ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವೇಗಕ್ಕೆ ಕ್ರಮ: ಹರ್ಷ ಗುಪ್ತ

Last Updated 16 ಮೇ 2017, 9:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯಿಂದ ಆರು ಜಿಲ್ಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ವೇಗ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ’ ಎಂದು ಮಂಡಳಿ ಕಾರ್ಯದರ್ಶಿಯೂ ಆದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಮೈಕ್ರೊ ಯೋಜನೆಯಡಿ ₹1 ಕೋಟಿ ಹಣ ಬಿಡುಗಡೆಗೆ ಮಾತ್ರ ಜಿಲ್ಲಾಧಿಕಾರಿಗೆ ಅವಕಾಶವಿತ್ತು.  ಮ್ಯಾಕ್ರೊ ಯೋಜನೆಯಡಿಯೂ ಹಣ ಬಿಡುಗಡೆಗೆ ಅಧಿಕಾರ ನೀಡಲಾಗಿದೆ. ಅಲ್ಲದೆ ಹಣ ಬಿಡುಗಡೆ ಪ್ರಕ್ರಿಯೆಯನ್ನೂ ವಿಕೇಂದ್ರೀಕರಣಗೊಳಿಸಲಾಗಿದೆ. ಇದರಿಂದ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳು ವೇಗ ಪಡೆಯಲಿವೆ’ ಎಂದರು.

‘ಐದು ಜನರನ್ನು ಒಳಗೊಂಡ ಎಚ್‌ಕೆಆರ್‌ಡಿಬಿ ಕೋಶ ರಚಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ತಾಂತ್ರಿಕ ಎಂಜಿನಿಯರ್, ಜೂನಿಯರ್‌ ಎಂಜಿನಿಯರ್‌, ತಾಂತ್ರಿಕ ಸಲಹೆಗಾರರು ಇರಲಿದ್ದಾರೆ. ಇವರು ಕಾಮಗಾರಿಗಳ ಮೇಲೆ ನಿಗಾ ವಹಿಸುತ್ತಾರೆ. ಇದಲ್ಲದೆ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್.ಆವಂಟಿ ಅಧ್ಯಕ್ಷತೆಯಲ್ಲಿ ಟೆಕ್ನಿಕಲ್ ಸ್ಕ್ವಾಡ್ ರಚಿಸಲಾಗಿದ್ದು, ಇವರು ಕೂಡ ಕಳಪೆ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ, ವರದಿ ನೀಡಲಿದ್ದಾರೆ’ ಎಂದು ತಿಳಿಸಿದರು.

‘ಎಚ್‌ಕೆಆರ್‌ಡಿಬಿಯ 2017–18ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳ ನಿರ್ಮಾಣ, ಶಿಕ್ಷಕರಿಗೆ ತರಬೇತಿ, ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು.  ಈ ಭಾಗ ಸಮಗ್ರವಾಗಿ ಅಭಿವೃದ್ಧಿಯಾಗಿ ಹಿಂದುಳಿದ ಹಣೆಪಟ್ಟಿ ಕಳಚಿಕೊಳ್ಳಬೇಕು ಎಂಬುದು ನನ್ನ ಆಶಯವಾಗಿದೆ’ ಎಂದರು.

‘ಮಂಡಳಿ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲೂ ರಿಂಗ್ ರಸ್ತೆ ನಿರ್ಮಿಸಲಾಗುವುದು. ನಗರದಲ್ಲಿರುವ ಪ್ರಮುಖ ರಸ್ತೆಗಳ ಅಗಲೀಕರಣ ಕೈಗೊಳ್ಳಲಾಗುವುದು. ವಾಣಿಜ್ಯ ಮಳಿಗೆಗಳ ನೆಲಮಹಡಿಯನ್ನು ಅನ್ಯ ಕಾರ್ಯಕ್ಕೆ ಬಳಸುತ್ತಿರುವ 500 ಮಾಲೀಕರಿಗೆ ಪಾಲಿಕೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, 200ಕ್ಕೂ ಅಧಿಕ ಮಾಲೀಕರು ಭಾಗಶಃ/ಪೂರ್ಣ ತೆರವು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಂತ ಹಂತವಾಗಿ ಇಂತಹ ಕ್ರಮಗಳನ್ನು ಕ್ರಮಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

*

ಮುಕ್ತ ಮನಸ್ಸಿನಿಂದ ಕೆಲಸ ಮಾಡಲು ಬಂದಿದ್ದೇನೆ. ಜನರಿಗೆ ಅನುಕೂಲವಾಗುವ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಸಾರ್ವಜನಿಕರು ಸಹಕಾರ ನೀಡಬೇಕು
ಹರ್ಷ ಗುಪ್ತ
ಪ್ರಾದೇಶಿಕ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT