ ಇದೆ, ಕೆಲಸ ಇಲ್ಲ!

‘ನ್ಯಾಯಾಲಯಗಳ ಕಟ್ಟಡ ಕಾಮಗಾರಿ ಇಲ್ಲ. ಆದರೂ, ₹9 ಲಕ್ಷ ಅನುದಾನ ಬಂದಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹೇಳಿದರು. ‘ಬಂದಿರುವ ಅನುದಾನ ವಾಪಸ್‌ ಕಳಿಸಬೇಡಿ. ನ್ಯಾಯಾಧೀಶರನ್ನು ಭೇಟಿಯಾಗಿ ಚರ್ಚಿಸಿ, ಅವಶ್ಯ ಕೆಲಸ ಮಾಡಿ’ ಎಂದು ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್‌ ಸಲಹೆ
ನೀಡಿದರು.

*

ರಸ್ತೆ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು. ಅನುದಾನ ವಾಪಸ್‌ ಹೋಗದಂತೆ ಎಚ್ಚರ ವಹಿಸಬೇಕು
ಸುವರ್ಣಾ ಮಲಾಜಿ
ಜಿ.ಪಂ. ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT